ಹೊಸಮನಿ ವಿರುದ್ಧ ವಿಚಾರಣೆ ಕೈಬಿಡಲು ಸಿಎಂ ನಿರ್ದೇಶನ; ಮುನ್ನಲೆಗೆ ಬಂದ ಆಪ್ತ ಕಾರ್ಯದರ್ಶಿ ಟಿಪ್ಪಣಿ

ಬೆಂಗಳೂರು; ಮಹಿಳಾ ನೌಕರರಿಗೆ ಲೈಂಗಿಕ ದೌರ್ಜನ್ಯ ನೀಡಿರುವುದು ಸೇರಿದಂತೆ ಇನ್ನಿತರೆ ಆರೋಪಗಳಿಗೆ ಗುರಿಯಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ಕುಮಾರ್‍‌ ಹೊಸಮನಿ ವಿರುದ್ಧದ ವಿಚಾರಣೆ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶಿಸಿರುವುದು ಇದೀಗ ಬಹಿರಂಗವಾಗಿದೆ.

 

ಸತೀಶ್‌ ಕುಮಾರ್‍‌ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೊದಲು ಪತ್ರ ಬರೆದಿದ್ದ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಅವರು ಆ ನಂತರ ನಡೆದ ಬೆಳವಣಿಗೆಯಲ್ಲಿ ವಿಚಾರಣೆ ಕೈಬಿಡಬೇಕು ಎಂದು ಬರೆದಿದ್ದ ಪತ್ರ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ದೇಶನ ನೀಡಿದ್ದಾರೆ.

 

ವಿಶ್ವನಾಥ್‌ ಅವರ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಹೊರಡಿಸಿರುವ  ಟಿಪ್ಪಣಿಯೂ ಮುನ್ನಲೆಗೆ ಬಂದಿದೆ.

 

ಡಾ ವೆಂಕಟೇಶಯ್ಯ ಅವರು 2024ರ ಜನವರಿ 10ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್‌ಕುಮಾರ್‍‌ ಸಿಂಗ್‌ ಅವರಿಗೆ ಟಿಪ್ಪಣಿ ಕಳಿಸಿದ್ದಾರೆ. ಈ ಟಿಪ್ಪಣಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟಿಪ್ಪಣಿಯಲ್ಲೇನಿದೆ?

 

ಕನ್ನಡ ಪುಸ್ತಕೋದ್ಯಮಕ್ಕೆ ಚೈತನ್ಯ ತುಂಬುವ ಕುರಿತು ಈ ಹಿಂದೆ ಪತ್ರ ಬರೆಯಲಾಗಿತ್ತು. ಈ ಪತ್ರದಲ್ಲಿ ಡಾ ಸತೀಶ್‌ಕುಮಾರ್‍‌ ಹೊಸಮನಿ ಅವರ ಕುರಿತು ತನಿಖೆ ಕೈಗೊಳ್ಳುವಂತೆ ಹೇಳಲಾಗಿತ್ತು. ಆದರೆ ನೈಜ ಪರಿಸ್ಥಿತಿ ಪರಿಶೀಲಿಸಿದಾಗ ಈಗಾಗಲೇ ಮಹಾಲೇಖಪಾಲರು ಮತ್ತು ಸ್ಥಳೀಯ ಲೆಕ್ಕ ಪರಿಶೋಧನೆ ಇಲಾಖೆಯಿಂದ ಪ್ರತಿ ವರ್ಷ ತಪಾಸಣೆ ಕೈಗೊಳ್ಳಲಾಗುತ್ತಿದ್ದು ಯಾವುದೇ ದೋಷಾರೋಪಣೆಗಳು ಇರುವುದಿಲ್ಲ ಎಂದುತ ತಿಳಿದು ಬಂದಿರುತ್ತದೆ.

 

ಸರ್ಕಾರದ ಮಾರ್ಗದರ್ಶನದಂತೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪುಸ್ತಕ ಖರೀದಿ ಪ್ರಕ್ರಿಯೆಗಳನ್ನು ನಿರ್ವಹಿಸಲಾಗಿದ್ದು ಲೆಕ್ಕ ತನಿಖಾ ವರದಿಗಳಲ್ಲಿ ಯಾವುದೇ ಆಕ್ಷೇಪಣೆಗಳು ವ್ಯಕ್ತವಾಗಿರುವುದಿಲ್ಲ. ಆದ್ದರಿಂದ ಈ ವಾಸ್ತವಾಂಶಗಳನ್ನು ಗಮನದಲ್ಲಿರಿಸಿಕೊಂಡು ನಿರ್ದೇಶಕರ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ಕೈಬಿಡುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌ ವಿಶ್ವನಾಥ್‌ ಅವರು  ಕೋರಿರುತ್ತಾರೆ.

 

‘ಇವರ ಕೋರಿಕೆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರಿಂದ ನಿರ್ದೇಶಿಸಲ್ಪಟ್ಟಿದ್ದೇನೆ,’ ಎಂದು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ವಿಶೇಷವೆಂದರೇ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್‌ ವಿಶ್ವನಾಥ್‌ ಪತ್ರ ಬರೆದಿದ್ದರು. ಆದರೀಗ ತನಿಖೆಯನ್ನೇ ಕೈಬಿಡಬೇಕು ಮತ್ತು ಅದೇ ಹುದ್ದೆಯಲ್ಲಿಯೇ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗೆ 2024ರ ಜನವರಿ 10ರಂದು ‌ ಪತ್ರ ಬರೆದಿದ್ದರು. ವಿಶ್ವನಾಥ್‌ ಅವರ ಈ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು.

ಗ್ರಂಥಾಲಯ ಇಲಾಖೆ ಅಕ್ರಮ; ತನಿಖೆಗೆ ಬರೆದ ಪತ್ರವನ್ನೇ ಹಿಂಪಡೆದುಕೊಂಡ ಪರಿಷತ್‌ ಸದಸ್ಯ ವಿಶ್ವನಾಥ್‌

 

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಹಣ ದುರುಪಯೋಗ, ಡಿಜಿಟಲ್‌ ಗ್ರಂಥಾಲಯ ವಿದ್ಯುನ್ಮಾನ ಉಪಕರಣಗಳ ಖರೀದಿಯಲ್ಲಿ ಅಕ್ರಮ ಸೇರಿದಂತೆ ಇನ್ನಿತರೆ ಗುರುತರವಾದ ಆಪಾದನೆಗಳಿಗೆ ಸತೀಶ್‌ ಕುಮಾರ್‍‌ ಹೊಸಮನಿ ಅವರು ಗುರಿಯಾಗಿದ್ದಾರೆ. ಈ ಎಲ್ಲಾ ಆಪಾದನೆಗಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಕಾವೇರಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

 

ಸತೀಶ್‌ಕುಮಾರ್‍‌ ಹೊಸಮನಿ ಅವರ ವಿರುದ್ಧ ಆಪಾದನೆಗಳ ಪಟ್ಟಿ ಸಮೇತ ವಿಶ್ವನಾಥ್‌ ಅವರು 2023ರ ನವೆಂಬರ್‍‌ನಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಪತ್ರಗಳನ್ನು (728/ಅಎಚ್‌ವಿ/ಕವಿಪಸ/2022-23 ದಿನಾಂಕ 03/11/2023) ಬರೆದಿದ್ದರು. ಈ ಪತ್ರವನ್ನಾಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ನಿರ್ದೇಶನ ನೀಡಿದ್ದರು.

 

ಸಿದ್ದರಾಮಯ್ಯರ ಮೊದಲ  ಟಿಪ್ಪಣಿಯಲ್ಲೇನಿತ್ತು?

 

ಗ್ರಂಥಾಲಯ ಇಲಾಖೆಗೆ ಸೆಸ್‌ ರೂಪದಲ್ಲಿ ಹಣ ಸಂಗ್ರಹವಾಗುತ್ತಿದ್ದು ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಪುಸ್ತಕಗಳನ್ನು ಖರೀದಿಸಿರುವುದಿಲ್ಲ. ಈ ಸಂಬಂಧ ಯಾವುದೇ ಕ್ರಮವಹಿಸದೇ ಕೋಟ್ಯಂತರ ರುಪಾಯಿ ಹಣವನ್ನು ಡಿಜಿಟಲ್‌ ಗ್ರಂಥಾಲಯದ ಹೆಸರಿನಲ್ಲಿ ಪೋಲು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಅಧಿಕಾರಿ ವಿರುದ್ಧ ನ್ಯಾಯಾಧೀಶರು ಅಥವಾ ಉನ್ನತ ಮಟ್ಟದ ಸಮಿತಿ ರಚಿಸಿ ಎಲ್ಲಾ ಚಟುವಟಿಕೆಗಳನ್ನು ಕೂಲಂಕಷವಾಗಿ ತನಿಖೆಗೊಳಪಡಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಹೆಚ್‌ ವಿಶ್ವನಾಥ್‌ ಕೋರಿದ್ದಾರೆ.

 

ಗ್ರಂಥಾಲಯಗಳಿಗೆ ಬಾಕಿ ಇರುವ ಮೂರು ವರ್ಷಗಳ ಪುಸ್ತಕಗಳನ್ನು ಖರೀದಿಸಲು ಹಾಗೂ ಇನ್ನು ಮುಂದೆ ಕನ್ನಡ ಪುಸ್ತಕಗಳ ಬೆಲೆಗಳನ್ನು ಮುದ್ರಣ ಕಾಗದ ಬೆಲೆಗನುಗುಣವಾಗಿ ಕಾಲಕಾಲಕ್ಕೆ ಪರಿಷ್ಕರಿಸಬೇಕು.  ಪ್ರಕಟವಾದ ವರ್ಷವೇ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಅಗತ್ಯ ಕ್ರಮ ವಹಿಸಬೇಕು.

 

ಹಾಗೂ ಒಂದು ಉನ್ನತ ಮಟ್ಟದ ಸಮಿತಿ ರಚಿಸಿ ಗ್ರಂಥಾಲಯ ಇಲಾಖೆಯ ನಿರ್ದೇಶಕರ ಕರ್ತವ್ಯಲೋಪ, ಹಣ ದುರ್ಬಳಕೆ, ಅವ್ಯವಹಾರಗಳ ಬಗ್ಗೆ ವಿವರವಾದ ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು.

 

 

ಸಿದ್ದರಾಮಯ್ಯ ಅವರ ಟಿಪ್ಪಣಿಯಲ್ಲಿನ ನಿರ್ದೇಶನದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್‌ಕುಮಾರ್‍‌ ಸಿಂಗ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು.

 

ಗ್ರಂಥಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ನಿರ್ದೇಶಕ  ಸತೀಶ್‌ ಕುಮಾರ್‍‌ ಹೊಸಮನಿ ಅವರು  ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು.

 

‘ನಾನು ಹೇಳಿದ ಹಾಗೆ ಕೇಳು, ರಾತ್ರಿ ಊಟಕ್ಕೆ ರೆಡಿ ಮಾಡು’; ನಿರ್ದೇಶಕರ ವಿರುದ್ಧ ಲೈಂಗಿಕ ಕಿರಕುಳ ಆರೋಪ

 

ಇದರ ಬೆನ್ನಲ್ಲೇ ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‍‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದಿತ್ತು.

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ವಿಶೇಷವೆಂದರೆ ಈ ಹಗರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದ ಬಹುತೇಕ ಅಧಿಕಾರಿಗಳು ನಿವೃತ್ತಿಯಾಗಿದ್ದರು.

 

ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಕುರಿತು ಕೆಲ ಅಧಿಕಾರಿಗಳಿಗೆ ಆರೋಪ ಪಟ್ಟಿಯೂ ಜಾರಿಯಾಗಿತ್ತು.

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ಸರ್ಕಾರದಿಂದ ಆರೋಪ ಪಟ್ಟಿ ಜಾರಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಡಿಸಿಎಂಗಳ ಹೆಸರಿನಲ್ಲಿ 5 ಕೋಟಿ ಸಂಗ್ರಹಿಸಲು ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಡಿಸಿಎಂಗಳಿಗೆ 5 ಕೋಟಿ ಸಂಗ್ರಹಿಸಲು ತಾಕೀತು; ಗ್ರಂಥಾಲಯ ನಿರ್ದೇಶಕರೇ ವಸೂಲಿಗಿಳಿದರೇ?

 

‘ಹಲವು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಹೊಸಮನಿ ಅವರ ವಿರುದ್ಧ ತನಿಖೆ ನಡೆಯುತ್ತಿದೆಯಾದರೂ ನಿರ್ದೇಶಕರ ಹುದ್ದೆಯಲ್ಲಿಯೇ ಸರ್ಕಾರವು ಮುಂದುವರೆಸಿರುವುದು ಸರಿಯಲ್ಲ. ಆರೋಪಿತ ವ್ಯಕ್ತಿಯು ಅದೇ ಹುದ್ದೆಯಲ್ಲಿ ಮುಂದುವರೆದರೆ ದಾಖಲೆ, ಸಾಕ್ಷ್ಯ ನಾಶವಾಗಲಿದೆ. ಕನಿಷ್ಠ ವಿಚಾರಣೆ ಪೂರ್ಣಗೊಳ್ಳುವವರೆಗಾದರೂ ನಿರ್ದೇಶಕರನ್ನು ರಜೆ ಮೇಲೆ ತೆರಳಲು ನಿರ್ದೇಶಿಸಬೇಕಿತ್ತು, ‘ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts