ಸರ್ಕಾರಿ ಕೆರೆ ಒತ್ತುವರಿ ಜಾಗದಲ್ಲಿದ್ದ ಕಟ್ಟಡ ದಾನಪತ್ರ; ಸಚಿವ ಚಲುವರಾಯಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು; ಸರ್ಕಾರಿ ಕೆರೆ ಜಾಗ ಒತ್ತುವರಿ ಮಾಡಿರುವ ಸ್ಥಳದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಸುಮಾರು 70 ಕೋಟಿ ರು. ಬೆಲೆಬಾಳುವ ಕಟ್ಟಡವನ್ನೇ ದಾನದ ರೂಪದಲ್ಲಿ ಪಡೆದಿರುವ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರ ವಿರುದ್ಧ ಇದೀಗ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

 

ರಾಮಮೂರ್ತಿ ಗೌಡ ಎಂಬುವರು ಲೋಕಾಯುಕ್ತಕ್ಕೆ ದಾಖಲೆಗಳ ಸಹಿತ ದೂರು ದಾಖಲಿಸಿದ್ದಾರೆ. ಈ ದೂರಿನ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪ್ರಕರಣದಲ್ಲಿ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರನ್ನು ಮೊದಲನೇ ಪ್ರತಿವಾದಿಯನ್ನಾಗಿಸಲಾಗಿದೆ. ಉಳಿದಂತೆ ಐಎಎಸ್‌ ಅಧಿಕಾರಿ ರವೀಂದ್ರ, ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ, ಹಾಗೂ ತಹಶೀಲ್ದಾರ್‍‌ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.

 

ಪ್ರಕರಣದ ವಿವರ

 

ಬೆಂಗಳೂರು ನಗರ ಜಿಲ್ಲೆಯ ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸರ್ವೆ ನಂಬರ್‍‌ 13 ರಲ್ಲಿ 3.31 ಕುಂಟೆ ಸರ್ಕಾರಿ ಕೆರೆ ಜಾಗವಿದೆ.  ಲಕ್ಷ್ಮಿಕಾಂತ ಎಂಬುವರು ಸ್ವಯಾರ್ಜಿತವಾಗಿ ಖರೀದಿಸಿದ್ದರು ಎನ್ನಲಾಗಿದೆ. ಆದರೆ ಈ ಕೆರೆ ಜಾಗವನ್ನು ಮೊದಲು ಯಾರು ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಈ ಸರ್ಕಾರಿ ಜಾಗವು ಈ ಹಿಂದೆ ಯಾರ್‍ಯಾರ ಹೆಸರಿನಲ್ಲಿ ನೋಂದಣಿ ಆಗಿತ್ತು ಎಂಬ ಮಾಹಿತಿಯೂ ತಿಳಿದು ಬಂದಿಲ್ಲ.

 

ಹಾಲಿ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರಿಗೆ  2021ರ ಜುಲೈ 27ರಂದು ದಾನ ಪತ್ರ ಮುಖಾಂತರ ನೋಂದಣಿ ಮಾಡಿಕೊಟ್ಟಿರುವುದು ದಾಖಲೆಯಿಂದ ತಿಳಿದು ಬಂದಿದೆ. ಮತ್ತೊಂದು ವಿಶೇಷವೆಂದರೇ ದಾನ ನೀಡಿರುವ ಲಕ್ಷ್ಮಿಕಾಂತ ಅವರು ಸಚಿವ ಚೆಲುವರಾಯಸ್ವಾಮಿ ಅವರ ಸೋದರ ಎಂದು ಗೊತ್ತಾಗಿದೆ.

 

ಬೆಂಗಳೂರು ಉತ್ತರ ತಾಲೂಕು ಭೂ ದಾಖಲೆಗಳ ಸಹಾಯ ನಿರ್ದೇಶಕರು 2022ರ ಅಕ್ಟೋಬರ್‍‌ 13ರಲ್ಲಿ ಈ ಸರ್ವೆ ನಂಬರ್‍‌ನಲ್ಲಿ ಕೆರೆ ಎಂದು ದೃಢೀಕರಿಸಿರುವುದು ಗೊತ್ತಾಗಿದೆ.

 

ಎರಡನೇ ರೀ ಕ್ಲಾಸಿಫಿಕೇಷನ್‌ ಪುಸ್ತಕದಲ್ಲೂ ಈ ಸರ್ವೆ ನಂಬರ್‍‌ ಖರಾಬು ಕೆರೆ ಎಂದು ನಮೂದಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

 

ಆರ್‍‌ಟಿಸಿಯಲ್ಲಿಯೂ ಚೆಲುವರಾಯಸ್ವಾಮಿ ಅವರ ಹೆಸರು ನಮೂದಾಗಿದೆ.

 

 

ಅಲ್ಲದೇ ಈ ಜಮೀನಿನ ಮೇಲೆ ತುಮಕೂರಿನ ಎಸ್‌ ಎಸ್‌ ಪುರದ ಕೆನರಾಬ್ಯಾಕ್‌ ಶಾಖೆಯಲ್ಲಿ 12,45,000 ರು. ಸಾಲ ಪಡೆದಿದ್ದಾರೆ ಎಂಬ ಆರೋಪ ಕೇಳ ಬಂದಿದೆ.

 

ಕೆರೆ ಜಾಗವನ್ನು ಒತ್ತುವರಿ ಮಾಡಿ ಈ ಜಾಗದಲ್ಲಿ ಹಿಮಾಲಯ ಡ್ರಗ್‌ ಹೌಸ್‌ ಕಟ್ಟಡ ನಿರ್ಮಾಣ ಮಾಡಲಾಗಿದೆ. ತಿಂಗಳೀಗೆ 10 ಲಕ್ಷ ರು. ಬಾಡಿಗೆ ಪಡೆಯುತ್ತಿದ್ದಾರೆ ಎಂದು ದೂರುದಾರ ರಾಮಮೂರ್ತಿ ಗೌಡ ದೂರಿನಲ್ಲಿ ತಿಳಿಸಿದ್ದಾರೆ.

SUPPORT THE FILE

Latest News

Related Posts