ಪುಸ್ತಕ ಖರೀದಿ ಸೇರಿ ಹತ್ತಾರು ಅಕ್ರಮಗಳನ್ನು ಹೊರಗೆಳೆದ ತನಿಖಾ ಸಮಿತಿ; ನಿರ್ದೇಶಕ ಹೊಸಮನಿ ಅಮಾನತು

ಬೆಂಗಳೂರು;  ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಖರೀದಿಸಿದ್ದ ಪುಸ್ತಕಗಳು ಉಪಯೋಗಕ್ಕೆ ಬಾರದಿರುವುದು, ಡಿಜಿಟಲ್‌ ಲೈಬ್ರರಿ ಯೋಜನೆ ಅನುಷ್ಠಾನದಲ್ಲಿ ಕೋಟ್ಯಂತರ ರುಪಾಯಿ ಪೋಲು ಮಾಡಿರುವುದು ಸೇರಿದಂತೆ ಹತ್ತಾರು  ಪ್ರಕರಣಗಳನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದ ತನಿಖಾ ಸಮಿತಿಯು ಪತ್ತೆ ಹಚ್ಚಿದೆ.

 

ಈ ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿರುವ ಸಮಿತಿಯು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಹೊಸಮನಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದೆ.

 

ತನಿಖಾ ಸಮಿತಿಯು ನೀಡಿದ್ದ ವರದಿಯನ್ನಾಧರಿಸಿ ಸರ್ಕಾರವು 2024ರ ಮಾರ್ಚ್‌ 11ರಂದು ಸತೀಶ್‌ ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿದೆ.

 

ಸತೀಶ್‌ ಹೊಸಮನಿ ಅವರು ಇಲಾಖೆಯ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಹಾಗೂ ವಿವಿಧ ಖರೀದಿಗಳಲ್ಲಿ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಆರೋಪಗಳ ಕುರಿತಾದ ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಗಳ ಬೆನ್ನಲ್ಲೇ ಇದೀಗ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ವಿವಿಧ ಅಕ್ರಮಗಳನ್ನು ಪತ್ತೆ ಹಚ್ಚಿರುವ ತನಿಖಾ ಸಮಿತಿಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

 

‘ನಿರ್ದೇಶಕರು ತಮ್ಮ ಅಧಿಕಾರ ವ್ಯಾಪ್ತಿ ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇದೇ ಹುದ್ದೆಯಲ್ಲಿ ಮುಂದುವರೆಸಿದರೆ ದಾಖಲೆಗಳನ್ನು ತಿರುಚುವ ಹಾಗೂ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿಸ್ತು ಕ್ರಮ ಬಾಕಿ ಇರಿಸಿ ಅಮಾನತಿನಲ್ಲಿರಿಸಿದೆ,’ ಎಂದು ಆದೇಶದಲ್ಲಿ ತಿಳಿಸಿದೆ.

 

ಈ ಸಂಬಂಧ  2024ರ ಮಾರ್ಚ್‌ 11ರಂದು ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆಯು  ಆದೇಶ ಹೊರಡಿಸಿದೆ.

 

ಪುಸ್ತಕ ಖರೀದಿ, ಡಿಜಿಟಲ್‌ ಗ್ರಂಥಾಲಯ ಯೋಜನೆ ಅನುಷ್ಠಾನ, ಇ-ಕಂಟೆಂಟ್‌ ಅಭಿವೃದ್ಧಿ, ಪುಸ್ತಕಗಳ ಸಾಗಾಣಿಕೆ, ಟೆಂಡರ್‌ ಅಕ್ರಮ, ನಿಯಮಗಳ ಉಲ್ಲಂಘನೆ, ಯೋಜನೆ ಅನುಷ್ಠಾನಗೂ ಮುನ್ನವೇ ಸರಬರಾಜುದಾರರು ಮತ್ತು ಸೇವಾದಾರರಿಗೂ ಮುಂಗಡವಾಗಿ ಹಣ ಪಾವತಿ, ಹಣ ದುರುಪಯೋಗ, ಅಧಿಕಾರ ದುರುಪಯೋಗವನ್ನು ಪತ್ತೆ ಹಚ್ಚಿತ್ತು.

 

 

ಪುಸ್ತಕಗಳ ಸರಬರಾಜು ಮತ್ತು ಇದರ ಹಕ್ಕು ಸ್ವಾಮ್ಯತೆಯಲ್ಲಿ ಲೋಪಗಳು, ಪುಸ್ತಕ ಆಯ್ಕೆ ಸಮಿತಿಯನ್ನೇ ಕತ್ತಲಲ್ಲಿಟ್ಟು ಲಕ್ಷಾಂತರ ರುಪಾಯಿ ಮೊತ್ತದ ಪುಸ್ತಕ ಖರೀದಿ ಸೇರಿದಂತೆ ಹಲವಾರು ಅಕ್ರಮಗಳನ್ನು ತನಿಖಾ ಸಮಿತಿಯು ಹೊರಗೆಳೆದಿರುವುದು ಆದೇಶದಿಂದ ತಿಳಿದು ಬಂದಿದೆ.

 

ಸತೀಶ್‌ ಕುಮಾರ್‍‌ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೊದಲು ಪತ್ರ ಬರೆದಿದ್ದ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಅವರು ಆ ನಂತರ ನಡೆದ ಬೆಳವಣಿಗೆಯಲ್ಲಿ ವಿಚಾರಣೆ ಕೈಬಿಡಬೇಕು ಎಂದು ಬರೆದಿದ್ದ ಪತ್ರ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದರು. ಆದರೂ ತನಿಖಾ ಸಮಿತಿಯು ವಿಚಾರಣೆ ನಡೆಸಿತ್ತು.

 

ಹೊಸಮನಿ ವಿರುದ್ಧ ವಿಚಾರಣೆ ಕೈಬಿಡಲು ಸಿಎಂ ನಿರ್ದೇಶನ; ಮುನ್ನಲೆಗೆ ಬಂದ ಆಪ್ತ ಕಾರ್ಯದರ್ಶಿ ಟಿಪ್ಪಣಿ

ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್‌ ವಿಶ್ವನಾಥ್‌ ಪತ್ರ ಬರೆದಿದ್ದರು. ಆದರೀಗ ತನಿಖೆಯನ್ನೇ ಕೈಬಿಡಬೇಕು ಮತ್ತು ಅದೇ ಹುದ್ದೆಯಲ್ಲಿಯೇ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗೆ 2024ರ ಜನವರಿ 10ರಂದು ‌ ಪತ್ರ ಬರೆದಿದ್ದರು. ವಿಶ್ವನಾಥ್‌ ಅವರ ಈ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು.

ಗ್ರಂಥಾಲಯ ಇಲಾಖೆ ಅಕ್ರಮ; ತನಿಖೆಗೆ ಬರೆದ ಪತ್ರವನ್ನೇ ಹಿಂಪಡೆದುಕೊಂಡ ಪರಿಷತ್‌ ಸದಸ್ಯ ವಿಶ್ವನಾಥ್‌

 

ಗ್ರಂಥಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ನಿರ್ದೇಶಕ  ಸತೀಶ್‌ ಕುಮಾರ್‍‌ ಹೊಸಮನಿ ಅವರು  ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು.

 

‘ನಾನು ಹೇಳಿದ ಹಾಗೆ ಕೇಳು, ರಾತ್ರಿ ಊಟಕ್ಕೆ ರೆಡಿ ಮಾಡು’; ನಿರ್ದೇಶಕರ ವಿರುದ್ಧ ಲೈಂಗಿಕ ಕಿರಕುಳ ಆರೋಪ

 

ಇದರ ಬೆನ್ನಲ್ಲೇ ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‍‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದಿತ್ತು.

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ವಿಶೇಷವೆಂದರೆ ಈ ಹಗರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದ ಬಹುತೇಕ ಅಧಿಕಾರಿಗಳು ನಿವೃತ್ತಿಯಾಗಿದ್ದರು.

 

ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಕುರಿತು ಕೆಲ ಅಧಿಕಾರಿಗಳಿಗೆ ಆರೋಪ ಪಟ್ಟಿಯೂ ಜಾರಿಯಾಗಿತ್ತು.

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ಸರ್ಕಾರದಿಂದ ಆರೋಪ ಪಟ್ಟಿ ಜಾರಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಡಿಸಿಎಂಗಳ ಹೆಸರಿನಲ್ಲಿ 5 ಕೋಟಿ ಸಂಗ್ರಹಿಸಲು ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಡಿಸಿಎಂಗಳಿಗೆ 5 ಕೋಟಿ ಸಂಗ್ರಹಿಸಲು ತಾಕೀತು; ಗ್ರಂಥಾಲಯ ನಿರ್ದೇಶಕರೇ ವಸೂಲಿಗಿಳಿದರೇ?

 

‘ಹಲವು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಹೊಸಮನಿ ಅವರ ವಿರುದ್ಧ ತನಿಖೆ ನಡೆಯುತ್ತಿದೆಯಾದರೂ ನಿರ್ದೇಶಕರ ಹುದ್ದೆಯಲ್ಲಿಯೇ ಸರ್ಕಾರವು ಮುಂದುವರೆಸಿರುವುದು ಸರಿಯಲ್ಲ. ಆರೋಪಿತ ವ್ಯಕ್ತಿಯು ಅದೇ ಹುದ್ದೆಯಲ್ಲಿ ಮುಂದುವರೆದರೆ ದಾಖಲೆ, ಸಾಕ್ಷ್ಯ ನಾಶವಾಗಲಿದೆ. ಕನಿಷ್ಠ ವಿಚಾರಣೆ ಪೂರ್ಣಗೊಳ್ಳುವವರೆಗಾದರೂ ನಿರ್ದೇಶಕರನ್ನು ರಜೆ ಮೇಲೆ ತೆರಳಲು ನಿರ್ದೇಶಿಸಬೇಕಿತ್ತು, ‘ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts