ಅಕ್ರಮ ಅದಿರು ಸಾಗಾಟ; ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಮೂಡದ ಒಮ್ಮತ

ಬೆಂಗಳೂರು; ಬೇಲೇಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿದ್ದ ಕಬ್ಬಿಣದ ಅದಿರನ್ನು ಕರ್ನಾಟಕ ಅರಣ್ಯ ಕಾಯ್ದೆ, ಅನುಸಾರ ಅನುಮತಿ ಪಡೆಯದೇ ಸಾಗಾಣಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌  ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರದಲ್ಲಿಯೇ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿಲ್ಲ.

 

ಸರ್ವೋಚ್ಛ ನ್ಯಾಯಾಲಯದಲ್ಲಿ ಹೊಸದಾಗಿ ದಾಖಲಿಸಬೇಕಾಗಿರುವ ಮೇಲ್ಮನವಿ ಪ್ರಕರಣಗಳ ಪರಿಶೀಲನೆ ಕುರಿತು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳ ಮುಖ್ಯಸ್ಥರೊಂದಿಗೆ ನಡೆದಿದ್ದ ಸಭೆಯಲ್ಲಿ ಈ ವಿಚಾರವು ಪ್ರಸ್ತಾಪವಾಗಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಸಭೆಯ ನಡವಳಿಗಳು ಲಭ್ಯವಾಗಿವೆ.

 

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೇಲೇಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರನ್ನು ಅರಣ್ಯ ಕಾಯ್ದೆ ಅನುಸಾರ ಅನುಮತಿ ಪಡೆಯದೇ ಸಾಗಾಣಿಕೆ ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ಕ್ರಿಮಿನಲ್‌ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅಮಾನತುಪಡಿಸಿಕೊಂಡ ಕಬ್ಬಿಣದ ಅದಿರನ್ನು ಅರ್ಜಿದಾರರಿಗೆ ಬಿಡುಗಡೆ ಮಾಡಬೇಕು ಎಂದು 2023ರ ಸೆ.25ರಂದು ತೀರ್ಪು ಪ್ರಕಟಿಸಿತ್ತು.

 

ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದ ತನಿಖೆ ಅಪೂರ್ಣವಾಗಿರುವ ಹಿನ್ನೆಲೆಯ್ಲಲಿ ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ದಾಖಲಿಸಲು ಯೋಗ್ಯ ಪ್ರಕರಣವಾಗಿದೆ ಎಂದು ರಾಜ್ಯ ಸರ್ಕಾರಿ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಒಂದನೇ ಅಪರ ವಾದೇಕ್ಷಕರು ಹೈಕೋರ್ಟ್‌ನ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು  ಯೋಗ್ಯ ಪ್ರಕರಣವಲ್ಲ ಎಂದು ಅಭಿಪ್ರಾಯಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಮುಟ್ಟುಗೋಲು ಹಾಕಿದ್ದ ಕಬ್ಬಿಣದ ಅದಿರನ್ನು ಕರ್ನಾಟಕ ಅರಣ್ಯ ಕಾಯ್ದೆ ಅನುಸಾರ ಅನುಮತಿ ಪಡೆಯದೆ ಸತ್ಯ ಗ್ರಾನೈಟ್ಸ್‌ನ ಪಿ ಕೆ ಪೌನ್‌ರಾಜ್‌ ಸಾಗಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಎಫ್‌ಐಆರ್‍‌ (ಕ್ರೈಂ ನಂ. 189/2009-10) ದಾಖಲಿಸಿತ್ತು.

 

ಈ ಸಂಬಂಧ ಅದಿರು ರಫ್ತುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿಬಿಐಗೆ ಅನುಮತಿ ನೀಡಲಾಗಿತ್ತು. ಅಲ್ಲದೇ ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಬೇಕು. ಅಗತ್ಯ ಪರವಾನಗಿಗಳು ಇಲ್ಲದೆಯೇ 50,000 ಮೆಟ್ರಿಕ್ ಟನ್ ಅದಿರನ್ನು ಸಾಗಣೆ ಮಾಡಿದವರು ಯಾರು ಎಂಬುದನ್ನು ಪತ್ತೆಹಚ್ಚಬೇಕು ಮತ್ತು ಈ ಪ್ರಕರಣದಲ್ಲಿ ರಫ್ತುದಾರರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಲಾಗಿತ್ತು.

 

ಅದೇ ರೀತಿ 50,000 ಮೆಟ್ರಿಕ್ ಟನ್ ಅದಿರನ್ನು ಯಾರು ರಫ್ತು ಮಾಡಿದರು ಎಂಬುದನ್ನು ಪತ್ತೆ ಹಚ್ಚುವ ಸಂಬಂಧ ಸಿಇಸಿ 2012ರ ಸೆ.5ರಂದು ಮಾಡಿದ್ದ ಶಿಫಾರಸ್ಸಿನಂತೆ ಕರ್ನಾಟಕ ಸರ್ಕಾರವು ಅಗತ್ಯ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಪ್ರಧಾನ ಸಿವಿಲ್‌ ನ್ಯಾಯಾಲಯವು ಹೇಳಿತ್ತು.

 

‘ಅಗತ್ಯ ಕಾನೂನುಗಳ ಅಡಿಯಲ್ಲಿ ಕರ್ನಾಟಕ ಸರ್ಕಾರ ಇನ್ನಷ್ಟು ತನಿಖೆ ನಡೆಸಬೇಕು ಎಂದು ಸಿಬಿಐಗೆ ಅಧಿಕಾರ ನೀಡುತ್ತಿದ್ದೇವೆ. 50,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಸಾಗಣೆ ಮಾಡಿದವರ ವಿರುದ್ಧ ಸಿಇಸಿ ನೀಡಿದ್ದ ವರದಿಯಂತೆ ಕ್ರಮ ಜರುಗಿಸಬೇಕು,’ ಎಂದು ತೀರ್ಪು ನೀಡಿತ್ತು.

 

50,000 ಮೆಟ್ರಿಕ್‌ ಟನ್‌ ಕಬ್ಬಿಣ ಅದಿರು ಸಾಗಾಣಿಕೆ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಿತ್ತು. ಈ ಮಧ್ಯೆ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಬಿ ರಿಪೋರ್ಟ್‌ ಸಲ್ಲಿಸಿತ್ತು. ಹೀಗಾಗಿ ತಪ್ಪು ಹೊರೆಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರಗಳು ಇಲ್ಲ ಎಂದು ವಾದಿಸಿದ್ದ ಮೇಲ್ಮನವಿದಾರರು ಕಬ್ಬಿಣದ ಅದಿರು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯದ ಮುಂದೆ ವಾದಿಸಿದ್ದರು. ಅಲ್ಲದೇ ಇಲಾಖೆಯು ವಶಕ್ಕೆ ಪಡೆದಿದ್ದ ಕಬ್ಬಿಣದ ಅದಿರನ್ನು ತೆಗೆದುಹಾಕಿಲ್ಲ, ಮಾರಾಟ ಮಾಡಿಲ್ಲ ಮತ್ತು ರಫ್ತು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು ಎಂಬುದು ಹೈಕೋರ್ಟ್‌ ಆದೇಶದ ಪ್ರತಿಯಿಂದ ಗೊತ್ತಾಗಿದೆ.

 

ಎಸ್‌ಐಟಿ ಸಲ್ಲಿಸಿದ್ದ “ಬಿ”ರಿಪೋರ್ಟ್‌ನ್ನು ವಿಶೇಷ ನ್ಯಾಯಾಲಯವು 2015ರ ಡಿಸೆಂಬರ್‍‌ 15ರಂದು ಸ್ವೀಕರಿಸಿತ್ತು. ಬಿ ರಿಪೋರ್ಟ್ ಸ್ವೀಕರಿಸಿರುವುದರಿಂದ ಕಬ್ಬಿಣದ ಅದಿರು ಬಿಡುಗಡೆ ಮಾಡುವ ಅಧಿಕಾರವನ್ನು ವಿಶೇಷ ನ್ಯಾಯಾಲಯ ಹೊಂದಿತ್ತು. ಮೇಲ್ಮನವಿದಾರರ ವಿರುದ್ಧ ಎಸ್‌ಐಟಿಯು ಮುಕ್ತಾಯ ವರದಿಯನ್ನು ಸಲ್ಲಿಸಿತ್ತು. ಹೀಗಾಗಿ ಮೇಲ್ಮನವಿದಾರರು ದೋಷಮುಕ್ತರಾಗುತ್ತಾರೆ. ಈ ಕಾರಣಗಳಿಂದಾಗಿ ಕಬ್ಬಿಣದ ಅದಿರನ್ನು ಬಿಡುಗಡೆ ಮಾಡಲು ಮೇಲ್ಮನವಿದಾರರಿಗೆ ಅರ್ಹತೆ ಇದೆ. ಇಲ್ಲದಿದ್ದಲ್ಲಿ ಮೇಲ್ಮನವಿದಾರರ ಹಕ್ಕನ್ನು ಕಸಿದಂತಾಗಲಿದೆ ಎಂದೂ ನ್ಯಾಯಾಲಯವು ಹೇಳಿತ್ತು.

 

‘ಅರ್ಜಿದಾರರು ಪ್ರತಿಪಾದಿಸುತ್ತಿರುವ ಕಬ್ಬಿಣದ ಅದಿರಿನ ಪ್ರಮಾಣ ಮತ್ತು ಮೌಲ್ಯವನ್ನು ಲೆಕ್ಕಾಚಾರ ಮಾಡಬೇಕು. ಅಲ್ಲದೇ ಕಬ್ಬಿಣದ ಅದಿರನ್ನು ವಲಯ ಅರಣ್ಯಾಧಿಕಾರಿಯು ಅರ್ಜಿದಾರರಿಗೆ ಬಿಡುಗಡೆ ಮಾಡಲು ಪ್ರತಿ ಅರ್ಜಿದಾರನಿಂದ ಒಬ್ಬ ಜಾಮೀನುದಾರರನ್ನು ಮತ್ತು ಕಬ್ಬಿಣದ ಅದಿರಿನ ಮೌಲ್ಯಕ್ಕೆ ಸಮನಾದ ನಷ್ಟ ಭರ್ತಿ ಮುಚ್ಚಳಿಕೆಯನ್ನು ಪಡೆದು ಕಬ್ಬಿಣ ಅದಿರನ್ನು ಬಿಡುಗಡ ಮಾಡಬೇಕು. ಈ ಪ್ರಕ್ರಿಯೆಯನ್ನು ಆದೇಶದ ದೃಢೀಕೃತ ಪ್ರತಿ ಪಡೆದ 8 ವಾರಗಳೊಳಗೆ ಮುಕ್ತಾಯಗೊಳಿಸಬೇಕು,’ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಸೂಚಿಸಿತ್ತು.

 

ಈ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಿ ವಕೀಲರು ಅಭಿಪ್ರಾಯಿಸಿದ್ದರು. ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದ ತನಿಖೆಯು ಪೂರ್ಣಗೊಂಡಿಲ್ಲ. ತನಿಖೆಯು ಅಪೂರ್ಣವಾಗಿರುವ ಕಾರಣ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅರ್ಹವಾದ ಪ್ರಕರಣ ಎಂದು ಅಭಿಪ್ರಾಯಿಸಿದ್ದರು.

 

ಆದರೆ  ಒಂದನೇ ಅಪರ ವಾದೇಕ್ಷಕರು ಇದನ್ನು ತಳ್ಳಿ ಹಾಕಿದ್ದಾರೆ.

 

ಅಪರ ವಾದೇಕ್ಷಕರ ಅಭಿಪ್ರಾಯವೇನು?

 

ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡವು ತನಿಖೆ ನಡೆಸಿದೆ. ಸರ್ವೋಚ್ಛ ನ್ಯಾಯಾಲಯವು 2012ರ ಸೆ.7ರಂದು ಹೊರಡಿಸಿದ್ದ ಆದೇಶದ ಮೂಲಕ ಸಿಬಿಐಯು 50,000 ಮೆಟ್ರಿಕ್‌ ಟನ್‌ಗಿಂತ ಮೇಲ್ಪಟ್ಟ ಪ್ರಮಾಣದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದವರ ಕುರಿತಂತೆ ತನಿಖೆ ನಡೆಸಿದೆ. ಮತ್ತು ತನಿಖೆ ನಡೆಸಿದ್ದ ಎಸ್‌ಐಟಿಯು ಅರ್ಜಿದಾರರು ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಮಾಡಿದ ಬಗ್ಗೆ ವ್ಯತಿರಿಕ್ತ ಸಾಕ್ಷ್ಯ ಕಡತದಲ್ಲಿ ಲಭ್ಯವಿಲ್ಲ ಎಂದ ಬಿ ರಿಪೋರ್ಟ್‌ ಸಲ್ಲಿಸಿದೆ.

 

ಆರೋಪಿಗಳಿಂದ ವಶಪಡಿಸಿಕೊಂಡ ಕಬ್ಬಿಣ ಅದಿರಿನ ಪ್ರಮಾಣ 50,000 ಮೆಟ್ರಿಕ್‌ ಟನ್‌ಗಳಿಗಿಂತ ಕಡಿಮೆ ಇದೆ. ತನಿಖೆ ನಂತರ ಎಸ್‌ಐಟಿಯು ಅಂತಿಮ ವರದಿ ಸಲ್ಲಿಸಿದೆ. ಈ ವರದಿಯನ್ನು ವಿಶೇಷ ನ್ಯಾಯಾಲಯವು 2015ರ ಡಿಸೆಂಬರ್‍‌ 5ರಂದು ಒಪ್ಪಿದೆ. ಹೀಗಾಗಿ ಕಬ್ಬಿಣದ ಅದಿರನ್ನು ಅರ್ಜಿದಾರರಿಗೆ ಬಿಡುಗಡೆ ಮಾಡುವ ಅಧಿಕಾರವು ಸತ್ರ ನ್ಯಾಯಾಲಯಕ್ಕೆ ಇದ್ದರೂ ಸತ್ರ ನ್ಯಾಯಾಲಯವು ಮಧ್ಯಂತರ ಅರ್ಜಿಗಳನ್ನು ವಜಾ ಮಾಡಿರುವುದು ಸರಿಯಲ್ಲ ಎಂದು ಹೈಕೋರ್ಟ್‌ ತನ್ನ ಆದೇಶ ಪ್ರಕಟಿಸಿದೆ.

 

‘ಅರ್ಜಿದಾರರ ವಿರುದ್ಧ ಯಾವುದೇ ವ್ಯವಹರಣೆ ಬಾಕಿ ಇಲ್ಲ ಮತ್ತು ಇದೇನೇ ಇದ್ದರೂ ಸೂಕ್ತ ಷರತ್ತುಗಳನ್ನು ವಿಧಿಸುವ ಮೂಲಕ ಅರ್ಜಿದಾರರ ಹೆಸರಿಗೆ ಕಬ್ಬಿಣದ ಅದಿರನ್ನು ಬಿಡುಗಡೆ ಮಾಡಬಹುದು ಎಂದು ನಿವೇದಿಸಿಕೊಂಡಿದ್ದಾರೆ. ಹೀಗಾಗಿ ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ಹೈಕೋರ್ಟ್‌ ಷರತ್ತು ಬದ್ಧವಾಗಿ ಹೊರಡಿಸಿರುವ ಆದೇಶವು ನ್ಯಾಯಸಮ್ಮತವಾಗಿದೆ. ಈ ಕಾರಣಗಳಿಂದಾಗಿ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಲ್ಲ,’ ಎಂದು ಅಭಿಪ್ರಾಯಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts