1,054 ಮಸೀದಿ, ಚರ್ಚ್‌ಗಳು ನೋಂದಣಿಯಾಗಿಲ್ಲ, ಸರ್ಕಾರದ ಸುಪರ್ದಿಗೆ ಪಡೆಯುವ ಪ್ರಸ್ತಾವವಿಲ್ಲ

ಬೆಂಗಳೂರು; ರಾಜ್ಯದ ಬೆಂಗಳೂರು ನಗರ ಸೇರಿದಂತೆ ಒಟ್ಟು  31 ಜಿಲ್ಲೆಗಳಲ್ಲಿ 1,054 ಮಸೀದಿ, ಚರ್ಚ್‌ಗಳು ನೋಂದಣಿಯಾಗಿಲ್ಲ. ಅಲ್ಲದೇ,  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ  ಚರ್ಚ್‌ಗಳಿಗೆ ಯಾವುದೇ ಮಾನ್ಯತೆ ನೀಡಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ವಿಧಾನಮಂಡಲ ಅಧಿವೇಶನದಲ್ಲಿ ಮಾಹಿತಿ ಒದಗಿಸಿದೆ.

 

ಶಾಸಕ ಯಶ್‌ಪಾಲ್‌ ಸುವರ್ಣ ಅವರು ನಿಯಮ 351ರಡಿಯಲ್ಲಿ ಪ್ರಸ್ತಾಪಿಸಿದ್ದ ಸೂಚನೆಗೆ  ಉತ್ತರ ನೀಡಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಅವರು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

ರಾಜ್ಯದಲ್ಲಿ  ಚರ್ಚ್‌, ಜೈನ ಮಂದಿರ, ಬಸದಿ, ಸಮುದಾಯ ಭವನಗಳ ನೋಂದಣಿಯಾಗಿರುವ ಪಟ್ಟಿ ಕೋರಿ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಬದಲಿಗೆ ಚರ್ಚ್‌, ಮಸೀದಿ, ಮದರಸಗಳು, ಜೈನ ಸಮುದಾಯ ಭವನ ಮತ್ತು ದುರಸ್ತಿ, ನವೀಕರಣಕ್ಕಾಗಿ ಮಾಡಿರುವ ವೆಚ್ಚದ ಪಟ್ಟಿಯನ್ನಷ್ಟೇ ಒದಗಿಸಿತ್ತು.

 

ಇದರ ಬೆನ್ನಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಅವರು ವಿಧಾನಸಭೆಗೆ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

ಉತ್ತರದಲ್ಲೇನಿದೆ?

 

ಪ್ರಸ್ತುತ ರಾಜ್ಯದಲ್ಲಿ ಒಟ್ಟು 11,463 ಮಸೀದಿಗಳು, ಸುಮಾರು 1,678 ಚರ್ಚ್‌ಗಳಿವೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಚರ್ಚ್‌ಗಳಿಗೆ ಯಾವುದೇ ಮಾನ್ಯತೆ ನೀಡಿರುವುದಿಲ್ಲ. ಚರ್ಚ್‌ಗಳಿಂದ ಯಾವುದೇ ಆದಾಯ ಸ್ವೀಕರಿಸುತ್ತಿಲ್ಲ. ನೋಂದಣಿಯಾದ ಮಸೀದಿಗಳಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು 5.68 ಕೋಟಿ ರು. ಆದಾಯ ಬಂದಿದೆ.

 

ರಾಜ್ಯದ ಎಲ್ಲಾ ಮಸೀದಿಗಳು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿದೆ. ಹೆಚ್ಚಿನ ಆದಾಯವಿರುವ ಮಸೀದಿಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವನೆ ಇರುವುದಿಲ್ಲ ಎಂದು ಉತ್ತರದಲ್ಲಿ ವಿವರ ಒದಗಿಸಿದೆ.

 

ರಾಜ್ಯದಲ್ಲಿ  ಚರ್ಚ್‌, ಮಸೀದಿಗಳನ್ನು ಎ ಬಿ ಸಿ ದರ್ಜೆಗಳಂತೆ ವಿಂಗಡಣೆ ಮಾಡಿರುವುದಿಲ್ಲ.  ವಕ್ಫ್‌ ಕಾಯ್ದೆ 1995 ಹಾಗೂ ಕರ್ನಾಟಕ ವಕ್ಫ್‌ ನಿಯಮ 2017ರಂತೆ ಮಸೀದಿಗಳನ್ನು ಎ ಬಿ ಸಿ ದರ್ಜೆಗಳನ್ನಾಗಿ ವಿಂಗಡಿಸಲು ಅವಕಾಶವಿರುವುದಿಲ್ಲ.ವಿ ಮಸೀದಿಗಳಿಂದ ಬರುವ ಆದಾಯದಲ್ಲಿ ಶೇ.7ರಷ್ಟು ವಕ್ಫ್‌ ವಂತಿಗೆಯಲ್ಲಿ ಶೇ.1ರಷ್ಟು ಕೇಂದ್ರ ವಕ್ಫ್‌ ಕೌನ್ಸಿಲ್‌ಗೆ ಪಾವತಿಸಲಾಗುತ್ತಿದೆ, ಉಳಿದ ಶೇ. 6ರಷ್ಟನ್ನು ಕರ್ನಾಟಕ ರಾಜ್ಯ ವಕ್ಪ್‌ ಮಂಡಳಿಯ ನಿರ್ವಹಣೆಗೆ ನೀಡಲಾಗುತ್ತಿದೆ ಎಂದು ಸಚಿವರು  ಮಾಹಿತಿ ಒದಗಿಸಿದ್ದಾರೆ.

 

ರಾಜ್ಯದ ಬೆಂಗಳೂರು ನಗರ ಸೇರಿದಂತೆ ಒಟ್ಟು 31 ಜಿಲ್ಲೆಗಳಲ್ಲಿ 1,054 ಮಸೀದಿ, ಚರ್ಚ್‌ಗಳು ನೋಂದಣಿಯಾಗಿಲ್ಲ.  10,409 ನೋಂದಣಿಯಾಗಿವೆ.

 

ಬೆಂಗಳೂರು ನಗರ ಉತ್ತರದಲ್ಲಿ 150, ಬೆಂಗಳೂರು ದಕ್ಷಿಣ 108, ಬೆಂಗಳೂರು ಗ್ರಾಮೀಣದಲ್ಲಿ 50, ಚಿಕ್ಕಬಳ್ಳಾಪುರದಲ್ಲಿ 58, ಚಿತ್ರದುರ್ಗದಲ್ಲಿ 28, ದಾವಣಗೆರೆಯಲ್ಲಿ 24, ಕೋಲಾರದಲ್ಲಿ 15, ರಾಮನಗರದಲ್ಲಿ 35, ಶಿವಮೊಗ್ಗದಲ್ಲಿ 26, ತುಮಕೂರಿನಲ್ಲಿ 43, ಬೆಳಗಾವಿಇಯಲ್ಲಿ 68, ಬಾಗಲಕೋಟೆಯಲ್ಲಿ 68, ಚಿಕ್ಕೋಡಿಯಲ್ಲಿ    7, ಧಾರವಾಡದಲ್ಲಿ 58, ಗದಗ್‌ನಲ್ಲಿ 9, ಹಾವೇರಿಯಲ್ಲಿ  3, ಉತ್ತರ ಕನ್ನಡದಲ್ಲಿ 15, ವಿಜಯಪುರದಲ್ಲಿ 5, ಕಲ್ಬುರ್ಗಿಯಲ್ಲಿ 58, ಬಳ್ಳಾರಿ (ವಿಜಯನಗರ)ದಲ್ಲಿ 26, ಬೀದರ್‍‌ನಲ್ಲಿ 6, ಕೊಪ್ಪಳದಲ್ಲಿ 28, ರಾಯಚೂರಿನಲ್ಲಿ 15, ಯಾದಗಿರಿಯಲ್ಲಿ 14, ಮೈಸೂರಿನಲ್ಲಿ 25, ಚಾಮರಾಜನಗರದಲ್ಲಿ 21, ಚಿಕ್ಕಮಗಳೂರಿನಲ್ಲಿ 17, ದಕ್ಷಿಣ ಕನ್ನಡದಲ್ಲಿ 17, ಹಾಸನದಲ್ಲಿ 20, ಕೊಡಗಿನಲ್ಲಿ 1, ಮಂಡ್ಯದಲ್ಲಿ 7, ಉಡುಪಿಯಲ್ಲಿ 29 ಮಸೀದಿ, ಚರ್ಚ್‌ಗಳು ನೋಂದಣಿಯಾಗಿಲ್ಲ ಎಂದು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

 

 

 

 

 

ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡದಿರುವ ಹಿಂದೂ ದೇವಸ್ಥಾನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವುದು ಮತ್ತು ದೇವಾಲಯಗಳ ಆಸ್ತಿ, ಪಾಸ್ತಿ, ಚಿನ್ನಾಭರಣವೂ ಸೇರಿದಂತೆ ಒಟ್ಟು ಸಂಪನ್ಮೂಲಗಳನ್ನು ದಾಖಲಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದರ ಬೆನ್ನಲ್ಲೇ ಮಸೀದಿ, ಚರ್ಚ್‌, ಮದರಸ, ಜೈನ ಸಮುದಾಯ ಭವನಗಳ ನೋಂದಾವಣೆ ಆಗಿರುವ ಮತ್ತು ನೋಂದಾವಣೆ ಆಗದಿರುವ ಪಟ್ಟಿಯನ್ನು ಒದಗಿಸಿರಲಿಲ್ಲ.

 

ಚರ್ಚ್‌, ಜೈನ ಸಮುದಾಯ ಭವನಗಳ ನೋಂದಣಿ ಪಟ್ಟಿ ಒದಗಿಸದ ಸರ್ಕಾರ; 5 ವರ್ಷದಲ್ಲಿ 336 ಕೋಟಿ ರು. ವೆಚ್ಚ

 

ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸೆಕ್ಷನ್‌ 53ರ ಪ್ರಕಾರ ದೇವಸ್ಥಾನಗಳು ತಮ್ಮ ಆಸ್ತಿಪಾಸ್ತಿ, ಚಿನ್ನಾಭರಣಗಳನ್ನು ದಾಖಲಿಸುವ ಸಂಬಂಧ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ 2023ರ ಸೆ.30ರಂದು ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಮುಜರಾಯಿ) ಗೆ  ನಿರ್ದೇಶನ ನೀಡಿರುವ ಸಚಿವರ ಕಚೇರಿಯಿಂದ 2023ರ ಅಕ್ಟೋಬರ್‍‌ 27ರಂದು ಪತ್ರವನ್ನು ಬರೆದಿತ್ತು.

ಹಿಂದೂ ದೇವಸ್ಥಾನಗಳ ಕಡ್ಡಾಯ ನೋಂದಣಿ, ಆಸ್ತಿ, ಪಾಸ್ತಿ, ಚಿನ್ನಾಭರಣ ದಾಖಲು; ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ

2023ರ ಸೆ.30ರಂದು ಮನವಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಕುರಿತು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ 2023ರ ಅಕ್ಟೋಬರ್‍‌ 5ರಂದೇ ಪತ್ರ ಬರೆಯಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರ ಆಪ್ತ ಕಾರ್ಯದರ್ಶಿ ಕೆ ಎಸ್‌ ಜಗದೀಶ್‌ ರೆಡ್ಡಿ ಅವರು ಹಿಂಬರಹ ನೀಡಿದ್ದರು.

 

ಹಿಂದಿನ ಬಿಜೆಪಿ ಸರ್ಕಾರವು ಕರ್ನಾಟಕದ ಚರ್ಚ್ಗಳ ಮೇಲೆ ಗೂಢಚಾರಿಕೆ ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಗುಪ್ತಚರ ಇಲಾಖೆಯಿಂದಲೇ ನೇರವಾಗಿ ಕಾರ್ಯಾಚರಣೆ ಮಾಡಲಾಗಿತ್ತು.

ಕರ್ನಾಟಕದ ಚರ್ಚ್‌ಗಳ ಮೇಲೆ ಗೂಢಚಾರಿಕೆ; ಗುಪ್ತಚರ ಇಲಾಖೆಯಿಂದ ಕಾರ್ಯಾಚರಣೆ

 

ಆದರೆ ಚರ್ಚ್‌ಗಳ ಗೂಢಚಾರಿಕೆ ಕುರಿತು ಒಳಾಡಳಿತ ಇಲಾಖೆಯಲ್ಲಿ ಮಾಹಿತಿಯೇ ಇರಲಿಲ್ಲ.

ಚರ್ಚ್‌ಗಳ ಮೇಲೆ ಗೂಢಚಾರಿಕೆ; ಒಳಾಡಳಿತ ಇಲಾಖೆಯಲ್ಲಿ ಮಾಹಿತಿಯೇ ಲಭ್ಯವಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮ 2002ರ ಸೆಕ್ಷನ್‌ 53ರಂತೆ ಇದುವರೆಗೂ ನೋಂದಣಿ ಆಗಿರುವುದಿಲ್ಲ ಎಂದು ಧಾರ್ಮಿಕ ದತ್ತಿ ತಹಶೀಲ್ದಾರ್‍‌ ಅವರು ಮಾಹಿತಿ ಒದಗಿಸಿದ್ದರು.

ಧರ್ಮಸ್ಥಳ ದೇಗುಲ ನೋಂದಣಿಯಾಗಿಲ್ಲವೆಂದ ಸರ್ಕಾರ; ಧರ್ಮಾದಾಯ ದತ್ತಿ ಅಧಿನಿಯಮ ಉಲ್ಲಂಘನೆ?

 

ಬಹುತೇಕ ಮಂದಿಗೆ ಸುಪ್ರೀಂ ಕೋರ್ಟ್‍ನ ಆದೇಶದಲ್ಲೇನಿದೆ ಮತ್ತು ಧಾರ್ಮಿಕ ದತ್ತಿ ಕಾಯ್ದೆಯಲ್ಲೇನಿದೆ ಎಂಬ ಮಾಹಿತಿ ಇಲ್ಲ. ಈ ವಿವರಗಳನ್ನು ದಾಖಲೆ ಸಹಿತ ಮುಂದಿಡಲಾಗಿದೆ. ಆದರೂ ವೀರೇಂದ್ರ ಹೆಗ್ಗಡೆಯವರಾಗಲೀ, ಅವರ ಅಧಿಕೃತ ಪ್ರತಿನಿಧಿಯಾಗಲೀ ಪ್ರತಿಕ್ರಿಯಿಸಿಲ್ಲ ಎಂದು ಟ್ರಸ್ಟ್ ಆರೋಪಿಸಿತ್ತು.

the fil favicon

SUPPORT THE FILE

Latest News

Related Posts