ಬೆಂಗಳೂರು; ರಾಜ್ಯದ ಪ್ರಸಿದ್ಧ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಾವಣೆಯೇ ಆಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಮಂಜುನಾಥೇಶ್ವರ ದೇವಸ್ಥಾನವು ನೋಂದಾವಣೆಯೇ ಅಗಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಅವರು ಆರ್‍ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಡಿ. ವೀರೇಂದ್ರ ಹೆಗ್ಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದು ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಈ ಬೆಳವಣಿಗೆಗಳ ನಡುವೆಯೇ ಧರ್ಮಸ್ಥಳ ಮಂಜುನಾಥ ದೇಗುಲವು ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಾವಣೆಯೇ ಆಗಿಲ್ಲವೆಂದು ಸರ್ಕಾರವು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಾವಣೆ ಮಾಡಿರುವ ಪ್ರತಿಯನ್ನು ಕೋರಿ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿದ್ದ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರಿಗೆ 2023ರ ಅಕ್ಟೋಬರ್ 18ರಂದು ಮಾಹಿತಿ ನೀಡಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಾಹಿತಿಯಲ್ಲೇನಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮ 2002ರ ಸೆಕ್ಷನ್ 53ರಂತೆ ಇದುವರೆಗೂ ನೋಂದಣಿ ಆಗಿರುವುದಿಲ್ಲ ಎಂದು ಧಾರ್ಮಿಕ ದತ್ತಿ ತಹಶೀಲ್ದಾರ್ ಅವರು ಮಾಹಿತಿ ಒದಗಿಸಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ವಿಚಾರದಲ್ಲಿ 2015ರಲ್ಲಿ ಮುಜುರಾಯಿ ಸಚಿವರಾಗಿದ್ದ ಜಯಚಂದ್ರ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಇದನ್ನು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಆಕ್ಷೇಪಿಸಿದೆ. ಅಲ್ಲದೆ ಈ ಬಗ್ಗೆ ಬಹಿರಂಗ ಚರ್ಚೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಿತ್ತು.
ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ತರಲು ಮುಜರಾಯಿ ಸಚಿವರ ಟಿಪ್ಪಣಿ ಉಲ್ಲೇಖಿಸಿ, ಕಾಯ್ದೆ ಪ್ರಕಾರ ಪ್ರಸ್ತಾವನೆ ಕಳುಹಿಸುವಂತೆ ಇಲಾಖಾ ಆಯುಕ್ತರು ಡಿಸಿಗೆ ನಿರ್ದೇಶನ ಕಳುಹಿಸಿದ್ದಾರೆ. ಇದರ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.
ಬಹುತೇಕ ಮಂದಿಗೆ ಸುಪ್ರೀಂ ಕೋರ್ಟ್‍ನ ಆದೇಶದಲ್ಲೇನಿದೆ ಮತ್ತು ಧಾರ್ಮಿಕ ದತ್ತಿ ಕಾಯ್ದೆಯಲ್ಲೇನಿದೆ ಎಂಬ ಮಾಹಿತಿ ಇಲ್ಲ. ಈ ವಿವರಗಳನ್ನು ದಾಖಲೆ ಸಹಿತ ಮುಂದಿಡಲಾಗಿದೆ. ಆದರೂ ವೀರೇಂದ್ರ ಹೆಗ್ಗಡೆಯವರಾಗಲೀ, ಅವರ ಅಧಿಕೃತ ಪ್ರತಿನಿಧಿಯಾಗಲೀ ಪ್ರತಿಕ್ರಿಯಿಸಿಲ್ಲ ಎಂದು ಟ್ರಸ್ಟ್ ಆರೋಪಿಸಿತ್ತು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡದ ರಾಜ್ಯದ ದೇವಾಲಯಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಹಾಗೂ ದೇವಾಲಯಗಳ ಆಸ್ತಿ, ಚಿನ್ನಾಭರಣ ಸೇರಿದಂತೆ ಒಟ್ಟು ಸಂಪನ್ಮೂಲಗಳನ್ನು ದಾಖಲಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ನಿಯೋಗ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ನೀಡಿತ್ತು.
ಹಿಂದಿನ ಸರಕಾರದ ಮುಜರಾಯಿ ಇಲಾಖೆ ಸಚಿವರು ಅಸಂವಿಧಾನಿಕವಾಗಿ ಟಿಪ್ಪಣಿ ಹೊರಡಿಸಿ ದೇವಾಲಯಗಳ ನೋಂದಾವಣೆಗೆ ತಡೆಯಾಜ್ಞೆ ತಂದು ಕಾನೂನುಗಳನ್ನು ಉಲ್ಲಂಘಿಸಿದ್ದರು. ಇಂತಹ ಟಿಪ್ಪಣಿಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆಯಿಲ್ಲ. ಇದನ್ನು ಈಗಿನ ಸರಕಾರ ಪರಿಗಣಿಸಿ ಇಲಾಖೆಗೆ ದೇವಾಲಯಗಳ ನೋಂದಾವಣೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ರಾಜ್ಯದ ಹಲವರು ದೇವಸ್ಥಾನಗಳು ಬಹಳ ದೊಡ್ಡ ಪ್ರಮಾಣದ ಭಕ್ತ ಸಮೂಹವನ್ನು ಹೊಂದಿದ್ದು, ಇಂತಹ ದೇವಸ್ಥಾನಗಳು ಜನರ ಭಕ್ತಿ, ನಂಬಿಕೆ ಹಾಗೂ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ವಿವಿಧ ಬಗೆಯ ಪೂಜೆಗಳನ್ನು ಮಾಡಿಸಲು ಮತ್ತು ಚಿನ್ನಾಭರಣ, ಜಮೀನು, ಹಣದ ರೂಪದಲ್ಲಿ ಹರಕೆಯ ಕಾಣಿಕೆಗಳನ್ನು ಪಡೆಯುತ್ತಿದ್ದು, ಈ ರೀತಿಯ ವ್ಯಾಪಾರೀಕರಣವನ್ನು ಸರಕಾರ ತಪ್ಪಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿತ್ತು.
‘ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿದೆ. ಮುಜರಾಯಿ ಇಲಾಖೆಗೆ ಮೇಜರ್ ಸರ್ಜರಿ ಆಗಬೇಕಾಗಿದೆ. ನೋಂದಾವಣೆ ಮಾಡದೆ, ಆಡಳಿತ ಮಂಡಳಿಯ ಜೊತೆ ಕೈ ಜೋಡಿಸಿರುವ ಇಲಾಖೆಯ ಅಧಿಕಾರಿಗಳು ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಇದು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಂತೆ. ಹಿಂದೂ ಧರ್ಮದಲ್ಲಿ ನಂಬಿಕೆಯುಳ್ಳ ಕೋಟ್ಯಾಂತರ ಭಕ್ತಾದಿಗಳು ಈ ದೇವಸ್ಥಾನಗಳಿಗೆ ಹೋಗಿ ಹರಕೆ ಕಾಣಿಕೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಇದನ್ನು ಅರಿತಿರುವ ಆಡಳಿತ ಮಂಡಳಿ ಅವರ ಧಾರ್ಮಿಕ ಭಾವನೆಗಳನ್ನು ಪೂರ್ಣ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು,’ ಎನ್ನುತ್ತಾರೆ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ‘ಶಕ್ತಿ ಯೋಜನೆ’ ಯಿಂದ ಧರ್ಮಸ್ಥಳಕ್ಕೆ ಬರುವ ಮಹಿಳೆಯ ಪ್ರಮಾಣ ಹೆಚ್ಚಾಗಿದೆ. ಮಂಜುನಾಥ ಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಕಾಣಿಕೆ ಹಾಕುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅವಕಾಶ ಇದ್ದಾಗ ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಆಹ್ವಾನ ನೀಡಿದ್ದನ್ನು ಸ್ಮರಿಸಬಹುದು.