ಚರ್ಚ್‌ಗಳ ಮೇಲೆ ಗೂಢಚಾರಿಕೆ; ಒಳಾಡಳಿತ ಇಲಾಖೆಯಲ್ಲಿ ಮಾಹಿತಿಯೇ ಲಭ್ಯವಿಲ್ಲ

ಬೆಂಗಳೂರು; ರಾಜ್ಯದ ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಲ್ಲಿರುವ ಚರ್ಚ್‌ಗಳ ಸಮೀಕ್ಷೆ ನಡೆಸಿರುವುದನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯವು ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದರೆ ಇತ್ತ ಚರ್ಚ್‌ಗಳ ಮೇಲೆ ಗೂಢಚಾರಿಕೆ ನಡೆಸಲು ರಾಜ್ಯ ಗುಪ್ತಚರ ಇಲಾಖೆಯು ಕಾರ್ಯೋನ್ಮುಖವಾಗಿದ್ದರೂ ಒಳಾಡಳಿತ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಇದರ ಯಾವುದೇ ಮಾಹಿತಿಯೂ ಇಲ್ಲ ಎಂದು ಆರ್‌ಟಿಐಗೆ ಉತ್ತರಿಸಿದೆ.

ಕ್ರೈಸ್ತ ಸಮುದಾಯದ ಕಲ್ಯಾಣದ ಉದ್ದೇಶದಿಂದಲೇ ರಾಜ್ಯದಲ್ಲಿನ ಚರ್ಚ್‌ಗಳ ಮಾಹಿತಿ ಸಂಗ್ರಹಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ನೀಡಿರುವ ಹೇಳಿಕೆಯಲ್ಲಿ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬೆನ್ನಲ್ಲೇ ಗುಪ್ತಚರ ಇಲಾಖೆಯು ಚರ್ಚ್‌ಗಳ ಸಮೀಕ್ಷೆ ನಡೆಸಿರುವ ಮಾಹಿತಿಯು ಒಳಾಡಳಿತ ಇಲಾಖೆ ಬಳಿ ಇಲ್ಲದಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.

ರಾಜ್ಯಾದ್ಯಂತ ಅಧಿಕೃತ, ಅನಧಿಕೃತ ಮತ್ತು ಮನೆಗಳಲ್ಲಿ ಚರ್ಚ್‌ಗಳ ಮಾದರಿಯಲ್ಲಿ ಪ್ರಾರ್ಥನೆ ನಡೆಸುತ್ತಿರುವ ಕುರಿತು ವಿವರ ಒದಗಿಸುವ ಸಂಬಂಧ ಗುಪ್ತಚರ ಇಲಾಖೆಯು 2021ರ ಅಕ್ಟೋಬರ್‌ 16ರಂದು ತನ್ನ ಅಧೀನ ಸಿಬ್ಬಂದಿಗಳಿಗೆ ಆದೇಶ ಹೊರಡಿಸಿತ್ತು ಎಂದು ಹೇಳಲಾಗಿತ್ತು. ಇದು ಕ್ರೈಸ್ತ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದೆ ಎಂದು ಹೇಳಲಾಗಿದ್ದ ಅಧಿಕೃತ ಸುತ್ತೋಲೆ, ಜ್ಞಾಪನ ಪತ್ರ, ಅದೇಶ ಪತ್ರ ಪಡೆಯಲು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 2021ರ ಅಕ್ಟೋಬರ್‌ 26ರಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ 2021ರ ನವೆಂಬರ್‌ 25ರಂದು ಉತ್ತರಿಸಿರುವ ಒಳಾಡಳಿತ ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆ ಶಾಖೆಯಲ್ಲಿ ಇಂತಹ ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ಉತ್ತರಿಸಿದೆ.

ಚರ್ಚ್‌ಗಳ ಸಮೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯು ಲಭ್ಯವಿಲ್ಲ ಎಂದು ಲಿಖಿತ ಉತ್ತರ ಒದಗಿಸಿರುವುದು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸದೆಯೇ ಗುಪ್ತಚರ ಇಲಾಖೆಯು ಚರ್ಚ್‌ಗಳ ಸಮೀಕ್ಷೆ ನಡೆಸಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು 2021ರ ಸೆಪ್ಟಂಬರ್‌ನಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಪ್ರಸ್ತಾಪಿಸಿದ್ದರು. ಅಧಿವೇಶನ ಪೂರ್ಣಗೊಂಡ ಅತ್ಯಲ್ಪ ದಿನಗಳಲ್ಲೇ ರಾಜ್ಯ ಗುಪ್ತಚರ ಇಲಾಖೆಯು ರಾಜ್ಯದಲ್ಲಿರುವ ಚರ್ಚ್‌ಗಳ ಮೇಲೆ ಗೂಢಚಾರಿಕೆ ನಡೆಸಿದೆ ಎಂಬ ಮಾಹಿತಿಯು ಸೋರಿಕೆಯಾಗಿತ್ತು.

ಚರ್ಚ್‌ಗಳ ಸಮೀಕ್ಷೆ ಕುರಿತಂತೆ ರಾಜ್ಯ ಗುಪ್ತಚರ ದಳದ ಎಡಿಜಿಪಿ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 2021ರ ಅಕ್ಟೋಬರ್‌ 16ರಂದೇ ಈ ಕುರಿತು ಆದೇಶವೊಂದು ಹೊರಬಿದ್ದಿತ್ತು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಚರ್ಚ್‌ಗಳ ಪೈಕಿ ಅಧಿಕೃತವೆಷ್ಟು ಮತ್ತು ಅನಧಿಕೃತವೆಷ್ಟು ಎಂಬುದನ್ನು ಪತ್ತೆ ಹಚ್ಚಿ ವರದಿ ನೀಡಲು ಸೂಚಿಸಲಾಗಿತ್ತು. ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೆರವಿನೊಂದಿಗೆ ಚರ್ಚ್‌ಗಳ ಸಮೀಕ್ಷೆ ನಡೆಸಿದೆ ಎಂದು ‘ ದಿ ಕ್ವಿಂಟ್‌’ ಜಾಲತಾಣವು ವರದಿ ಪ್ರಕಟಿಸಿತ್ತು.

ಗುಪ್ತಚರ ಇಲಾಖೆಯು ಹೊರಡಿಸಿದೆ ಎಂದು ಹೇಳಲಾಗಿದ್ದ ಆದೇಶದಲ್ಲಿ ‘ಅತ್ಯಂತ ತುರ್ತು’ ಎಂಬ ಒಕ್ಕಣೆ ಹೊಂದಿತ್ತು. ಚರ್ಚ್‌ಗಳು ಹೊಂದಿರುವ ಆಸ್ತಿ, ಚರ್ಚ್‌ಗಳ ಮುಖ್ಯಸ್ಥರು, ಚರ್ಚ್‌ಗಳಲ್ಲಿ ಮಾಡುವ ಪ್ರಾರ್ಥನೆ ಮಾದರಿಯಲ್ಲಿಯೇ ಮನೆಗಳಲ್ಲಿ ಪ್ರಾರ್ಥನೆ ನಡೆಸುತ್ತಿರುವ ಸ್ಥಳಗಳನ್ನು ಶೋಧಿಸಿ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು. ಅಲ್ಲದೆ ಅಕ್ಟೋಬರ್‌ 18ರೊಳಗೇ ಈ ಕುರಿತು ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಗುಪ್ತಚರ ವಿಭಾಗದ ಎಲ್ಲಾ ಡಿವೈಎಸ್‌ಪಿ ಮತ್ತು ಇನ್ಸ್‌ಪೆಕ್ಟರ್‌ಗಳಿಗೂ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ಪ್ರತಿಯೊಂದು ಚರ್ಚ್‌ಗಳನ್ನು ಪ್ರೊಟೆಸ್ಟಂಟ್‌ ಅಥವಾ ಕ್ಯಾಥೋಲಿಕ್‌ ಎಂದು ವರ್ಗೀಕರಿಸಿ ಗುರುತಿಸಬೇಕು ಎಂದು ಸೂಚಿಸಲಾಗಿತ್ತು.

ಚರ್ಚ್‌ಗಳ ವಿವರ ಕಲೆ ಹಾಕುವ ಸಂಬಂಧ ಅಲ್ಪಸಂಖ್ಯಾತರ ಇಲಾಖೆ 2021ರ ಜುಲೈ 7ರಂದು ಹೊರಡಿಸಿದ್ದ ಸುತ್ತೋಲೆ ಅರ್ಥಹೀನವಾಗಿದ್ದು, ತಾರತಮ್ಯದಿಂದ ಕೂಡಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ‘ಸಮೀಕ್ಷೆಯಲ್ಲಿ ಚರ್ಚ್‌ಗಳು ಇರುವ ಸ್ಥಳ, ತಾಲ್ಲೂಕು, ಜಿಲ್ಲೆ ಹಾಗೂ ಅವುಗಳ ವಿಧಾನಸಭಾ ಕೇತ್ರದ ವ್ಯಾಪ್ತಿಯ ದತ್ತಾಂಶಗಳು ಮತ್ತು ಚರ್ಚ್‌ಗಳ ಹೆಸರು, ವಿಳಾಸ, ಖಾತೆ ಸಂಖ್ಯೆ, ಸರ್ವೇ ಸಂಖ್ಯೆ ಹಾಗೂ ಪಾದ್ರಿಗಳ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಆ ಮೂಲಕ ಧರ್ಮದ ಆಧಾರದಲ್ಲಿ ಕ್ರೈಸ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಇದು ಕ್ರೈಸ್ತರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದ್ದು, ಈ ಸುತ್ತೋಲೆಯನ್ನು ರದ್ದುಪಡಿಸಬೇಕು’ ಎಂಬುದು ಅರ್ಜಿದಾರರ ಕೋರಿದ್ದರು.

ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಕುರಿತು ಸರ್ಕಾರದ ಹಂತದಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಗುಪ್ತಚರ ದಳವು ಚರ್ಚ್‌ಗಳ ಸಮೀಕ್ಷೆಗೆ ಮುಂದಾಗಿದ್ದು ಮಹತ್ವ ಪಡೆದುಕೊಂಡಿತ್ತು.

the fil favicon

SUPPORT THE FILE

Latest News

Related Posts