ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಗ್ಯಾರಂಟಿ ಸಮೀಕ್ಷೆಗೆ 12 ಕೋಟಿ; ದುಂದುವೆಚ್ಚಕ್ಕೆ ದಾರಿ

ಬೆಂಗಳೂರು; ಐದು ಗ್ಯಾರಂಟಿ ಯೋಜನೆಗಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಇತರೆ ಇಲಾಖೆಗಳ ಸಿಬ್ಬಂದಿಗಳ ಮೂಲಕವೂ ಸಮೀಕ್ಷೆ ನಡೆಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಹೊರಟಿದೆ. ಇದಕ್ಕಾಗಿ ಬರೋಬ್ಬರಿ 12 ಕೋಟಿ ರು. ವೆಚ್ಚ ಮಾಡಲಿದೆ.

 

ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್‌ ಕೆಡಿಆರ್‍‌ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ. ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ  ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿದೆ.

 

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ  ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಹೆಸರಿನಲ್ಲಿ ಮನೆ ಮನೆಯನ್ನೂ ತಲುಪುವ ಉದ್ದೇಶವೂ ಇದರಲ್ಲಿ ಅಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಸಮೀಕ್ಷೆ ನಡೆಸುವ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2024ರ ಫೆ.20ರಂದು ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಖಾಸಗಿ ಸಂಸ್ಥೆಗಳು ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವ ಹೊತ್ತಿನಲ್ಲೇ ಪರ್ಯಾಯವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಮತ್ತೊಂದು ಸಮೀಕ್ಷೆ ಕೈಗೊಳ್ಳುವುದು ಪುನರಾವರ್ತನೆ ಆಗಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

 

ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳೊಂದಿಗೆ ಸಮಾಲೋಚಿಸಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

 

ಈ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುವ  ಇಲಾಖೆಗಳ ಸಿಬ್ಬಂದಿಗೆ ಹೆಚ್ಚುವರಿ ಪ್ರೋತ್ಸಾಹ ಧನವನ್ನೂ ನೀಡಲಿದೆ. ಅಂದಾಜು 1.2 ಲಕ್ಷ ಗ್ಯಾರಂಟಿ ಸ್ವಯಂ ಸೇವಕರಿಂದ 10ರಿಂದ 15 ದಿನಗಳ ಅವಧಿಯಲ್ಲಿ ಒಂದು ಬಾರಿ ಒಬ್ಬರಿಗೆ ಮಾತ್ರ 1,000 ರು.ನಂತೆ ಪ್ರೋತ್ಸಾಹ ಧನ ನೀಡಿ ರಾಜ್ಯ ವ್ಯಾಪಿ ಸಮೀಕ್ಷೆ ನಡೆಸಲಿದೆ.

 

ಈ ಸಮೀಕ್ಷೆಗೆ ಪ್ರತಿ ಗ್ಯಾರಂಟಿ ಸ್ವಯಂ ಸೇವಕರು 100ರಿಂದ 120 ಮನೆಗಳನ್ನು ಹಂಚಿಕೆ ಮಾಡಲಿದೆ. ಇದಕ್ಕೆ ತಗಲುವ ವೆಚ್ಚ 12.00 ಕೋಟಿ ರು.ಗಳನ್ನು ಗೃಹ ಲಕ್ಷ್ಮಿ ಯೋಜನೆಯ (ಲೆಕ್ಕ ಶೀರ್ಷಿಕೆ 2235-02-135-73(100) ಅಡಿ ಒದಗಿಸಿರುವ ಅನುದಾನವನ್ನು ಬಳಕೆ ಮಾಡಲಿದೆ ಎಂಬುದು ಆದೇಶದಿಂದ ಗೊತ್ತಾಗಿದೆ.

 

‘ಸರ್ಕಾರವು ಬಡವರ ಹಾಗೂ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ರೂಪಿಸಿದೆ. ರಾಜ್ಯದ ಪ್ರತಿ ಮನೆಮನೆಗೂ ಈ ಐದು ಗ್ಯಾರಂಟಿ ಯೋಜನೆಗಳು ಸರಿಯಾದ ರೀತಿಯಲ್ಲಿ ತಲುಪಿವೆಯೇ ಎಂಬ ಬಗ್ಗೆ ರಾಜ್ಯ ವ್ಯಾಪ್ತಿ ಸಮೀಕ್ಷೆ ಮಾಡಲು ಗ್ಯಾರಂಟಿ ಸ್ವಯಂ ಸೇವಕರನ್ನು ನೇಮಕ ಮಾಡಲು ನಿರ್ಧರಿಸಿದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳನ್ನು ಗ್ಯಾರಂಟಿ ಸ್ವಯಂ ಸೇವಕರಾಗಿ ಬಳಸಿಕೊಳ್ಳಲಿದೆ. ‘ ಇವರುಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳು ತಲುಪಿರುವ ಬಗ್ಗೆ, ಸದರಿ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಮತ್ತು ಅದರ ಸದ್ಬಳಕೆ ಆಗುತ್ತಿರುವ ಕುರಿತು ಒಂದು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು,’ ಎಂದು ಆದೇಶದಲ್ಲಿ ಹೇಳಲಾಗಿದೆ.

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‍‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಅಲ್ಲದೇ ಬೆಸ್ಕಾಂ ಕೂಡ  ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.

 

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

 

 

ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

 

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

 

ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.

 

ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಗ್ಯಾರಂಟಿ ಯೋಜನೆಗಳನ್ನು  ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

SUPPORT THE FILE

Latest News

Related Posts