ಯೋಜನಾ ವೆಚ್ಚ ಕುಸಿತ; 45 ಇಲಾಖೆಗಳಲ್ಲಿ ಕೊಳೆಯುತ್ತಿದೆ 1.17 ಲಕ್ಷ ಕೋಟಿ, ಅಭಿವೃದ್ಧಿ ಕುಂಠಿತಗೊಂಡಿತೇ?

ಬೆಂಗಳೂರು; 2023-24ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿದ್ದ 2.99 ಲಕ್ಷ ಕೋಟಿ ರು ಅನುದಾನದಲ್ಲಿ 2024ರ ಜನವರಿ 22ರ ಅಂತ್ಯಕ್ಕೆ 1.82 ಲಕ್ಷ ಕೋಟಿ ರು ಖರ್ಚು ಮಾಡಿರುವ ಇಲಾಖೆಗಳು ಇನ್ನೂ 1.17 ಲಕ್ಷ ಕೋಟಿ ರು.ಗಳನ್ನು  ವೆಚ್ಚಕ್ಕೆ ಬಾಕಿ ಇರಿಸಿಕೊಂಡಿವೆ.

 

ಇದೇ ಫೆಬ್ರುವರಿ 16ರಂದು ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯ ಮಂಡಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಹಿಂದಿನ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಒದಗಿಸಿದ್ದ ಒಟ್ಟು ಅನುದಾನದಲ್ಲಿ 1.17 ಲಕ್ಷ ಕೋಟಿ ರು.ಗಳನ್ನೇ ಖರ್ಚು ಮಾಡಿಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿದೆ.

 

ಶೇ. 60ಕ್ಕಿಂತಲೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದರೂ ಖರ್ಚು ಮಾಡುವುದರಲ್ಲಿ ಹಲವು ಇಲಾಖೆಗಳು ಹಿಂದೆ ಬಿದ್ದಿವೆ. ಒಟ್ಟು ಅನುದಾನಕ್ಕೆ 45 ಇಲಾಖೆಗಳು ಒಟ್ಟಾರೆ ಶೇ.54.62ರಷ್ಟು ಮಾತ್ರ ವೆಚ್ಚ ಮಾಡಿವೆ. ಜನವರಿ 22ರ ಅಂತ್ಯಕ್ಕೆ ಗಮನಿಸಿದಾಗ ಹಲವು ಇಲಾಖೆಗಳು ಗುರಿಯನ್ನೇ ಸಾಧಿಸದೇ ಹಿಂದೆ ಬಿದ್ದಿರುವುದು ಕಂಡು ಬಂದಿದೆ. ಹೀಗಾಗಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಮಾತುಗಳು ಕೇಳಿ ಬಂದಿವೆ.

 

ಉನ್ನತ ಶಿಕ್ಷಣ, ಕಾರ್ಮಿಕ, ಒಳಾಡಳಿತ, ಕಾನೂನು, ಆರ್ಥಿಕ, ಶಾಲಾ ಶಿಕ್ಷಣ, ಸಾಕ್ಷರತಾ, ಮೂಲ ಸೌಲಭ್ಯ, ವಾರ್ತಾಮ ವಾಣಿಜ್ಯ ಮತ್ತು ಕೈಗಾರಿಕೆ, ಪಶುಸಂಗೋಪನಾ, ಇಂಧನ ಇಲಾಖೆಯು ಶೇ.60ರಿಂದ ಶೇ.76.53ರರಷ್ಟು ಖರ್ಚು ಮಾಡಿವೆ. ಉಳಿದ ಇಲಾಖೆಗಳು ಶೇ.15.55ರಿಂದ ಶೇ.52.78ರಷ್ಟು ಮಾತ್ರ ವೆಚ್ಚ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024ರ ಜನವರಿ 25ರಂದು ನಡೆದಿದ್ದ ಸಭೆಯಲ್ಲಿ ಇಲಾಖೆಗಳ ಖರ್ಚು ವೆಚ್ಚದ ಮಾಹಿತಿ ಕುರಿತು ಚರ್ಚೆಯಾಗಿದೆ. ಇಲಾಖೆಗಳು ಸಭೆಗೆ ಮಂಡಿಸಿದ್ದ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ನಗರಾಭಿವೃದ್ಧಿ ಇಲಾಖೆಗೆ 17,906.58 ಕೋಟಿ ರು., ಪ್ರಾರಂಭಿಕ ಶಿಲ್ಕು 4,800 ಕೋಟಿ ರು. ಸೇರಿ ಒಟ್ಟಾರೆ 22,706.76 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ ಜನವರಿ 22ರ ಅಂತ್ಯಕ್ಕೆ 9,876.15 ಕೋಟಿ ರು. ಬಿಡುಗಡೆ ಮಾಡಿತ್ತು. ಬಿಡುಗಡೆಗೆ 12,830.61 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ಬಿಡುಗಡೆಯಾಗಿದ್ದ ಅನುದಾನದಲ್ಲಿ 10,175.29 ಕೋಟಿ ರು. ವೆಚ್ಚ ಮಾಡಿತ್ತು. ಬಿಡುಗಡೆಗಿಂತಲೂ 299.14 ಕೋಟಿ ರು. ಅಧಿಕ ವೆಚ್ಚ ಮಾಡಿದೆ.

 

ಗ್ರಾಮೀಣಾಭಿವೃದ್ಧಿಗೆ ಪ್ರಾಥಮಿಕ ಶಿಲ್ಕು ಸೇರಿ 23,965.50 ಕೋಟಿ ರು. ಅನುದಾನ ಒದಗಿಸಿತ್ತು. ಇದರಲ್ಲಿ ಜನವರಿ 22ರ ಅಂತ್ಯಕ್ಕೆ 10,591.58 ಕೋಟಿ ರು. ಬಿಡುಗಡೆ ಮಾಡಿದೆ. ಬಿಡುಗಡೆಗೆ 13,373.92 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 10,575.91 ಕೋಟಿ ರು. ವೆಚ್ಚ ಮಾಡಿದೆ. ವೆಚ್ಚಕ್ಕೆ 15.67 ಕೋಟಿ ರು. ಬಾಕಿ ಇರಿಸಿಕೊಂಡಿದೆ.

 

ಜಲ ಸಂಪನ್ಮೂಲ ಇಲಾಖೆಗೆ 18,813.56 ಕೋಟಿ ರು. ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ 9,020.42 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 9,793.14 ಕೋಟಿ ರು. ಬಾಕಿ ಇದೆ. ಆದರೆ 10,017.10 ಕೋಟಿ ರು. ಖರ್ಚು ಮಾಡಿದೆ. ಬಿಡುಗಡೆಯಾಗಿದ್ದ ಅನುದಾನಕ್ಕಿಂತಲೂ 996.68 ಕೋಟಿ ರು. ಅಧಿಕ ವೆಚ್ಚ ಮಾಡಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 31,778.32 ಕೋಟಿ ರು. ಅನುದಾನ ನೀಡಿದೆ. ಇದರಲ್ಲಿ 27,302.55 ಕೋಟಿ ರು. ಬಿಡುಗಡೆ ಮಾಡಿ 4,475.77 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 19,831.23 ಕೋಟಿ ರು. ಖರ್ಚು ಮಾಡಿರುವ ಇಲಾಖೆಯು 7,471.32 ಕೋಟಿ ರು. ವೆಚ್ಚಕ್ಕೆ ಬಾಕಿ ಇರಿಸಿಕೊಂಡಿದೆ.

 

ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ 11,679.54 ಕೋಟಿ ರು. ಅನುದಾನದಲ್ಲಿ 7,188.44 ಕೋಟಿ ರು. ಬಿಡುಗಡೆ ಮಾಡಿತ್ತು. 4,491.1 ಕೋಟಿ ರು. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 6,425.39 ಕೋಟಿ ರು. ಖರ್ಚು ಮಾಡಿ ವೆಚ್ಚಕ್ಕೆ 763.05 ಕೋಟಿ ರು. ಬಾಕಿ ಇರಿಸಿಕೊಂಡಿದೆ.

 

ವೆಚ್ಚವಾಗದ 20,000 ಕೋಟಿ; ಹಿಂದುಳಿದ ವರ್ಗಗಳ ಕಲ್ಯಾಣ ಸೇರಿ 5 ಇಲಾಖೆಗಳ ಕಳಪೆ ಸಾಧನೆ ಬಹಿರಂಗ

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 24,757.76 ಕೋಟಿ ರು. ಅನುದಾನವಿದೆ. ಇದರಲ್ಲಿ 16,368.88 ಕೋಟಿ ರು.ಬಿಡುಗಡೆ ಮಾಡಿದೆ. ಇನ್ನೂ 8,388.88 ಕೋಟಿ ರು.ಗಳನ್ನು ಬಿಡುಗಡೆಗೆ ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 11,537.41 ಕೋಟಿ ರು. ವೆಚ್ಚ ಮಾಡಿರುವ ಇಲಾಖೆಯು ವೆಚ್ಚಕ್ಕೆ 4,831.47 ಕೋಟಿ ರು. ಬಾಕಿ ಇರಿಸಿಕೊಂಡಿದೆ.

ನಿಷ್ಕ್ರೀಯ, ಅದಕ್ಷತೆ, ಮೈಗಳ್ಳತನ; 6 ತಿಂಗಳಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಗತಿ

ಇಂಧನ ಇಲಾಖೆಯಲ್ಲಿ 22,681.49 ಕೋಟಿ ರು. ಅನುದಾನದಲ್ಲಿ 17,546.90 ಕೋಟಿ ರು. ಬಿಡುಗಡೆ ಮಾಡಿದೆ. ಇನ್ನೂ 5,134.59 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 15,382.30 ಕೋಟಿ ರು. ವೆಚ್ಚ ಮಾಡಿರುವ ಇಲಾಖೆಯು 2,164.6 ಕೋಟಿ ರು. ಖರ್ಚು ಮಾಡಲು ಬಾಕಿ ಉಳಿಸಿಕೊಂಡಿದೆ.

 

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 1,706.66 ಕೋಟಿ ರು. ಅನುದಾನ ಒದಗಿಸಿತ್ತು. ಇದರಲ್ಲಿ 1,137.94 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ 841.66 ಕೋಟಿ ರು. ಖರ್ಚು ಮಾಡಿದೆ. ವೆಚ್ಚಕ್ಕೆ 296.28 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 3,072.13 ಕೋಟಿ ರು. ಅನುದಾನದಲ್ಲಿ 2,013.35 ಕೋಟಿ ರು. ಬಿಡುಗಡೆಯಾಗಿದ್ದು ಈ ಪೈಕಿ 1,194.91 ಕೋಟಿ ರು. ವೆಚ್ಚ ಮಾಡಿದೆ. ಖರ್ಚು ಮಾಡಲು 818.44 ಕೋಟಿ ರು. ಬಾಕಿ ಇರಿಸಿಕೊಂಡಿದೆ.

SUPPORT THE FILE

Latest News

Related Posts