ನಿಯಮಬಾಹಿರ ಪದೋನ್ನತಿ, ಹೆಚ್ಚುವರಿ ನೌಕರರ ನಿಯುಕ್ತಿ; ಡಿಸಿ ಸೇರಿ ಹಲವರ ವಿರುದ್ಧ ಚಾರ್ಜ್‌ಶೀಟ್‌ಗೆ ನಿರ್ದೇಶನ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ತನ್ನ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ 18 ಮಂದಿ ‘ಡಿ’ ದರ್ಜೆ ನೌಕರರಿಗೆ ನಿಯಮಬಾಹಿರವಾಗಿ ಪದನ್ನೋತಿ ನೀಡಿತ್ತು. ಸರ್ಕಾರದಿಂದ ಯಾವುದೇ ಅನುಮೋದನೆಯನ್ನೂ ಪಡೆಯದೇ ಒಟ್ಟು 47 ಹುದ್ದೆಗಳನ್ನು ಕಂದಾಯ ಇಲಾಖೆಯಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಕಂದಾಯ ಇಲಾಖೆ ಮತ್ತು ಇತರೆ ಇಲಾಖೆ ಸೇರಿದಂತೆ ಒಟ್ಟು 48 ಹುದ್ದೆಗಳನ್ನು ನಿಯಮಬಾಹಿರವಾಗಿ ಹೆಚ್ಚುವರಿಯಾಗಿ ಬಳಸಿಕೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಕಲ್ಬುರ್ಗಿ ಜಿಲ್ಲೆಯ ಕಂದಾಯ ಘಟಕದಲ್ಲಿ ಈ ಪ್ರಕರಣ ನಡೆದಿರುವುದನ್ನು ಕಂದಾಯ ಲೆಕ್ಕ ಪರಿಶೋಧಕರು ತಪಾಸಣೆ ಮೂಲಕ ಬಹಿರಂಗಗೊಳಿಸಿದ್ದಾರೆ. ನಿಯಮಬಾಹಿರವಾಗಿ ಪದನ್ನೋತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಬುರ್ಗಿ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಂದಾಯ ಇಲಾಖೆಯ ಸಚಿವಾಲಯವು ಶಿಫಾರಸ್ಸು ಮಾಡಿದೆ.

 

ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ದೋಷಾರೋಪಣ ಪಟ್ಟಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ನಿರ್ದೇಶಿಸಿದ್ದಾರೆ.

 

ಈ ಸಂಬಂಧ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರವನ್ನು (ಇ-ಕಂಇ 39 ಬಿಎಂಎಂ 2024) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಡಿ’ ದರ್ಜೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿದ್ದ ಡಿ ದರ್ಜೆ ನೌಕರರು ಹಿರಿಯರಾಗಿದ್ದರು. ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 42(ಬಿ) ಅಡಿಯಲ್ಲಿ ಸಕ್ರಮಗೊಳಿಸಿ ಪದನ್ನೋತಿ ನೀಡದೇ ಇವರಿಗಿಂತ ಕಿರಿಯರದ 18 ಮಂದಿ ಡಿ ದರ್ಜೆ ನೌಕರರಿಗೆ 2023ರ ಮಾರ್ಚ್‌ 24ರಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 42(ಬಿ) ಅಡಿಯಲ್ಲ ಪದನ್ನೋತಿ ನೀಡಲಾಗಿದೆ. ಇದು ನಿಯಮಬಾಹಿರವಾದ ಕ್ರಮ ಎಂದು ಕಂದಾಯ ಇಲಾಖೆಯ ಲೆಕ್ಕಪರಿಶೋಧಕರು ತಪಾಸಣೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 42(ಬಿ) ಅಡಿಯಲ್ಲಿ ಒಟ್ಟು 68 ಹುದ್ದೆಳಿಗೆ ಸ್ಥಳ ನಿಯುಕ್ತಿಗೊಳಿಸಬೇಕಿತ್ತು. ಈ ಸಮಯದಲ್ಲಿ ಕಂದಾಯ ಇಲಾಖೆಯಲ್ಲಿ 39 ಹುದ್ದೆಳು ಹಾಗೂ ಸರ್ಕಾರದಿಂದ ಯಾವುದೇ ಅನುಮೋದನೆಯನ್ನು ಪಡೆಯದೇ ಮಿಕ್ಕಳಿದ ವೃಂದದ 08 ಹುದ್ದೆಗಳನ್ನು ಬಳಸಿಕೊಳ್ಳಲಾಗಿತ್ತು. ಒಟ್ಟಾರೆ 47 ಹುದ್ದೆಗಳು ಕಂದಾಯ ಇಲಾಖೆಯಲ್ಲಿ ನಿಯುಕ್ತಿಗೊಳಿಸಲಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಆದರೆ ಕಂದಾಯ ಇಲಾಖೆಯಲ್ಲಿ ಕೇವಲ 11 ಹುದ್ದೆಗಳು ಮಾತ್ರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 42(ಬಿ) ಅಡಿಯಲ್ಲಿ ಪದನ್ನೋತಿ ನೀಡಲು ಅವಕಾಶವಿತ್ತು. ಆದರೂ ಕಂದಾಯ ಇಲಾಖೆಯಲ್ಲಿ 36 ಹುದ್ದೆಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗಿತ್ತು. ಹಾಗೆಯೇ ಇತರೆ ಇಲಾಖೆಯಲ್ಲಿ ಕಂದಾಯ ಇಲಾಖೆಯ (ಎನ್‌-ಕೇಡರ್‍‌) 09 ಹುದ್ದೆಗಳಿಗಷ್ಟೇ ಸ್ಥಳ ನಿಯುಕ್ತಿಗೊಳಿಸಲು ಅವಕಾಶವಿತ್ತು.

 

ಆದರೆ ಸ್ಥಳ ನಿಯುಕ್ತಿಗೊಳಿಸುವ ಸಮಯದಲ್ಲಿ 21 ಹುದ್ದೆಗಳು ಜಿಲ್ಲೆಯ ವಿವಿಧ ಇತರೆ ಇಲಾಖೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು ಎಂದು ಪ್ರಾದೇಶಿಕ ಆಯುಕ್ತರಿಗೆ ಬರೆದಿದ್ದ ಪತ್ರದಲ್ಲಿ ವಿವರಿಸಲಾಗಿದೆ.

 

‘ಇದರಿಂದಾಗಿ ಹೆಚ್ಚುವರಿಯಾಗಿ 12 ಹುದ್ದೆಗಳನ್ನು ಬಳಸಿಕೊಂಡಿರುತ್ತಾರೆ. ಹೀಗಾಗಿ ಕಂದಾಯ ಇಲಾಖೆ ಮತ್ತು ಇತರೆ ಇಲಾಖೆ ಸೇರಿದಂತೆ ಒಟ್ಟು 48 ಹುದ್ದೆಗಳನ್ನು ಹೆಚ್ಚುವರಿಯಾಗಿ ಬಳಸಿಕೊಂಡಿದ್ದು ನಿಯಮಬಾಹಿರವಾಗಿರುತ್ತದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರು, ಕಂದಾಯ ನಿರೀಕ್ಷಕರ ಹುದ್ದೆಗಳು ಹಾಗೂ ಸ್ಥಳ ನಿಯುಕ್ತಿಗೊಳಿಸಿರುವ ವಿವರಗಳಿಗೆ ಸಂಬಂಧಿಸಿದಂತೆ ಕಲ್ಬುರ್ಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ 7 ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. ಆದರೆ ಕಡತದಲ್ಲಿಯೇ ಈ ಯಾವ ಮಾಹಿತಿಯೂ ಇರಲಿಲ್ಲ.

 

ಅದೇ ರೀತಿ ಕಲ್ಬುರ್ಗಿ ಮತ್ತು ಸೇಡಂನಲ್ಲಿನ ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ 02, ಜಿಲ್ಲೆಯ ವಿವಿಧ ತಹಶೀಲ್ದಾರ್‍‌ ಕಚೇರಿಗಳಲ್ಲಿ 30 ಹುದ್ದೆ ಸೇರಿ ಒಟ್ಟು 47 ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. ಆದರೆ ಈ ಎರಡೂ ಕಚೇರಿಗಳಲ್ಲಿ ಈ ಸಂಬಂಧ ತೆರೆದಿದ್ದ ಕಡತದಲ್ಲಿ ಈ ಮಾಹಿತಿ ಇರಲಿಲ್ಲ ಎಂಬುದನ್ನು ಕಂದಾಯ ಲೆಕ್ಕ ಪರಿಶೋಧಕರ ತಪಾಸಣೆ ವರದಿಯಿಂದ ತಿಳಿದು ಬಂದಿದೆ.

 

2020ರ ಅಗಸ್ಟ್‌ 10ರಂದು ಪದನ್ನೋತಿ ನೀಡುವ ಸಮಯದಲ್ಲಿ ನೇರ ನೇಮಕಾತಿ ಸ್ಥಳೀಯ ವೃಂದದ 07 ಮಿಕ್ಕುಳಿದ ವೃಂದಲ್ಲಿ 05 ಒಟ್ಟು 12 ಹುದ್ದೆಗಳನ್ನು ಖಾಲಿ ಇಡಬೇಕಿತ್ತು. ಆದರೂ ಈ ಹುದ್ದೆಗಳನ್ನು ಬಳಸಿಕೊಂಡಿದೆ. ಹಾಗೆಯೇ ಇದೇ ದಿನಾಂಕದಂದು ಪದನ್ನೋತಿ ನೀಡುವ ಸಮಯದಲ್ಲಿ ದ್ವಿತೀಯ ದರ್ಜೆ ಸಹಾಯಕರ ಮಿಕ್ಕಳಿದ ವೃಂದದ 8 ಹುದ್ದೆಗಳಿಗೆ ಸರ್ಕಾರದಿಂದ ಅನುಮತಿ ಪಡೆಯಬೇಕಿತ್ತು. ಆದರೆ ಈ ಹುದ್ದೆಗಳನ್ನು ಬಳಸಿಕೊಳ್ಳುವುದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುದು ಗೊತ್ತಾಗಿದೆ.

 

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರು, ಕಂದಾಯ ನಿರೀಕ್ಷಕರ ಹುದ್ದೆಯಿಂದ ಶಿರಸ್ತೆದಾರರ, ಉಪ ತಹಶೀಲ್ದಾರ ಹುದ್ದೆಗೆ ನಿಯಮ 32ರ ಅಡಿ 26 ನೌಕರರಿಗೆ ಸ್ವತಂತ್ರ ಪ್ರಭಾರದಲ್ಲಿ ಆದೇಶಿಸಲಾಗಿತ್ತು. ಈ ಹುದ್ದೆಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ವಿವರಿಸಲಾಗಿದೆ.

 

ಕಲ್ಬುರ್ಗಿ ಮಹಾನಗರಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿಯಲ್ಲಿ ಕಂದಾಯ ಇಲಾಖೆಯ ಹುದ್ದೆಗಳು ಅಥವಾ ಇನ್‌ ಕೇಡರ್‍‌ ಹುದ್ದೆಗಳು ಇರಲಿಲ್ಲ. ಹೀಗಾಗಿ ಈ ಇಲಾಖೆಯಲ್ಲಿ ಪದನ್ನೋತಿ ನೀಡುವಂತಿಲ್ಲ. ಆದರೂ ನಿಯಮ 42(ಬಿ) ಅಡಿಯಲ್ಲಿ ಪದನ್ನೋತಿ ನೀಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.

 

ಆಹಾರ ಇಲಾಖೆಯಲ್ಲಿ ಎನ್‌ ಕೇಡರ್‍‌ 1 ಹುದ್ದೆಗೆ ನೇಮಕಾತಿಯಾಗಿತ್ತು. ಆದರೂ ಹೆಚ್ಚುವರಿಯಾಗಿ 4 ಹುದ್ದೆಗಳನ್ನು ಬಳಸಿಕೊಳ್ಳಲಾಗಿತ್ತು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎನ್‌ ಕೇಡರ್‍‌ 1 ಹುದ್ದೆ ಇತ್ತು. ಆದರೂ ಮತ್ತೊಂದು ಹುದ್ದೆಯನ್ನು ಹೆಚ್ಚಿಗೆಯಾಗಿ ಬಳಸಿಕೊಳ್ಳಲಾಗಿದೆ. ಶಾಸಕರ ಆಪ್ತ ಸಹಾಯಕನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹುದ್ದೆಯನ್ನು ಖಾಲಿ ಇಡಬೇಕಿತ್ತು. ಆದರೆ ಈ ಹುದ್ದೆಯನ್ನು ಖಾಲಿ ಇಟ್ಟಿರಲಿಲ್ಲ.

 

ಮಹಾನಗರಪಾಲಿಕೆಯಲ್ಲಿ ಈ ಹಿಂದೆ ಇಬ್ಬರು ನೌಕರರಿಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. ಹೀಗಾಗಿ ಈ ಹುದ್ದೆ ಖಾಲಿ ಇಡಬೇಕಿತ್ತು. ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿಯೂ ನೇರ ನೇಮಕಾತಿಯಡಿ 3 ಹುದ್ದೆಗಳನ್ನು ಖಾಲಿ ಇಡಬೇಕಿತ್ತು. ಆದರೆ ಈ ಹುದ್ದೆಗಳನ್ನು ಬಳಸಿಕೊಳ್ಳಲಾಗಿದೆ.

 

ಎನ್‌ ಕೇಡರ್‍‌ ಹುದ್ದೆಗಳಲ್ಲಿ ಪ್ರಥಮದರ್ಜೆ ಸಹಾಯಕರ ಹುದ್ದೆಯು ನೇರ ನೇಮಕಾತಿಯಡಿ ಭರ್ತಿ ಮಾಡಬೇಕು. ದ್ವಿತೀಯ ದರ್ಜೆ ಸಹಾಯಕ, ಗ್ರಾಮ ಆಡಳಿತ ಅಧಿಕಾರಿ ಹುದ್ದೆಯಿಂದ ಪದನ್ನೋತಿ ನೀಡುವುದಕ್ಕೆ ಸ್ಥಳೀಯ ವೃಂದ ಮಿಕ್ಕುಳಿದ ವೃಂದವನ್ನು ವರ್ಗೀಕರಿಸದೆಯೇ ಸ್ಥಳ ನಿಯುಕ್ತಿಗೊಳಿಸಲಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧಕರು ತಪಾಸಣೆ ವೇಳೆಯಲ್ಲಿ ಬಹಿರಂಗಗೊಳಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts