ಬೆಂಗಳೂರು; ಹಿಂದಿನ ವರ್ಷದಲ್ಲಿ ಪೂರ್ಣಗೊಂಡಿರುವ ಕಾಮಗಾರಿ, ಚಾಲ್ತಿಯಲ್ಲಿರುವ ಕಾಮಗಾರಿ ಮತ್ತು ಸಚಿವರೂ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳ ಕೋರಿಕೆಗೆ ಅನುದಾನ ಲಭ್ಯವಿಲ್ಲ ಎಂದು ಕೈಚೆಲ್ಲಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯು 2024-25ನೇ ಸಾಲಿಗೆ 1,914.02 ಕೋಟಿ ರು. ಮೊತ್ತದ ಹೊಸ ಯೋಜನೆಗಳನ್ನು ಪ್ರಸ್ತಾವಿಸಿದೆ.
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸೋಲಾರ್ ದೀಪ ಅಳವಡಿಸುವ ಹೊಂಬೆಳಕು, ಪ್ರಗತಿ ಪಥ, ಕಲ್ಯಾಣ ಪಥ, ಇ -ಆಡಳಿತ, ಸ್ಥಳೀಯ ಆಡಳಿತ ಕೋಶ, ಅರಿವು ಕೇಂದ್ರಗಳಿಗೆ ಕಟ್ಟಡ ನಿರ್ಮಾಣ, ವಿದ್ಯುತ್ ಬಿಲ್ಲಿಂಗ್ ಪ್ರಮಾಣೀಕರಣ ಕುರಿತಾದ ಹೊಸ ಯೋಜನೆಗಳನ್ನು ಸರ್ಕಾರದ ಮುಂದಿರಿಸಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲು ಸರ್ಕಾರದ ಮುಂದಿರಿಸಿರುವ ಹೊಸ ಯೋಜನೆಗಳ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ 25,000 ರು. ವೆಚ್ಚದಲ್ಲಿ 500 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 200 ಸೋಲಾರ್ ಪೋಲ್‌ಗಳನ್ನು ಅಳವಡಿಸಲು 250 ಕೋಟಿ ರು. ಬೇಕಿದೆ. ಪ್ರತಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ 60 ಕಿ ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ, ಹಾಲಿ ಡಾಂಬರು ಮೇಲ್ಮೈ, ಜಲ್ಲಿ ಮೇಲ್ಮೈ ಹೊಂದಿರುವ ರಸ್ತೆಗಳು, ಡಿಆರ್‌ಆರ್‌ಪಿ ಪ್ರಮುಖ ಅರ್ಹ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಪ್ರಗತಿ ಪಥ ಯೋಜನೆ ಹಂತ-1ರಲ್ಲಿ 500 ಕೋಟಿ ರು ಬೇಕಿದೆ ಎಂದು ಪ್ರಸ್ತಾವಿಸಿದೆ.
‘ಪ್ರತಿ ವರ್ಷ 3,800 ಕಿ ಮೀಗಳಂತೆ ಆರ್ಥಿಕವಾಗಿ ಪ್ರಾಮುಖ್ಯತೆಯುಳ್ಳ ರಸ್ತೆಗಳನ್ನು ಆಯ್ಕೆ ಮಾಡಲಾಗುವುದು. ಮೊದಲ ವರ್ಷ ಪ್ರತಿಕಿ ಮೀ ಗೆ 82.6 ಲಕ್ಷ ರು. ಮೊತ್ತದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾನದಂಡದಂತೆ ಅಭಿವೃದ್ಧಿಪಡಿಸಲಾಗುವುದು,’ ಎಂದು ಹೊಸ ಯೋಜನೆ ಕುರಿತು ವಿವರಿಸಿದೆ.
ಪ್ರತಿ ವರ್ಷ 3,800 ಕಿ ಮೀ ಗಳಂತೆ 3 ವರ್ಷದ ಕಾಲಾವಧಿಯಲ್ಲಿ ಒಟ್ಟಾರೆ 11,400 ಕಿ ಮೀ ರಸ್ತೆ ಅಭಿವೃದ್ಧಿ, ಈ ರಸ್ತೆಗಳನ್ನು 5 ವರ್ಷಗಳ ಕಾಲ ಮೂಲ ಗುತ್ತಿಗೆದಾರರಿಂದ ನಿರ್ವಹಣೆ ಮಾಡಲಾಗುವುದು. 6ನೇ ವರ್ಷದಲ್ಲಿ ಮರು ಡಾಂಬರೀಕರಣ ಮಾಡುವ ಈ ಯೋಜನೆಗೆ 9 ವರ್ಷಗಳಲ್ಲಿ 12,580.87 ಕೋಟಿ ರು. ಅನುದಾನದ ಅವಶ್ಯಕತೆ ಇದೆ. 2024-25ನೇ ಸಾಲಿಗೆ ಇದಕ್ಕಾಗಿ 500 ಕೋಟಿ ರು.ಗಳನ್ನು ನಿಗದಿಪಡಿಸಿರುವುದು ಗೊತ್ತಾಗಿದೆ.
ಕಲ್ಯಾಣ ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮಾದರಿಯಲ್ಲಿ ಪ್ರತಿ ತಾಲೂಕಿಗೆ 23 ಕಿ ಮೀ ನಂತೆ ಒಟ್ಟಾರೆ 1,150 ಕಿ ಮೀ ರಸ್ತೆಗಳನ್ನು ಕಲ್ಯಾಣ ಪಥದ ಹೆಸರಿನಲ್ಲಿ ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ 2024-25ನೇ ಸಾಲಿನಲ್ಲಿ 1,000 ಕೋಟಿ ರು ಅಂದಾಜಿಸಿದೆ.
ಗ್ರಾಮ ಪಂಚಾಯ್ತಿಗಳಲ್ಲಿ ಆಸ್ತಿ ಸಮೀಕ್ಷೆ ಪ್ರಾರಂಭಿಸಲು ಉದ್ದೇಶಿಸಿದೆ. 2023-24ನೇ ಸಾಲಿನಲ್ಲಿ 1,230 ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಸಂಪನ್ಮೂಲಗಳನ್ನು ಮತ್ತಷ್ಟು ಹೆಚ್ಚಿಸಲು ಆಸ್ತಿಯನ್ನು ನಗದೀಕರಿಸಿ ಆದಾಯ ಗಳಿಸುವ ನೀತಿಯನ್ನು ಜಾರಿಗೆ ತರಲು 1.00 ಕೋಟಿ ರು. ಒದಗಿಸಲಾಗುವುದು ಎಂದು ಪ್ರಸ್ತಾವಿಸಿದೆ.
ಪ್ರತಿ ಗ್ರಾಮ ಪಂಚಾಯ್ತಿ ಆಡಳಿತದಲ್ಲಿ ಇ-ಕಚೇರಿ ಆರಂಭಕ್ಕೆ 5,951 ಗ್ರಾಮ ಪಂಚಾಯ್ತಿಗಳಿಗೆ ಒಟ್ಟು 2.15 ಕೋಟಿ, ಪಿಡಿಒ, ಕಾರ್ಯದರ್ಶಿ ಮತ್ತು ಎರಡನೇ ವಿಭಾಗದ ಲೆಕ್ಕ ಸಹಾಯಕರನ್ನು ಕೌನ್ಸಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಗೆ 1. 00 ಕೋಟಿ ರು. ಸೇರಿ ಒಟ್ಟಾರೆ 4.15 ಕೋಟಿ ರು. ಬೇಕಿದೆ ಎಂದು ಅಂದಾಜಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸಾಮಾಜಿಕವಾಗಿ ಸ್ಪಂದಿಸುವ ಆಡಳಿತ ಕೋಶವನ್ನು ತೆರೆಯಲು ಉದ್ದೇಶಿಸಿದೆ. ಆಯ್ದ 100 ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣ ನಾಗರಿಕರಿಗೆ ಜೀವನ ಅಂತ್ಯದ ಆರೈಕೆ, ಉಪ ಶಮನ ಆರೈಕೆಗಾಗಿ 1.00 ಕೋಟಿ ರು. ವೆಚ್ಚವಾಗಲಿದೆ.
ಸ್ವಸಹಾಯ ಸಂಘಗಳ ಸಬಲೀಕರಣಕ್ಕಾಗಿ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ 100 ಪಂಚಾಯ್ತಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ 1 ಕೋಟಿ, ಜೀತ ಕಾರ್ಮಿಕ ಪದ್ದತಿಯಿಂದ ಬಿಡುಗಡೆಗೊಂಡ ಕಾರ್ಮಿಕರ ಪುನರ್ವಸತಿಗಾಗಿ ನೀಡುವ ಮಾಸಿಕ ಭತ್ಯೆಯನ್ನು 1,000 ರು.ನಿಂದ 2000 ರು.ಹೆಚ್ಚಳ, ಈ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 14.87 ಕೋಟಿ ರು. ಅನುದಾನ ಅಗತ್ಯವಿದೆ ಎಂದು ವಿವರಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ವರ್ತುಲ ಆರ್ಥಿಕತೆ ವ್ಯವಸ್ಥೆ ನಿರ್ಮಾಣಕ್ಕಾಗಿ 239 ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಿದೆ. ಪ್ರತಿ ಗ್ರಾಮ ಪಂಚಾಯ್ತಿಗೆ 10 ಲಕ್ಷ ರು.ನಂತೆ 23.90 ಕೋಟಿ ರು., ಯೋಜನಾ ಅನುದಾನ ಒದಗಿಸಲಿದೆ. ಅರಿವು ಕೇಂದ್ರಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಮಹತ್ವಾಕಾಂಕ್ಷೆ ತಾಲೂಕುಗಳ 100 ಗ್ರಾಮ ಪಂಚಾಯ್ತಿಗಳಲ್ಲಿ ರಾಜ್ಯವಲಯದ ಮೂಲಕ ಒಟ್ಟು 68 ಕೋಟಿ ರು. ಒದಗಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಅತೀ ಹೆಚ್ಚು ವಿದ್ಯುತ್ ಬಿಲ್ ಬಾಕಿ ಇರುವ 200 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಮೂರನೇ ವಿದ್ಯುತ್ ಲೈನ್ ಒದಗಿಸಲಿದೆ. ಇದಕ್ಕಾಗಿ ಪ್ರತಿ ಗ್ರಾಮಕ್ಕೆ 5 ಲಕ್ಷ ರು. ನಂತೆ ಒಟ್ಟು 1,000 ಗ್ರಾಮಗಳಿಗೆ ವಿದ್ಯುತ್ ಬಿಲ್ಲಿಂಗ್ ಪ್ರಮಾಣೀಕರಣ ಯೋಜನೆಯಡಿ 50 ಕೋಟಿ ರು. ಒದಗಿಸಲು ಪ್ರಸ್ತಾವಿಸಿದೆ.