ವೆಚ್ಚವಾಗದ 20,000 ಕೋಟಿ; ಹಿಂದುಳಿದ ವರ್ಗಗಳ ಕಲ್ಯಾಣ ಸೇರಿ 5 ಇಲಾಖೆಗಳ ಕಳಪೆ ಸಾಧನೆ ಬಹಿರಂಗ

ಬೆಂಗಳೂರು; 2021-22ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಕೇವಲ 21 ದಿನಗಳಿದ್ದರೂ 2022ರ ಫೆಬ್ರುವರಿವರೆಗೆ 20,000 ಕೋಟಿಯಷ್ಟು ಅನುದಾನ ವೆಚ್ಚವಾಗದೇ ಬಾಕಿ ಉಳಿದಿರುವುದು ಇದೀಗ ಬಹಿರಂಗವಾಗಿದೆ.

 

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಕುರಿತು 2022ರ ಫೆ.25ರಂದು ನಡೆದಿದ್ದ ಸಭೆಯಲ್ಲಿ ಯೋಜನಾ ಇಲಾಖೆಯ ಅಧಿಕಾರಿಗಳು ವಿವಿಧ ಯೋಜನೆಗಳಿಗೆ ಒದಗಿಸಿದ್ದ ಒಟ್ಟು ಅನುದಾನದ ಪೈಕಿ 20,000 ಕೋಟಿ ರು. ವೆಚ್ಚವಾಗಿಲ್ಲ ಎಂಬ ಮಾಹಿತಿಯನ್ನು ಒದಗಿಸಿದ್ದಾರೆ. ಸಭೆ ನಡವಳಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಗತಿ ಪರಿಶೀಲನೆ ಸಭೆಯ ನಡವಳಿ ಪ್ರತಿ

 

ಜನವರಿ 2022ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ಥಕ 6 ತಿಂಗಳು ಎಂಬ ಕಾರ್ಯಕ್ರಮ ನಡೆಸಿದ್ದರು. ಎಲ್ಲಾ ಇಲಾಖೆಗಳು ಸಾಧನೆ ತೋರಿವೆ ಎಂಬ ಪಟ್ಟಿಯನ್ನೂ ಒದಗಿಸಿದ್ದರು. ಆದರೀಗ ಪ್ರಸ್ತುತ ಸಾಲಿನಲ್ಲಿ ಫೆಬ್ರುವರಿವರೆಗೆ 20,000 ಕೋಟಿಯಷ್ಟು ಅನುದಾನವು ವೆಚ್ಚವಾಗದಿರುವ ಸಂಗತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೂ ಸೇರಿದಂತೆ ಒಟ್ಟು 5 ಇಲಾಖೆಗಳು ಪ್ರಗತಿಯಲ್ಲಿ ಶೇ.40ರ ಗಡಿಯನ್ನು ದಾಟದಿರುವುದು, ಬಹುತೇಕ ಇಲಾಖೆಗಳು ಆರ್ಥಿಕ ವರ್ಷ ಕೊನೆಗೊಳ್ಳುತ್ತಿದ್ದರೂ ಇನ್ನೂ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ.

 

2021-22ನೇ ಸಾಲಿನ ಜನವರಿ ಅಂತ್ಯದವರೆಗೆ ತೋಟಗಾರಿಕೆ, ವಾಣಿಜ್ಯ ಕೈಗಾರಿಕೆ, ಹಿಂದುಳಿದ ವರ್ಗಗಳು, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳು ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಜಲಜೀವನ್‌ ಮಿಷನ್‌ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಕಾರ್ಯಕ್ರಮಗಳಲ್ಲಿ ಕಡಿಮೆ ಪ್ರಗತಿಯಾಗಿರುವುದು ನಡವಳಿಯಿಂದ ಗೊತ್ತಾಗಿದೆ.

 

ವಸತಿ ಇಲಾಖೆಯಲ್ಲಿಯೂ ಶೇ.50ಕ್ಕಿಂತ ಕಡಿಮೆ ಪ್ರಗತಿಯಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ, ಗ್ರಾಮೀಣ ಅಡಿ ಹೆಚ್ಚಿನ ಪ್ರಗತಿ ಕಂಡಿಲ್ಲ. ಮಾರ್ಚ್‌ ತಿಂಗಳ ಅಂತ್ಯಕ್ಕೆ ಭೌತಿಕ ಪ್ರಗತಿ ಸಾಧಿಸಲು ಮುಖ್ಯ ಕಾರ್ಯದರ್ಶಿ ಸೂಚಿಸಿರುವುದು ತಿಳಿದು ಬಂದಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೇವಲ ಶೇ. 39.82ರಷ್ಟು ಕಡಿಮೆ ಪ್ರಗತಿಯಾಗಿದೆ. ಇದಕ್ಕೆ ಸಭೆಯಲ್ಲಿ ಉತ್ತರಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ‘ಇಲಾಖೆಯ ಅತ್ಯಂತ ದೊಡ್ಡ ಯೋಜನೆಯು ಹಾಸ್ಟೆಲ್‌ಗಳ ನಿರ್ವಹಣೆಯಾಗಿದೆ. ಈ ವರ್ಷ ಜಿಲ್ಲಾ ವಲಯದಿಂದ 700.00 ಕೋಟಿ ಮತ್ತು ರಾಜ್ಯ ವಲಯದಿಂದ 50.00 ಕೋಟಿ ರು. ಬಂದಿದೆ. ಕಳೆದ 5 ತಿಂಗಳುಗಳಿಂದ ಹಾಸ್ಟೆಲ್‌ಗಳು ನಡೆಯದ ಕಾರಣ ಶೇ. 39.82ರಷ್ಟು ಪ್ರಗತಿಯಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

 

ಈ ಇಲಾಖೆಗೆ ರಾಜ್ಯವಲಯದಿಂದ ನೀಡಲಾಗಿದ್ದ ಅನುದಾನವನ್ನು ಪದವಿ ಪೂರ್ವ ವಿದ್ಯಾರ್ಥಿ ವೇತನಕ್ಕೆ ಮರು ಹಂಚಿಕೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ಶುಲ್ಕ ವಿನಾಯಿತಿಯಡಿ 400.00 ಕೋಟಿ ರು. ಅನುದಾನ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿ 50.00 ಕೋಟಿ ರು.ಗಳನ್ನು ಬ್ಯಾಂಕ್‌ನಲ್ಲಿ ಇರಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿಯೂ ಶೇ. 39.32ರಷ್ಟು ಕಡಿಮೆ ಪ್ರಗತಿಯಾಗಿದೆ. ಎಂಎಸ್‌ಎಂಇ ಅಡಿ ಇನ್ನು 170.00 ಕೋಟಿ ರು. ಆರ್ಥಿಕ ಇಲಾಖೆಯಿಂದ ಬಿಡುಗಡೆಗೆ ಬಾಕಿ ಇದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಘಟಕಗಳ ಸ್ಥಾಪನೆಗೆ ಸಹಾಯಾನುದಾನ ಯೋಜನೆಗೆ ಕಳೆದ ವರ್ಷ ಒದಗಿಸಿದ್ದ ಹಣವನ್ನು ಖರ್ಚು ಮಾಡದ ಅಧಿಕಾರಿಗಳು ಈ ವರ್ಷ ವೆಚ್ಚ ಮಾಡಲಿದ್ದಾರೆ.

 

ತೋಟಗಾರಿಕೆ ಇಲಾಖೆಯಲ್ಲಿಯೂ ಶೇ. 35.89ರಷ್ಟು ಕಡಿಮೆ ಪ್ರಗತಿಯಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಕಾರ್ಯಕ್ರಮದಡಿ ಶೂನ್ಯ ಬಿಡುಗಡೆ ಮತ್ತು ಶೂನ್ಯ ವೆಚ್ಚವಾಗಿದೆ. ರೈತರು ಸಣ್ಣ ಅಥವಾ ಅತೀ ಸಣ್ಣ ರೈತರು ಎಂದು ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಆದರೆ ನಾಡಕಚೇರಿ ಸಾಫ್ಟ್‌ವೇರ್‌ನಿಂದ ಇದು ಕಷ್ಟ ಸಾಧ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ.

 

ಇನ್ನು, ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ 2020-21ನೇ ಸಾಲಿನಲ್ಲಿ ಕೇಂದ್ರದ ಅನುದಾನ 18,091.44 ಕೋಟಿಗಳ ಪೈಕಿ 13,010.11 ಕೋಟಿ ರು. ಬಿಡುಗಡೆಯಾಗಿತ್ತು. 2021-22ನೇ ಸಾಲಿನಲ್ಲಿ ಕೇಂದ್ರದ ಅನುದಾನ 19,461.94 ಕೋಟಿ ರು.ಪೈಕಿ 16, 529.71 ಕೋಟಿ ರು.ಬಿಡುಗಡೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚಿಗೆ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದ್ದಾರೆ.

 

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಕೇಂದ್ರದಿಂದ ಕಡಿಮೆ ಬಿಡುಗಡೆಯಾಗಿರುವ ಕಾರ್ಯಕ್ರಮಗಳ ಪೈಕಿ ಸ್ವಚ್ಛ ಭಾರತ್‌, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಮಹಿಳ ಆಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣ್‌ ಅಭಿಯಾನ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಲ್ಲಿ ಶೂನ್ಯ ಬಿಡುಗಡೆಯಾಗಿದೆ. ಹಾಗೆಯೇ ಕೇಂದ್ರ ಪುರಸ್ಕೃತ ಯೋಜನೆಯಾದ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ ಕೇಂದ್ರದಿಂದ ಬಿಡಿಗಾಸೂ ಬಿಡುಗಡೆಯಾಗಿಲ್ಲ ಎಂಬ ಸಂಗತಿ ನಡವಳಿಯಿಂದ ಗೊತ್ತಾಗಿದೆ.

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಡಿ ಕೇಂದ್ರದಿಂದ 86.27 ಕೋಟಿ ರು. ಮತ್ತು 49.26ಕೋಟಿ ರು ಬಿಡುಗಡೆಗೆ ಬಾಕಿ ಇದೆ. 2021-22ನೇ ಸಾಲಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ (ಎಸ್‌ಡಿಪಿ) ಒಟ್ಟು ಅನುದಾನಕ್ಕೆ ಶೇ. 39 ರಷ್ಟು ಪ್ರಗತಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕ್ರಿಯಾ ಯೋಜನೆಗಳು ವಿಳಂಬವಾಗಿ ಅನುಮೋದನೆಯಾಗಿರುವುದರಿಂದ ಕಡಿಮೆ ಪ್ರಗತಿ ಸಾಧಿಸಿದೆ ಎಂದು ಸಭೆಗೆ ವಿವರ ಒದಗಿಸಲಾಗಿದೆ. ಈ ಪಟ್ಟಿಯಲ್ಲಿ ಜಲ ಸಂಪನ್ಮೂಲ, ಪ್ರಾಥಮಿಕ, ಪ್ರೌಢಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಸಣ್ಣ ನೀರಾವರಿ, ಆರೋಗ್ಯ, ಉನ್ನತ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸೇರಿವೆ.

 

ಬಾಹ್ಯಾನುದಾನಿತ (ಇಎಪಿ) ಕಾರ್ಯಕ್ರಮಗಳಡಿಯಲ್ಲಿ ಒಟ್ಟು 2,545.41 ಕೋಟಿ ರು.ಗಳಡಿಯಲ್ಲಿ 1,445.25 ಕೋಟಿ ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ. 56,.78ರಷ್ಟು ಮತ್ತು ಲಭ್ಯವಿರುವ ಅನುದಾನಕ್ಕೆ ಶೇ. 80.08ರಷ್ಟಾಗಿದೆ. ಇಂಧನ ಇಲಾಖೆಯಲ್ಲಿ ಶೂನ್ಯ ವೆಚ್ಚವಾಗಿದೆ. ಉಳಿದಂತೆ ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳಲ್ಲಿ ಕಡಿಮೆ ಪ್ರಗತಿಯಾಗಿದೆ.

 

2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 46 ಆಡಳಿತ ಇಲಾಖೆಗಳಿಗೆ ಒದಗಿಸಿದ್ದ 2,46,206.92 ಕೋಟಿ ರು.ನಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 1,11,456.19 ಕೋಟಿ ರು. ವೆಚ್ಚವಾಗಿತ್ತು. ಖರ್ಚು ಮಾಡಲು ಇನ್ನೂ 1,34,750.73 ಕೋಟಿ ರು. ಉಳಿಸಿಕೊಂಡಿತ್ತು. ಇದು ಆಯವಯ್ಯದಲ್ಲಿ ಒದಗಿಸಿದ್ದ ಒಟ್ಟು ಅನುದಾನದ ಪೈಕಿ ಶೇ.45ರಷ್ಟು ಮಾತ್ರ ವೆಚ್ಚ ಮಾಡಲಾಗಿತ್ತು. ಅಕ್ಟೋಬರ್‌ ನಂತರದ 4 ತಿಂಗಳಲ್ಲಿ ಅಂದರೆ ಫೆಬ್ರುವರಿ 2022ರ ಅಂತ್ಯಕ್ಕೆ 30,595.81 ಕೋಟಿ ರು. ಸೇರಿದಂತೆ ಒಟ್ಟಾರೆ 1,42,052 ಕೋಟಿ ರು. ವೆಚ್ಚವಾಗಿದೆ.

the fil favicon

SUPPORT THE FILE

Latest News

Related Posts