ಗೃಹಲಕ್ಷ್ಮಿ ಯೋಜನೆಗೆ 31,920 ಕೋಟಿ ರು ಬೇಡಿಕೆ, 18 ಯೋಜನೆಗಳಿಗೆ ಕೇವಲ 332.72 ಕೋಟಿ ಉಳಿಕೆ

ಬೆಂಗಳೂರು; ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ಇಲಾಖೆ ಎಚ್ಚರಿಸಿದ್ದರೂ ಈ ವರ್ಷವೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು  ಗೃಹ ಲಕ್ಷ್ಮಿ ಯೋಜನೆಗೆ 31,920 ಕೋಟಿ ರು. ಕೋರಿರುವುದು ಇದೀಗ ಬಹಿರಂಗವಾಗಿದೆ.

 

2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿರುವ ಬೇಡಿಕೆ ಪಟ್ಟಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಹೆಚ್ಚುವರಿಯಾಗಿ 31,920 ಕೋಟಿ ರು ಒದಗಿಸಲು ಬೇಡಿಕೆ ಸಲ್ಲಿಸಿದೆ. ಈ ಬೇಡಿಕೆ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗೃಹ ಲಕ್ಷ್ಮಿ ಯೋಜನೆಗೆ 2023-24ನೇ ಸಾಲಿಗೆ 17,500 ಕೋಟಿ ರು.ಮೀಸಲಿಟ್ಟಿತ್ತು. ಇದರಲ್ಲಿ 11,200 ಕೋಟಿ ರು. ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಿತ್ತು. ಈ ಪೈಕಿ ಡಿಸೆಂಬರ್‍‌ ಅಂತ್ಯಕ್ಕೆ 8,609.20 ಕೋಟಿ ರು. ಖರ್ಚಾಗಿತ್ತು. 2024-25ನೇ ಸಾಲಿಗೆ ಇಲಾಖೆಯು 31,920 ಕೋಟಿ ರು. ಬೇಡಿಕೆ ಇಟ್ಟಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇಲಾಖೆಯ ವಿವಿಧ ಯೋಜನೆಗಳು ಮತ್ತು ಇಲಾಖೆ ಅಧೀನದಲ್ಲಿರುವ ನಿಗಮ, ಅಕಾಡೆಮಿಗಳಿಗೆ 2023-24ನೇ ಸಾಲಿನಲ್ಲಿ 25,578.17 ಕೋಟಿ ರು. ಅನುದಾನ ಅಂದಾಜಿಸಿತ್ತು. ಡಿಸೆಂಬರ್‍‌ ಅಂತ್ಯಕ್ಕೆ 14,187.38 ಕೋಟಿ ರು. ಖರ್ಚು ಮಾಡಿದೆ. 2024-25ನೇ ಸಾಲಿಗೆ ಇಲಾಖೆಯ ವಿವಿಧ ಯೋಜನೆಗಳಿಗೆ 39,369.82 ಕೋಟಿ ರು. ಸೇರಿದಂತೆ ನಿಗಮ, ಮಂಡಳಿ, ಆಯೋಗಗಳಿಗೆ ಸೇರಿ ಒಟ್ಟಾರೆ 40,197.90 ಕೋಟಿ ರು. ಅಂದಾಜಿಸಿರುವುದು ಗೊತ್ತಾಗಿದೆ.

 

ರಾಜ್ಯ ವಲಯದ ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಈ ಎಲ್ಲಾ 19 ಯೋಜನೆಗಳಿಗೆ ಒಟ್ಟಾರೆ 32,257.72 ಕೋಟಿ ರು ಅಂದಾಜಿಸಿದೆ. ಈ ಪೈಕಿ ಗೃಹ ಲಕ್ಷ್ಮಿ ಯೋಜನೆಗೇ 31,920.00 ಕೋಟಿ ರು. ಅನುದಾನ ಹಂಚಿಕೆ ಆದರೆ ಉಳಿದ 18 ಯೋಜನೆಗಳಿಗೆ ಕೇವಲ 332.72 ಕೋಟಿ ರು. ಉಳಿಯಲಿದೆ.

 

ಇಲಾಖೆಯು ಸಲ್ಲಿಸಿರುವ ಬೇಡಿಕೆ ಪಟ್ಟಿ ಪ್ರಕಾರ ಗೃಹ ಲಕ್ಷ್ಮಿ ಯೋಜನೆ ಹೊರತುಪಡಿಸಿ 471.19 ಕೋಟಿ ರು. ಅನುದಾನ ಅಂದಾಜಿಸಿದೆ. ಇದರ ಪ್ರಕಾರ 138.47 ಕೋಟಿ ರು. ಅನುದಾನ ಕೊರತೆ ಬೀಳಲಿದೆ.

 

ಇಲಾಖೆ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮಿ ಹೊರತುಪಡಿಸಿ ಭಾಗ್ಯಲಕ್ಷ್ಮಿ, ಅಂಗನವಾಡಿಗಳ ನಿರ್ವಹಣೆ, ನಗರ ಅಂಗನವಾಡಿಗಳ ಮೇಲ್ದರ್ಜೆಕರಣ, ಶಿಶುವಿಹಾರ, ಸ್ತ್ರೀ ಶಕ್ತಿ ಯೋಜನೆ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯರಿಗೆ ರಕ್ಷಣೆ ನೀಡುವ ಯೋಜನೆ, ಸ್ಫೂರ್ತಿ, ಸಾಂತ್ವನ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ, ಬಾಲಕಿಯರ ವಸತಿ ನಿಲಯ, ಸುಧಾರಣೆ ಸಂಸ್ಥೆಗಳ ಕಟ್ಟಡ ದುರಸ್ತಿ, ನಿರ್ವಹಣೆ, ರಾಜ್ಯ ಮಹಿಳಾ ನಿಲಯ, ಸ್ವೀಕಾರ ಕೇಂದ್ರ, ಉತ್ಕೃಷ್ಟತಾ ಕೇಂದ್ರ, ಅಂಗನವಾಡಿ ಕಾರ್ಯಕರ್ತೆಯರಿಗೆ ನೂತನ ಪಿಂಚಣಿ ವ್ಯವಸ್ಥೆ, ಆರ್‍‌ಐಡಿಎಫ್‌ ಅಡಿಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಸೇರಿ ಒಟ್ಟಾರೆ 19ಕ್ಕೂ ಯೋಜನೆಗಳು ರಾಜ್ಯವಲಯದಲ್ಲಿ ಇವೆ.

 

ವಿಶೇಷವೆಂದರೇ ಇದೇ ಇಲಾಖೆಯ ಇನ್ನಿತರೆ ಯೋಜನೆಗಳ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಮೊತ್ತವನ್ನೂ ನಿಗದಿಪಡಿಸಿ ಸೂಚಿಸಿದೆ. ಆದರೆ ಗೃಹ ಲಕ್ಷ್ಮಿ ಯೋಜನೆಗೆ ಇಂತಿಷ್ಟೇ ಮೊತ್ತ ಎಂದು ಸೂಚಿಸಿಲ್ಲ.

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಇನ್ನು, ಈ ಯೋಜನೆಯ ಪ್ರಚಾರ, ಜಾಹೀರಾತು, ಅರ್ಜಿ ಶುಲ್ಕ, ಸಮಾಲೋಚಕರ ವೇತನ ಹಾಗೂ ಇತರೆ ವೆಚ್ಚಗಳಿಗೆಂದು 20 ಕೋಟಿ ರು. ಅವಶ್ಯಕತೆ ಇದೆ ಎಂದೂ ಬೇಡಿಕೆ ಪಟ್ಟಿಯಲ್ಲಿ ವಿವರಿಸಿದೆ.

ಗೃಹ ಲಕ್ಷ್ಮಿ; ಸಿಎಂ, ಡಿಸಿಎಂ, ಸಚಿವರ ಫೋಟೋ ಶೂಟ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 50 ಲಕ್ಷ ರು ವೆಚ್ಚ

ಜಿಲ್ಲಾ ವಲಯದ ಯೋಜನೆ ಮತ್ತು ಇತರೆ ಯೋಜನೆಗಳಿಗೆ 2024-25ನೇ ಸಾಲಿಗೆ 39,369.82 ಕೋಟಿ ರು. ಕೋರಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ 186.43 ಕೋಟಿ ರು., ಮಕ್ಕಳ ಹಕ್ಕುಗಳ ನಿರ್ದೇಶನಾಲಯಕ್ಕೆ 273.69 ಕೋಟಿ ರು., ವಿಕಲ ಚೇತನರ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯಕ್ಕೆ 292.47 ಕೋಟಿ ರು., ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ 11.89 ಕೋಟಿ ರು., ಕರ್ನಾಟಕ ರಾಜ್ಯಮಹಿಳಾ ಆಯೋಗಕ್ಕೆ 6.35 ಕೋಟಿ ರು., ಕರ್ನಾಟಕ ರಾಜ್ಯ ಮಕ್ಕಳ ಆಯೋಗಕ್ಕೆ 3.23 ಕೋಟಿ ರು., ಬಾಲಭವನಗಳಿಗೆ 54.02 ಕೋಟಿ ರು., ಕೋರಿದೆ.

‘ಗೃಹ ಲಕ್ಷ್ಮಿ’ಯೋಜನೆಗೆ ಚಾಲನೆ; ಪ್ರಚಾರ ಫಲಕಗಳಲ್ಲಿನ ಜಾಹೀರಾತೂ ಸೇರಿ 19.4 ಕೋಟಿ ರು. ವೆಚ್ಚ

2024-25ನೇ ಸಾಲಿನಲ್ಲಿ ಘೋಷಿಸಲಿರುವ ಹೊಸ ಯೋಜನೆಗಳಾದ ಸ್ಮಾರ್ಟ್‌ ಅಂಗನವಾಡಿ ಯೋಜನೆಗೆ 408 ಕೋಟಿ ರು., ಅಂಗವನಾಡಿ ಮಕ್ಕಳಿಗೆ ಎರಡು ಜೊಗೆ ಸಮವಸ್ತ್ರ, ಶೂ ಸಾಕ್ಸ್‌ಗಳನ್ನು ಒದಗಿಸಲು 212.30 ಕೋಟಿ ರು., ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಎರಡು ಜೊತೆ ಹೆಚ್ಚುವರಿ ಸಮವಸ್ತ್ರಗಳೀಗೆ 13.75 ಕೋಟಿ ರು., ಅಂಗನವಾಡಿ ಕಟ್ಟಡಗಳ ನಿರ್ಮಾಣ ಯೋಜನೆಗಳಿಗೆ 200.00 ಕೋಟಿ ರು., ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಘಟಕಗಳನ್ನು ಆರಂಭಿಸುವ ಸಂಬಂಧ 0.95 ಕೋಟಿ ರು., ಬೇಕಿದೆ.

ಗೃಹಲಕ್ಷ್ಮಿ ಕಾರ್ಯಕ್ರಮ ಚಾಲನೆ, ಹೋರ್ಡಿಂಗ್ಸ್‌ ಸೇರಿ ಪ್ರಚಾರಕ್ಕೆ ಈವರೆಗೆ 36.35  ಕೋಟಿ ರು. ಮಂಜೂರು

ಶ್ರೇಷ್ಠ ಆವಾಸ ಯೋಜನೆಗೆ 83.32 ಕೋಟಿ ರು., ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮಾಸಾಶನಕ್ಕೆ 57.42 ಕೋಟಿ ರು., ಸಮುದಾಯ ಆಧರಿತ ಪುನಶ್ಚೇತನ ಯೋಜನೆಗೆ 1.30 ಕೋಟಿ ರು., ಹಿರಿಯ ದೃಷ್ಟಿ ಯೋಜನೆಗೆ 1.35 ಕೋಟಿ ರು., ರಾಜ್ಯ ವಿಕಲಚೇತನರ ನಿಧಿ ಸ್ಥಾಪನೆಗೆ 10.00 ಕೋಟಿ ರು., ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ 1.52 ಕೋಟಿ ರು., ಸರ್ಕಾರಿ ಅನುಪಾಲನ ಗೃಹಗಳಿಗೆ 4.00 ಕೋಟಿ ರು., ಬ್ಯಾಟರಿ ಚಾಲಿತ ವ್ಹೀಲ್‌ ಚೇರ್‍‌ಗಳಿಗೆ 50 ಕೋಟಿ ರು., ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಗೆ 3.83 ಕೋಟಿ ರು. ಅಂದಾಜಿಸಿದೆ.

 

ಅದೇ ರೀತಿ ವಿಕಲಚೇತರಿಗೆ ಮಾಸಾಶನ ಹೆಚ್ಚಿಸಲು 754.20 ಕೋಟಿ ರು., ಸ್ವಯಂ ಉದ್ಯೋಗಕ್ಕಾಗಿ 6.00 ಕೋಟಿ ರು., ಶಿಶುಪಾಲನಾ ಭತ್ಯೆ ನೀಡಲು 0.70 ಕೋಇಟ ರು., ಸಾಧನೆ ಯೋಜನೆಯಡಿ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ಧನಕ್ಕೆ 5.60 ಕೋಟಿ ರು., ವಿವಾಹ ಪ್ರೋತ್ಸಾಹ ಧನಕ್ಕೆ 5.50 ಕೋಟಿ ರು., ಹಿರಿಯ ನಾಗರೀಕರಿಗೆ ಮಾಸಶಾನ ಹೆಚ್ಚಿಸಲು 2,891.53 ಕೋಟಿ ರು. ಬೇಡಿಕೆ ಇರಿಸಿದೆ.

Your generous support will help us remain independent and work without fear.

Latest News

Related Posts