Monday | June 15, 2026 |

ವಿದ್ಯಾರ್ಥಿ ಶುಲ್ಕವೂ ಸೇರಿ ಲಕ್ಷಾಂತರ ರುಪಾಯಿ ವೈಯಕ್ತಿಕ ಖಾತೆಗೆ ಜಮೆ; ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

ಬೆಂಗಳೂರು; ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹೆಸರಿನಲ್ಲಿರುವ ಒಟ್ಟಾರೆ 16 ಖಾತೆಗಳಲ್ಲಿದ್ದ ಲಕ್ಷಾಂತರ ರುಪಾಯಿ ಹೆಚ್ಚು ಹಣವು ಕಾಲೇಜಿನ ಪ್ರಥಮದರ್ಜೆ ಗುಮಾಸ್ತರ ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿದೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.

 

ಯುವರಾಜ ಕಾಲೇಜಿನ ಪ್ರಥಮದರ್ಜೆ ಗುಮಾಸ್ತ ಜೆ ಶಿವಕುಮಾರ್‍‌ ಅವರು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರ ಬೆನ್ನಲ್ಲೇ ಇದೇ ಶಿವಕುಮಾರ್‍‌ ಅವರ ವಿರುದ್ಧವೂ ಹಣಕಾಸು ದುರುಪಯೋಗದ ಆಪಾದನೆಯೂ ಕೇಳಿ ಬಂದಿದೆ. ಹೀಗಾಗಿ ಆತ್ಮಹತ್ಯೆ ಪ್ರಕರಣವು ಮತ್ತೊಂದು ಮಗ್ಗುಲಿಗೆ ಹೊರಳಿದಂತಾಗಿದೆ.

 

ದೇವರಾಜೇಗೌಡ ಅವರು ಬರೆದಿರುವ ಪತ್ರದ ಪ್ರತಿ, ಬ್ಯಾಂಕ್‌ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. ದಾಖಲೆ ಸಹಿತ ಪತ್ರ ಬರೆದಿರುವುದನ್ನು ಪ್ರಾಂಶುಪಾಲ ದೇವರಾಜೇಗೌಡ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಕಾಲೇಜಿನ ಪ್ರಾಂಶುಪಾಲ ದೇವರಾಜೇಗೌಡ ಅವರು ಈ ಸಂಬಂಧ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಕಾಲೇಜಿನ ಪ್ರಾಂಶುಪಾಲರ ಹೆಸರಿನಲ್ಲಿದ್ದ ಖಾತೆಗಳ ಸಂಖ್ಯೆ, ಈ ಖಾತೆಗಳಲ್ಲಿದ್ದ ವಿದ್ಯಾರ್ಥಿ ಶುಲ್ಕವೂ ಸೇರಿದಂತೆ ಇನ್ನಿತರೆ ಲೆಕ್ಕ ಶೀರ್ಷಿಕೆಯಲ್ಲಿದ್ದ ಹಣ ವರ್ಗಾವಣೆ ಆಗಿರುವ ಕುರಿತಾದ ದಾಖಲೆಗಳ ಸಮೇತ ಹಣಕಾಸು ದುರುಪಯೋಗದ ಕುರಿತು ಪತ್ರದಲ್ಲಿ ವಿವರಿಸಿದ್ದಾರೆ.

 

ಲೆಕ್ಕತಪಾಸಣೆ, ಲೆಕ್ಕ ಪರಿಶೋಧನೆ ನಡೆಯಬಾರದು ಎಂಬ ದುರುದ್ದೇಶದಿಂದ ಜೆ ಶಿವಕುಮಾರ್‍‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೂ ದೇವರಾಜೇಗೌಡ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಯುವರಾಜ ಕಾಲೇಜಿನ ಹೆಸರಿನಲ್ಲಿದ್ದ ಎಫ್‌ ಅಂಡ್‌ ಆರ್‍‌, ವಿದ್ಯಾರ್ಥಿ ವೇತನ, ಜಿ ಆರ್‍‌ ಎ ಸೇರಿದಂತೆ ಮತ್ತಿತರ ಶೀರ್ಷಿಕೆಗಳಲ್ಲಿದ್ದ ಖಾತೆಗಳಿಂದ ಶಿವಕುಮಾರ್‍‌ ಅವರು ತಮ್ಮ ವೈಯಕ್ತಿಕ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಖುದ್ದು ಪ್ರಾಂಶುಪಾಲ ದೇವರಾಜೇಗೌಡ ಅವರು ತಮ್ಮ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಲೆಕ್ಕ ಪರಿಶೋಧನೆಗೆ ಅಸಹಕಾರ

 

ಮೈಸೂರು ಯುವರಾಜ ಕಾಲೇಜಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲಿಸಲು ನೀಡುವಂತೆ ಲೆಕ್ಕಪರಿಶೋಧಕರು ಕೋರಿದ್ದರು. 2023ರ ಡಿಸೆಂಬರ್‍‌ 14ರಂದು ಕಚೇರಿಯ ಎಲ್ಲಾ ಕಾರ್ಯನಿರ್ವಾಹಕರುಗಳೀಗೆ ಒಳಗೊಂಡಂತೆ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಕಡತಗಳನ್ನು ನೀಡಬೇಕು ಎಂದು ಕಚೇರಿ ಸೂಚನಾ ಪತ್ರ ಹೊರಡಿಸಲಾಗಿತ್ತು. ಆದರೆ ಶಿವಕುಮಾರ್‍‌ ಸೇರಿದಂತೆ ಹಲವರು ಲೆಕ್ಕ ಪರಿಶೋಧನೆಗೆ ಯಾವುದೇ ದಾಖಲೆಗಳನ್ನು ನೀಡದೇ ಅಸಹಕಾರ ತೋರಿದ್ದರು ಎಂಬುದು ದೇವರಾಜೇಗೌಡ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

 

‘ಈ ಸಂದರ್ಭದಲ್ಲಿ ಕಾಲೇಜಿನ ಪ್ರಥಮದರ್ಜೆ ಗುಮಾಸ್ತ ಜೆ ಶಿವಕುಮಾರ್‍‌ ಅವರು ರಜೆ ಮೇಲಿದ್ದರು. ಇವರು ರಜೆ ಮುಂದುವರೆಸಿದ್ದರು. ಹೀಗಾಗಿ ಲೆಕ್ಕ ಪರಿಶೋಧನಾ ತಪಾಸಣೆಗೆ ದಾಖಲೆ ನೀಡಬೇಕು ಎಂದು 2023ರ ಡಿಸೆಂಬರ್‍‌ 19ರಂದು ಮೆಮೋ ನೀಡಲಾಗಿತ್ತು. ನಂತರ ಜೆ ಶಶಿಕುಮಾರ್‍‌ ಅವರು ಸೇರಿದಂತೆ ಕಚೇರಿಯ ಯಾವುದೇ ಕಾರ್ಯನಿರ್ವಾಹಕರು ದಾಖಲೆಗಳನ್ನು ಒದಗಿಸುತ್ತಿಲ್ಲ ಎಂದು ಲೆಕ್ಕ ಪರಿಶೋಧಕರು ಮೌಖಿಕವಾಗಿ ತಿಳಿಸಿದ್ದರು. ಹೀಗಾಗಿ ಮತ್ತೊಮ್ಮೆ ಎಲ್ಲಾ ದಾಖಲೆಗಳು ಮತ್ತು ಕಡತಗಳನ್ನು ಲೆಕ್ಕ ಪರಿಶೋಧಕರಿಗೆ ನೀಡಬೇಕು ಎಂದು ಕಚೇರಿಯಿಂದ ಎಲ್ಲಾ ಕಾರ್ಯನಿರ್ವಾಹಕರುಗಳಿಗೆ 2023ರ ಡಿಸೆಂಬರ್‍‌ 30ರಂದು ಎಲ್ಲಾ ಸೂಚನೆ ನೀಡಲಾಗಿತ್ತು,’ ಎಂದು ತಮ್ಮ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ

 

ಕಾಲೇಜಿನ ಜಿ ಆರ್‍‌ ವಿ (ಖಾತೆ ಸಂಖ್ಯೆ; 64078604199), ಪಿಎಸ್‌ಎಫ್‌ಎಸ್‌ (ಖಾತೆ ಸಂಖ್ಯೆ; 64078606129), ಮತ್ತು ಸಿಎಸ್‌ಎಫ್‌ (ಖಾತೆ ಸಂಖ್ಯೆ; 54007592102) ಒಟ್ಟು ಮೂರು ಖಾತೆಗಳಿಗೆ ಸಂಬಂಧಿಸಿದ ಖಾತೆ ವಿವರಗಳ ಪರಿಶೀಲಿಸಿದಾಗ ನೇರವಾಗಿ ಶಶಿಕುಮಾರ್‍‌ ಅವರಿಗೆ ಧನಾದೇಶದ ಮೂಲಕ ಹಣ ಜಮಾ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

‘ಕ್ರಮ ಸಂಖ್ಯೆ 1ರಿಂದ 09ರವರೆಗೆ ಧನಾದೇಶಗಳನ್ನು ಜೆ ಶಶಿಕುಮಾರ್‍‌ ಅವರ ಎಸ್‌ ಬಿ ಖಾತೆ ಸಂಖ್ಯೆ 64006325541 (ಮೈಸೂರು ವಿವಿ ಆವರಣದಲ್ಲಿರುವ ಶಾಖೆ) ಗೆ 4,46,841 ರು. ಕಾಲೇಜಿನ ವಿವಿಧ ಖಾತೆಗಳಿಂದ ಹಣವು ಜಮೆ ಆಗಿದೆ. ಆದರೆ ಈ ಧನಾದೇಶದ ಹಣವು ಇವರ ಖಾತೆಗೆ ಏಕೆ ಜಮಾಗೊಂಡಿದೆ ಎಂಬುದಕ್ಕೆ ಯಾವುದೇ ಮಾಹಿತಿಯೂ ಇರುವುದಿಲ್ಲ. ಇನ್ನೂ ಹೆಚ್ಚಿನ ವಿವರಣೆಗಾಗಿ ಲೆಕ್ಕ ತಪಾಸಣೆ ನಡೆಸಬೇಕು,’ ಎಂದು ದೇವರಾಜೇಗೌಡ ಅವರು ತಮ್ಮ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

 

ಇದಲ್ಲದೇ ವಿದ್ಯಾರ್ಥಿಗಳ ಶುಲ್ಕಗಳನ್ನು ತಮ್ಮ ತಮ್ಮ ಮೊಬೈಲ್‌ಗಳಿಂದ ಜಿ-ಪೇ ಮತ್ತು ಪೇಟಿಎಂ ಮೂಲಕ ಜೆ ಶಶಿಕುಮಾರ್‍‌ ಅವರ ವೈಯಕ್ತಿಕ ಖಾತೆಗೆ 2021ರ ಫೆ.12ರಿಂದ 2023ರ ಸೆ.14ಸರವರೆಗೆ ಒಟ್ಟಾರೆ 7,76,654 ರು. ಜಮಾ ಆಗಿದೆ.

 

ಕಾಲೇಜಿನ ವಿವಿಧ ಖಾತೆಗಳಿಂದ ವೈಯಕ್ತಿಕ ಖಾತೆಗೆ ಒಟ್ಟಾರೆ 45.50 ಲಕ್ಷ ರು. ಜಮಾ ಆಗಿದೆ ಎಂದೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

2022ರ ಜನವರಿ 221ರಂದು 42,200 ಮತ್ತು 2022ರ ಫೆ.22ರಂದು 39,600 ರು. ಜಮಾ ಆಗಿತ್ತು.

 

ಅಲ್ಲದೇ 2021ರ ಡಿಸೆಂಬರ್‍‌ 221ರಂದು ಜೆ ಶಿವಕುಮಾರ್‍‌ ಅವರ ವೈಯಕ್ತಿಕ ಖಾತೆಗೆ 45,437 ರು. ವರ್ಗಾವಣೆ ಆಗಿತ್ತು.

 

2022ರ ಏಪ್ರಿಲ್‌ 18ರಂದು 77,050 ರು. ವೈಯಕ್ತಿಕ ಖಾತೆಗೆ ಜಮಾ ಆಗಿತ್ತು.

 

 

 

2022ರ ಮೇ 13 ಮತ್ತು  ಜುಲೈ 1  ರಂದು ತಲಾ  37,600 ರು. ವರ್ಗಾವಣೆ ಆಗಿತ್ತು ಎಂಬುದು ಬ್ಯಾಂಕ್‌ನ ದಾಖಲೆಗಳಿಂದ ಗೊತ್ತಾಗಿದೆ.

 

 

ಜೆ ಶಿವಕುಮಾರ್‍‌ ಅವರು ನಗದು ಗುಮಾಸ್ತರಾಗಿದ್ದ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆಯಲ್ಲಿ ಮೂಲ ರಸೀತಿ, ಮೂಲ ಹುಂಡಿಗಳು, ಮತ್ತು ಕಡತಗಳನ್ನು ಲೆಕ್ಕ ಪರಿಶೋಧನೆಗೆ ನೀಡಿದರೆ ಸಿಕ್ಕಿ ಬೀಳುವ ಭಯ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿಯೇ ಯಾವುದೇ ಪುರಾವೆಗಳಿಲ್ಲದೇ ಮೂಲ ರಸೀತಿ, ಹುಂಡಿಗಳು ಮತ್ತು ಕಡತಗಳನ್ನು ಪ್ರಾಂಶುಪಾಲರ ಬಳಿ ನೀಡಿರುತ್ತೇನೆ ಎಂದು ಪ್ರಾಂಶುಪಾಲರ ವಿರುದ್ಧವೇ ಇಲ್ಲಸಲ್ಲದ ಆರೋಪಿಸಿದ್ದರು ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

‘ಒಂದು ಪಕ್ಷ ಅಷ್ಟು ಹುಂಡಿಗಳ ಮೂಲ ಹುಂಡಿಗಳನ್ನು ನನಗೆ ನೀಡಿದ್ದರೇ ಪ್ರತ್ಯೇಕ ವಿವರ ಪಟ್ಟಿ ತಯಾರಿಸಿ, ನನ್ನಿಂದ ಸ್ವೀಕೃತಿ ಸಹಿತ ಪಡೆಯಬಹುದಾಗಿತ್ತು. ಈ ಕೆಲಸವನ್ನೂ ಸಹ ಮಾಡಿಲ್ಲ. ಹಿಂದಿನ ಪ್ರಾಂಶುಪಾಲರಿಗೆ ನನಗೂ ವೈಮನಸ್ಸು ಇದೆಯೆಂದು ಡೆತ್‌ ನೋಟ್‌ನಲ್ಲಿ ಆರೋಪ ಮಾಡಿದ್ದಾರೆ. ಇವರಿಗೆ ಈ ವಿಚಾರ ತಿಳಿದಿದ್ದರೂ ಸಹ ನನಗೆ ಕಡತ, ರಸೀದಿ ಪುಸ್ತಕಗಳನ್ನು ನೀಡಿದ್ದಲ್ಲಿ ನನ್ನಿಂದ ಏಕೆ ಸ್ವೀಕೃತಿ ಪಡೆದಿಲ್ಲ. ಇವರು ನನ್ನ ಮೇಲೆ ನಿರಾಧಾರ ಆರೋಪ ಮಾಡಿರುತ್ತಾರೆ,’ ಎಂದು ಪ್ರಾಂಶುಪಾಲ ದೇವರಾಜೇಗೌಡ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಯುವರಾಜ ಕಾಲೇಜಿನ ಪ್ರಾಂಶುಪಾಲರ ದೇವರಾಜೇಗೌಡ ಅವರು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನನೊಂದಿದ್ದೇನೆ. ಈ ಹಿಂದೆ ಇದ್ದ ಪ್ರಾಂಶಪಾಲರೊಂದಿಗೆ ಚೆನ್ನಾಗಿದ್ದೆ ಎಂಬ ಕಾರಣದಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಸಮಯದ ದಾಖಲೆಗಳನ್ನು ನನ್ನಿಂದ ಪಡೆದು ಅವುಗಳನ್ನು ಹಿಂದಿರುಗಿಸದೇ ತೊಂದರೆ ಮಾಡುತ್ತಿದ್ದಾರೆ. ಕಾಲೇಜಿನ ಉಪಹಾರ ಮಂದಿರದ ಟೆಂಡರ್‍‌ ಪ್ರಕ್ರಿಯೆಯಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಶಿವಕುಮಾರ್‍‌ ಅವರು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದರು.

 

ಇದನ್ನಾಧರಿಸಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅಲ್ಲದೇ ದೇವರಾಜೇಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೈಸೂರು ವಿವಿ ಆಡಳಿತ ಸಿಬ್ಬಂದಿ ಸಂಘದ ಸದಸ್ಯರು ಕುಲಪತಿಗೆ ಒತ್ತಾಯಿಸಿ ಪತ್ರವನ್ನೂ ಬರೆದಿರುವುದನ್ನು ಸ್ಮರಿಸಬಹುದು.

Hot this week

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ...

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...
Please Scan to make Your Contribution

Topics

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ...

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

Related Articles

Popular Categories

error: Content is protected !!