ಡಿ ಕೆ ಶಿ ವಿರುದ್ಧ ಸಿಬಿಐ ತನಿಖೆ; ಸಭಾಧ್ಯಕ್ಷರ ಅನುಮತಿ ಪ್ರಶ್ನೆಯೇ ಉದ್ಭವಿಸದು ಎಂದ ಸಚಿವಾಲಯ

ಬೆಂಗಳೂರು: ಸಭಾಧ್ಯಕ್ಷರು ವಿಧಾನಸಭೆ  ಸದಸ್ಯರನ್ನು  ನೇಮಿಸುವ  ಪ್ರಾಧಿಕಾರವಾಗಿಲ್ಲ. ಹೀಗಾಗಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ತನಿಖೆ, ಅಭಿಯೋಜನೆ ಕೈಗೊಳ್ಳಲು ಸಭಾಧ್ಯಕ್ಷರು ಅನುಮತಿ  ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಿಧಾನಸಭೆ ಸಚಿವಾಲಯವು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದೆ.

 

ಆದಾಯಕ್ಕೂ ಮೀರಿದ  ಆಸ್ತಿ ಗಳಿಕೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ   ಆರೋಪದ ಮೇರೆಗೆ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರವು ಆದೇಶ ಹೊರಡಿಸಿತ್ತು. ಸ್ಪೀಕರ್‌ ಅನುಮತಿ ಇಲ್ಲದೆಯೇ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಎಂದು ಕಾರಣವನ್ನು ಮುಂದಿರಿಸಿ  ಈಗಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಆದೇಶವನ್ನು ಹಿಂಪಡೆದಿತ್ತು.

 

ಇದನ್ನು ಪ್ರಶ್ನಿಸಿರುವ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ವಿಸ್ತೃತ ಪೀಠವು ಮುನ್ನೆಡೆಸಲಿದೆ. ಈ ಬೆಳವಣಿಗೆ ನಡುವೆಯೇ ವಿಧಾನಸಭೆ ಸಚಿವಾಲಯವು ಆರ್‌ಟಿಐ ಅಡಿಯಲ್ಲಿ ನೀಡಿರುವ ಉತ್ತರವು ಅರ್ಜಿದಾರರಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಸಿಬಿಐಗೆ ಮತ್ತೊಂದು ಕಾನೂನಾತ್ಮಕವಾಗಿ ಮತ್ತೊಂದು  ಬಲ ಸಿಕ್ಕಂತಾಗಿದೆ.

 

ಸಿಬಿಐ ತನಿಖೆಗೆ ವಹಿಸಲು ವಿಧಾನಸಭೆ ಸಭಾಧ್ಯಕ್ಷರ ಅನುಮತಿ ನೀಡುವ ಅಗತ್ಯವೇ ಇಲ್ಲ ಎಂದು ವಿಧಾನಸಭೆ ಸಚಿವಾಲಯವೇ ಪುನರುಚ್ಛರಿಸಿರುವುದು ಪ್ರತಿಪಕ್ಷಗಳ ಕೈಗೆ ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ. ಹಾಗೆಯೇ ರಾಜಕೀಯ ವಲಯದಲ್ಲಿ ಮತ್ತೊಂದು ಕಿಡಿ ಹೊತ್ತಿಸಿದಂತಾಗಿದೆ.

 

ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಸಭಾಧ್ಯಕ್ಷರು ಅನುಮತಿ ನೀಡಿದ್ದಾರೆಯೇ ಇಲ್ಲವೇ ಎಂಬ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ  2024ರ ಜನವರಿ 7ರಂದು ಸ್ಪೀಕರ್‌ ಅವರ ಕಚೇರಿಗೆ  ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸ್ಪೀಕರ್‌ ಕಚೇರಿಯು ವಿಧಾನಸಭೆ ಸಚಿವಾಲಯಕ್ಕೆ 2024ರ ಜನವರಿ 12ರಂದು ವರ್ಗಾಯಿಸಿತ್ತು.

 

ವಿಧಾನಸಭೆ ಸಚಿವಾಲಯವು 2024ರ ಜನವರಿ 16ರಂದು ಲಿಖಿತ ಉತ್ತರ ಒದಗಿಸಿದೆ.

 

‘ವಿಧಾನಸಭೆಯ ಸದಸ್ಯರನ್ನು ಸಭಾಧ್ಯಕ್ಷರು ನೇಮಿಸುವ ಪ್ರಾಧಿಕಾರವಾಗಿರದೇ ಇರುವುದರಿಂದ ವಿಧಾನಸಭೆ ಸದಸ್ಯರುಗಳ ವಿರುದ್ಧ ದೂರು ದಾಖಲಿಸಲು, ತನಿಖೆ ಕೈಗೊಳ್ಳಲು ಮತ್ತು ಅಭಿಯೋಜನೆಗೆ ಒಳಪಡಿಸುವುದಕ್ಕೆ ಸಭಾಧ್ಯಕ್ಷರು ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ ಕಾರಣ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಯಾವುದೇ ಅಭಿಯೋಜನೆ ಮಂಜೂರಾತಿ ನೀಡಿರುವುದಿಲ್ಲ,’ ಎಂದು ವಿಧಾಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಮಾಹಿತಿ ಒದಗಿಸಿದ್ದಾರೆ. ಈ ಮಾಹಿತಿಯ ಉತ್ತರಕ್ಕೆ ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ ವಿಧಾನಸಭೆಯ ಯಾವುದೇ ಸದಸ್ಯರುಗಳ ವಿರುದ್ಧವೂ ಈವರೆಗೆ ಅಭಿಯೋಜನೆ ಮಂಜೂರಾತಿ ನೀಡಿರುವುದಿಲ್ಲ ಎಂದೂ ಮಾಹಿತಿ ಒದಗಿಸಿದೆ.

 

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕರಣದಲ್ಲಿಯೂ ವಿಧಾನಸಭೆ ಸಚಿವಾಲಯವು ಇದೇ ಉತ್ತರವನ್ನು ಸಿಬಿಐಗೆ ನೀಡಿತ್ತು.

 

ಸಿಬಿಐ ತನಿಖೆಗೆ ಅನುಮತಿ  ನೀಡುವುದಕ್ಕೂ  ಮುನ್ನ ವಿಧಾನಸಭೆಯ ಸ್ಪೀಕರ್‌ ಅವರಿಂದ ಒಪ್ಪಿಗೆ ಪಡೆಯದೇ ಮುಖ್ಯಮಂತ್ರಿಗಳ ಮೌಖಿಕ ಆದೇಶ ಆಧರಿಸಿ ಸಿಬಿಐ ತನಿಖೆಗೆ ಅನುಮತಿ ನೀಡಲಾಗಿತ್ತು. ಕಾನೂನಾತ್ಮಕವಾಗಿ ಸ್ಪೀಕರ್‌ ಅವರಿಂದ ನಿರ್ಣಯ ಪಡೆದಿರಲಿಲ್ಲ.

 

ಹಿಂದಿನ ಅಡ್ವೊಕೇಟ್‌ ಜನರಲ್‌ ಕೆ ಪ್ರಭುಲಿಂಗ ನಾವದಗಿ ಹಾಗೂ ಹಾಲಿ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ  ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು  ಸಮರ್ಥಿಸಿಕೊಂಡಿದ್ದರು. 

 

ವಿಧಾನಸಭೆ ಸದಸ್ಯರುಗಳ ವಿರುದ್ಧ  ಸಿಬಿಐ ಸೇರಿದಂತೆ ಇನ್ನಿತರೆ ತನಿಖಾ ಆಯೋಗಗಳಿಗೆ ತನಿಖೆಗೆ ವಹಿಸುವ ವಿಷಯವೂ ಸಭಾಧ್ಯಕ್ಷರ ವ್ಯಾಪ್ತಿಗೂ ಒಳಪಡುವುದಿಲ್ಲ ಎಂಬ ಅಂಶಕ್ಕೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯು ಆರ್‌ಟಿಐ ಅಡಿಯಲ್ಲಿ ನೀಡಿರುವ ಉತ್ತರವು ಬಲಪಡಿಸಿದಂತಾಗಿದೆ.

 

ಆದರೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ವಿರುದ್ಧ ಸಿಬಿಐ ತನಿಖೆ ನಡೆಸಲು ಹೊರಡಿಸಿದ್ದ ಆದೇಶಕ್ಕೆ ವಿಧಾನಸಭಾಧ್ಯಕ್ಷರ ಅನುಮತಿ ಪಡೆದೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವ ಸಂಪುಟದ ಬಹುತೇಕ ಸಚಿವರು ಮತ್ತು ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬ ಅಭಿಪ್ರಾಯವು ವಿಧಾನಸಭೆ ಸಚಿವಾಲಯದಲ್ಲಿ ವ್ಯಕ್ತವಾಗಿತ್ತು.

 

ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿರುವುದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಾಸ್ತವ ಅಂಶಗಳನ್ನು ಮುಚ್ಚಿಟ್ಟು ದಾರಿ ತಪ್ಪಿಸಿರುವುದು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು.

ಡಿ ಕೆ ಶಿವಕುಮಾರ್‍‌ ವಿರುದ್ಧ ಸಿಬಿಐ ತನಿಖೆ; ಬಿಜೆಪಿ ಸರ್ಕಾರದ ಆದೇಶ ಹಿಂಪಡೆಯಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ

ಸಿಬಿಐಗೆ ವಹಿಸಿದ್ದ ಆದೇಶವನ್ನು ಹಿಂಪಡೆದಿದ್ದನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಸಮರ್ಥಿಸಿಕೊಂಡಿದ್ದರಲ್ಲದೇ ಅದನ್ನು ಟ್ವೀಟ್‌ ಕೂಡ ಮಾಡಿದ್ದರು.

 

 

 

ವಿಶೇಷವೆಂದರೆ ಸಿದ್ದರಾಮಯ್ಯ ಅವರು 2017ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮತ್ತು ವಿಚಾರಣೆಗೆ ಅನುಮತಿ ನೀಡುವ ಸಂಬಂಧ ಡಿಪಿಎಆರ್‍‌ಗೆ  ಪತ್ರ ಬರೆದಿದ್ದರು. ಅದೇ ಪತ್ರಕ್ಕೆ ವಿಧಾನಸಭೆ ಸಚಿವಾಲಯ ಸ್ಪಷ್ಟವಾಗಿ ಉತ್ತರವನ್ನೂ ನೀಡಿತ್ತು.

 

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸಂಸದ ಹಾಗೂ ಹಾಲಿ ಶಾಸಕ ಸಿ.ಎಸ್​.ಪುಟ್ಟರಾಜು, ಶಾಸಕರಾಗಿದ್ದ ಎಂ.ಶ್ರೀನಿವಾಸ್​ ಮತ್ತು ಎ.ಬಿ.ರಮೇಶ್​ ಅವರ ವಿರುದ್ಧ ಸಿಬಿಐ ವಿಚಾರಣೆ ನಡೆಸುವ ಸಂಬಂಧ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯುವ ಅಗತ್ಯವೇ ಇಲ್ಲ ಎಂದು ಅಂದಿನ ಸ್ಪೀಕರ್‍‌ ಮತ್ತು ವಿಧಾನಸಭೆ ಸಚಿವಾಲಯವೇ ನಿರ್ದಿಷ್ಟ ಮತ್ತು ಸ್ಪಷ್ಟವಾಗಿ ಉತ್ತರ ಒದಗಿಸಿತ್ತು.

ಸಿಬಿಐ ತನಿಖೆ ಆದೇಶ; ಸ್ಪೀಕರ್‍‌ ಅನುಮತಿ ಅಗತ್ಯವಿಲ್ಲ, ಅವರ ವ್ಯಾಪ್ತಿಗೂ ಒಳಪಡುವುದಿಲ್ಲ, ದಾರಿತಪ್ಪಿಸಿದ್ದೇಕೆ?

ಮೂಡಾ ಪ್ರಕರಣದ ಹಿನ್ನೆಲೆ

 

ರಾಜ್ಯ ಸರ್ಕಾರದಿಂದ ಅಭಿಯೋಜನಾ ಮಂಜೂರಾತಿಗೆ ಬಾಕಿ ಇರುವ ಪ್ರಕರಣಗಳಲ್ಲಿ ಮಂಜೂರಾತಿ ಬಾಕಿ ಉಳಿಸಿಕೊಂಡಿರುವ ಕಾರಣ ಪ್ರಕರಣದ ವಿಚಾರಣೆಗೆ ತಡೆಯಾಗುತ್ತಿದೆ ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ.ಚೌಧುರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

 

 

ಈ ಪತ್ರ ಆಧರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

 

 

ಮುಖ್ಯಮಂತ್ರಿ ಸೂಚನೆಯಂತೆ ನಗರಾಭಿವೃದ್ಧಿ ಇಲಾಖೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ, ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಬಗ್ಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು. ಈ ಕುರಿತು ವಿಧಾನಸಭೆಯ ಅಂದಿನ ಉಪ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಎಂ.ಶ್ರೀನಿವಾಸ್​, ಸಿ.ಎಸ್​.ಪುಟ್ಟರಾಜು, ಎ.ಬಿ.ರಮೇಶ್​ ವಿರುದ್ಧ ಭ್ರಷ್ಟಾಚಾರ ಅಧಿನಿಯಮ 1988ರ ಪ್ರಕರಣ 19(1)ರ ಅಡಿಯಲ್ಲಿ ಸಭಾಧ್ಯಕ್ಷರು ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

 

 

ಶಾಸಕರು ಸರ್ಕಾರಿ ನೌಕರರಲ್ಲದ ಕಾರಣ ಅವರ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಮೇಲಾಗಿ ಈ ಪ್ರಕರಣ ಸದನದ ಹೊರಗೆ ನಡೆದಿರುವ ಕಾರಣ ಸಭಾಧ್ಯಕ್ಷರ ವ್ಯಾಪ್ತಿಗೂ ಒಳಪಡುವುದಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿ ಆಗಿದ್ದ ಶಾಸಕರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲೂ ಸಭಾಧ್ಯಕ್ಷರು, ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಬಿಐಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts