ಉಚಿತ ಪ್ರಯಾಣ; ಸರ್ಕಾರಿ ಪಾಸಿನ ದರಕ್ಕೆ ಶೇ.10ರಷ್ಟು ಹೆಚ್ಚಳಕ್ಕೆ ಪ್ರಸ್ತಾವ, 1,132 ಕೋಟಿ ರು. ಕೋರಿಕೆ

ಬೆಂಗಳೂರು; ಡೀಸೆಲ್‌ ದರದಲ್ಲಿನ ಹೆಚ್ಚಳ ಮತ್ತು ನಿರ್ವಹಣೆ ವೆಚ್ಚವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಉಚಿತ, ರಿಯಾಯಿತಿ ಬಸ್‌ ಪಾಸ್‌ಗಳಿಗೆ ಸಾರಿಗೆ ನಿಗಮಗಳು ಶೇ.10ರಷ್ಟು ಹೆಚ್ಚಳ ಅನುದಾನವನ್ನು ಕೋರಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯ ಸರ್ಕಾರವು 2024-25ನೇ ಸಾಲಿಗೆ ಒಟ್ಟಾರೆ 1,132 ಕೋಟಿ ರು. ಸಹಾಯ ಒದಗಿಸಬೇಕು ಎಂದು ಸಾರಿಗೆ ಇಲಾಖೆಯು ಪ್ರಸ್ತಾವ ಸಲ್ಲಿಸಿದೆ.

 

ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲದ ಮೂಲಕ ಅನುದಾನವನ್ನು ಒದಗಿಸಲು ಏದುಸಿರು ಬಿಡುತ್ತಿದೆ. ಈ ನಡುವೆ ಸಾರಿಗೆ ನಿಗಮಗಳು ಸರ್ಕಾರದ ಪಾಸಿನ ದರಕ್ಕೆ ಶೇ.10ರಷ್ಟು ಹೆಚ್ಚಳ ಅನುದಾನವನ್ನು ಕೋರಿರುವುದು ಚಿಂತೆಗೀಡು ಮಾಡಿದೆ.

 

ಸಾರಿಗೆ ಸಂಸ್ಥೆಗಳು ಪ್ರತಿ ಪಾಸ್‌ ದರವನ್ನು ಪ್ರಸ್ತಾವನೆಯಲ್ಲಿ ಒದಗಿಸಿದೆಯಾದರೂ ಇದಕ್ಕೆ ಸೂಕ್ತ ಸಮರ್ಥನೆಗಳನ್ನೇ ನೀಡಿಲ್ಲ. ಈ ಸಂಸ್ಥೆಗಳು ಪ್ರಸ್ತಾವಿಸಿದ ದರವನ್ನೇ ಪರಿಗಣಿಸಿದಲ್ಲಿ 1,132 ಕೋಟಿ ರು. ಒದಗಿಸಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿದೆ.

 

2024-25ನೇ ಸಾಲಿಗೆ ಸಂಬಂಧಿಸಿದಂತೆ ಸಹಾಯ ಧನ ಒದಗಿಸುವ ಒದಗಿಸುವ ಸಂಬಂಧ ಸಾರಿಗೆ ನಿಗಮಗಳು ಸಲ್ಲಿಸಿರುವ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯು (ಕಡತ ಸಂಖ್ಯೆ ಆಇ 26/ವೆಚ್ಚ 11/2023) ಪರಿಶೀಲಿಸುತ್ತಿದೆ ಎಂದು ಗೊತ್ತಾಗಿದೆ.

 

ಉಚಿತ, ರಿಯಾಯಿತಿ ಬಸ್‌ಪಾಸ್‌ಗಳ ಸಂಬಂಧ ಸಾರಿಗೆ ನಿಗಮಗಳಿಗೆ ಸಹಾಯ ಧನ ಮರು ಭರಿಸಲು 2023-24ನೇ ಸಾಲಿನ ಪರಿಷ್ಕೃತ ಆಯವ್ಯಯದಲ್ಲಿ 490.43 ಕೋಟಿ ರು.ಗಳನ್ನು ಒದಗಿಸಿತ್ತು.

 

ಅಲ್ಲದೇ ಶಕ್ತಿ ಯೋಜನೆಯ ಫಲಾನುಭವಿಗಳನ್ನು ಹೊರತುಪಡಿಸಿ ಅಂದಾಜಿಸಿರುವ ಪಾಸುಗಳ ಅನ್ವಯ ಸರ್ಕಾರವು ಪ್ರಸ್ತುತ ದರದಲ್ಲಿಯೇ ಅನುದಾನ ಒದಗಿಸಿದಲ್ಲಿ 584.26 ಕೋಟಿ ರು. ನೀಡಬೇಕು. ಅಥವಾ ಪ್ರಸ್ತುತ ದರಕ್ಕೆ ಶೇ.10ರಷ್ಟು ಹೆಚ್ಚಳ ನೀಡಿದರೆ 642.68 ಕೋಟಿ ರು.ಗಳನ್ನು ಒದಗಿಸಬೇಕಾಗುತ್ತದೆ. ಪ್ರಸ್ತುತ ದರ ಮತ್ತು ಶೇ.10ರಷ್ಟು ಹೆಚ್ಚಳ ದರದ ಮಧ್ಯೆ 58.42 ಕೋಟಿ ರು. ಹೆಚ್ಚುವರಿಯಾಗಲಿದೆ ಎಂದು ಆರ್ಥಿಕ ಇಲಾಖೆಯು ಲೆಕ್ಕ ಹಾಕಿರುವುದು ಗೊತ್ತಾಗಿದೆ.

 

ಇದರಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸುವ ಎಸ್‌ ಸಿ ವಿದ್ಯಾರ್ಥಿಗಳಿಗೆ 77.31 ಕೋಟಿ ರು., ಎಸ್‌ ಟಿ ವಿದ್ಯಾರ್ಥಿಗಳಿಗೆ 36.94 ಕೋಟಿ ರು. ಸೇರಿ ಒಟ್ಟಾರೆ 114.26 ಕೋಟಿ ರು. ಬೇಕಾಗಲಿದೆ. ಅದೇ ರೀತಿ ಸಾಮಾನ್ಯ ವಿದ್ಯಾರ್ಥಿಗಳಿಗೆ 248.11 ಕೋಟಿ ರು., ಸೇರಿದಂತೆ ಕೆಎಸ್‌ಆರ್‌ಟಿಸಿ ಒಂದಕ್ಕೇ 362.37 ಕೋಟಿ ರು.ಗಳನ್ನು ಒದಗಿಸಬೇಕು ಎಂಬುದು ತಿಳಿದು ಬಂದಿದೆ.

 

ಬಿಎಂಟಿಸಿಯಲ್ಲಿ ಪ್ರಯಾಣಿಸುವ ಎಸ್‌ ಸಿ ವಿದ್ಯಾರ್ಥಿಗಳಿಗೆ 36.68 ಕೋಟಿ ರು., ಎಸ್‌ ಟಿ ವಿದ್ಯಾರ್ಥಿಗಳಿಗೆ 5.18 ಕೋಟಿ ರು., ಸೇರಿ 41.86 ಕೋಟಿ ರು., ಸಾಮಾನ್ಯ ವಿದ್ಯಾರ್ಥಿಗಳಿಗೆ 164.17 ಕೋಟಿ ರು. ಸೇರಿ ಒಟ್ಟಾರೆಯಾಗಿ 206 ಕೋಟಿ ರು. ಸಹಾಯ ಧನ ಒದಗಿಸಬೇಕು.

 

ಎನ್‌ಡಬ್ಲ್ಯೂಕೆಆರ್‌ಟಿಸಿನಲ್ಲಿ ಪ್ರಯಾಣಿಸುವ ಎಸ್‌ ಸಿ, ಎಸ್‌ ಟಿ, ಸಾಮಾನ್ಯ ವಿದ್ಯಾರ್ಥಿಗಳಿಗೆ ಒಟ್ಟಾರೆ 259.21 ಕೋಟಿ ರು., ಎನ್‌ಇಕೆಆರ್‌ಟಿಸಿಗೆ 181.73 ಕೋಟಿ ರು. ಬೇಕಾಗಲಿದೆ.

 

ಇನ್ನು ವಿದ್ಯಾರ್ಥಿಪಾಸ್‌ಗಳನ್ನು ಹೊರತುಪಡಿಸಿದರೆ ಇತರೆ ಉಚಿತ, ರಿಯಾಯಿತಿ ಬಸ್‌ ಪಾಸ್‌ಗಳಿಗಾಗಿ 2024-25ನೇ ಸಾಲಿನಲ್ಲಿ 187.21 ಕೋಟಿ ರು. ಬೇಕಾಗಲಿದೆ. ಆದರೆ ಉಚಿತ ಮತ್ತು ರಿಯಾಯಿತಿ ಬಸ್‌ ಪಾಸ್‌ಗಳಿಗೆ 2022-23ರಲ್ಲಿ 2021-22ನೇ ಸಾಲಿಗೆ ಒದಗಿಸಿದ್ದ ಅನುದಾನವನ್ನೇ ಒದಗಿಸಿತ್ತು. ಅದರಂತೆ 2023-24ನೇ ಸಾಲಿಗೂ 2022-23ರಲ್ಲಿ ಒದಗಿಸಿದ್ದ ಅನುದಾನ ಒದಗಿಸಿತ್ತು. ಹಾಗೂ ಪತ್ರಕರ್ತರ ಉಚಿತ ಬಸ್‌ ಪಾಸ್‌ಗಳ ಅನುದಾನವೂ ಸೇರಿದಂತೆ ಒಟ್ಟಾರೆ 123.66 ಕೋಟಿ ರು. ಒದಗಿಸಿತ್ತು ಎಂಬುದು ಗೊತ್ತಾಗಿದೆ.

 

ಪ್ರಸ್ತಕ್ತ ಶಕ್ತಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಮಹಿಳಾ ಫಲಾನುಭವಿಗಳನ್ನು ಹೊರತುಪಡಿಸಿದರೆ ಕಳೆದ ಸಾಲಿನ ಅನುದಾನದಲ್ಲಿ ಶೇ.25ರಷ್ಟನ್ನುಕಡಿತಗೊಳಲಿಸಿದರೆ ಒಟ್ಟಾರೆ 92.87 ಕೋಟಿ ರು. ಒದಗಿಸಬೇಕು ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ ಎಂದು ತಿಳಿದು ಬಂದಿದೆ.

 

2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ಯೆಲ್ಲೋ ಬೋರ್ಡ್‌ ಟ್ಯಾಕ್ಸಿ ಚಾಲಕರ ಹಾಗೂ ಆಟೋ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಅನುಷ್ಠಾನಕ್ಕಾಗಿ 2022-23ನೇ ಸಾಲಿನಲ್ಲಿ 4.06 ಕೋಟಿ ರು. ವಿದ್ಯಾರ್ಥಿ ವೇತನ ವಿತರಿಸಲಾಗಿತ್ತು. 2023-24ನೇ ಸಾಲಿನಲ್ಲಿ 17.00 ಕೊಟಿ ರು. ಒದಗಿಸಲಾಗಿದೆಯಾದರೂ ಇದುವರೆಗೂ ವಿದ್ಯಾರ್ಥಿ ವೇತನ ವಿತರಣೆ ಆಗಿಲ್ಲ ಎಂಬುದು ಗೊತ್ತಾಗಿದೆ.

 

ಹೀಗಾಗಿ 2024-25ನೇ ಸಾಲಿನಲ್ಲಿಯೂ ಈ ಯೋಜನೆಗೆ 17.00 ಕೋಟಿ ರು. ಅನುದಾನ ಒದಗಿಸಬೇಕು ಎಂದು ಸಾರಿಗೆ ನಿಗಮಗಳು ಕೋರಿವೆ. 2022-23ನೇ ಸಾಲಿನಲ್ಲಿ ಸೆಪ್ಟಂಬರ್‌ನಿಂದಲೇ ಯೋಜನೆ ಜಾರಿಗೊಂಡಿರುವ ಕಾರಣ 6,991 ಫಲಾನುಭವಿಗಳಿಗೆ 4.06 ಕೋಟಿ ರು. ಈಗಾಗಲೇ ವಿತರಿಸಿದೆ. 2024-25ನೇ ಸಾಲಿನಲ್ಲಿಲ 10,000 ಫಲಾನುಭವಿಗಳನ್ನು ಅಂದಾಜಿಸಿದರೆ 7.00 ಕೋಟಿ ರು. ಒದಗಿಸಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts