ಪಿಯು ವಿದ್ಯಾರ್ಥಿಗಳ ಜೇಬಿಗೆ ‘ಕೈ’ ಹಾಕಿದ ಸರ್ಕಾರ; ಮುಂದಿನ ವರ್ಷದಿಂದಲೇ ಶುಲ್ಕ ಪರಿಷ್ಕರಣೆ

ಬೆಂಗಳೂರು; ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲ ಎತ್ತುವಳಿ ಮಾಡಲು ಏದುಸಿರು ಬಿಡುತ್ತಿರುವ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಪಿಯು ವಿದ್ಯಾರ್ಥಿಗಳ ಜೇಬಿಗೆ ಕೈ ಹಾಕಲು ಮುಂದಾಗಿದೆ. ಈಗಾಗಲೇ ಪರಿಷ್ಕೃತ ಶುಲ್ಕ ಪಟ್ಟಿಯನ್ನೂ ಸಿದ್ಧಪಡಿಸಿಟ್ಟುಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರವು ಪಿಯು ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ ನೀಡಿದ್ದರೇ ಈಗಿನ ಕಾಂಗ್ರೆಸ್‌ ಸರ್ಕಾರವು 2024-25ನೇ ಸಾಲಿಗೆ ಪಿಯು ವಿದ್ಯಾರ್ಥಿಗಳ ವಿವಿಧ ರೀತಿಯ ಶುಲ್ಕವನ್ನು ಪರಿಷ್ಕರಣೆ ಮಾಡಲು ಹೊರಟಿದೆ.

 

ಪಿಯು ವಿದ್ಯಾರ್ಥಿಗಳ ಶುಲ್ಕ ಪರಿಷ್ಕರಣೆ ಮಾಡುವ ಸಂಬಂಧ ಪಿಯು ಮಂಡಳಿಯ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆ ಕುರಿತು ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಪ್ರಸ್ತಾಪಿಸಿದ್ದಾರೆ ಎಂದ ಗೊತ್ತಾಗಿದೆ.

 

ಪಿಯು ಮಂಡಳಿ ನಿರ್ದೇಶಕರು ಪ್ರಸ್ತಾವಿಸಿರುವ ಶುಲ್ಕ ಪರಿಷ್ಕರಣೆಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲು ಕಡತವನ್ನು ರವಾನಿಸಲಾಗಿದೆ ಎಂದು ಗೊತ್ತಾಗಿದೆ. ಈ ಸಂಬಂಧ ‘ದಿ ಫೈಲ್‌’ಗೆ ಕೆಲವು ದಾಖಲೆಗಳು (ಇಪಿ ಟಿಪಿಯು 2023, ಸ್ವೀಕೃತಿ ಸಂಖ್ಯೆ; 7004123/2023) ಲಭ್ಯವಾಗಿವೆ.

 

ಪದವಿಪೂರ್ವ ಶಿಕ್ಷಣ ಹಂತದಲ್ಲಿ ಕಾಲೇಜುಗಳಿಂದ ಸಂಗ್ರಹ ಮಾಡಲಾಗುವ ಶುಲ್ಕ ಮತ್ತು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಶುಲ್ಕಗಳನ್ನು ಪಡೆಯಲಾಗುತ್ತಿದೆ. ಕಾಲೇಜುಗಳಿಂದ ಸಂಗ್ರಹ ಮಾಡಲಾಗುವ ಶುಲ್ಕಗಳನ್ನು 2018ನೇ ಸಾಲಿನಲ್ಲಿ (ಸರ್ಕಾರದ ಆದೇಶ ಸಂಖ್ಯೆ ಇಡಿ 195 ಡಿಜಿಡಿ 2017, ದಿನಾಂಕ 02-03-2018) ಪರಿಷ್ಕರಿಸಲಾಗಿತ್ತು. ಇದು 2018-19ನೇ ಸಾಲಿನಿಂದಲೇ ಜಾರಿಯಲ್ಲಿತ್ತು.

 

ಶುಲ್ಕ ಪರಿಷ್ಕರಣೆಯನ್ನು ಪ್ರತೀ ಮೂರು ವರ್ಷಗಳಿಗೊಮ್ಮೆ ಮಾಡಬೇಕಿದೆ ಎಂಬ ಸಮರ್ಥನೆಯನ್ನು ಮುಂದಿರಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು 2024-25ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರುವಂತೆ ಶುಲ್ಕವನ್ನು ಪರಿಷ್ಕರಿಸಲು ಮುಂದಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

 

‘ಕಾಲೇಜಿನ ಮೂಲಭೂತ ಸೌಕರ್ಯ ಅಭಿವೃದ್ಧಿ ದೃಷ್ಟಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗದಂತೆ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಲಾಗಿದೆ. ಜಾರಿಯಲ್ಲಿರುವ ಪ್ರಸ್ತುತ ಶುಲ್ಕ ಹಾಗೂ ಪರಿಷ್ಕರಣೆ ಮಾಡಲು ಉದ್ದೇಶಿಸಿರುವ ಶುಲ್ಕಗಳ ವಿವರವಾದ ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಂತೆ 2024-25ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರುವಂತೆ ಶುಲ್ಕ ಪರಿಷ್ಕರಣೆ ಸಂಬಂಧ ಸರ್ಕಾರದ ಹಂತದಲ್ಲಿ ಸೂಕ್ತ ಅದೇಶ ಹೊರಡಿಸಬೇಕು,’ ಎಂದು ಕೋರಿರುವುದು ತಿಳಿದು ಬಂದಿದೆ.

 

ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಕಾಲೇಜುಗಳಿಂದ ಸಂಗ್ರಹ ಮಾಡಲಾಗುವ ಶುಲ್ಕಗಳನ್ನು ಪರಿಷ್ಕರಣೆ ಮಾಡಲು ಕೋರಿರುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯಲು ಕಡತವನ್ನು ರವಾನಿಸಿದೆ ಎಂದು ಗೊತ್ತಾಗಿದೆ.

 

2013-14ರಲ್ಲಿದ್ದ ಶುಲ್ಕವನ್ನು ಶೇ.30ರಿಂದ ಶೇ.60ರ ವರೆಗೆ 2018-19ರಿಂದ ಹೆಚ್ಚಿಸಿತ್ತು. ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ, ಅಂಕಪಟ್ಟಿ, ಅನುತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ, ಹೊಸ ಕಾಲೇಜು, ಹೊಸ ಕಾಂಬಿನೇಷನ್‌ ತೆರೆಯಲು, ವರ್ಗಾವಣೆ ಪತ್ರ, ನೋಂದಣಿ ಶುಲ್ಕ, ಪರೀಕ್ಷಾ ಕೇಂದ್ರದ ಬದಲಾವಣೆ ಸೇರಿದಂತೆ ಸುಮಾರು 46 ವಿವಿಧ ಶುಲ್ಕ ಪರಿಷ್ಕರಣೆ ಮಾಡಿತ್ತು.

 

2018-19ರಲ್ಲಿದ್ದ ದರ ಪಟ್ಟಿ

 

ವಿದ್ಯಾರ್ಥಿ ಪ್ರವೇಶ 36.50 ರು ನಿಂದ 38.89 ರು.,

 

 

ಖಾಸಗಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕ 252 ರು. ನಿಂದ 400. 37 ರು.,

 

ನೋಂದಣಿ ಶುಲ್ಕ 25 ರು. ನಿಂದ 35. 40

 

 

ಟ್ಯೂಷನ್‌ ಶುಲ್ಕ 504 ರು ನಿಂದ 670 ರು.

 

 

ಖಾಸಗಿ, ಅನುದಾನಿತ ಕಾಲೇಜುಗಳಲ್ಲಿ  ಟ್ಯೂಷನ್‌ ಶುಲ್ಕ 1,008 ರುನಿಂದ 1,330 ರು.

 

 

ವಿಳಂಬ ದಾಖಲಾತಿ ದಂಡ 504 ರು. ನಿಂದ 670 ರು.

 

 

ವಿಳಂಬ ದಾಖಲಾತಿ ವಿಶೇಷ ದಂಡ 1,680 ರು ನಿಂದ 2, 220 ರು.,

 

 

ಕಾಲೇಜು ಬದಲಾವಣೆ ಶುಲ್ಕ 1,200 ರು. ನಿಂದ 1,600 ರು.

 

 

ಹೊಸ ಕಾಲೇಜಿಗೆ ಅರ್ಜಿ ಶುಲ್ಕ 36,000 ರು. ನಿಂದ 50, 000 ರು.,

 

 

ಹೊಸ ಕಾಲೇಜು ನೋಂದಣಿ ಶುಲ್ಕ 72, 000 ರು. ನಿಂದ 1,00, 800 ರು.,

 

ಹೊಸ ಕಾಂಬಿನೇಷನ್‌(ಕಲಾ, ವಾಣಿಜ್ಯ) 1,44,007 ರು. ನಿಂದ 2,00, 000

 

ಹಿಂದಿನ ಬಿಜೆಪಿ ಸರ್ಕಾರವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿನಿಯರಿಗೆ 456 ರೂಪಾಯಿ ಶುಲ್ಕದಿಂದ ವಿನಾಯಿತಿ ನೀಡಿತ್ತು. ಈ ಮೊತ್ತವನ್ನು ಮೊತ್ತವನ್ನು ಕಾಲೇಜು ಪ್ರಾಂಶುಪಾಲರ ಖಾತೆಗೆ ಜಮೆ ಮಾಡಲು ಆದೇಶ ಹೊರಡಿಸಿತ್ತು.

 

2019-20ನೇ ಸಾಲಿನಿಂದ 456 ರೂಪಾಯಿ ಶುಲ್ಕದಿಂದ ವಿನಾಯಿತಿ ನೀಡಿ ಪ್ರವೇಶ ನೀಡಲು ಆದೇಶಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕೇವಲ ಆಯಾ ವರ್ಷಗಳಿಗೆ ಮಾತ್ರ ಸೀಮಿತವಾಗಿ ಶುಲ್ಕದಿಂದ ವಿನಾಯಿತಿ ನೀಡಿ ಪ್ರಾಂಶುಪಾಲರ ಖಾತೆಗೆ ಜಮೆ ಮಾಡಲು ಅನುಮತಿ ನೀಡಲಾಗುತ್ತಿತ್ತು.

 

ಆದರೆ ಹಿಂದಿನ ಬಿಜೆಪಿ ಸರ್ಕಾರದ ಆದೇಶದಂತೆ 2022-23ನೇ ಶೈಕ್ಷಣಿಕ ಸಾಲಿನಿಂದ ಶಾಶ್ವತವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ 456 ರೂಪಾಯಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿತ್ತು.

SUPPORT THE FILE

Latest News

Related Posts