ಸಿಎಂ ಸಾಮಾಜಿಕ ಮಾಧ್ಯಮ ನಿರ್ವಹಣೆಗೆ 1.72 ಕೋಟಿ ವೆಚ್ಚ; ಟೆಂಡರ್‍‌ ಪ್ರಕ್ರಿಯೆ ಬದಿಗೊತ್ತಿ 4(ಜಿ) ಆದೇಶ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ನಿರ್ವಹಣೆಯೂ ಸೇರಿದಂತೆ ಮತ್ತಿತರ ಸೇವೆಗಳನ್ನು ಪಡೆಯಲು ಟೆಂಡರ್‍‌ ಪ್ರಕ್ರಿಯೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಬದಿಗೊತ್ತಿದೆ. ಅಲ್ಲದೇ ಈ ಸೇವೆಯ ಚಟುವಟಿಕೆಗಳು ಕಿಯೋನಿಕ್ಸ್‌ನ ಅನುಮೋದಿತ ಚಟುವಟಿಕೆಗಳಲ್ಲಿ ಇಲ್ಲದಿದ್ದರೂ ಸಹ 4(ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಅಧಿಕೃತ ಏಜೆನ್ಸಿ ಅಥವಾ  ಟೆಂಡರ್ ಪ್ರಕ್ರಿಯೆ ಮೂಲಕವೇ ಈ ಸೇವೆಗಳನ್ನು ಪಡೆದು  ನಿರ್ವಹಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯ  ಸೂಚನೆಯನ್ನೇ ಉಲ್ಲಂಘಿಸಿರುವ ಸರ್ಕಾರವು,  2023ರ ಮೇ 1ರಿಂದ  2025ರ ಜುಲೈವರೆಗೆ ನಿರ್ವಹಿಸಲು 1.72 ಕೋಟಿ ರು.ಗಳ ವೆಚ್ಚಕ್ಕೆ ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆಯಿಂದ 4(ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

 

ಸುಳ್ಳು ಸುದ್ದಿಗಳನ್ನು ತಡೆಗಟ್ಟುವುದು ಮತ್ತು ಸರ್ಕಾರದ ಎಲ್ಲಾ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು  7.20 ಕೋಟಿ ರು. ವೆಚ್ಚ ಮಾಡಲಿದೆ.  ಕೆಎಸ್‌ಎಮ್‌ಸಿಎ ಮೂಲಕ ‘ದ ಪಾಲಿಸಿ ಫ್ರಂಟ್‌’ ನ ಸೇವೆ ಪಡೆಯಲು  4(ಜಿ) ವಿನಾಯಿತಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿಯ ಸಾಮಾಜಿಕ ಮಾಧ್ಯಮ ಮತ್ತಿತರ ಸೇವೆಗಳನ್ನು ಕಿಯೋನಿಕ್ಸ್‌ ಮೂಲಕ ಪಡೆಯಲು 4(ಜಿ) ವಿನಾಯಿತಿ ನೀಡಿರುವುದು ಮುನ್ನೆಲೆಗೆ ಬಂದಿದೆ.

 

ಈ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಮುಖ್ಯಮಂತ್ರಿಗಳ ಸಾಮಾಜಿಕ ಮಾಧ್ಯಮ,  ಟಿ ವಿ ಮೊನಿಟರಿಂಗ್‌, ನ್ಯೂಸ್‌ ಪೇಪರ್ ಕ್ಲಿಪಿಂಗ್ಸ್‌, ಪಿ ಆರ್‍‌ ಸರ್ವಿಸಸ್‌ ಮತ್ತು    ಸರ್ವರ್‍‌  ನಿರ್ವಹಣೆಯೂ ಸೇರಿದಂತೆ ಮತ್ತಿತರ ಸೇವೆಗಳನ್ನು ಕಿಯೋನಿಕ್ಸ್‌ನಿಂದ 2023ರ ಮೇ 1ರಿಂದ 2025ರ ಜುಲೈ 31ರವರೆಗೆ ಮಾಸಿಕ 7,19,800 ರು. ದರದಲ್ಲಿ  ಪಡೆಯಲು 4(ಜಿ) ವಿನಾಯಿತಿ ನೀಡಬೇಕು ಎಂದು  ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಅರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

 

 

 

ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್‍‌ ಅವರು ‘Does KEONICS have Expertise in these activities ? Do they come under thier approved actitivities?  ಎಂಬ ವಿವರಣೆಯನ್ನು ಕೋರಿದ್ದರು.

 

ಕಿಯೋನಿಕ್ಸ್‌ ನ ವಿವರಣೆ ಏನಿತ್ತು?

 

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್‌) ಸಂಸ್ಥೆಯು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿನ ಸಾರ್ವಜನಿಕ ಉದ್ದಿಮೆಯಾಗಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸೇವೆಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಒದಗಿಸಲಾಗುತ್ತಿದೆ. ಸರ್ಕಾಶರದ ಇಲಾಖೆಗಳು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಗಣಕ ಯಂತ್ರ, ಸಿಸಿಟಿವಿ, ಬಯೋಮೆಟ್ರಿಕ್‌, ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಇತರೆ ಎಲ್ಲಾ ರೀತಿಯ ಸೇವೆಗಳನ್ನು ನೇರವಾಗಿ ಕಿಯೋನಿಕ್ಸ್‌ ಸಂಸ್ಥೆಯಿಂದ ಪಡೆಯಬಹುದು. ಅಧಿಕೃತ ಅರ್ಹ ನೋಂದಾಯಿಸಲ್ಪಟ್ಟ ಸೇವಾವಾರು/ಗುತ್ತಿಗೆದಾರರ ಮೂಲಕ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ವಿವರಣೆ ನೀಡಿತ್ತು.

 

ಅದೇ ರೀತಿ 2022ರ ಸೆ.22ರಂದು ಅಂದಿನ ಮುಖ್ಯಮಂತ್ರಿ ಅವರ ಸಾಮಾಜಿಕ ಮಾಧ್ಯಮ ನಿರ್ವಹಣೆ, ಟಿ ವಿ ಮೊನಿಟರಿಂಗ್‌, ನ್ಯೂಸ್‌ ಪೇಪರ್‍‌ ಕ್ಲಿಪಿಂಗ್ಸ್‌, ಪಿ ಆರ್‍‌ ಸರ್ವಿಸಸ್‌, ಸರ್ವರ್‍‌ ನಿರ್ವಹಣೆ ಸೇವೆಗಳನ್ನು ಕಿಯೋನಿಕ್ಸ್‌ ಸಂಸ್ಥೆಯಿಂದ 2022ರ ಜೂನ್‌ 1ರಿಂದ 2023ರ ಏಪ್ರಿಲ್‌ 30ರವರೆಗೆ 7.19 ಲಕ್ಷ ರು. ವೆಚ್ಚದಲ್ಲಿ ನಿರ್ವಹಿಸಲು ಮಂಜೂರಾತಿ ದೊರೆತಿತ್ತು.

 

ಈ ವಿವರಣೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯ ವಿಶೇಷಾಧಿಕಾರಿ ಅವರು ‘ ಕಂಡಿಕೆ 4ರ ನಿರ್ದೇಶನದ ಮೇರೆಗೆ ಪರಿಶೀಲಿಸಲಾಗಿ ಪ್ರಸ್ತಾಪಿತ ಸೇವೆಯು ಕಿಯೋನಿಕ್ಸ್‌ ಸಂಸ್ಥೆಗೆ ಕೆಟಿಪಿಪಿ ಕಾಯ್ದೆ ಕಲಂ 4(ಜಿ) ಅಡಿ ನೀಡಲಾಗಿರುವ ವಿನಾಯಿತಿಯಡಿ ಬರುವುದಿಲ್ಲ. ಆದರೂ ಸದರಿ ಪ್ರಸ್ತಾವನೆ ಕುರಿತು ಇಲಾಖೆಯ ವೆಚ್ಚ (7) ಶಾಖೆಯ ಟಿಪ್ಪಣಿಯಂತೆ ಕಿಯೋನಿಕ್ಸ್‌ ಸಂಸ್ಥೆಯ ಸದರಿ ಕಾರ್ಯವನ್ನು ಈಗಾಗಲೇ ನಿರ್ವಹಿಸಿರುವುದಾಗಿ ತಿಳಿಸಿರುವುದರಿಂದ, ಪ್ರಸ್ತಾವನೆ ಕುರಿತು ಆದೇಶಕ್ಕಾಗಿ ಕಡತ ಮಂಡಿಸಿದ್ದರು ಎಂಬುದು ತಿಳಿದು ಬಂದಿದೆ.

 

ಇದನ್ನು  ಪರಿಶೀಲಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್‍‌ ಅವರು The administrative department has entrusted certain works to KEONICS which are not permissible as per the 4(g) exemption. However, these services have been obtained by the department. Now the only way left is Allow the department to pay for the services alreday obtained. Instruct the dept to obtain services from an agenc which is authorised or through tender ಎಂದು ಸ್ಪಷ್ಟವಾಗಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.

 

ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು Discussed with commissioner IPR. This is reportedly an ongoing activity and these services have been obtained earlier too from KEONICS. Since specific aproval is being sought under 4 G. the proposal of the department approved  ಎಂದು 2023ರ ಆಗಸ್ಟ್‌ 9ರಂದು  ಟಿಪ್ಪಣಿ ಹಾಕಿದ್ದರು ಎಂಬುದು ತಿಳಿದು ಬಂದಿದೆ.

 

ವಿಶೇಷವೆಂದರೇ ಎಲ್ ಕೆ ಅತೀಕ್‌ ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ ಒಂದು ದಿನದ ಅಂತರದಲ್ಲೇ  ಆರ್ಥಿಕ ಇಲಾಖೆಯು ತ್ವರಿತಗತಿಯಲ್ಲಿ ಅಂದೇ ಅಧಿಸೂಚನೆಯನ್ನೂ ಹೊರಡಿಸಿತ್ತು.

 

ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ಸಂಬಂಧ ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಈ ಹಿಂದಿನ ವರ್ಷಗಳಿಗಿಂತಲೂ ರಾಜ್ಯದಲ್ಲಿ ಈ ಬಾರಿ ಅತೀ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಅಲ್ಲದೇ ಬರಪೀಡಿತವಾಗಿರುವ ಬಹುತೇಕ ತಾಲೂಕುಗಳಿಗೆ ಸರಿಯಾಗಿ ಬರ ಪರಿಹಾರವೂ ತಲುಪಿಲ್ಲ. ಈ ಮಧ್ಯೆ ಸುಳ್ಳು ಸುದ್ದಿಗಳನ್ನು ತಡೆಯುವುದು ಮತ್ತು ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು 1  ವರ್ಷದ ಅವಧಿವರೆಗೆ 7.20 ಕೋಟಿ ರು. ವೆಚ್ಚ ಮಾಡಲು ಮುಂದಾಗಿರುವುದು ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿದೆ.

the fil favicon

SUPPORT THE FILE

Latest News

Related Posts