‘ವಿದ್ಯುತ್‌ ತಂತಿ ಕಡಿತಗೊಂಡು ನೆಲಕ್ಕೆ ಬಿದ್ದು ಬೆಂಕಿ ಬರುತ್ತಿದೆ,’ ಎಂಬ ದೂರು ನಿರ್ಲಕ್ಷ್ಯಿಸಿದ್ದೇ ಸಾವಿಗೆ ಕಾರಣವಾಯಿತೇ?

ಬೆಂಗಳೂರು; ವಿದ್ಯುತ್ ತಂತಿ ತುಳಿದು ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗು ದಾರುಣವಾಗಿ ಸಾವಿಗೀಡಾದ ಪ್ರಕರಣದಲ್ಲಿ ದೂರು ಸುರಕ್ಷತಾ ವಿಭಾಗ ಮತ್ತು ಸಹಾಯವಾಣಿಯ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪವೇ ಮೂಲ ಕಾರಣವಾಗಿತ್ತೇ ಎಂಬ ಅಂಶವು ಇದೀಗ ಮುನ್ನೆಲೆಗೆ ಬಂದಿದೆ.

 

‘ವಿದ್ಯುತ್‌ ತಂತಿ ಕಡಿತಗೊಂಡು ನೆಲಕ್ಕೆ ಬಿದ್ದು ಬೆಂಕಿ ಬರುತ್ತಿದೆ,’ ಎಂದು ಸುಮಾರು 03.58 A M ರಿಂದ 03.59 AM ನಲ್ಲಿ ಗ್ರಾಹಕರು ತಿಳಿಸಿದ್ದರೂ ಸಹ ದೂರು ಸುರಕ್ಷತಾ ವಿಭಾಗದ ಸಿಬ್ಬಂದಿ ಮತ್ತು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಇಂಜಿನಿಯರ್‍‌ ಕ್ರಮ ಕೈಗೊಂಡಿರಲಿಲ್ಲ. ಇವರ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪದಿಂದಾಗಿಯೇ ಈ ಮಾರಣಾಂತಿಕ ವಿದ್ಯುತ್‌ ಅಪಘಾತ ನಡೆದಿದೆ ಎಂಬ ತೀರ್ಮಾನಕ್ಕೆ ಬೆಸ್ಕಾಂ ಬಂದಿದೆ ಎಂದು ಗೊತ್ತಾಗಿದೆ.

 

ವಿದ್ಯುತ್​​ ತಂತಿ ತುಂಡಾಗಲು ಇಲಿ ಕಾರಣ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತದ ಅಧಿಕಾರಿಗಳು ಹೇಳಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು ನೀಡಿರುವ ಮತ್ತೊಂದು ಅಭಿಪ್ರಾಯದ ಟಿಪ್ಪಣಿಯು   ಮುನ್ನೆಲೆಗೆ ಬಂದಿದೆ.

 

ಇದರ ಪ್ರತಿಯು (FILE;BESCOM/BC-48/GM9(CR/2023/24) ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ನಗರದ ಹೊರವಲಯದಲ್ಲಿರುವ ವೈಟ್‌ಫೀಲ್ಡ್‌ನಲ್ಲಿ ವಿದ್ಯುತ್ ತಂತಿ ತುಳಿದು ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗು 2023ರ ನವೆಂಬರ್‍‌ 19ರಂದು ಸಾವಿಗೀಡಾಗಿದ್ದ ಘಟನೆ ಕುರಿತು ನಾಲ್ಕು ತಂಡಗಳು ತನಿಖೆ ನಡೆಸುತ್ತಿದೆ. ಈ ನಡುವೆಯೇ ಘಟನೆಗೆ ಸಹಾಯಕ ಇಂಜಿನಿಯರ್‍‌ ಕೆ ಎಸ್‌ ರಾಜೇಶ್‌ ಅವರು  ಕರ್ತವ್ಯಲೋಪ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

 

ವಿದ್ಯುತ್‌ ತಂತಿ ಕಡಿತಗೊಂಡು ನೆಲಕ್ಕೆ ಬಿದ್ದು ಬೆಂಕಿ ಬರುತ್ತಿದೆ ಎಂದು ಗ್ರಾಹಕ ಸೇವಾ ಪ್ರತಿನಿಧಿಗಳು ದೂರು ಸಲ್ಲಿಸಿದ್ದರೂ ಸಹ ಸಹಾಯಕ ಇಂಜಿನಿಯರ್‍‌ ರಾಜೇಶ್‌ ಎಂಬುವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದನ್ನು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಕರ್ತವ್ಯಲೋಪದ ವಿವರಣೆ

 

ವಿದ್ಯುತ್ ಅವಘಡದ ಕುರಿತು 04 ದೂರುಗಳನ್ನು ಗ್ರಾಹಕ ಸೇವಾ ಪ್ರತಿನಿಧಿಗಳು ದಾಖಲು ಮಾಡಿದ್ದರು. ಈ ದೂರು ಸುರಕ್ಷತೆಗೆ ಸಂಬಂಧಪಟ್ಟಿರುತ್ತದೆ. ಗ್ರಾಹಕರು ಬೆವಿಕಂನ 24/7 , 1912 ಸಹಾಯವಾಣಿಗೆ ವಿದ್ಯುತ್‌ ಅವಘಡದ ಬಗ್ಗೆ ಕರೆ ಮಾಡಿ ದೂರನ್ನು ದಾಖಲು ಮಾಡಿದ್ದರು.

 

ಈ ದೂರಿನಲ್ಲಿ ಗ್ರಾಹಕರು ಖಚಿತವಾಗಿ ವಿದ್ಯುತ್ ತಂತಿ ಕಡಿತಗೊಂಡು ನೆಲಕ್ಕೆ ಬಿದ್ದು ಬೆಂಕಿ ಬರುತ್ತಿದೆ ಎಂದು ಸುಮಾರು 03.58 A M ರಿಂದ 03.59 AM ನಲ್ಲಿ ತಿಳಿಸಿದ್ದರು. ಸುರಕ್ಷತೆಯ ದೂರುಗಳನ್ನು ನಿರ್ವಹಿಸುವ ಗ್ರಾಹಕ ಸೇವಾ ಪ್ರತಿನಿಧಿಯ ತಂಡದ ನಾಯಕರು, (ಇವರೆಲ್ಲರೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂದಿಗಳು) ವ್ಯವಸ್ಥಾಪಕರು ಇದರ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿರುತ್ತಾರೆ ಎಂದು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

‘ಆದರೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಯು ಬೆವಿಕಂನ ಸರ್ಕಾರಿ ಅಧಿಕಾರಿಯಾಗಿದ್ದು ಸಹಾಯವಾಣಿಯ ರಾತ್ರಿ ಪಾಳಿಯ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಸದರಿ ದೂರಿಗೆ ಸಂಬಂಧಿಸಿದಂತೆ ಸಹಾಯವಾಣಿಯಲ್ಲಿ ದಾಖಲಾದ ದೂರುಗಳ ಕುರಿತು ಪಾಳಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಸಹಾಯಕ ಎಂಜಿನಿಯರ್‍‌ ಕೆ ಎಸ್‌ ರಾಜೇಶ್‌ ಅವರು ಕರ್ತವ್ಯಕ್ಕೆ ಚ್ಯುತಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ,’ ಎಂದು ಅಭಿಪ್ರಾಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಇವರ ವಿರುದ್ಧ ಬೆವಿಕಂನ ನಿಯಮಾನುಸಾರ ಸಿಡಿಸಿಎ ಅನ್ವಯ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯವನ್ನು ನೀಡಿದೆ ಎಂದು ಗೊತ್ತಾಗಿದೆ.

 

ಕೆ ಎಸ್‌ ರಾಜೇಶ್‌ ಅವರ ಕರ್ತವ್ಯದ ಪಾಳಿಯ ಅವಧಿಯಲ್ಲಿನ ಸಹಾಯವಾಣಿ ಕುರಿತು ದೈನಂದಿನ ವರದಿ, Schedule interruption ಕುರಿತು ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಲಾಗಿತ್ತು. ಆದರೆ ಈ ವಿಷಯಗಳ ಕುರಿತು ಮಾಹಿತಿಯು ಲಭ್ಯವಿಲ್ಲ ಎಂದು ಬೆಸ್ಕಾಂ ತನ್ನ ಟಿಪ್ಪಣಿಯಲ್ಲಿ  ಹೇಳಿರುವುದು ತಿಳಿದು ಬಂದಿದೆ.

 

ಆಸನದಲ್ಲಿ ಇರಲಿಲ್ಲ

 

ಹಾಗೆಯೇ ‘ಸದರಿ ಅಧಿಕಾರಿಯು ರಾತ್ರಿ ಪಾಳಿಯ ಅವಧಿಯಲ್ಲಿ ಸಹಾಯವಾಣಿಯಲ್ಲಿ ದಾಖಲು ಮಾಡಿರುವ ಸಿಸಿ ಕ್ಯಾಮರಾದಲ್ಲಿ ವೀಕ್ಷಿಸಿದಾಗ ಸದರಿ ಅಧಿಕಾರಿಯು ಸಹಾಯವಾಣಿಯಲ್ಲಿ ಕೂಡುವ ಆಸನದಲ್ಲಿ ಹಲವಾರು ಬಾರಿ ಅನುಪಸ್ಥಿತಿಯಲ್ಲಿ ಇರುವುದು ಕಂಡುಬಂದಿರುತ್ತದೆ,’ ಎಂದೂ ವಿವರಿಸಿರುವುದು ಗೊತ್ತಾಗಿದೆ.

 

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಒಂದು ತಂಡ, ಪೊಲೀಸರ ಇನ್ನೊಂದು ತಂಡ, ರಾಜ್ಯ ವಿದ್ಯುತ್ ಇಲಾಖೆಯಿಂದ ಮೂರನೇ ತಂಡ ಮತ್ತು ಸ್ವತಂತ್ರ ಸಂಸ್ಥೆಯಾಗಿರುವ ನಾಲ್ಕನೇ ತಂಡ ಸಾವಿನ ತನಿಖೆ ನಡೆಸಲಿದೆ ಎಂದು ಸಚಿವ ಜಾರ್ಜ್ ಹೇಳಿದ್ದನ್ನು ಸ್ಮರಿಸಬಹುದು.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಹೇಳಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts