ಉದ್ಧಟತನ,ಅತೀವ ಬೇಜವಾಬ್ದಾರಿ,ಕರ್ತವ್ಯ ನಿರ್ಲಕ್ಷ್ಯ; 44 ಇನ್ಸ್‌ಪೆಕ್ಟರ್‍‌ಗಳ ಮೇಲೆ ಅಮಾನತು ತೂಗುಗತ್ತಿ

ಬೆಂಗಳೂರು; ವರ್ಗಾವಣೆ ಆದೇಶ ಹೊರಡಿಸಿದ್ದರೂ ಪೊಲೀಸ್ ಇಲಾಖೆಯ 44 ಇನ್ಸ್‌ಪೆಕ್ಟರ್‍‌ಗಳು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇನ್ನೂ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ವರದಿ ಮಾಡಿಕೊಳ್ಳದೇ ಗೈರು ಹಾಜರಾಗುವ ಮೂಲಕ ಕರ್ತವ್ಯ ಲೋಪ ಎಸಗಿರುವುದು ಇದೀಗ ಬಹಿರಂಗಗೊಂಡಿದೆ.

 

ವಿಶೇಷವೆಂದರೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಪಟ್ಟಿಯಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ 15 ಮಂದಿ ಇನ್ಸ್‌ಪೆಕ್ಟರ್‍‌ಗಳು ಇದ್ದಾರೆ.

 

ಆಯಕಟ್ಟಿನ ಜಾಗಕ್ಕೆ ವರ್ಗಾವಣೆಗೊಂಡರೂ ಪೊಲೀಸ್‌ ಇನ್ಸ್‌ಪೆಕ್ಟರ್‍‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಆದೇಶಗಳನ್ನೇ ಧಿಕ್ಕರಿಸಿ ಉದ್ಧಟತನವನ್ನು ಈಗಲೂ ಮುಂದುವರೆಸಿದ್ದಾರೆ. ಈ ಕುರಿತು ಇಲಾಖೆ ಆಡಳಿತ ವಿಭಾಗದ ಡಿಜಿಪಿ ಸೌಮೇಂದು ಮುಖರ್ಜಿ ಅವರು ಶಿಸ್ತು ಕ್ರಮ ಜರುಗಿಸುವ ಸಂಬಂಧ ಕಾರಣ ಕೇಳಿ ನೋಟೀಸ್‌ ಜಾರಿಗೊಳಿಸಿದ್ದಾರೆ.

 

2023ರ ಡಿಸೆಂಬರ್‍‌ 7ರಂದು ಹೊರಡಿಸಿರುವ ಕಾರಣ ಕೇಳುವ ಸೂಚನಾ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೇ ವರ್ಗಾವಣೆಗೊಂಡ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಇನ್ಸ್‌ಪೆಕ್ಟರ್ ‌ಗಳನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸಲು ಮುಂದಾಗಿದೆಯಾದರೂ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕಡೆಯ ಅವಕಾಶವನ್ನೂ ನೀಡಿದೆ.

 

2023ರ ಜೂನ್‌ 2, ಸೆ.16, ಸೆ.22, ಅಕ್ಟೋಬರ್‍‌ 3, ನವೆಂಬರ್‍‌ 17, 18 ಮತ್ತು 27ರಂದು ಪೊಲೀಸ್‌ ಇನ್ಸ್‌ಪೆಕ್ಟರ್‍‌ ವೃಂದದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್‌ ಇಲಾಖೆಯು ಆದೇಶ ಹೊರಡಿಸಿತ್ತು. ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ವರ್ಗಾವಣೆ ಪಟ್ಟಿಯು ಅನುಮೋದಿತಗೊಂಡಿತ್ತು. ಆದರೂ ಈ ಪೈಕಿ 44 ಇನ್ಸ್‌ಪೆಕ್ಟರ್‍‌ಗಳು ವರ್ಗಾವಣೆಗೊಂಡ ಜಾಗಕ್ಕೆ ವರದಿ ಮಾಡಿಕೊಂಡಿಲ್ಲ. ಇದು ಪೊಲೀಸ್‌ ಇಲಾಖೆಯಲ್ಲಿನ ಅಶಿಸ್ತಿಗೆ ಹಿಡಿದ ಕೈಗನ್ನಡಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ವರ್ಗಾವಣೆಗೊಂಡಿದ್ದ ಇನ್ಸ್‌ಪೆಕ್ಟರ್‍‌ಗಳ ಪೈಕಿ 44 ಮಂದಿ ಇನ್ಸ್‌ಪೆಕ್ಟರ್‍‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಹೀಗಾಗಿ ಇವರೆಲ್ಲರ ವಿರುದ್ಧವೂ ಕರ್ತವ್ಯಲೋಪ ಮತ್ತು ಹಿರಿಯ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿರುವ ಆಪಾದನೆ ಹೊರಿಸಿರುವುದು ನೋಟೀಸ್‌ನಿಂದ ತಿಳಿದು ಬಂದಿದೆ.

 

‘ನೀವುಗಳು ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಇದುವರೆಗೂ ವರದಿ ಮಾಡಿಕೊಳ್ಳದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತೀರಿ. ಸದರಿ ಪೊಲೀಸ್ ಠಾಣೆ ಮತ್ತು ಘಟಕಗಳಲ್ಲಿನ ಕಾರ್ಯನಿರ್ವಹಣೆ ಕುಂಠಿತಗೊಳ್ಳಲು ಪರೋಕ್ಷವಾಗಿ ಕಾರಣರಾಗಿದ್ದೀರಿ. ಕೆಸಿಎಸ್‌ (ನಡತೆ) ನಿಯಮಗಳು 2021) ಹಾಗೂ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿದ್ದೀರಿ. ಈ ಮೂಲಕ ನಿಮ್ಮ ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿ ಕರ್ತವ್ಯಲೋಪವೆಸಗಿರಿರುತ್ತೀರಿ,’ ಎಂದು ಸೂಚನಾ ಪತ್ರದಲ್ಲಿ ಆರೋಪ ಹೊರಿಸಿರುವುದು ಗೊತ್ತಾಗಿದೆ.

 

ವರ್ಗಾವಣೆ ಸಮಯದಲ್ಲಿ ವರದಿ ಮಾಡದೇ ಇರುವ ಗೈರು ಹಾಜರಿ ಅವಧಿಯನ್ನು ಇತ್ಯರ್ಥ ಪಡಿಸುವ ಬಗ್ಗೆ ಸರ್ಕಾರದ ಆದೇಶವನ್ನೂ ಹೊರಡಿಸಲಾಗಿದೆ.

 

ಅದೇ ರೀತಿ ‘ ನಿಮ್ಮ  ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮನ್ನು ಕರ್ನಾಟಕ ರಾಜ್ಯ ಪೊಲೀಸ್‌ (ಶಿಸ್ತು ನಡವಳಿ)ನಿಯಮಗಳು 1965/89ರ ನಿಯಮ 5ರ ಪ್ರಕಾರ ಸೇವೆಯಿಂದಲೇ ಅಮಾನತುಗೊಳಿಸಿ ಮತ್ತು ನಿಯಮ 6ರ ಪ್ರಕಾರ ಇಲಾಖೆ ವಿಚಾರಣೆಗೆ ಉದ್ದೇಶಿಸಲಾಗಿದೆ,’ ಎಂದು ಸೂಚನಾ ಪತ್ರದಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

 

ವರ್ಗಾವಣಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಪೊಲೀಸ್‌ ಇಲಾಖೆಯು ಕಡೆಯ ಅವಕಾಶವನ್ನೂ ನೀಡಿದೆ. ‘ಕೂಡಲೇ ವರದಿ ಮಾಡಿಕೊಳ್ಳದಿದ್ದಲ್ಲಿ ಅಮಾನತುಗೊಳಿಸಿ ನಿಮ್ಮ ವಿರುದ್ಧ ಮೇಲೆ ಸೂಚಿಸಿರುವಂತೆ ಏಕೆ ಶಿಸ್ತು ಕ್ರಮ ಜರುಗಿಸಬಾರದು,’ ಎಂಬ ವಿವರಣೆ ಸಲ್ಲಿಸಲು ಅವಕಾಶವನ್ನೂ ನೀಡಿದೆ.

 

ವರದಿ ಮಾಡಿಕೊಳ್ಳದ ಇನ್ಸ್‌ಪೆಕ್ಟರ್‍‌ಗಳ ಪಟ್ಟಿ

 

ಹರೀಶ್‌ ಬಿ ಸಿ (ಪಿಐ ಸಿಐಡಿ ಘಟಕ್ಕೆ ವರ್ಗಾವಣೆ ಆದೇಶದಲ್ಲಿ ಇರುವವರು), ಅರುಣ್‌ ಎಸ್‌ ಮುರುಗುಂಡಿ (ಲೋಕಾಯುಕ್ತ) ಈಶ್ವರಿ (ಲೋಕಾಯುಕ್ತ), ಕುಮಾರ್‍ ಎ ಪಿ ‌ ( ಲೋಕಾಯುಕ್ತ), ರವಿಕುಮಾರ್‍‌ ಆರ್‍‌ ಜಿ (ರಾಜ್ಯ ಗುಪ್ತವಾರ್ತೆ), ಸತೀಶ್‌ ಎಸ್‌ ಹೆಚ್‌ (ಲೋಕಾಯುಕ್ತ), ಎಸ್‌ ಎಸ್‌ತೇಲಿ (ಲೋಕಾಯುಕ್ತ), ಸಿದ್ದೇಶ ಎಂ ಡಿ (ಲೋಕಾಯುಕ್ತ), ವಿಜಯ್‌ ಎ ಮುರುಗುಂಡಿ (ಲೋಕಾಯುಕ್ತ), ಯೆರಿಸ್ವಾಮಿ (ವಿವಿಐಪಿ ಭದ್ರತೆ), ಗುರುಪ್ರಸಾದ್‌ (ಐಎಸ್‌ಡಿ), ಉದಯರವಿ (ಟಿಟಿಐ), ಮಂಜೇಗೌಡ (ಟಿಟಿಐ), ಷಣ್ಮುಖಪ್ಪ ಜಿ ಆರ್‍‌ (ಲೋಕಾಯುಕ್ತ), ರಾಘವೇಂದ್ರಬಾಬು (ಲೋಕಾಯುಕ್ತ),

 

ಸತೀಶ್‌ ಎಂ ಆರ್‍‌ (ಕಾವೂರು, ಮಂಗಳೂರು ನಗರ), ಲಕ್ಷ್ಮಯ್ಯ ಎಂ ಬಿ (ಲೋಕಾಯುಕ್ತ), ಕಾಳಪ್ಪ ಬಡಿಗೇರ್‍‌ (ಲೋಕಾಯುಕ್ತ), ಬಸಲಿಂಗಯ್ಯ ಸುಬ್ರಾಪುರ್‍‌ ಮಠ್‌ (ಸಿಐಡಿ), ಮಂಜುನಾಥ್‌ ಡಿ ಆರ್‍‌ (ಎಟಿಸಿ, ಬೆಂಗಳೂರು ಘಟಕ), ಮುನಿರೆಡ್ಡಿ (ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ), ರೋಹಿತ್‌ ಸಿ ಇ (ಸಾಗರ ಗ್ರಾಮಾಂತರ ವೃತ್ತ), ಸಂದೀಪ್‌ ಪಿ ಕೌರಿ (ಎಸ್‌ ಆರ್‍‌ ಪುರ ವೃತ್ತ, ಚಿಕ್ಕಮಗಳೂರು), ಸತೀಶ್‌ ಜೆ ಜೆ (ಬರ್ಕೆ, ಮಂಗಳೂರು ನಗರ), ಶರಣಬಸಪ್ಪ (ಐಜಿಪಿ ಕಚೇರಿ, ಕಲ್ಬುರ್ಗಿ), ಶಿವಕುಮಾರ್‍‌ ಹೆಚ್‌ ಆರ್‍‌ (ಶೃಂಗೇರಿ ), ಶಿವಕುಮಾರ್‍‌ ಟಿ ಸಿ (ಲೋಕಾಯುಕ್ತ),

 

ಶಿವರಾಜು ಎಸ್‌ (ವಿವಿಐಪಿ ಭದ್ರತೆ, ಬೆಂಗಳೂರು), ಸುರೇಶ್‌ ಕೆ (ಸಂಚಾರ, ಯೋಜನೆ, ಬೆಂಗಳೂರು), ವರುಣ್‌ಕುಮಾರ್‍‌ ಎಂ ಆರ್‍‌ (ಲೋಕಾಯುಕ್ತ), ವಸಂತ್‌ ಎಸ್‌ ಹೆಚ್‌ (ಮಂಗಳೂರು ಪೂರ್ವ ಸಂಚಾರ ಠಾಣೆ), ವೆಂಕಟೇಶ್‌ ಎಸ್‌ ಹೆಚ್‌ (ಸಿಐಡಿ), ಚಂದ್ರಶೇಖರ್‍‌ ಎನ್‌ ಹರಿಹರ (ಕೋಟೆ, ಶಿವಮೊಗ್ಗ), ಸ್ವರ್ಣ ಜಿ ಎಸ್‌ (ಬಸವನಹಳ್ಳಿ ಚಿಕ್ಕಮಗಳೂರು), ಶ್ರೀನಿವಾಸ್‌ ಬಿ ಎಂ (ಲೋಕಾಯುಕ್ತ), ಬಸವರಾಜ್‌ ಎಸ್ ತೇಲಿ (ಸಿಐಡಿ), ಶ್ರೀಧರ್‍‌ ವಸಂತ್‌ ಸತಾರೆ (ಪಿಟಿಎಸ್‌ ಖಾನಾಪುರ), ಜೀವನ್‌ ಕೆ (ಲೋಕಾಯುಕ್ತ), ಮೋಹನ್‌ ಕುಮಾರ್‍‌ ಎಂ (ಲೋಕಾಯುಕ್ತ), ಲಕ್ಷ್ಮಿನಾರಾಯಣ ಕೆ (ಐಎಸ್‌ಡಿ), ರಾಮಪ್ಪ ವಿ ಸಾವಳಗಿ (ಡಿಎಸ್‌ಬಿ ಬೀದರ್‍‌), ಶರಣಪ್ಪಗೌಡ ಬಿ ಗೌಡರ್‍‌ (ಲೋಕಾಯುಕ್ತ), ಕರುಣೇಶ್‌ ಗೌಡ (ಲೋಕಾಯುಕ್ತ), ದೌಲತ್‌ ಎನ್‌ ಕುರಿ (ಡಿಎಸ್‌ಬಿ ಗದಗ್‌) ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ ಎಂಬುದು ತಿಳಿದು ಬಂದಿದೆ.

 

ಕಳೆದ ವರ್ಷದಲ್ಲಿಯೂ ಪೊಲೀಸ್‌ ಇನ್ಸ್‌ಪೆಕ್ಟರ್‍‌ಗಳು ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿ, ಕರ್ತವ್ಯಲೋಪ ಎಸಗಿದ್ದರು. ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ 38 ಇನ್‌ಸ್ಪೆಕ್ಟರ್‌ಗಳು ವಿರುದ್ಧ ಕಠಿಣ ಕ್ರಮವನ್ನೂ ಕೈಗೊಂಡಿಲ್ಲ.

the fil favicon

SUPPORT THE FILE

Latest News

Related Posts