ಗ್ಯಾರಂಟಿಗಳಿಗೆ ಭರಪೂರ ಅನುದಾನ; ಹಿಂದುಳಿದ, ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಿಲ್ಲ ಬಿಡಿಗಾಸು

ಬೆಂಗಳೂರು; ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆ  ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿ ಬೀಗುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ವಿವಿಧ ಸಮುದಾಯಗಳ ಅಭಿವೃದ್ಧಿ, ರೈತರ ಮಕ್ಕಳಿಗೆ ಮತ್ತು ಪರಿಶಿಷ್ಟ ಜಾತಿ ಯ 1ರಿಂದ 8ನೇ ತರಗತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರೆ ಇಲಾಖಾವಾರು ಫಲಾನುಭವಿ ಕಾರ್ಯಕ್ರಮಗಳಿಗೆ ಕಳೆದ 6 ತಿಂಗಳಲ್ಲಿ ನಿರೀಕ್ಷಿತ ಅನುದಾನ ಬಿಡುಗಡೆ ಮಾಡಿಲ್ಲ.

 

ಕಳೆದ 6 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಕೋಟ್ಯಂತರ ರುಪಾಯಿ ಮೊತ್ತದ ಜಾಹೀರಾತು ನೀಡಿ ಸಂಭ್ರಮಿಸುತ್ತಿರುವ ಮಧ್ಯೆಯೇ ಅಹಿಂದ ವರ್ಗದ ಕಲ್ಯಾಣ ಯೋಜನೆಗಳಿಗೆ ಕಡಿಮೆ ಅನುದಾನವನ್ನು ಬಿಡುಗಡೆ ಮಾಡಿರುವುದು ಮುನ್ನೆಲೆಗೆ ಬಂದಿದೆ.

 

ನವೆಂಬರ್‍‌ 18ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಜ್ಯ ಯೋಜನೆಯಡಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ (1ರಿಂದ 8 ನೇ ತರಗತಿ) ಕ್ಕೆಂದು 114.63 ಕೋಟಿ ರು. ನೀಡಿದ್ದರೂ ಸಹ ಅಕ್ಟೋಬರ್‍‌ ಅಂತ್ಯದವರೆಗೆ ಕೇವಲ 0.39 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿಯೂ ನಯಾಪೈಸೆಯನ್ನೂ ವೆಚ್ಚ ಮಾಡಿಲ್ಲ.

 

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕೇಂದ್ರ ಪುರಸ್ಕೃತ ಯೋಜನೆ ಅಡುಗೆಯವರು, ಸಹಾಯಕರುಗಳಿಗೆ ಗೌರವ ಧನ, ಅಡುಗೆ ಮನೆ ನಿರ್ವಹಣೆ (ಪ್ರಧಾನ ಮಂತ್ರಿ ಪೋಷಣ ಶಕ್ತಿ)ಗೆಂದು 216.97 ಕೋಟಿ ರು ನೀಡಿದ್ದರೂ ಅಕ್ಟೋಬರ್‍‌ ಅಂತ್ಯದವರೆಗೆ ಬಿಡಿಗಾಸನ್ನೂ ನೀಡಿಲ್ಲ ಎಂಬುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

ಹಿಂದುಳಿದ ವರ್ಗಗಳು ಇಲಾಖೆಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 191 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಿದ್ದರೂ ಅಕ್ಟೋಬರ್‍‌ ಅಂತ್ಯದವರೆಗೆ ಬಿಡಿಗಾಸನ್ನೂ ಸರ್ಕಾರವು ಬಿಚ್ಚಿಲ್ಲ. ಅದೇ ರೀತಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕಾಗಿ 143.00 ಕೋಟಿ ರು. ನೀಡಿದ್ದರೂ ಸಹ ಅಕ್ಟೋಬರ್‍‌ ಅಂತ್ಯದವರೆಗೆ ಬಿಡಿಗಾಸನ್ನೂ  ನೀಡಿಲ್ಲ. ಹೀಗಾಗಿ ವೆಚ್ಚವೂ ಶೂನ್ಯವಾಗಿದೆ.

 

ಆದರೆ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿಗೆ ಒದಗಿಸಿದ್ದ 9,000 ಕೋಟಿ ರು. ಅನುದಾನದ ಪೈಕಿ 2,901.56 ಕೋಟಿ ರು.ಬಿಡುಗಡೆಯಾಗಿದೆ. ಈ ಪೈಕಿ 2,151.56 ಕೋಟಿ ರು. ಖರ್ಚಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.23.91ರಷ್ಟು ವೆಚ್ಚವಾದಂತಾಗಿದೆ. ಬಿಡುಗಡೆಗೆ 6,848.44 ಕೋಟಿ ರು. ಬಾಕಿ ಇರಿಸಿಕೊಂಡಿದೆ.

 

ಹಾಗೆಯೇ ಅನ್ನಭಾಗ್ಯ ಯೋಜನೆ ಯಡಿ 10,265 ಕೋಟಿ ರು ಪೈಕಿ 3,423.33 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ 2,504.83 ಕೋಟಿ ರು. ಖರ್ಚಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.24.40ರಷ್ಟಿದೆ. ಬಿಡುಗಡೆಗೆ 7,760.17 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

ಗೃಹ ಲಕ್ಷ್ಮಿ ಯೋಜನೆಗೆ 17,500.00 ಕೋಟಿ ರು. ಅನುದಾನ ಒದಗಿಸಿದೆ. ಈ ಪೈಕಿ 5,700 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 3,883.34 ಕೋಟಿ ರು.ಖರ್ಚಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.22.19ರಷ್ಟಿದೆ. ಬಿಡುಗಡೆಗೆ ಇನ್ನೂ 13,616.66 ಕೋಟಿ ರು. ಬಾಕಿ ಇರಿಸಿಕೊಂಡಿದೆ.

 

ಅದೇ ರೀತಿ ಶಕ್ತಿ ಯೋಜನೆಗೆ 2,800 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ ಬಿಡುಗಡೆಯಾಗಿದ್ದ 1,080 ಕೋಟಿ ರು. ಖರ್ಚಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.38.58ರಷ್ಟಿದೆ. ಬಿಡುಗಡೆಗೆ 1,719.78 ಕೋಟಿ ರು. ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

 

ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಮರು ಪಾವತಿಗೆ ಆಯವ್ಯಯದಲ್ಲಿ ಒಟ್ಟು 160.00 ಕೋಟಿ ರು. ಒದಗಿಸಲಾಗಿತ್ತು. ಈ ಪೈಕಿ ಅಕ್ಟೋಬರ್‍‌ ಅಂತ್ಯದವರೆಗೆ ಕೇವಲ 2.29 ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ 0.10 ಕೋಟಿ ರು. ವೆಚ್ಚವಾಗಿದೆ. ಬಿಡುಗಡೆಗೆ 159.90 ಕೋಟಿ ರು. ಬಾಕಿ ಇರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 110.00 ಕೋಟಿ ರುಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿತ್ತು. ಇದರಲ್ಲಿ ಬಿಡುಗಡೆಯಾಗಿದ್ದ 1.00 ಕೋಟಿ ರು. ಖರ್ಚಾಗಿದೆ.

 

ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಕ್ಕೆ 2,445.80 ಕೋಟಿ ರು. ಪೈಕಿ 667.24 ಕೋಟಿ ರು. ಬಿಡುಗಡೆಯಾಗಿದೆ. ಅದರೆ 889.26 ಕೋಟಿ ರು. ವೆಚ್ಚವಾಗಿದೆ ಎಂದು ಆರೋಗ್ಯ ಇಲಾಖೆಯು ಅಂಕಿ ಅಂಶವನ್ನು ಮಂಡಿಸಿದೆ.

 

ಹೊಸ ಬೆಳೆ ವಿಮಾ ಯೋಜನೆಗೆ 600 ಕೋಟಿ ರು.ನಲ್ಲಿ ಬಿಡುಗಡೆಯಾಗಿರುವ 200 ಕೋಟಿಯೂ ಖರ್ಚಾಗಿದೆ. ಬಿಡುಗಡೆಗೆ 400 ಕೋಟಿ ರು. ಬಾಕಿ ಇದೆ. ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣಕ್ಕೆ 502.83 ಕೋಟಿ ರು ನಲ್ಲಿ 202.49 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ 176.40 ಕೋಟಿ ರು. ಖರ್ಚಾಗಿದೆ. ಬಿಡುಗಡೆಗೆ 326.43 ಕೋಟಿ ರು.ಬಾಕಿ ಇರುವುದು ಗೊತ್ತಾಗಿದೆ.

 

ಕೇಂದ್ರ ಪುರಸ್ಕೃತ ಯೋಜನೆಯ ಜಲ್‌ ಜೀವನ್‌ ಮಿಷನ್‌ (ಗ್ರಾಮೀಣ ಕುಡಿಯುವ ನೀರಿನ ಯೋಜನೆ)ಗೆ 9,250.95 ಕೋಟಿ ರು. ನಲ್ಲಿ 1,900.00 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ 2,845.98 ಕೋಟಿ ರು. ಖರ್ಚಾಗಿದೆ. ಬಿಡುಗಡೆಗೆ 6,404.97 ಕೋಟಿ ರು. ಬಾಕಿ ಇದೆ.

 

ರಾಷ್ಟ್ರೀಯ ತೋಟಗಾರಿಕೆ ಅಭಿಯಾನಕ್ಕೆ 140.07 ಕೋಟಿ ರು. ಪೈಕಿ 43.20 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 37.59 ಕೋಟಿ ರು. ಖರ್ಚಾಗಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ 107.33 ಕೋಟಿ ರು. ನೀಡಿದ್ದರೂ ನಯಾ ಪೈಸೆ ಬಿಡುಗಡೆಯಾಗಿಲ್ಲ.

 

ಡಾ ಬಿ ಆರ್‍‌ ಅಂಬೇಡ್ಕರ್‍‌ ನಿವಾಸ್‌ ಯೋಜನೆಗೆ 1,268.69 ಕೋಟಿ ರು. ಅನುದಾನದ ಪೈಕಿ 250.00 ಕೋಟಿ ರು .ಬಿಡುಗಡೆಯಾಗಿದೆ. ಇದರಲ್ಲಿ 306.79 ಕೋಟಿ ರು ವೆಚ್ಚವಾಗಿದೆ ಎಂದು ತೋರಿಸಿದೆ. ಬಿಡುಗಡೆಗೆ 961.90 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ನಗರ ಜೊತೆಗೆ ಡಾ ಬಿ ಆರ್‍‌ ಅಂಬೇಡ್ಕರ್‍‌ ವಸತಿ ಯೋಜನೆಯಡಿ ರಾಜ್ಯದ ಕೊಡುಗೆಯಾಗಿ 559.17 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಈ ಪೈಕಿ ಶೂನ್ಯ ಬಿಡುಗಡೆಯಾಗಿದೆ. ಆದರೆ 142.54 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ತೋರಿಸಿರುವುದು ತಿಳಿದು ಬಂದಿದೆ.

 

ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) 723.50 ಕೋಟಿ ರು. ಅನುದಾನದ ಪೈಕಿ ಬಿಡುಗಡೆ ಮಾಡಿದ್ದು ಕೇವಲ 3.16 ಕೋಟಿ ರು. ಮಾತ್ರ. ಆದರೆ 104.49 ಕೋಟಿ ರು. ವೆಚ್ಚವಾಗಿದೆ ಎಂದು ತೋರಿಸಲಾಗಿದೆ.

the fil favicon

SUPPORT THE FILE

Latest News

Related Posts