ಸಿಬಿಐ ತನಿಖೆ ಆದೇಶ; ಸ್ಪೀಕರ್‍‌ ಅನುಮತಿ ಅಗತ್ಯವಿಲ್ಲ, ಅವರ ವ್ಯಾಪ್ತಿಗೂ ಒಳಪಡುವುದಿಲ್ಲ, ದಾರಿತಪ್ಪಿಸಿದ್ದೇಕೆ?

ಬೆಂಗಳೂರು: ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣವೂ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ವಹಿಸುವುದು ಮತ್ತು ವಿಚಾರಣೆಗೆ ಅನುಮತಿ ನೀಡುವ ಸಂಬಂಧ ವಿಧಾನಸಭಾಧ್ಯಕ್ಷರ ಅನುಮತಿ ಅಗತ್ಯವೇ ಇಲ್ಲ. ಹಾಗೆಯೇ ಈ ಪ್ರಕರಣವು ಸಭಾಧ್ಯಕ್ಷರ ವ್ಯಾಪ್ತಿಗೂ ಒಳಪಡುವುದಿಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ.

 

ಆದರೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ವಿರುದ್ಧ ಸಿಬಿಐ ತನಿಖೆ ನಡೆಸಲು ಹೊರಡಿಸಿದ್ದ ಆದೇಶಕ್ಕೆ ವಿಧಾನಸಭಾಧ್ಯಕ್ಷರ ಅನುಮತಿ ಪಡೆದೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವ ಸಂಪುಟದ ಬಹುತೇಕ ಸಚಿವರು ಮತ್ತು ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬ ಅಭಿಪ್ರಾಯವು ವಿಧಾನಸಭೆ ಸಚಿವಾಲಯದಲ್ಲಿ ವ್ಯಕ್ತವಾಗಿದೆ.

 

ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿರುವುದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಾಸ್ತವ ಅಂಶಗಳನ್ನು ಮುಚ್ಚಿಟ್ಟು ದಾರಿ ತಪ್ಪಿಸಿರುವುದು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಡಿ ಕೆ ಶಿವಕುಮಾರ್‍‌ ವಿರುದ್ಧ ಸಿಬಿಐ ತನಿಖೆ; ಬಿಜೆಪಿ ಸರ್ಕಾರದ ಆದೇಶ ಹಿಂಪಡೆಯಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸಂಸದ ಹಾಗೂ ಹಾಲಿ ಶಾಸಕ ಸಿ.ಎಸ್​.ಪುಟ್ಟರಾಜು, ಶಾಸಕರಾಗಿದ್ದ ಎಂ.ಶ್ರೀನಿವಾಸ್​ ಮತ್ತು ಎ.ಬಿ.ರಮೇಶ್​ ಅವರ ವಿರುದ್ಧ ಸಿಬಿಐ ವಿಚಾರಣೆ ನಡೆಸುವ ಸಂಬಂಧ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯುವ ಅಗತ್ಯವೇ ಇಲ್ಲ ಎಂದು ಅಂದಿನ ಸ್ಪೀಕರ್‍‌ ಮತ್ತು ವಿಧಾನಸಭೆ ಸಚಿವಾಲಯವೇ ನಿರ್ದಿಷ್ಟ ಮತ್ತು ಸ್ಪಷ್ಟವಾಗಿ ಉತ್ತರ ಒದಗಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಿಬಿಐ ತನಿಖೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆಯದೇ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡಿರುವುದು ಕಾನೂನು ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ಬೆನ್ನಲ್ಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷರು ತಳೆದಿದ್ದ ನಿಲುವು ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

 

ವಿಶೇಷವೆಂದರೆ ಸಿದ್ದರಾಮಯ್ಯ ಅವರು 2017ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮತ್ತು ವಿಚಾರಣೆಗೆ ಅನುಮತಿ ನೀಡುವ ಸಂಬಂಧ ಡಿಪಿಎಆರ್‍‌ಗೆ  ಪತ್ರ ಬರೆದಿದ್ದರು. ಅದೇ ಪತ್ರಕ್ಕೆ ವಿಧಾನಸಭೆ ಸಚಿವಾಲಯ ಸ್ಪಷ್ಟವಾಗಿ ಉತ್ತರವನ್ನೂ ನೀಡಿತ್ತು.

 

ಮೂಡಾ ಪ್ರಕರಣದ ಹಿನ್ನೆಲೆ

 

ರಾಜ್ಯ ಸರ್ಕಾರದಿಂದ ಅಭಿಯೋಜನಾ ಮಂಜೂರಾತಿಗೆ ಬಾಕಿ ಇರುವ ಪ್ರಕರಣಗಳಲ್ಲಿ ಮಂಜೂರಾತಿ ಬಾಕಿ ಉಳಿಸಿಕೊಂಡಿರುವ ಕಾರಣ ಪ್ರಕರಣದ ವಿಚಾರಣೆಗೆ ತಡೆಯಾಗುತ್ತಿದೆ ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ.ಚೌಧುರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

 

ಈ ಪತ್ರ ಆಧರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

 

ಮುಖ್ಯಮಂತ್ರಿ ಸೂಚನೆಯಂತೆ ನಗರಾಭಿವೃದ್ಧಿ ಇಲಾಖೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ, ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಬಗ್ಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು. ಈ ಕುರಿತು ವಿಧಾನಸಭೆಯ ಅಂದಿನ ಉಪ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಎಂ.ಶ್ರೀನಿವಾಸ್​, ಸಿ.ಎಸ್​.ಪುಟ್ಟರಾಜು, ಎ.ಬಿ.ರಮೇಶ್​ ವಿರುದ್ಧ ಭ್ರಷ್ಟಾಚಾರ ಅಧಿನಿಯಮ 1988ರ ಪ್ರಕರಣ 19(1)ರ ಅಡಿಯಲ್ಲಿ ಸಭಾಧ್ಯಕ್ಷರು ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

 

 

 

ಶಾಸಕರು ಸರ್ಕಾರಿ ನೌಕರರಲ್ಲದ ಕಾರಣ ಅವರ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಮೇಲಾಗಿ ಈ ಪ್ರಕರಣ ಸದನದ ಹೊರಗೆ ನಡೆದಿರುವ ಕಾರಣ ಸಭಾಧ್ಯಕ್ಷರ ವ್ಯಾಪ್ತಿಗೂ ಒಳಪಡುವುದಿಲ್ಲ.

 

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿ ಆಗಿದ್ದ ಶಾಸಕರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲೂ ಸಭಾಧ್ಯಕ್ಷರು, ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಬಿಐಗೆ ಪತ್ರ ಬರೆದಿದ್ದರು.

 

ಮಂಡ್ಯದ ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಬಡಾವಣೆಯಲ್ಲಿ 107 ಬಿಡಿ ನಿವೇಶನಗಳನ್ನು ಹಂಚಿಕೆ ಆಗಿತ್ತು. ನಿವೇಶನ ಪಡೆದವರ ಪೈಕಿ ಶಾಸಕರು, ಕೆಲ ಚುನಾಯಿತ ಜನಪ್ರತಿನಿಧಿಗಳಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಲಿಕ್ಕೆ ರಾಜ್ಯ ಸರ್ಕಾರವೇ ನೇರವಾಗಿ ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪ್ರಾಧಿಕಾರದ ಕೆಳ ಹಂತದ ನೌಕರರ ವಿರುದ್ಧ ತತ್​ ಕ್ಷಣವೇ ವಿಚಾರಣೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದನ್ನು ಸ್ಮರಿಸಬಹುದು.

 

ಯಾವುದೇ ಸರ್ಕಾರಿ ಸೇವೆಯಲ್ಲಿದ್ದವರ ವಿರುದ್ಧ ತನಿಖೆಯಾಗಬೇಕಾದರೆ ಸರ್ಕಾರದ ಅನುಮತಿ ಅವಶ್ಯ. 2019 ರಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ಅನುಮತಿಸಿದಾಗ ಅವರು ಶಾಸಕರಾಗಿದ್ದರು. ಇವರ ವಿರುದ್ಧ ತನಿಖೆಗೆ ಕಾನೂನು ರೀತ್ಯವಾಗಿ ವಿಧಾನ ಸಭಾಧ್ಯಕ್ಷರಿಂದ ಅನುಮತಿ ಪಡೆದು ನಂತರ ಮುಖ್ಯಮಂತ್ರಿಗಳು ತನಿಖೆ ಕೈಗೊಳ್ಳಲು ಆದೇಶಿಸಬೇಕು.

 

ಆದರೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆದಿಲ್ಲ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕವಾಗಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ರೀತಿ ಮಾಡುವುದು ಕಾನೂನಿನ ರೀತ್ಯ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಸ್ಮರಿಸಬಹುದು.

 

ಸಿಬಿಐ ತನಿಖೆಗೆ ವಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರಕರಣವನ್ನು ಸಚಿವ ಸಂಪುಟ ಹಿಂಪಡೆಯುವ ನಿರ್ಧಾರ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಾನೂನು ಎಲ್ಲರಿಗೂ ಒಂದೇ, ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದ್ದು, ತೀರ್ಪು ಬರುವ ಮೊದಲೇ ಅಧಿಕಾರ ದುರ್ಬಳಕೆ ಮಾಡಿ ಕೇಸು ಮುಚ್ಚಿ ಹಾಕುವ ಪ್ರಯತ್ನ ಒಳ್ಳೆಯದಲ್ಲ ಎಂದು ಬಿಜೆಪಿಯೂ ಟೀಕಿಸಿದೆ.

SUPPORT THE FILE

Latest News

Related Posts