ಸಾವಿರ ಕೋಟಿ ರು ಮೌಲ್ಯದ 246 ಎಕರೆ ಖಾಸಗಿ ವ್ಯಕ್ತಿಗಳಿಗೆ ಮಂಜೂರು; ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶ

ಬೆಂಗಳೂರು;  ವಿವಿಧ ಸರ್ವೆ ನಂಬರ್‌ಗಳಲ್ಲಿನ ಅಂದಾಜು 1,000 ಕೋಟಿ ರು. ಮೌಲ್ಯದ ಒಟ್ಟಾರೆ  246.08 ಎಕರೆ ಜಮೀನನ್ನು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ  ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಬೃಹತ್‌ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕ ಐಎಎಸ್‌ ಅಧಿಕಾರಿ ಎಸ್‌ ರಂಗಪ್ಪ ಅವರು ಅವರು ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ (ವಿಶೇಷ ಜಿಲ್ಲಾಧಿಕಾರಿ (1)(ಪ್ರಭಾರ) ಮತ್ತು 2 ಹುದ್ದೆಯಲ್ಲಿ) ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿ ಆದೇಶಿಸಿದ್ದರು ಎಂದು ತಿಳಿದು ಬಂದಿದೆ.

 

ಆನೇಕಲ್‌ ತಾಲೂಕಿನ ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಒಟ್ಟು 141.31 ಎಕರೆ ಹಾಗೂ ಬೆಂಗಳೂರು ದಕ್ಷಿಣ, ಯಲಹಂಕ ಮತ್ತು ಬೆಂಗಳೂರು ಉತ್ತರ ಅಪರ, ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯಲ್ಲಿ 105.49 ಎಕರೆ ಸೇರಿ ಒಟ್ಟು 246.08 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿ ಆದೇಶಿಸಿದ್ದರು ಎಂದು ಗೊತ್ತಾಗಿದೆ.

 

ಬೆಂಗಳೂರು ನಗರ ಜಿಲ್ಲೆ ಮತ್ತು ಆನೇಕಲ್‌ ತಾಲೂಕಿನ ವ್ಯಾಪ್ತಿಯಲ್ಲಿ ವಿವಿಧ ಸರ್ವೆ ನಂಬರ್‌ಗಳ ಒಟ್ಟು 41 ಪ್ರಕರಣಗಳಲ್ಲಿ ಹೊರಡಿಸಿರುವ ಆದೇಶಗಳು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ತಿಳಿದು ಬಂದಿದೆ.

 

ಮತ್ತೊಂದು ವಿಶೇಷ ಏನಂದರೆ 2019ರ ಫೆ.26ರ ಒಂದೇ ದಿನದಂದೇ 24 ಪ್ರಕರಣಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, 2019ರ ಮೇ 4ರಂದು ಇಷ್ಟೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ಗಳಿಗೆ ನೆನಪೋಲೆಯನ್ನು ಕೂಡ ಕಳಿಸಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ. ಈ ಎಲ್ಲಾ ಪ್ರಕರಣಗಳ ಕುರಿತು ಕಳೆದ 5 ವರ್ಷಗಳಿಂದಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

 

ಈ ಎಲ್ಲಾ ಪ್ರಕರಣಗಳ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಮತ್ತು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶ ಹೊರಡಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಅಂದಿನ  ವಿಶೇಷ ಜಿಲ್ಲಾಧಿಕಾರಿ ಎಸ್‌ ರಂಗಪ್ಪ ಅವರನ್ನು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ಮುಂದುವರೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಗಳೀಗೆ ಮಂಜೂರು ಮಾಡಿ ಹೊರಡಿಸಿದ್ದ ಕಂದಾಯ ಇಲಾಖೆಯ ಆದೇಶಗಳನ್ನು ಪಡೆಯಲು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿತ್ತಾದರೂ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(ಬಿ) ಅಡಿಯಲ್ಲಿ ಅಂಶಗಳನ್ನು ಪ್ರಸ್ತಾವಿಸಿ ಕಡತಗಳನ್ನು ಒದಗಿಸಲು ನಿರಾಕರಿಸಿದೆ.

 

246.08 ವಿಸ್ತೀರ್ಣದ ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಮಂಜೂರು ಮಾಡಿರುವ ಆದೇಶಗಳ ಸಂಖ್ಯೆಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ದಕ್ಷಿಣ ತಾಲೂಕಿನ ಹೊಮ್ಮದೇವನಹಳ್ಳಿ ಗ್ರಾಮದ ಸರ್ವೆ ನಂಬರ್‌ 57/40ರಲ್ಲಿದ್ದ 17 ಎಕರೆ ಜಮೀನು, ಆನೇಕಲ್‌ ತಾಲೂಕಿನ ಮಹಾಲಿಂಗಪುರ ಗ್ರಾಮದ ಸರ್ವೆ ನಂಬರ್‌ 47ರಲ್ಲಿನ 10 ಎಕರೆ, ಮಹಂತಲಿಂಗಪುರ ಗ್ರಾಮದ ಸರ್ವೆ ನಂಬರ್‌ 56/ಪಿ ರಲ್ಲಿನ 11 ಎಕರೆ, ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಗ್ರಾಮದ ಸರ್ವೆ ನಂಬರ್‌ 12ರಲ್ಲಿ 19-23 ಎಕರೆ, ಬಿ ಎಂ ಕಾವಲ್‌ ಗ್ರಾಮದ ಸರ್ವೆ ನಂಬರ್‌ 31/ಪಿ 5ರಲ್ಲಿ 17 ಎಕರೆ ಜಮೀನಿಗೆ ಸಂಬಂಧಿಸಿದಂತೆ ‘ದಿ ಫೈಲ್‌’ ನಿರ್ದಿಷ್ಟ ಕಡತ, ಆದೇಶ ಸಂಖ್ಯೆ ನಮೂದಿಸಿ  ಆರ್‌ಟಿಐ ಅಡಿಯಲ್ಲಿ 2023ರ ಸೆ.15ರಂದು ಅರ್ಜಿ ಸಲ್ಲಿಸಿತ್ತು.

 

ಈ ನಾಲ್ಕು ಅರ್ಜಿಗಳಿಗೂ ಕಂದಾಯ ಇಲಾಖೆಯು 2023ರ ಅಕ್ಟೋಬರ್‌ 5ರಂದು ಒಂದೇ ತರಹದ   ಹಿಂಬರಹ ನೀಡಿದೆ.

 

‘ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧೀಕರಣವು ಯಾವ ಮಾಹಿತಿ ಪ್ರಕಟಣೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆಯೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ನ್ಯಾಯಾಂಗ ನಿಂದನೆಯಾಗಬಹುದೋ ಅಂಥ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿರತಕ್ಕದ್ದಲ್ಲ. ಈ ಹಿನ್ನೆಲೆಯಲ್ಲಿ ನೀವು ಕೋರಿರುವ ಕಡತವು ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ಕಡತವಾಗಿದ್ದು ಪ್ರಸ್ತುತ ವ್ಯವಹರಣೆಯಲ್ಲಿರುತ್ತದೆ. ವ್ಯವಹರಣೆಯಲ್ಲಿರುವ ಕಡತದ ಮಾಹಿತಿಯನ್ನು ನೀಡಲು ರಹಾ ಇರುವುದಿಲ್ಲ,’ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ಒದಗಿಸಿದ್ದಾರೆ.

 

ಪ್ರಕರಣದ ವಿವರ

 

ವಿಶೇಷ ಜಿಲ್ಲಾಧಿಕಾರಿ ಆಗಿದ್ದ ಎಸ್‌ರಂಗಪ್ಪ ಅವರು ಬೆಂಗಳೂರು ದಕ್ಷಿಣ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ 16, ಆನೇಕಲ್‌ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ 20, ಯಲಹಂಕ ತಾಲೂಕಿನಲ್ಲಿ 3, ಬೆಂಗಳೂರು ಪೂರ್ವ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 41 ಆದೇಶಗಳನ್ನು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಹೊರಡಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಇದಲ್ಲದೆ, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 22, ಆನೇಕಲ್‌ತಾಲೂಕಿನಲ್ಲಿ 23, ಯಲಹಂಕ ತಾಲೂಕಿನಲ್ಲಿ 4 ಮತ್ತು ಬೆಂಗಳೂರು ಪೂರ್ವ ತಾಲೂಕಿನಲ್ಲಿ 2 ಸೇರಿದಂತೆ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 51 ಆದೇಶಗಳನ್ನು ಎಸ್‌ ರಂಗಪ್ಪ ಅವರೇ ಹೊರಡಿಸಿದ್ದಾರೆ. ಈ ಪೈಕಿ 42 ಆದೇಶಗಳು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂಬುದು ಗೊತ್ತಾಗಿದೆ. ಉಳಿದಂತೆ ಕೇವಲ 8 ಆದೇಶಗಳು ಮಾತ್ರ ಸರ್ಕಾರದ ಪರವಾಗಿವೆ. ಆನೇಕಲ್‌ತಾಲೂಕಿನಲ್ಲಿ 1 ಪ್ರಕರಣವನ್ನು ಮಾತ್ರ ಕೈಬಿಟ್ಟಿರುವುದು ತಿಳಿದು ಬಂದಿದೆ.

 

ಆನೇಕಲ್‌ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದ 20 ಪ್ರಕರಣಗಳ ಪೈಕಿ ಈವರೆವಿಗೆ 6 ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಉಳಿದ 35 ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಲ್ಲಿ ಸಂಬಂಧಿಸಿದ ತಹಶೀಲ್ದಾರ್‌ಗಳು ವಿಫಲರಾಗಿದ್ದಾರೆ. ಅಲ್ಲದೆ, ಮೇಲ್ಮನವಿ ಸಲ್ಲಿಸುವುದು ಮತ್ತು ಸರ್ಕಾರಿ ವಕೀಲರನ್ನು ಹಾಗೂ ವ್ಯಾಜ್ಯ ನಿರ್ವಹಣಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಉದ್ದೇಶಪೂರ್ವಕವಾಗಿಯೇ ತೆವಳುತ್ತಿವೆ. ಮತ್ತೊಂದು ಸಂಶಯಕ್ಕೆಡೆ ಮಾಡಿಕೊಟ್ಟಿರುವ ಸಂಗತಿ ಏನೆಂದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರಿ ವಕೀಲರುಗಳೇ ಅಡ್ಡಿಯಾಗಿದ್ದಾರೆ ಎಂದು ಗೊತ್ತಾಗಿದೆ.

 

ಆನೇಕಲ್‌ತಾಲೂಕಿನ ಮಹಂತಲಿಂಗಾಪುರ(ಸರ್ವೆ ನಂಬರ್‌56/ಪಿ 7),ದಲ್ಲಿ 11 ಎಕರೆ, ಆನೇಕಲ್‌ ಗ್ರಾಮಾಂತರ ಸರ್ವೆ ನಂಬರ್‌53ರಲ್ಲಿನ 4 ಎಕರೆ, ಬೂತನಹಳ್ಳಿ ಸರ್ವೆ ನಂಬರ್‌64 ಪಿ 40ರಲ್ಲಿ 2 ಎಕರೆ, ಬಿಲ್ವಾರದಹಳ್ಳಿ ಸರ್ವೆ ನಂಬರ್‌6 ಪಿ22ರಲ್ಲಿ 10 ಎಕರೆ, ಬೂತನಹಳ್ಳಿ ಸರ್ವೆ ನಂಬರ್‌64ಪಿ40ರಲ್ಲಿ 2 ಎಕರೆ, ಬಿಲ್ವಾರದಹಳ್ಳಿ ಸರ್ವೆ ನಂಬರ್‌6/4 ಪಿ 11ರಲ್ಲಿ 4 ಎಕರೆ, ಮಹಂತಲಿಂಗಾಪುರ ಸರ್ವೆ ನಂಬರ್‌47ರಲ್ಲಿ 10 ಎಕರೆ, ಬಿಲ್ವಾರದಹಳ್ಳಿ ಸರ್ವೆ ನಂಬರ್‌0/1 ಪಿ 3ರಲ್ಲಿ 20.11 ಎಕರೆ, ಸರ್ವೆ ನಂಬರ್‌6/4 ಪಿ45ರಲ್ಲಿ 10 ಎಕರೆ ವಿಸ್ತೀರ್ಣದ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಿರುವುದು ತಿಳಿದು ಬಂದಿದೆ.

 

ಸರ್ವೆ ನಂಬರ್‌31/ಪಿ15ರಲ್ಲಿ 17 ಎಕರೆ, ಸರ್ವೆ ನಂಬರ್‌6/ಪಿ04ರಲ್ಲಿ 10 ಎಕರೆ, ಸರ್ವೆ ನಂಬರ್‌/ಪಿ26ರಲ್ಲಿ 6.31 ಎಕರೆ, ಸರ್ವೆ ನಂಬರ್‌6/4ಪಿ 36ರಲ್ಲಿ 6 ಎಕರೆ, ಸರ್ವೆ ನಂಬರ್‌31 ಪಿ 15ರಲ್ಲಿ 10 ಎಕರೆ, ಸರ್ವೆ ನಂಬರ್‌6/1ಪಿ7ರಲ್ಲಿ 10 ಎಕರೆ, ತಮ್ಮನಾಯಕನಹಳ್ಳಿ ಸರ್ವೆ ನಂಬರ್‌176/9ರಲ್ಲಿ 4.09 ಎಕರೆ, ತಮ್ಮನಾಯಕನಹಳ್ಳಿ ಸರ್ವೆ ನಂಬರ್‌23/ಪಿ89ರಲ್ಲಿ 0.20 ಗುಂಟೆ, ಸರ್ವೆ ನಂಬರ್‌23/ಪಿ 10ರಲ್ಲಿ 1 ಎಕರೆ, ಬೂತನಹಳ್ಳಿ ಸರ್ವೆ ನಂಬರ್‌64/ಪಿ92ರಲ್ಲಿ 2.32 ಎಕರೆ, ಸರ್ವೆ ನಂಬರ್‌54/ಪಿ5ರಲ್ಲಿ 1.20 ಎಕರೆ ವಿಸ್ತೀರ್ಣ ಜಮೀನುಗಳು ಖಾಸಗಿ ವ್ಯಕ್ತಿಗಳ ಪಾಲಾಗಿರುವುದು ಗೊತ್ತಾಗಿದೆ.

 

ಆನೇಕಲ್‌ತಾಲೂಕಿನ ವ್ಯಾಪ್ತಿಯಲ್ಲಿ ಲಕ್ಷ್ಮಮ್ಮ, ಸಕ್ರಿಬಾಯಿ, ಬಿ ಆರ್‌ಚಂದ್ರಮ್ಮ, ದಿವಂಗತ ಮುನಿಯಪ್ಪ, ಪೂ ವೆಂಕಟರಾಮಯ್ಯ ಎಂಬುವರಿಗೆ ಜಮೀನು ಮಂಜೂರಾಗಿದೆ ಎಂಬ ಮಾಹಿತಿ ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಿಂದ ತಿಳಿದು ಬಂದಿದೆ. ಆದರೆ ಇವರಿಗೆ ಮಂಜೂರಾಗಿರುವ ಜಮೀನಿನ ವಿಸ್ತೀರ್ಣ ಎಷ್ಟು ಎಂಬುದು ತಿಳಿದು ಬಂದಿಲ್ಲ.

 

ಅದೇ ರೀತಿ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಸರ್ವೆ ನಂಬರ್‌399ರಲ್ಲಿ 4.38 ಎಕರೆ, ಕುರುಬರಹಳ್ಳಿ ಸರ್ವೆ ನಂಬರ್‌116ರಲ್ಲಿ 8 ಎಕರೆ, ಬಿ ಎಂ ಕಾವಲ್‌ಸರ್ವೆ ನಂಬರ್‌107ರಲ್ಲಿ 5 ಎಕರೆ, ಹೊನ್ನಗನಹಟ್ಟಿ ಸರ್ವೆ ನಂಬರ್‌13ರಲ್ಲಿ 1 ಎಕರೆ, ಗಾಣಕಲ್ಲು ಸರ್ವೆ ನಂಬರ್‌19ರಲ್ಲಿ 1.30 ಎಕರೆ, ಮಾಳಿಗೊಂಡನಹಳ್ಳಿ ಸರ್ವೆ ನಂಬರ್‌26/132ರಲ್ಲಿ 7.30 ಎಕರೆ, ಹೊಮ್ಮದೇವನಹಳ್ಳಿ ಸರ್ವೆ ನಂಬರ್‌57ರಲ್ಲಿ 10.37 ಎಕರೆ, ಮಾಳಿಗೊಂಡನಹಳ್ಳಿ ಸರ್ವೆ ನಂಬರ್‌26ರಲ್ಲಿ 4 ಎಕರೆ, ಹೊಮ್ಮದೇವನಹಳ್ಳಿ ಸರ್ವೆ ನಂಬರ್‌57/36, 57/40 ಎ, ಸರ್ವೆ ನಂಬರ್‌57/40 ಸಿ ರಲ್ಲಿ ತಲಾ 10.30, 17 ಮತ್ತು 2 ಎಕರೆ ಖಾಸಗಿ ವ್ಯಕ್ತಿಗಳಿಗೆ ಮಂಜೂರಾಗಿವೆ.

 

ಪಟ್ಟಣಗೆರೆ ಸರ್ವೆ ನಂಬರ್‌8ರಲ್ಲಿ 2.30 ಎಕರೆ, ಕಣಿಮಿಣಿಕೆ ಸರ್ವೆ ನಂಬರ್‌47ರಲ್ಲಿ 1.08, ದೊಡ್ಡಮಾರನಹಳ್ಳಿ ಸರ್ವೆ ನಂಬರ್‌21/ಪಿ3ರಲ್ಲಿ 2 ಕೆರೆ, ಹೊಮ್ಮದೇವನಹಳ್ಳಿ ಸರ್ವೆ ನಂಬರ್‌57/63ರಲ್ಲಿ 2 ಎಕರೆ, ಬೆಂಗಳೂರು ಉತ್ತರ(ಅಪರ)ತಾಲೂಕಿನ ಕುದುರೆಗೆರೆ ಗ್ರಾಮದ ಸರ್ವೆ ನಂಬರ್‌50ರಲ್ಲಿ 2.23 ಎಕರೆ ಖಾಸಗಿ ವ್ಯಕ್ತಿಗಳ ಪರ ಆದೇಶ ಮಾಡಿದ್ದಾರೆ ಎಂದು ಗೊತ್ತಾಗಿದೆ.

 

ಬೆಂಗಳೂರು ಪೂರ್ವ ತಾಲೂಕಿನ ಅಂಬೇಕಾಯಿಪುರ ಗ್ರಾಮದ ಸರ್ವೆ ನಂಬರ್‌52/166ರಲ್ಲಿ 2 ಎಕರೆ, ಯಲಹಂಕ ತಾಲೂಕಿನ ಬೆಟ್ಟಹಲಸೂರು ಗ್ರಾಮದ ಸರ್ವೆ ನಂಬರ್‌259 ಪಿ 15ರಲ್ಲಿ 4 ಎಕರೆ, ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಗ್ರಾಮದ ಸರ್ವೆ ನಂಬರ್‌12ರಲ್ಲಿ 19.23 ಎಕರೆ ವಿಸ್ತೀರ್ಣದ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಈ ಸಂಬಂಧ ‘ದಿ ಫೈಲ್‌’ಗೆ  ಪ್ರತಿಕ್ರಿಯೆ ನೀಡಿರುವ ಎಸ್‌ ರಂಗಪ್ಪ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ‘ವಿಶೇಷ ಜಿಲ್ಲಾಧಿಕಾರಿಗಳಿಗೆ ಸರ್ಕಾರಿ ಜಮೀನನ್ನು ಮಂಜೂರು ಅಧಿಕಾರ ಇರುವುದಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ ೧೩೬(೨) ರ ಅಡಿಯಲ್ಲಿ ಈಗಾಗಲೇ ಸಕ್ಷಮ ಪ್ರಾಧಿಕಾರಗಳು ಮಂಜೂರು ಮಾಡಿರುವ ಜಮೀನುಗಳ ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಿ ಆಗಿರುವ ಮಂಜೂರಾತಿಯ ನೈಜತೆಯ ಬಗ್ಗೆ ಆದೇಶ ಮಾಡಲು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ . ನಾನು ವಿಶೇಷ ಜಿಲ್ಲಾಧಿಕಾರಿಯಾದ ಸಂದರ್ಭದಲ್ಲಿ ನೈಜತೆ ಪರಿಶೀಲಿಸಲು ಈ ಕೆಳಕಂಡ ಕ್ರಮವನ್ನು ಅನುಸರಿಸಿರುತ್ತೇನೆ,’ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.

 

ಅಲ್ಲದೇ ತಾವು ಹೊರಡಿಸಿದ್ದ ಆದೇಶಗಳಿಗೆ ಸಮರ್ಥನೆಯನ್ನೂ ನೀಡಿದ್ದಾರೆ.  ‘ಮೊದಲು ಈ ಹಿಂದೆ ನೋಟೀಸು ನೀಡಿ ದಾಖಲಾದ ಪ್ರಕರಣಗಳಲ್ಲಿ ರೈತರಿಂದ ಮಂಜೂರಾತಿಗೆ ಸಂಭಂದಿಸಿದಂತೆ ತಾಲೂಕ್ ಕಚೇರಿಯಿಂದ ದೃಢೀಕೃತ ದಾಖಲೆಗಳನ್ನು ಪಡೆದಿರುತ್ತೇನೆ.  ಅವರು ಸಲ್ಲಿಸಿರುವ ದಾಖಲೆಗಳನ್ನು ಪುನಃ ಸಂಭಂದಿಸಿದ ತಹಸೀಲ್ದಾರ್ ಕಚೇರಿಯಿಂದ ದಾಖಲೆಗಳ ನೈಜತೆಯ ಬಗ್ಗೆ ವರದಿ ಪಡೆದಿರುತ್ತೇನೆ .  ತಹಸೀಲ್ದಾರರಿಂದ ನೈಜತೆಯ ವರದಿ ಬಂದ ನಂತರ ನಾನೇ ಖುದ್ದಾಗಿ ರೆಕಾರ್ಡ್ ರೂಮಿಗೆ ಭೇಟಿ ನೀಡಿ ಮೂಲ ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಿರುತ್ತೇನೆ ಹಾಗೂ ಮೂಲ ಮಂಜೂರಾತಿ ದಾಖಲೆಗಳು ಲಭ್ಯವಿರುವ ಬಗ್ಗೆ ಮಹಜರು ಮಾಡಿ ರೆಕಾರ್ಡ್ ರೂಮ್ ನಲ್ಲಿನ ಅಧಿಕಾರಿಗಳ ಸಮಕ್ಷಮ ಮಹಜರಿಗೆ ಸಹಿ ಪಡೆದಿರುತ್ತೇನೆ,’ ಎಂದು ಸಮರ್ಥನೆ ಒದಗಿಸಿದ್ದಾರೆ.

 

ಅದೇ ರೀತಿ ‘ಮೇಲಿನ ಎಲ್ಲಾ ನಿಯಮಗಳನ್ನು ಪಾಲಿಸಿ ಮಂಜೂರಿದಾರರು ಸಲ್ಲಿಸಿರುವ ಹಾಗು ತಹಸೀಲ್ದಾರರು ನೀಡಿರುವ ವರದಿ ಮತ್ತು ನಾನು ರೆಕಾರ್ಡ್ ರೂಮಿಗೆ ಭೇಟಿ ನೀಡಿ ಪರಿಶೀಲಿಸಿದ ದಾಖಲೆಗಳ ಆಧಾರದ ಮೇಲೆ ಈ ಹಿಂದೆ ಮಂಜೂರಾದ ಪ್ರಕರಣಗಳನ್ನು ನೈಜತೆಯಿಂದ ಕೂಡಿದೆ ಅಥವಾ ಇಲ್ಲಾ ಎಂಬುದಾಗಿ ಆದೇಶ ಮಾಡಿರುತ್ತೇನೆ. ಮೂಲ ದಾಖಲೆಗಳು ಹಾಗೂ  ತಹಸೀಲ್ದಾರರ ವರದಿ ಆಧಾರದ ಮೇಲೆ ಮಾತ್ರ ಆದೇಶ ಮಾಡಲಾಗಿರುತ್ತದೆ. ಕೆಲವು ಆದೇಶಗಳು ಮಂಜೂರಾತಿ ನೈಜತಿಯಿಂದ ಕೂಡಿರುತ್ತವೆ.  ಇನ್ನು ಕೆಲವು ಪ್ರಕರಣಗಳು ನೈಜತೆಯಿಂದ ಕೂಡಿರುವುದಿಲ್ಲ,’ ಎಂಬ ವಿವರಣೆಯನ್ನೂ ‘ದಿ ಫೈಲ್‌’ಗೆ ಒದಗಿಸಿದ್ದಾರೆ.

SUPPORT THE FILE

Latest News

Related Posts