ನಿಯಮ ಉಲ್ಲಂಘನೆ, ಇಂಜಿನಿಯರ್‌ಗಳಿಗೆ ಅವಮಾನ; ಅನರ್ಹರನ್ನೇ ಎಂಡಿಯನ್ನಾಗಿಸಿದ ಸಿಎಂ, ಡಿಸಿಎಂ

ಬೆಂಗಳೂರು; ಪ್ರಧಾನ ಇಂಜಿನಿಯರ್‌ ಶ್ರೇಣಿಯಲ್ಲದ ಮತ್ತು ಕನಿಷ್ಠ ಸೇವಾ ಅರ್ಹತೆಯನ್ನೂ ಹೊಂದದೇ ಇರುವ ರಾಜೇಶ್‌ ಅಮ್ಮನಬಾವಿ ಅವರನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರವು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ.

 

ಸಚಿವ ಸಂಪುಟದ ಮಹಿಳಾ ಸಚಿವರೊಬ್ಬರ ಪ್ರಭಾವ ಮತ್ತು ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರು ಮಾಡಿದ್ದ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರೂ ಸಹ ಸೇವಾ ಹಿರಿತನದ ನಿಯಮಗಳನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಲ್ಲದೇ ರಾಜೇಶ್‌ ಅಮ್ಮನಬಾವಿ ಅವರು 2022ರ ಡಿಸೆಂಬರ್‌ 3ರಂದು ಮುಖ್ಯ ಇಂಜಿನಿಯರ್‌ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಬಡ್ತಿ ಹೊಂದಿದ ಕೇವಲ 10 ತಿಂಗಳಲ್ಲೇ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕ ಮಾಡಿರುವ ಕಾಂಗ್ರೆಸ್‌ ಸರ್ಕಾರದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ಪ್ರಧಾನ ಇಂಜನಿಯರ್‌ ಶ್ರೇಣಿಯ ಹುದ್ದೆಯಾಗಿದೆ.

 

ಅಲ್ಲದೇ ರಾಜೇಶ್‌ ಅಮ್ಮನಬಾವಿ ಅವರು ಕೇವಲ 10 ತಿಂಗಳ ಹಿಂದೆಯಷ್ಟೇ ಮುಖ್ಯ ಇಂಜಿನಿಯರ್‌ ಹುದ್ದೆಗೆ ಬಡ್ತಿ ಹೊಂದಿರುವ ಕಾರಣ ಪ್ರಧಾನ ಇಂಜಿನಿಯರ್‌ ಹುದ್ದೆಗೆ ಪದನ್ನೋತಿ ಹೊಂದಲು ಅವಶ್ಯಕವಾಗಿರುವ ಕನಿಷ್ಠ ಸೇವಾ ಅರ್ಹತೆಯೂ ಇಲ್ಲ. ಹೀಗಿದ್ದರೂ ಇವರನ್ನೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸಿರುವುದು ಅಧಿಕಾರಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಕನಿಷ್ಠ ಸೇವಾ ಅರ್ಹತೆ ಇರದಿದ್ದರೂ ರಾಜೇಶ್‌ ಅಮ್ಮನಬಾವಿ ಅವರನ್ನೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿರುವ ಪರಿಣಾಮ, ಸೇವಾ ಹಿರಿತನ ಹೊಂದಿರುವ 41 ಮಂದಿ ಮುಖ್ಯ ಇಂಜನಿಯರ್‌ಗಳು ಅವರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

 

ರಾಜೇಶ್‌ ಅಮ್ಮಿನಬಾವಿ ಅವರನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಶಿಫಾರಸ್ಸು ಮಾಡಿರುವ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2023ರ ಅಕ್ಟೋಬರ್‌ 20ರಂದು ಶಿಫಾರಸ್ಸು ಪತ್ರ ನೀಡಿದ್ದರು.

 

ಈ ಪತ್ರವನ್ನಾಧರಿಸಿ ರಾಜೇಶ್‌ ಅಮ್ಮಿನಬಾವಿ ಅವರನ್ನೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾಯಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಅಕ್ಟೋಬರ್‌ 25ರಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹಾಕಿದ್ದರು.

 

ಈ ಟಿಪ್ಪಣಿಯಲ್ಲಿನ ಸೂಚನೆಯನ್ನು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಯಥಾವತ್ತಾಗಿ ಪಾಲಿಸುವ ಮೂಲಕ ಸೇವಾ ಹಿರಿತನ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಇವರ ಸೂಚನೆ ಮೇರೆಗೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಅವರು ರಾಜೇಶ್‌ ಅಮ್ಮಿನಬಾವಿ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಿ 2023ರ ಅಕ್ಟೋಬರ್‌ 27ರಂದು ಅಧಿಸೂಚನೆ ಹೊರಡಿಸಿದ್ದಾರೆ.

 

ಸೇವಾ ಹಿರಿತನ ಉಲ್ಲಂಘನೆ

 

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆದಿದ್ದ ಕರ್ನಾಟಕ ಇಂಜಿನಿಯರಿಂಗ್‌ ಸೇವೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 1995ರಲ್ಲೇ ಗ್ರೂಪ್ ಎ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಆಗಿ ನೇಮಕಗೊಂಡವರಿದ್ದಾರೆ.

 

ಒಟ್ಟು 41 ಮಂದಿ 2018 ಮತ್ತು 2019ರಲ್ಲಿ ನಿಯಮ 42ರ ಅಡಿ ಮುಖ್ಯ ಇಂಜಿನಿಯರ್‌ಗಳಾಗಿ ಪದನ್ನೋತಿ ಹೊಂದಿದ್ದಾರೆ.

 

41 ಮಂದಿ ಪೈಕಿ ಸರ್ಕಾರವು ಯಾರನ್ನು ಬೇಕಾದರೂ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಅವಕಾಶವಿತ್ತು. ಅಲ್ಲದೇ ಕರ್ನಾಟಕ ನೀರಾವರಿ ನಿಗಮದಲ್ಲಿಯೇ ಪ್ರಧಾನ ಇಂಜಿನಿಯರ್‌ ಹುದ್ದೆಗೆ ಪದನ್ನೋತಿಗೆ ಅರ್ಹರಾದ ಮೂವರು ಹಿರಿಯ ಮುಖ್ಯ ಇಂಜಿನಿಯರ್‌ಗಳಿದ್ದರು. ಈ ಪೈಕಿ ಯಾರನ್ನಾದರೂ ನೇಮಿಸಬಹುದಿತ್ತು.

 

ಸೇವಾ ಹಿರಿತನ ಇಂಜಿನಿಯರ್‌ಗಳಿಗೆ ಅವಮಾನ

 

ಆದರೆ ರಾಜಕೀಯ ಕಾರಣಗಳಿಗಾಗಿ ಕನಿಷ್ಠ ಸೇವಾ ಅರ್ಹತೆ ಹೊಂದದೇ ಇರುವ ರಾಜೇಶ್‌ ಅಮ್ಮನಬಾವಿ ಅವರನ್ನು ನೇಮಕ ಮಾಡುವ ಮೂಲಕ ಸೇವಾ ಹಿರಿತನದ ನಿಯಮಗಳನ್ನು ನೇರಾನೇರ ಉಲ್ಲಂಘಿಸಿದಂತಾಗಿದೆ. ಅಷ್ಟೇ ಅಲ್ಲ ಕನಿಷ್ಠ ಸೇವಾ ಅರ್ಹತೆ ಕೂಡ ಇಲ್ಲದ ಅತ್ಯಂತ ಕಿರಿಯ ಮುಖ್ಯ ಇಂಜಿನಿಯರ್‌ ಅಧೀನದಲ್ಲಿ ಪದನ್ನೋತಿ ಹೊಂದಿರುವ ಪ್ರಧಾನ ಇಂಜಿನಿಯರ್‌ಗಳು ಅವರಿಗೂ ಸರ್ಕಾರವು ಅವಮಾನ ಮಾಡಿದಂತಾಗಿದೆ.

 

ಸರ್ಕಾರದ ಈ ನಿರ್ಧಾರದಿಂದಾಗಿ 1995ನೇ ಬ್ಯಾಚ್‌ನ ಎಲ್ಲಾ 41 ಹಿರಿಯ ಮುಖ್ಯ ಇಂಜಿನಿಯರ್‌ಗಳ ವಲಯದಲ್ಲಿ ಅಸಮಾಧಾನ ಅಲೆ ಎದ್ದಿದೆ. ಹಾಗೆಯೇ ಇಲಾಖೆಯ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳೂ ಇವೆ.

 

ಇನ್ನು ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಗಳಿಂದ ಒಟ್ಟಾರೆ 19 ಪ್ರಧಾನ ಇಂಜಿನಿಯರ್‌ ಹುದ್ದೆಗಳಿವೆ. ಕಳೆದ ಮೂರು ವರ್ಷಗಳಿಂದಲೂ ಪ್ರಧಾನ ಇಂಜಿನಿಯರ್‌ ಹುದ್ದೆಗಳಿಗೆ ಪದನ್ನೋತಿ ನೀಡಿಲ್ಲ.

 

ಹೀಗಾಗಿ 6 ಮಂದಿ ಅರ್ಹ ಮುಖ್ಯ ಇಂಜಿನಿಯರ್‌ಗಳು ಪದನ್ನೋನಿ ಸೌಲಭ್ಯವಿಲ್ಲದೇ ನಿವೃತ್ತರಾಗಿದ್ದಾರೆ. ಸದ್ಯ ಕೇವಲ ಇಬ್ಬರು ಪ್ರಧಾನ ಇಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 17 ಹುದ್ದೆಗಳಿಗೆ ಮುಖ್ಯ ಇಂಜಿನಿಯರ್‌ ವೃಂದದಿಂದ ಪದನ್ನೋತಿ ನೀಡಬೇಕಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts