ಖಾಸಗಿ ವ್ಯಕ್ತಿಗಳಿಗೆ 246 ಎಕರೆ ಮಂಜೂರು ಪ್ರಕರಣ; ವರದಿ ಸಲ್ಲಿಕೆಯಲ್ಲಿ ವಿಳಂಬ, ಕಾಲಕಸವಾದ ಕಟಾರಿಯಾ ಪತ್ರ

ಬೆಂಗಳೂರು;  ವಿವಿಧ ಸರ್ವೆ ನಂಬರ್‌ಗಳಲ್ಲಿನ ಅಂದಾಜು 1,000 ಕೋಟಿ ರು. ಮೌಲ್ಯದ ಒಟ್ಟಾರೆ  246.08 ಎಕರೆ ಜಮೀನನ್ನು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ  ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಬೃಹತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಉಪ ವಿಭಾಗದ  ವಿಶೇಷ ಜಿಲ್ಲಾಧಿಕಾರಿಗಳು ಮೇಲ್ಮನವಿ ಸಲ್ಲಿಸಲು ಕೈಗೊಂಡಿರುವ ಅನುಪಾಲನಾ ವರದಿಯನ್ನು  ಸರ್ಕಾರಕ್ಕೆ ಸಲ್ಲಿಸದೇ ವಿಳಂಬ  ಧೋರಣೆ ಅನುಸರಿಸಿರುವುದು ಇದೀಗ ಬಹಿರಂಗವಾಗಿದೆ.

 

ಮೇಲ್ಮನವಿ ಸಲ್ಲಿಸಲು ಕೈಗೊಂಡಿರುವ ಕ್ರಮದ ಕುರಿತು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಕಳೆದ 5 ವರ್ಷದಿಂದಲೂ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಬರೆದಿದ್ದ ಪತ್ರಕ್ಕೆ ವಿಶೇಷ ಜಿಲ್ಲಾಧಿಕಾರಿಗಳು ಯಾವುದೇ ಕಿಮ್ಮತ್ತು ನೀಡಿಲ್ಲ.

 

ಈ ಪ್ರಕರಣವನ್ನು  ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು ಹಲವು ಪತ್ರಗಳಲ್ಲಿ ಉಲ್ಲೇಖಿಸಿದ್ದರೂ ವಿಶೇಷ ಜಿಲ್ಲಾಧಿಕಾರಿಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬರೆದಿದ್ದ ಪತ್ರವನ್ನು ಕಸದ ಬುಟ್ಟಿಗೆ ಎಸೆದಿರುವುದು ಗೊತ್ತಾಗಿದೆ.

 

ಕಂದಾಯ ಇಲಾಖೆಯ ಸರ್ಕಾರದ ಈಗಿನ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು 2023ರ ಆಗಸ್ಟ್‌ 4ರಂದು ಪತ್ರವನ್ನು ವಿಶೇಷ ಜಿಲ್ಲಾಧಿಕಾರಿ ಐಎಎಸ್‌ ಅಧಿಕಾರಿ ಬಾಲಚಂದ್ರ ಅವರಿಗೆ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪ್ರಕರಣಕ್ಕೆ ಸಂಬಂಧ ಐಎಎಸ್‌ ಅಧಿಕಾರಿ ಎಸ್‌ ರಂಗಪ್ಪ ಅವರು ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಕಟಾರಿಯಾ ಪತ್ರದಲ್ಲೇನಿದೆ?

 

ಕೆಎಎಸ್‌ ಅಧಿಕಾರಿ ಎಸ್‌ ರಂಗಪ್ಪ ಅವರು ಬೆಂಗಳೂರು ನಗರ ಜಿಲ್ಲೆಯ  ವಿಶೇಷ ಜಿಲ್ಲಾಧಿಕಾರಿ-2 ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಹೊರಡಿಸಿರುವ ಆದೇಶಗಳ ಬಗ್ಗೆ ವಿಚಾರಣೆ ನಡೆಸಿ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶಿಸಿರುವ 36 ಪ್ರಕರಣಗಳ ಪೈಕಿ ಆನೇಕಲ್‌ ತಾಲೂಕಿನ 20 ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಬಾಕಿ ಇರುವ 14 ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಿತ್ತು. ಮೇಲ್ಮನವಿಯನ್ನು ಸಲ್ಲಿಸಲು ಕ್ರಮ ಕೈಗೊಂಡಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಇದೇ ಸಮ ಸಂಖ್ಯೆಯ ದಿನಾಂಕ 16-07-2019ರ ನೆನಪೋಲೆ ಹಾಗೂ 19-11-2019, 21-05-2020, 14.12.2020 ಅರೆ ಸರ್ಕಾರಿ ಪತ್ರಗಳಲ್ಲಿ ಕೋರಲಾಗಿತ್ತು.

 

ಆದಾಗ್ಯೂ ಅನುಪಾಲನಾ ವರದಿ ಸ್ವೀಕೃತವಾಗದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಹೆಚ್ಚಿನ ವಿಳಂಬಕ್ಕೆ ಅವಕಾಶ ನೀಡದೇ ಈ ಬಗ್ಗೆ ವೈಯಕ್ತಿಕ ಗಮನ ಹರಿಸಿ ಸದರಿ ಪ್ರಕರಣದಲ್ಲಿ ಕೈಗೊಂಡ ಅನುಪಾಲನಾ ವರದಿಯನ್ನು ಮರು ಟಪಾಲಿನಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ನಿರ್ದೇಶನ ನೀಡಿರುವುದು ಪತ್ರದಿಂದ ಗೊತ್ತಾಗಿದೆ.

 

 

ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕ ಐಎಎಸ್‌ ಅಧಿಕಾರಿ ಎಸ್‌ ರಂಗಪ್ಪ ಅವರು ಅವರು ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ (ವಿಶೇಷ ಜಿಲ್ಲಾಧಿಕಾರಿ (1)(ಪ್ರಭಾರ) ಮತ್ತು 2 ಹುದ್ದೆಯಲ್ಲಿ) ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿ ಆದೇಶಿಸಿದ್ದರು ಎಂದು ತಿಳಿದು ಬಂದಿದೆ.

 

ಆನೇಕಲ್‌ ತಾಲೂಕಿನ ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಒಟ್ಟು 141.31 ಎಕರೆ ಹಾಗೂ ಬೆಂಗಳೂರು ದಕ್ಷಿಣ, ಯಲಹಂಕ ಮತ್ತು ಬೆಂಗಳೂರು ಉತ್ತರ ಅಪರ, ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯಲ್ಲಿ 105.49 ಎಕರೆ ಸೇರಿ ಒಟ್ಟು 246.08 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿ ಆದೇಶಿಸಿದ್ದರು ಎಂದು ಗೊತ್ತಾಗಿದೆ.

 

ಬೆಂಗಳೂರು ನಗರ ಜಿಲ್ಲೆ ಮತ್ತು ಆನೇಕಲ್‌ ತಾಲೂಕಿನ ವ್ಯಾಪ್ತಿಯಲ್ಲಿ ವಿವಿಧ ಸರ್ವೆ ನಂಬರ್‌ಗಳ ಒಟ್ಟು 41 ಪ್ರಕರಣಗಳಲ್ಲಿ ಹೊರಡಿಸಿರುವ ಆದೇಶಗಳು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ತಿಳಿದು ಬಂದಿದೆ.

 

 

ಪ್ರಕರಣದ ವಿವರ

 

ವಿಶೇಷ ಜಿಲ್ಲಾಧಿಕಾರಿ ಆಗಿದ್ದ ಎಸ್‌ರಂಗಪ್ಪ ಅವರು ಬೆಂಗಳೂರು ದಕ್ಷಿಣ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ 16, ಆನೇಕಲ್‌ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ 20, ಯಲಹಂಕ ತಾಲೂಕಿನಲ್ಲಿ 3, ಬೆಂಗಳೂರು ಪೂರ್ವ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 41 ಆದೇಶಗಳನ್ನು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಹೊರಡಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಇದಲ್ಲದೆ, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 22, ಆನೇಕಲ್‌ತಾಲೂಕಿನಲ್ಲಿ 23, ಯಲಹಂಕ ತಾಲೂಕಿನಲ್ಲಿ 4 ಮತ್ತು ಬೆಂಗಳೂರು ಪೂರ್ವ ತಾಲೂಕಿನಲ್ಲಿ 2 ಸೇರಿದಂತೆ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 51 ಆದೇಶಗಳನ್ನು ಎಸ್‌ ರಂಗಪ್ಪ ಅವರೇ ಹೊರಡಿಸಿದ್ದಾರೆ. ಈ ಪೈಕಿ 42 ಆದೇಶಗಳು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂಬುದು ಗೊತ್ತಾಗಿದೆ. ಉಳಿದಂತೆ ಕೇವಲ 8 ಆದೇಶಗಳು ಮಾತ್ರ ಸರ್ಕಾರದ ಪರವಾಗಿವೆ. ಆನೇಕಲ್‌ತಾಲೂಕಿನಲ್ಲಿ 1 ಪ್ರಕರಣವನ್ನು ಮಾತ್ರ ಕೈಬಿಟ್ಟಿರುವುದು ತಿಳಿದು ಬಂದಿದೆ.

 

ಸಾವಿರ ಕೋಟಿ ರು ಮೌಲ್ಯದ 246 ಎಕರೆ ಖಾಸಗಿ ವ್ಯಕ್ತಿಗಳಿಗೆ ಮಂಜೂರು; ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶ

 

ಆನೇಕಲ್‌ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದ 20 ಪ್ರಕರಣಗಳ ಪೈಕಿ ಈವರೆವಿಗೆ 6 ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಉಳಿದ 35 ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಲ್ಲಿ ಸಂಬಂಧಿಸಿದ ತಹಶೀಲ್ದಾರ್‌ಗಳು ವಿಫಲರಾಗಿದ್ದಾರೆ. ಅಲ್ಲದೆ, ಮೇಲ್ಮನವಿ ಸಲ್ಲಿಸುವುದು ಮತ್ತು ಸರ್ಕಾರಿ ವಕೀಲರನ್ನು ಹಾಗೂ ವ್ಯಾಜ್ಯ ನಿರ್ವಹಣಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಉದ್ದೇಶಪೂರ್ವಕವಾಗಿಯೇ ತೆವಳುತ್ತಿವೆ. ಮತ್ತೊಂದು ಸಂಶಯಕ್ಕೆಡೆ ಮಾಡಿಕೊಟ್ಟಿರುವ ಸಂಗತಿ ಏನೆಂದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರಿ ವಕೀಲರುಗಳೇ ಅಡ್ಡಿಯಾಗಿದ್ದಾರೆ ಎಂದು ಗೊತ್ತಾಗಿದೆ.

 

the fil favicon

SUPPORT THE FILE

Latest News

Related Posts