ಎನ್‌ಒಸಿ ಇಲ್ಲದೇ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ, ಪ್ರವೇಶಾತಿ ಮಿತಿಯೂ ಏರಿಕೆ

ಬೆಂಗಳೂರು; ರಾಜ್ಯದಲ್ಲಿರುವ ಖಾಸಗಿ ಹಾಗೂ ಖಾಸಗಿ ಅನುದಾನಿತ ಇಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯದೇ ಪ್ರವೇಶ ಪ್ರಕ್ರಿಯೆ ನಡೆಸಿವೆ. ಅಲ್ಲದೇ ರಾಜ್ಯ ಸರ್ಕಾರದ ಗಮನಕ್ಕೆ ಬಾರದೆಯೇ ಪ್ರವೇಶಾತಿ ಮಿತಿಯನ್ನು ಏರಿಕೆ ಮಾಡಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಸರ್ಕಾರದ ಅನುಮತಿಯನ್ನೂ ಪಡೆಯದೇ ಪ್ರವೇಶಾತಿ ಮಿತಿ ಏರಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಮುಂದಿರಿಸಿ ನಿರಾಕ್ಷೇಪಣಾ ಪತ್ರ ಪಡೆಯುವ ಷರತ್ತಿಗೆ ಒಳಪಟ್ಟು ಕ್ರಮ ಕೈಗೊಳ್ಳಲು ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಖಾಸಗಿ ವಲಯದ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಕಡಿವಾಣ ಹಾಕಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಇದೀಗ ಖಾಸಗಿ ಇಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುಮತಿಯಿಲ್ಲದೆಯೇ ಪ್ರವೇಶಾತಿ ಪ್ರಕ್ರಿಯೆ ನಡೆಸುತ್ತಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಖುದ್ದು ಸಚಿವ ಡಾ ಎಂ ಸಿ ಸುಧಾಕರ್‍‌ ಅವರು 2023ರ ಅಕ್ಟೋಬರ್‍‌ 12ರಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪಿಇಎಸ್‌ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಕುಟುಂಬ ಸದಸ್ಯರ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಲೆಕ್ಕಿಸದೆಯೇ ಮನಸೋ ಇಚ್ಛೆ ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಯಾವೊಂದು ಶಿಕ್ಷಣ ಸಂಸ್ಥೆ ವಿರುದ್ಧ ಒಂದೇ ಒಂದು ಶಿಸ್ತು ಕ್ರಮ ಜರುಗಿಸಿಲ್ಲ.

 

ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಶಾಹಿಯೂ ಶಾಮೀಲಾಗಿರುವ ಕಾರಣ, ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ಮತ್ತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಲೆಕ್ಕಿಸಿಲ್ಲ. ಅಲ್ಲದೇ ಸರ್ಕಾರದಿಂದ ಎನ್‌ಒಸಿ ಪಡೆಯದೇ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವುದು ಸರ್ಕಾರವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

 

ಸಚಿವರ ಟಿಪ್ಪಣಿಯಲ್ಲೇನಿದೆ?

 

ರಾಜ್ಯದಲ್ಲಿರುವ ಖಾಸಗಿ ಹಾಗೂ ಖಾಸಗಿ ಅನುದಾನಿತ ವಿದ್ಯಾಸಂಸ್ಥೆಗಳು ತಮ್ಮ ವ್ಯಾಪ್ತಿಯ ಇಂಜಿನಿಯರಿಂಗ್‌ ಕಾಲೇಜು, ಸ್ವಾಯತ್ತ ಇಂಜಿನಿಯರಿಂಗ್‌ ಸಂಸ್ಥೆಗಳಲ್ಲಿನ ತಾಂತ್ರಿಕ ಕೋರ್ಸ್‌ ಪ್ರವೇಶಾತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ನಿರಾಕ್ಷೇಪಣಾಪತ್ರ (ಎನ್‌ಒಸಿ) ಪಡೆಯದೇ ಪ್ರವೇಶಾತಿ ಪ್ರಕ್ರಿಯೆ ಆರಂಭಿಸುತ್ತಿರುವುದು ತಿಳಿದು ಬಂದಿದೆ.

 

ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಇಂಜಿನಿಯರಿಂಗ್‌ ಕಾಲೇಜುಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನಿರಾಕ್ಷೇಪಣಾ ಪತ್ರ ಪಡೆದು ನೇರವಾಗಿ ಎಐಸಿಟಿಇ ಅನುಮತಿಯೊಂದಿಗೆ ತಾಂತ್ರಿಕ ಕೋರ್ಸ್‌ಗಳನ್ನು ಆರಂಭಿಸುತ್ತಿದೆ. ಅಲ್ಲದೇ ಪ್ರವೇಶಾತಿ ಮಿತಿಯನ್ನೂ ಏರಿಕೆ ಮಾಡಿಕೊಂಡಿರುವುದು ಕಂಡುಬಂದಿದೆ.

 

ಅದೇ ರೀತಿ ಪ್ರವೇಶದ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಸರ್ಕಾರಕ್ಕೆ ಎನ್‌ಒಸಿ ಕೋರಿ ಕಡತ ಸಲ್ಲಿಸುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

 

ಪ್ರವೇಶಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಎನ್‌ಒಸಿ ಕೋರಿ ಕಡತ ಸಲ್ಲಿಸುತ್ತಿರುವುದು ಗಂಭೀರ ವಿಷಯ ಎಂದು ಟಿಪ್ಪಣಿಯಲ್ಲಿ ಡಾ ಎಂ ಸಿ ಸುಧಾಕರ್‍‌ ಅವರು ಹೇಳಿದ್ದಾರಾದರೂ ಇಂತಹ ಪ್ರಕ್ರಿಯೆಗಳನ್ನು ನಡೆಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದೇ ಒಂದು ನೋಟೀಸ್‌ ಕೂಡ ನೀಡಿಲ್ಲ ಎಂದು ಗೊತ್ತಾಗಿದೆ.

 

ಬದಲಿಗೆ ‘ 2023-24ನೇ ಸಾಲಿನ ಪ್ರವೇಶಾತಿ ಅವಧಿಗೆ ಸಮಯದ ಅವಕಾಶ ಕಡಿಮೆ ಇದ್ದ ಪ್ರಯುಕ್ತ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರವು ಈ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವ ಷರತ್ತಿಗೆ ಒಳಪಟ್ಟು ಕ್ರಮಕೈಗೊಳ್ಳಬೇಕು,’ ಎಂದು ಸೂಚಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಹಾಗೆಯೇ ಎಲ್ಲಾ ಖಾಸಗಿ ಹಾಗೂ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಹಾಗೂ ವಿದ್ಯಾರ್ಥಿಗಳ ಪ್ರವೇಶದ ಮಿತಿಯನ್ನು ಹೆಚ್ಚುವರಿ/ ಕಡಿಮೆ ಮಾಡಲು ಸಂಬಂಧಿಸಿದ ವಿಟಿಯು ಮತ್ತು ಎಐಸಿಟಿಯು ಅನುಮೋದನೆ ಪಡೆಯುವುದು ಕಡ್ಡಾಯ ಎಂದೂ ಸೂಚಿಸಿರುವುದು ಗೊತ್ತಾಗಿದೆ.

 

ಈ ಪ್ರಕ್ರಿಯೆಗಳನ್ನು ಶೈಕ್ಷಣಿಕ ಸಂಸ್ಥೆಗಳು ಪೂರ್ಣಗೊಳಿಸಿದ ನಂತರವಷ್ಟೇ ಸೀಟ್‌ ಮ್ಯಾಟ್ರಿಕ್ಸ್‌ನಲ್ಲಿ ಅಳವಡಿಸಲು ಕರಡು ಅಧಿಸೂಚನೆಗೆ ಪರಿಗಣಿಸಲಾಗುವುದು ಎಂದು ಸೂಚಿಸಲಾಗಿದೆಯಲ್ಲದೇ ಒಂದು ವೇಳೆ ಶೈಕ್ಷಣಿಕ ಸಂಸ್ಥೆಗಳು ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯದೇ ಇದ್ದಲ್ಲಿ ಅಂತಹ ಸಂಸ್ಥೆಗಳನ್ನು ಸೀಟ್‌ ಮ್ಯಾಟ್ರಿಕ್ಸ್‌ನಲ್ಲಿ ಪರಿಗಣಿಸಲಾಗುವುದಿಲ್ಲ. ವಿಟಿಯು ಕೂಡ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಶೈಕ್ಷಣಿಕ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರವನ್ನು ಎಐಸಿಟಿಇ ಗೆ ಸಲ್ಲಿಸಬಾರದು ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ಪ್ರತ್ಯೇಕ ಸಿಇಟಿ ನಡೆಸಿದ್ದ ಪಿಇಎಸ್‌ ಸೇರಿದಂತೆ ಇನ್ನಿತರೆ ಪ್ರಭಾವಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಪ್ರವೇಶ ಮೇಲ್ವಿಚಾರಣೆ ಸಮಿತಿಯು ನೀಡಿದ್ದ ವರದಿಯನ್ನು ಇದೇ ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ.

 

ಪ್ರತ್ಯೇಕ ಸಿಇಟಿ; ಪಿಇಎಸ್‌ ಸೇರಿ ಖಾಸಗಿ ವಿವಿಗಳಿಂದ ಆದೇಶ ಉಲ್ಲಂಘನೆ, ಕಸದಬುಟ್ಟಿಗೆ ಸೇರಿದ ವರದಿ

 

ಕಾಮೆಡ್‌ ಕೆ ನಲ್ಲೂ ಸೀಟು ಬ್ಲಾಕಿಂಗ್‌ ನಡೆದಿದೆ ಎಂದು ಗೊತ್ತಿದ್ದರೂ ಉನ್ನತ ಶಿಕ್ಷಣ ಇಲಾಖೆಯೂ ಕೈಕಟ್ಟಿ ಕುಳಿತಿತ್ತು.

 

ಕಾಮೆಡ್‌ ಕೆ 2023; ಪಟ್ಟಭದ್ರ ಹಿತಾಸಕ್ತಿಗಳಿಂದ ಸೀಟ್‌ ಬ್ಲಾಕಿಂಗ್‌ ಆರೋಪ, ಕೈಕಟ್ಟಿ ಕುಳಿತ ಸರ್ಕಾರ

ಹೈಕೋರ್ಟ್‌ನ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿನ ಪ್ರವೇಶ ಮೇಲ್ವಿಚಾರಣೆ ಸಮಿತಿ ನೀಡಿದ್ದ ವರದಿಗಳನ್ನು ಕಸದ ಬುಟ್ಟಿಗೆ ಎಸೆದಿರುವ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಂತೆ ಕಾರ್ಯನಿರ್ವಹಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯು ಇನ್ನಾದರೂ ತನ್ನ ಧೋರಣೆ ಬದಲಿಸಿಕೊಳ್ಳಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಣ ತಜ್ಞರೊಬ್ಬರು.

SUPPORT THE FILE

Latest News

Related Posts