ನವದೆಹಲಿ: ಪರಿಸರ ಸಚಿವಾಲಯದ ಅಭಿಪ್ರಾಯವನ್ನು ಧಿಕ್ಕರಿಸಿ ದೇಶದ ದಟ್ಟ ಅರಣ್ಯ ಪ್ರದೇಶವನ್ನು ಖಾಸಗಿ ವಿದ್ಯುತ್ ಉತ್ಪಾದಕರ ಲಾಬಿಗೆ ಮಣಿದಿರುವ ಒಕ್ಕೂಟ ಸರ್ಕಾರದ ಕಲ್ಲಿದ್ದಲು ಸಚಿವಾಲಯವು, ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವುದನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ದಾಖಲೆ ಸಹಿತ ಹೊರಗೆಡವಿದೆ. ದಟ್ಟ ಅರಣ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ನೀಡಿರುವ ಹಿಂದಿನ ರಹಸ್ಯವನ್ನು ಬಹಿರಂಗಗೊಳಿಸಿರುವ ‘ದಿ ರಿಪೋರ್ಟಸ್ ಕಲೆಕ್ಟಿವ್’ ನ ತನಿಖಾ ತಂಡದ ವರದಿಯನ್ನು ‘ದಿ ಫೈಲ್’ ಕೂಡ ಪ್ರಕಟಿಸುತ್ತಿದೆ.
2021ರ ನವಂಬರ್‍ನಲ್ಲಿ ವಿದ್ಯುತ್ ಉತ್ಪಾದಕರ ಸಂಘವು ಕಲ್ಲಿದ್ದಲು ಸಚಿವಾಲಯಕ್ಕೆ ಪತ್ರ ಬರೆದು, ಆ ಸಮಯದಲ್ಲಿ ದೇಶದಲ್ಲಿ ಕಲ್ಲಿದ್ದಲಿನ ಅಭಾವವಿರುವ ಕಾರಣವನ್ನು ನೀಡಿ, ದೇಶದ ಅತ್ಯಂತ ದಟ್ಟ ಅರಣ್ಯದಲ್ಲಿರುವ ಎರಡು ಕಲ್ಲಿದ್ದಲು ಗಣಿ ಪ್ರದೇಶಗಳನ್ನು ಹರಾಜು ಪ್ರಕ್ರಿಯೆಗೆ ತೆರೆಯಬೇಕೆಂದು ಒತ್ತಾಯಿಸಿತ್ತು. ಆದರೆ, ಈ ಲಾಬಿಯು ಮುಂದೆ ಈ ಸಂಘದ ಸದಸ್ಯತ್ವ ಹೊಂದಿದ್ದ ಅದಾನಿ ಸಮೂಹಕ್ಕೆ ಲಾಭದಾಯಕವಾಗಲಿತ್ತು.
ವಿದ್ಯುತ್ ಉತ್ಪಾದಕರ ಸಂಘವು ಕೇಳಿದ ಈ ಎರಡು ಗಣಿ ಪ್ರದೇಶಗಳಲ್ಲಿ ಒಂದು, ಮಧ್ಯಪ್ರದೇಶದ ಸಿಂಗ್ರೌಲಿ ಗಣಿ ಪ್ರದೇಶದಲ್ಲಿತ್ತು (Singrauli Coalfields) ಹಾಗು ಅದು 2022ರಲ್ಲಿ ಅದಾನಿ ಸಮೂಹವು ತನ್ನ ತೆಕ್ಕೆಗೆ ತೆಗೆದುಕೊಂಡ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಸಮೀಪದಲ್ಲಿತ್ತು. ಮತ್ತೊಂದು ಗಣಿಯು ಛತ್ತೀಸಗಢದಲ್ಲಿ ಮಾನವ ಹಸ್ತಕ್ಷೇಪದಿಂದ ಹೊರತಾಗಿದ್ದ ಹಸದೇವ್ ಆನಂದ್ ದಟ್ಟ ಅರಣ್ಯ ಪ್ರದೇಶದಲ್ಲಿತ್ತು ಮತ್ತು ಅದಾನಿ ಸಮೂಹ ನಡೆಸುತ್ತಿದ್ದ ಗಣಿ ಪ್ರದೇಶಕ್ಕೆ ಸಮೀಪದಲ್ಲಿತ್ತು.
ಕಲ್ಲಿದ್ದಲು ಸಚಿವಾಲಯವು ವಿದ್ಯುತ್ ಉತ್ಪಾದಕರ ಸಂಘದ ಒತ್ತಾಯದಂತೆ ಎರಡು ಗಣಿ ಪ್ರದೇಶಗಳನ್ನು ಹರಾಜು ಪ್ರಕ್ರಿಯೆಗೆ ಮುಕ್ತಗೊಳಿಸಲು ಕ್ರಮ ವಹಿಸಿತಲ್ಲದೆ, ಪರಿಸರ ಸಚಿವಾಲಯವನ್ನು, ಈ ಹಿಂದೆ 2018 ರಲ್ಲಿ ಅತಿ ಸೂಕ್ಷ್ಮ ಜೀವಪರಿಸರದಿಂದ ಕೂಡಿರುವುದರಿಂದ ಸಂರಕ್ಷಿಸಬೇಕಾದ ಕಾರಣದಿಂದ 15 ಕಲ್ಲಿದ್ದಲು ಗಣಿ ಪ್ರದೇಶಗಳನ್ನು ಗುರುತಿಸಿ, ಹರಾಜು ಪ್ರಕ್ರಿಯೆಯಿಂದ ಹೊರಗಿಡಬೇಕೆಂದಿದ್ದ ಪರಿಸರ ಸಚಿವಾಲಯವು ತನ್ನ ನಿಲುವನ್ನು ಮರುಪರಿಶೀಲಿಸಬೇಕೆಂದು ತಿಳಿಸಿತ್ತು.
ಈ ಗಣಿಗಳನ್ನು ಮುಕ್ತಗೊಳಿಸುವ ಹಾದಿಯನ್ನು ಸುಗಮಗೊಳಿಸಿಕೊಳ್ಳಲು, ಕಲ್ಲಿದ್ದಲು ಸಚಿವಾಲಯವು, ಪರಿಶೀಲನೆಗೆಂದು, ತನ್ನ ಅಧೀನ ಸಂಸ್ಥೆಯಾದ ಕೇಂದ್ರೀಯ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆ ನಿಯಮಿತಕ್ಕೆ (Central Mine Planning And Design Institute Limited – CMPDIL) ಪತ್ರ ಮುಖೇನ ಕೋರಿಕೆ ಸಲ್ಲಿಸಿ, ಗಣಿಗಾರಿಕೆಯಿಂದ ಮುಕ್ತವಾಗಿದ್ದ 15 ಗಣಿ ಪ್ರದೇಶಗಳಲ್ಲಿ ಅರಣ್ಯಕ್ಕೆ ಧಕ್ಕೆಯಾಗದ ರೀತಿ ಗಣಿಗಾರಿಕೆ ನಡೆಸಲು ಅವನ್ನು ಪ್ರತ್ಯೇಕಿಸಬಹುದೇ ಎಂದು ಕೇಳಿತ್ತು. ಕಲ್ಲಿದ್ದಲು ಸಚಿವಾಲಯದ ಅಧೀನದಲ್ಲಿರುವ ಈ ಸಂಸ್ಥೆಯ ಜಾಲತಾಣದ (ವೆಬ್ಸೈಟ್) ಪ್ರಕಾರ, ‘ಸಂಸ್ಥೆಯು ಖನಿಜ ಮತ್ತು ಗಣಿಗಾರಿಕೆ ವಲಯದಲ್ಲಿ ತೊಡಗಿರುವವರಿಗೆ ಪರಿಣಿತ ಸಲಹೆಗಾರನಾಗಿದೆ,’
ಈ ಸಂಸ್ಥೆಯು, ಕಲ್ಲಿದ್ದಲು ಸಚಿವಾಲಯಕ್ಕೆ ನೀಡಿದ ಪ್ರಸ್ತುತಿಯಲ್ಲಿ, ಹರಾಜು ಪ್ರಕ್ರಿಯೆಗೆ ತೆರೆಯಬೇಕೆಂದಿದ್ದ ಈ 15 ಪ್ರದೇಶಗಳಲ್ಲಿ ದಟ್ಟ ಅರಣ್ಯವಿರುವ ಕಾರಣ ಯಾವೊಂದನ್ನು ಕೂಡ ಗಣಿಗಾರಿಕೆಗೆ ತೆರೆಯಲು ಸಾಧ್ಯವಿಲ್ಲ ಎಂದು ನಿಚ್ಚಳವಾಗಿ ತಿಳಿಸಿತ್ತು.
ಆದರೆ ಕಲ್ಲಿದ್ದಲು ಸಚಿವಾಲಯವು, ಈ ವಿಚಾರವಾಗಿ ತನ್ನದೇ ಅಧೀನದಲ್ಲಿದ್ದ ಪರಿಣಿತ ಸಂಸ್ಥೆಯ ಅಭಿಪ್ರಾಯವನ್ನು ಮೂಲೆಗೊತ್ತಿತ್ತು ಮತ್ತು ಪರಿಸರ ಸಚಿವಾಲಯದೊಂದಿಗಿನ ಪತ್ರಗಳಲ್ಲಿ ಈ ವಿಚಾರವಾಗಿ ಪರಿಣಿತ ಸಂಸ್ಥೆಯ ಮಹತ್ವದ ಅಭಿಪ್ರಾಯಗಳನ್ನು ಕೈಬಿಟ್ಟಿತ್ತು ಅಥವಾ ತಿರುಚಿತ್ತು. ಜೊತೆಗೆ, ಈ ಪತ್ರಗಳಲ್ಲಿ ಗಣಿ ಪ್ರದೇಶಗಳನ್ನು ತೆರೆಯಬೇಕೆಂದು ವಿದ್ಯುತ್ ಉತ್ಪಾದಕರ ಸಂಘ ನೀಡಿದ್ದ ಕಾರಣಗಳನ್ನೆ ಯಥಾವತ್ತಾಗಿ ಬಳಸಿಕೊಂಡಿತ್ತು.
ಅಂತಿಮವಾಗಿ ಕಲ್ಲಿದ್ದಲು ಸಚಿವಾಲಯವು, ಪರಿಸರ ಸಚಿವಾಲಯ ಗಣಿಗಾರಿಕೆಯಿಂದ ನಿಷೇಧಿಸಲ್ಪಡಬೇಕೆಂದು ತಿಳಿಸಿದ್ದ 15 ಪ್ರದೇಶಗಳಲ್ಲಿ ನಾಲ್ಕು ಪ್ರದೇಶಗಳನ್ನು ಗಣಿಗಾರಿಕೆಗೆ ತೆರೆಯಿತು. ಅದರಲ್ಲೊಂದು ಮಧ್ಯಪ್ರದೇಶದಲ್ಲಿ ವಿದ್ಯುತ್ ಉತ್ಪಾದಕರ ಸಂಘವು ಗಣಿಗಾರಿಕೆಗೆ ತೆರೆಯಬೇಕೆಂದು ಲಾಬಿ ನಡೆಸಿದ್ದ ಒಂದು ಗಣಿಯೂ ಒಳಗೊಂಡಿತ್ತು.
ಈ ಗಣಿ ಪ್ರದೇಶವು ಇತ್ತೀಚಿಗೆ ಮುಕ್ತಾಯಗೊಂಡ ಏಳನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಯ ಭಾಗವಾಗಿತ್ತು. ಈ ಗಣಿಗೆ ಕೇವಲ ಒಂದು ಬಿಡ್ ಮಾತ್ರ ಸಲ್ಲಿಕೆಯಾಗಿತ್ತು – ಅದು ಅದಾನಿ ಸಮೂಹದಾಗಿತ್ತು. ಕೇವಲ ಒಂದೇ ಬಿಡ್ ಸಲ್ಲಿಕೆಯಾಗಿದ್ದರಿಂದ ಮತ್ತು ಬೇರಾರು ಬಿಡ್ ಸಲ್ಲಿಸದಿರುವ ಕಾರಣ ಹರಾಜು ಪ್ರಕ್ರಿಯೆ ಯಶಸ್ವಿಯಾಗಲಿಲ್ಲ. ಆದರೆ ಇದರಲ್ಲಿ ಮಹತ್ವದ ಮತ್ತೊಂದು ವಿಚಾರವಿದ್ದು ಅದನ್ನು ಈ ಸರಣಿ ಲೇಖನದ ಮುಂದಿನ ಭಾಗದಲ್ಲಿ ತಿಳಿಸಲಾಗುವುದು.
“ಉತ್ಪಾದಕರ ಸಂಘವು ಈ ಗಣಿ ಪ್ರದೇಶಗಳನ್ನು ಹರಾಜಿಗಿಡಬೇಕೆಂದು ಒತ್ತಾಯಿಸಿದ್ದವು, ಆದರೆ ಕೇವಲ ಅದಾನಿ ಸಮೂಹ ಮಾತ್ರ ಬಿಡ್ ಸಲ್ಲಿಸಿರುವುದು ಇಲ್ಲಿ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ” ಎಂದು ಹೇಳುತ್ತಾರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಲಕ್ನೋದ ಸಹಾಯಕ ಪ್ರಾಧ್ಯಾಪಕರಾದ ಪ್ರಿಯಾಂಶು ಗುಪ್ತಾ. ಮುಂದುವರೆದು “ಇದು ಸಂಸ್ಥೆಗಳನ್ನೇ ಸ್ವಾಧೀನಕ್ಕೆ ಒಳಪಡಿಸಿಕೊಂಡಿರುವ ಬಗ್ಗೆ ಸಂಶಯಗಳನ್ನು ಹುಟ್ಟು ಹಾಕುತ್ತದೆ” ಎಂದೂ ಹೇಳುತ್ತಾರೆ. ಈ ವಿದ್ಯುತ್ ಉತ್ಪಾದಕರ ಸಂಘದಲ್ಲಿ ಅದಾನಿ ಸಮೂಹದ ಜೊತೆಗೆ ವೇದಾಂತ, ಅರ್‌ಪಿ ಸಂಜೀವ್ ಗೋಯಂಕ ಸಮೂಹ, ರಿಲಯನ್ಸ್ ಹಾಗೂ ಇತರರು ಇದ್ದಾರೆ.
ಉತ್ಪಾದನಾ ಬೇಡಿಕೆ
2021 ಅಕ್ಟೋಬರ್‍ನಲ್ಲಿ ಮಾಧ್ಯಮಗಳು ಆತಂಕಕಾರಿ ಅಂಕಿ ಅಂಶಗಳನ್ನು ವರದಿ ಮಾಡಿದ್ದವು. ದೇಶದಲ್ಲಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಕೇವಲ ನಾಲ್ಕು ದಿನಗಳ ವಿದ್ಯುತ್ ಉತ್ಪಾದನೆಗಾಗುವಷ್ಟು ಕಲ್ಲಿದ್ದಲು ಸಂಗ್ರಹವನ್ನು ಹೊಂದಿವೆ ಎಂದು ಈ ವರದಿಗಳು ಹೇಳಿದ್ದವು ಮತ್ತು ಈ ವರದಿಗಳು “ಅನೇಕ ವರ್ಷಗಳಲ್ಲಿ ಸಂಗ್ರಹವು ತೀರಾ ಕೆಳಮಟ್ಟವನ್ನು ಮುಟ್ಟಿರುವುದು ಇದೇ ಮೊದಲು” ಎಂದು ಕೂಡ ಹೇಳಿದ್ದವು.
ಆದರೆ ಕಲ್ಲಿದ್ದಲು ಸಚಿವಾಲಯವು ಸಂಸತ್ತಿನಲ್ಲಿ ಕಲ್ಲಿದ್ದಲು ಅಭಾವದ ಎಲ್ಲಾ ವರದಿಗಳನ್ನು ತಳ್ಳಿಹಾಕುತ್ತಾ, ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲಿನ ಅಭಾವವು ತಾತ್ಕಾಲಿಕವಾಗಿದ್ದು, ವಿದ್ಯುತ್ ಬೇಡಿಕೆ ಹೆಚ್ಚಳದಿಂದಾಗಿ ಮತ್ತು ಬೇಡಿಕೆ ಹೆಚ್ಚಳಕ್ಕೆ ತಾರ್ಕಿಕ ಕಾರಣಗಳಿವೆ ಎಂದೂ, ಜೊತೆಗೆ ಆ ಸಮಯದಲ್ಲಿ ಭಾರಿ ಮಳೆಯ ಕಾರಣದಿಂದ ಗಣಿಗಳಿಂದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಸಾಗಾಟಕ್ಕೆ ಅಡಚಣೆಯಾಗಿದೆ ಎಂದು ಕಾರಣ ನೀಡಿತ್ತು.
ಈ ವರದಿಗಳ ಬಗ್ಗೆ ಪರಿಣಿತರು “ವಿದ್ಯುತ್ ಸ್ಥಾವರಗಳಲ್ಲಿನ ತಾತ್ಕಾಲಿಕ ಅಭಾವವನ್ನು ಕಾರಣವಾಗಿಟ್ಟುಕೊಂಡು ಸರ್ಕಾರವು ಹೆಚ್ಚಿನ ಕಲ್ಲಿದ್ದಲು ಗಣಿಗಳನ್ನು ಖಾಸಗಿ ಕಂಪನಿಗಳಿಗೆ ನೀಡುವ ಹುನ್ನಾರವಾಗಿರಬಹುದು” ಎಂದು ಎಚ್ಚರಿಸಿದ್ದರು.
ಕಲ್ಲಿದ್ದಲು ಅಭಾವದ ಬಗ್ಗೆ ವರದಿಯಾದ ಒಂದು ತಿಂಗಳ ನಂತರದಲ್ಲಿ ವಿದ್ಯುತ್ ಉತ್ಪಾದಕರ ಸಂಘದ ಪ್ರಧಾನ ನಿರ್ದೇಶಕರಾದ ಹಾಗೂ ಹಿಂದೆ ವಿದ್ಯುತ್ ಸಚಿವಾಲಯದ ಅಧಿಕಾರಿಯಾಗಿದ್ದ ಅಶೋಕ್ ಖುರಾನ, ಅಂದಿನ ಕಲ್ಲಿದ್ದಲು ಕಾರ್ಯದರ್ಶಿಗೆ ಒಂದು ಇ-ಮೇಲ್ ಕಳುಹಿಸಿ, ಕಲ್ಲಿದ್ದಲು ಅಭಾವದ ಬಗ್ಗೆ ಗಮನ ಸೆಳೆದಿದ್ದರು.
ವಿದ್ಯುತ್ ಉತ್ಪಾದಕರ ಸಂಘವು ತನ್ನ ಅಧಿಕೃತ ಜಾಲತಾಣದಲ್ಲಿ ತನ್ನ ಕೆಲಸವು “ಖಾಸಗಿ ವಲಯದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಮತ್ತು ಅವಕ್ಕೆ ಕಾಲಮಿತಿಯೊಳಗೆ ಪರಿಹಾರ ಕಂಡುಕೊಂಡು, ಅದರಿಂದ ನಮ್ಮ (ಖಾಸಗಿ ಕಂಪನಿಗಳ) ಸಾಮರ್ಥ್ಯ ಹೆಚ್ಚಿಸುವ ಗುರಿ ಮುಟ್ಟುವುದಾಗಿದೆ” ಎಂದು ಹೇಳುತ್ತದೆ. ಜೊತೆಗೆ ತಾನು “ಖಾಸಗಿ ವಲಯ ಮತ್ತು ಭಾರತ ಸರ್ಕಾರದ ನಡುವಿನ ಸೇತುವೆ” ಎಂದು ಹೇಳುತ್ತದೆ ಹಾಗೂ “ಭಾರತ ಸರ್ಕಾರವು ಸಂಘವನ್ನು ಅನೇಕ ಬಾರಿ ಜವಾಬ್ದಾರಿಯುತ ಉದ್ಯಮ ಪ್ರತಿನಿಧಿಯಾಗಿ ಗುರುತಿಸಿದೆ” ಎಂದು ಹೇಳಿಕೊಂಡಿದೆ.
ಸರ್ಕಾರದ “ಆತ್ಮನಿರ್ಭರ ಅಭಿಯಾನವನ್ನು” ಪ್ರಸಂಶಿಸುತ್ತಾ ಆರಂಭವಾಗುವ 2021, ನವೆಂಬರ್ 29ರ ಖುರಾನ ಅವರ ಇ-ಮೇಲ್, “ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗಿ ವಲಯಕ್ಕೆ ತೆರೆಯಬೇಕೆಂದು” ಹೇಳುತ್ತದೆ. ಮುಂದುವರೆದು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಕಾಡುತ್ತಿರುವ ಕಲ್ಲಿದ್ದಲಿನ “ಅಭಾವ”ದ ಹಾವಳಿಯನ್ನು ಮುಂದು ಮಾಡುತ್ತಾ, “ದೇಶದ ಇಂಧನದ (ಶಕ್ತಿ) ಅವಶ್ಯಕತೆಯನ್ನು ನೀಗಿಸಿಕೊಳ್ಳಲು ಆಂತರಿಕವಾಗಿ ಅವಲಂಬನೆಯಾಗುವುದನ್ನು ವೃದ್ಧಿಸಿಕೊಳ್ಳಬೇಕು” ಎಂದು ಹೇಳುತ್ತದೆ.
ಕಲಿದ್ದಲು ಕಾರ್ಯದರ್ಶಿಯು, ಕಲಿದ್ದಲು ಸಚಿವಾಲಯದ ಅತ್ಯುನ್ನತ ಅಧಿಕಾರಿಯಾಗಿದ್ದು, ಈ ವಲಯದ ಸಂಪೂರ್ಣ ಜವಾಬ್ದಾರಿ ಅವರದಾಗಿದೆ. ಅವರಿಗೆ ದೇಶದಲ್ಲಿನ ಕಲ್ಲಿದ್ದಲು ಲಭ್ಯತೆಯ ಬಗ್ಗೆ ಮಾಹಿತಿ ಇರಬೇಕು. ಖುರಾನ ಅವರು ಕಲ್ಲಿದ್ದಲು ಅಭಾವದ ಗುಸು-ಗುಸುವನ್ನು ಮುಂದುಮಾಡಿ, ಮತ್ತೊಂದು ವಿಚಾರವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ್ದರು.
ಖುರಾನ ಅವರು ಮುಂದಿನ ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಎರಡು ಕಲ್ಲಿದ್ದಲು ಗಣಿ ಪ್ರದೇಶಗಳನ್ನು ಸೇರಿಸುವ ಮೂಲಕ ದೇಶದ ಕೇಂದ್ರ ಹಾಗೂ ಪಶ್ಚಿಮ ಭಾಗದಲ್ಲಿನ ಕಲ್ಲಿದ್ದಲು ಅವಶ್ಯಕತೆ ಪೂರೈಸಲು ಸಾಧ್ಯ ಎಂದು ಒತ್ತಾಯಿಸಿದ್ದರು. ಮೊದಲಿಗೆ ಅವರು ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿನ ಮಾರಾ II ಮಹಾನ್ ಗಣಿ ಬ್ಲಾಕ್ ಬಗ್ಗೆ ಪ್ರಸ್ತಾಪಿಸಿದರು. ಈ ಪ್ರದೇಶವು 50 ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಶೇಕಡ 90 ಭಾಗ ದಟ್ಟ ಅರಣ್ಯದಿಂದ ಆವೃತವಾಗಿದ್ದು, 950 ದಶಲಕ್ಷ ಟನ್ (MMT) ಕಲ್ಲಿದ್ದಲು ಸಂಗ್ರಹವನ್ನು ಹೊಂದಿರುವ ಅಂದಾಜಿದೆ. ಖುರಾನ ಅವರು ಪ್ರಸ್ತಾಪಿಸಿದ ಎರಡನೇ ಗಣಿ ಪ್ರದೇಶವು ಹಸದೇವ್ ಆರಂದ್‍ನ ಪೆಂದ್ರಾಖಿ ಆಗಿತ್ತು.
ಈ ಗಣಿ ಪ್ರದೇಶವು ಪಾಸ್ರ ಮತ್ತು ವಿಸ್ತರಿತ ಕೆಂಟೆ ಕಲ್ಲಿದ್ದಲು ಗಣಿಗಳ ಪಕ್ಕದಲ್ಲಿದ್ದವು. ಇವೆರಡು ಗಣಿಗಳು ರಾಜಸ್ಥಾನದ ವಿದ್ಯುತ್ ವಿತರಣಾ ಕಂಪನಿಗೆ ಹಂಚಿಕೆಯಾಗಿತ್ತು. ಗಣಿಗಾರಿಕೆಯನ್ನು ಅದಾನಿ ಸಮೂಹ ನಡೆಸುತ್ತಿದೆ. ಗಣಿ ಕಂಪನಿಗಳು ಸಾಗಾಣಿಕೆ ಮತ್ತು ಇತರ ಸ್ವಾಭಾವಿಕ ಅನುಕೂಲಗಳ ಕಾರಣ ತಮ್ಮ ಪ್ರಸ್ತುತ ಗಣಿಗಾರಿಕಾ ಪ್ರದೇಶದ ಅಕ್ಕಪಕ್ಕದಲ್ಲಿನ ಹೊಸ ಗಣಿ ಪ್ರದೇಶದಲ್ಲಿ ಗಣಿಗಾರಿಕೆಯನ್ನು ವಿಸ್ತರಿಸಲು ಬಯಸುತ್ತವೆ. ಪೆಂದ್ರಾಖಿ ಗಣಿ ಪ್ರದೇಶದಲ್ಲಿನ ಕಲ್ಲಿದ್ದಲಿನ ಸಂಗ್ರಹದ ಮಾಹಿತಿ ಕಲ್ಲಿದ್ದಲು ಸಚಿವಾಲಯ ಅಥವಾ ಅದಕ್ಕೆ ಸಂಬಂಧಿಸಿದ ಇತರ ಜಾಲತಾಣಗಳಲ್ಲಿ ಲಭ್ಯವಿಲ್ಲ.
ಈ ಗಣಿ ಪ್ರದೇಶವು, ಪರಿಸರ ಸಚಿವಾಲಯವು 2018ರಲ್ಲಿ ಗಣಿಗಾರಿಕೆಯಿಂದ ಹೊರಗಿಡಬೇಕೆಂದು ಹೇಳಿದ್ದ 15 ಪ್ರದೇಶಗಳ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಇದು ಲೆಮ್ರು ಆನೆ ರಕ್ಷಿತಾರಣ್ಯದ ಸಮೀಪದಲ್ಲಿದೆ ಎಂದು ಪತ್ರ ವ್ಯವಹಾರಗಳಿಂದ ತಿಳಿದುಬರುತ್ತದೆ. ಛತ್ತೀಸಗಢ ಸರ್ಕಾರವು ಹಸದೇವ್ ಆರಂದ್ ಅರಣ್ಯ ಪ್ರದೇಶವನ್ನು ಆನೆ ರಕ್ಷಿತಾರಣ್ಯ ಎಂದು ಗುರುತಿಸಿ, ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಿಲ್ಲ ಎಂದು ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಗಣಿಗಾರಿಕೆಯಿಂದ ಹೊರಗಿಟ್ಟು, ಆನೆ-ಮನುಷ್ಯ ಸಂಘರ್ಷವನ್ನು ಕಡಿಮೆ ಮಾಡುವ ಕ್ರಮ ಕೈಗೊಂಡಿತ್ತು.
ಖುರಾನ ಅವರ ಪತ್ರ ತಲುಪಿದ ನಾಲ್ಕು ದಿನಗಳಲ್ಲಿ, ಕಲ್ಲಿದ್ದಲು ಸಚಿವಾಲಯದ ಉಪ ನಿರ್ದೇಶಕರು ವಿದ್ಯುತ್ ಉತ್ಪಾದಕರ ಸಂಘದ ಒತ್ತಾಯದ ಬಗ್ಗೆ ಗಮನಸೆಳೆಯುತ್ತಾ ಕೇಂದ್ರ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆಗೆ (CMPDIL) ಪತ್ರ ಬರೆದಿದ್ದರು. ಆದರೆ ಅದೇ ತಿಂಗಳು ಸಂಸತ್ತಿನಲ್ಲಿ ಕಲ್ಲಿದ್ದಲು ಅಭಾವದ ವರದಿಗಳನ್ನು ಸಚಿವಾಲಯವು ತಳ್ಳಿಹಾಕಿತ್ತು. ಮತ್ತೊಂದು ಕಡೆ ವಿದ್ಯುತ್ ಉತ್ಪಾದಕರ ಒತ್ತಾಯದ ಬಗ್ಗೆ ಕ್ರಮ ವಹಿಸಲು ಮುಂದಾಗಿತ್ತು.
ಈ ಪತ್ರದಲ್ಲಿ ಕಲ್ಲಿದ್ದಲು ಸಚಿವಾಲಯವು “ಮಾರಾ II ಮಹಾನ್ ಕಲ್ಲಿದ್ದಲು ಪ್ರದೇಶವು MOEF & CC (ಜೀವಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ) ಗುರುತಿಸಿ, ಸಂರಕ್ಷಿಸಬೇಕಾಗಿರುವ ಮತ್ತು ಗಣಿಗಾರಿಕೆಯಿಂದ ಹೊರಗಿಡಬೇಕು ಎಂದು ಪಟ್ಟಿ ಮಾಡಿದ್ದ 15 ಪ್ರದೇಶಗಳಲ್ಲಿ ಒಂದಾಗಿದೆ” ಎಂದು ತಿಳಿಸಿತ್ತು. ಈ ಪ್ರದೇಶದಲ್ಲಿ ಸೂಕ್ಷ್ಮ ಅರಣ್ಯ ಪ್ರದೇಶವನ್ನು ಹೊರತುಪಡಿಸಿ ಹೇಗೆ ಗಣಿಗಾರಿಕೆ ಕೈಗೊಳ್ಳಬಹುದು ಎಂದು CMPDIL ತನ್ನ ಅಭಿಪ್ರಾಯವನ್ನು ತಿಳಿಸಬೇಕೆಂದು ಕೋರಿದ್ದರು.
ವಿದ್ಯುತ್ ಉತ್ಪಾದಕರ ಒತ್ತಾಯದ ಬಗ್ಗೆ ಉಲ್ಲೇಖಿಸುತ್ತಾ, ಮತ್ತೆ ಮಾರ್ಚ್ 10, 2022 ರಂದು ಕಲ್ಲಿದ್ದಲು ಸಚಿವಾಲಯವು CMPDIL ಮತ್ತೊಂದು ಪತ್ರ ಕಳುಹಿಸಿತ್ತು. ಈ ಬಾರಿ ಇನ್ನೊಂದು ವಾಣಿಜ್ಯೋದ್ಯಮ ಲಾಬಿ ಗುಂಪಾದ ASSOCHAM ನಿಂದ ಬಂದಂತಹ ಇಂತಹದೇ ಒತ್ತಾಯ ಪತ್ರವನ್ನು ಕೂಡ ಉಲ್ಲೇಖಿಸಿ, ಅದರಲ್ಲಿ ಮಾರಾ II ಮಹಾನ್ ಮತ್ತು ಪೆಂದ್ರಾಖಿ ಗಣಿ ಪ್ರದೇಶಗಳನ್ನು ವಾಣಿಜ್ಯ ಗಣಿಗಾರಿಕೆಗಾಗಿ ಹರಾಜು ಪ್ರಕ್ರಿಯೆಗೆ ತೆರೆಯಬೇಕೆಂದು ಕೇಳಲಾಗಿದೆ ಎಂದು ತಿಳಿಸಲಾಗಿತ್ತು.
20 ದಿನಗಳ ನಂತರ CMPDILನ ಪ್ರಧಾನ ವ್ಯವಸ್ಥಾಪಕರಾದ ಚಿರಂಜೀಬ್ ಪಾತ್ರ ಅವರು ಪತ್ರ ಬರೆದು ಪೆಂದ್ರಾಖಿ ಪ್ರದೇಶವು “ಜಲಸೂಕ್ಷ್ಮ” (Hrdrologically Sensitive) ಪ್ರದೇಶವಾಗಿದ್ದು, ಹಾಗೂ ಲೆಮ್ರು ಆನೆ ಸಂರಕ್ಷಿತ ಅರಣ್ಯಕ್ಕೆ ಸಮೀಪದಲ್ಲಿದೆ ಎಂದು ತಿಳಿಸಿತ್ತು. ಮುಂದುವರೆದು, ಪಾತ್ರ ಅವರು ಮಾರಾ II ಮಹಾನ್ ಪ್ರದೇಶದಲ್ಲಿ ಅರಣ್ಯಕ್ಕೆ ಕುತ್ತು ಬಾರದಂತೆ ಗಣಿಗಾರಿಕೆಗೆ ನಡೆಸುವ ಬಗ್ಗೆ ಪರಿಸರ ಸಚಿವಾಲಯದ ಅಭಿಪ್ರಾಯ ಪಡೆಯಬೇಕೆಂದು ಸಲಹೆ ನೀಡಿದ್ದರು.
ಪರಿಸರ ಸಚಿವಾಲಯವು ಗಣಿಗಾರಿಕೆ ನಿರ್ಬಂಧಿಸಿದ 15 ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವ ಸಲುವಾಗಿ 2020, ಏಪ್ರಿಲ್ 29ರಂದು ಕಲ್ಲಿದ್ದಲು ಸಚಿವಾಲಯವು CMPDIL ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿತ್ತು. ಪೆಂದ್ರಾಖಿ ಪ್ರದೇಶವು ಪರಿಸರ ಸಚಿವಾಲಯ ಗುರುತಿಸಿದ್ದ 15 ಪ್ರದೇಶಗಳ ಪಟ್ಟಿಯಲ್ಲಿ ಇಲ್ಲದಿದ್ದರಿಂದ ಈ ಚರ್ಚೆಯಲ್ಲಿ ಇದರ ಬಗ್ಗೆ ಪ್ರಸ್ತಾಪವಿರಲಿಲ್ಲ ಹಾಗೂ ಇದನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿರಲಿಲ್ಲ.
ಈ ಸಭೆಯ ನಡವಳಿಗಳ ಪ್ರಕಾರ, CMPDIL ಸಂಸ್ಥೆಯ ಅಧಿಕಾರಿಗಳು 15 ಗಣಿ ಪ್ರದೇಶಗಳ ವಿಚಾರವಾಗಿ ಪ್ರತಿಯೊಂದು ಗಣಿ ಪ್ರದೇಶದ ಬಗ್ಗೆ ಪ್ರತ್ಯೇಕವಾಗಿ ಸಂಪೂರ್ಣ ವಿಚಾರವನ್ನು ಚರ್ಚಿಸಿದರು ಎಂದು ಕಂಡುಬರುತ್ತದೆ.
CMPDIL ಸಂಸ್ಥೆಯು ಈ 15 ಅರಣ್ಯ ಪ್ರದೇಶಗಳಲ್ಲಿ ಯಾವೊಂದು ಪ್ರದೇಶವನ್ನು ಗಣಿಗಾರಿಕೆಗಾಗಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಮಾರಾ II ಮಹಾನ್ ಗಣಿ ಪ್ರದೇಶಕ್ಕೆ ಸಂಬಂಧಿಸಿದಂತೆ, “ಈ ಪ್ರದೇಶವು 90% ಅರಣ್ಯದಿಂದ ಆವೃತವಾಗಿದ್ದು, ಈ ಪ್ರದೇಶದಿಂದ ಯಾವುದೇ ಭಾಗವನ್ನು ಪ್ರತ್ಯೇಕಿಸಲು ಸಾಧ್ಯವಿರುವುದಿಲ್ಲ” ಎಂದು ಹೇಳಿತ್ತು.
ಸಂಗತಿಗಳ ತಿರುಚುವಿಕೆ
ಇದರಿಂದ ವಿಚಲಿತರಾಗದ ಕಲ್ಲಿದ್ದಲು ಕಾರ್ಯದರ್ಶಿಯಾದ ಅನಿಲ್ ಕುಮಾರ್ ಜೈನ್ ಅವರು 2022ರ ಆಗಸ್ಟ್‌ನಲ್ಲಿ ಪರಿಸರ ಸಚಿವಾಲಯಕ್ಕೆ ಈ ವಿಚಾರವಾಗಿ ಪತ್ರ ಬರೆದು “CMPDIL ಸಂಸ್ಥೆಯು ಗಣಿಗಾರಿಕೆಗೆ ನಿಷೇಧಿಸಲ್ಪಟ್ಟಿದ್ದ 15 ಪ್ರದೇಶಗಳಲ್ಲಿ 5 ಗಣಿ ಪ್ರದೇಶಗಳು ಯಾವುದೇ ವನ್ಯಜೀವಿಧಾಮ / ರಾಷ್ಟ್ರೀಯ ಉದ್ಯಾನ / ಪರಿಸರ ಸೂಕ್ಷ್ಮ ವಲಯಕ್ಕೆ (ESZ) ಒಳಪಟ್ಟಿರುವುದಿಲ್ಲ, ಆದರೆ, ಅತಿ ದಟ್ಟಾರಣ್ಯ ಪ್ರದೇಶ ಅಥವಾ ಹಸಿರು ಹೊದಿಕೆಯನ್ನು ಹೊಂದಿದೆ” ಎಂದು ಬರೆಯುತ್ತಾರೆ.
ಮುಂದುವರೆದು ಈ ಪ್ರದೇಶದಲ್ಲಿನ ಅಪಾರ ಹಾಗೂ ಅತ್ಯುತ್ತಮ ಕಲ್ಲಿದ್ದಲು ಸಂಗ್ರವಿರುವ ಕಾರಣ, ಈ ಐದು ಗಣಿ ಪ್ರದೇಶಗಳನ್ನು ಕಲ್ಲಿದ್ದಲು ಸಚಿವಾಲಯವು ಹರಾಜು ಪ್ರಕ್ರಿಯೆಗೆ ಒಳಪಡಿಸಬೇಕೆಂದಿದೆ ಎಂದು ಹೇಳುತ್ತಾರೆ.
ಜೈನ್ ಅವರು ತಮ್ಮ ಪತ್ರದಲ್ಲಿ, CMPDIL ಸಂಸ್ಥೆಯು ಸ್ಪಷ್ಟವಾಗಿ ಈ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಪ್ರತ್ಯೇಕ ಭಾಗಗಳನ್ನು ಗುರುತಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ಮರೆಮಾಚಿದ್ದರು. ಈ ಐದು ಗಣಿ ಪ್ರದೇಶಗಳ ಭೂಭಾಗವು ಶೇಕಡ 82 ರಿಂದ 91 ರಷ್ಟು ಅರಣ್ಯದಿಂದ ಕೂಡಿದೆ.
ಇದಕ್ಕೆ ಪ್ರತಿಯಾಗಿ 2022ರ ಡಿಸೆಂಬರ್ 15 ರಂದು, ದೇಶದ ಪ್ರಧಾನ ಅರಣ್ಯ ನಿರ್ದೇಶಕರು ಪತ್ರ ಬರೆದು, ಎಲ್ಲಾ ಗಣಿಗಾರಿಕೆ ಪ್ರಸ್ತಾವನೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆಂದು ಹೇಳುತ್ತಾ, ಒಂದೊಮ್ಮೆ ಯಾವುದಾದರೂ ಅರಣ್ಯ ಭೂಮಿ ಒಳಗೊಂಡಿದ್ದರೆ, ಅಂತಹ ಸಂದರ್ಭದಲ್ಲಿ ಗಣಿಗಾರಿಕೆ ಆರಂಭಿಸುವ ಮುನ್ನ ಅರಣ್ಯ (ಸಂರಕ್ಷಣಾ) ಕಾಯ್ದೆ, 1980 ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸಂಬಂಧ ಪಟ್ಟ ಬಳಕೆದಾರರು ಅನುಮತಿ ಪಡೆಯಬೇಕು ಎಂದು ಹೇಳಿದ್ದರು.
ಆದರೆ, ಈ ಪತ್ರದಲ್ಲಿ 2018 ರಲ್ಲಿ ಪರಿಸರ ಸಚಿವಾಲಯವು ಹರಾಜು ಪ್ರಕ್ರಿಯೆಗೆ ಒಳಪಡಿಸಬಾರದೆಂದು ತಿಳಿಸಿದ್ದರ ಬಗ್ಗೆ ಉಲ್ಲೇಖವೇ ಇರಲಿಲ್ಲ ಹಾಗೂ ಈ ಗಣಿ ಪ್ರದೇಶಗಳು ಅರಣ್ಯ ಪ್ರದೇಶದಿಂದ ಕೂಡಿರುವ ಬಗ್ಗೆಯೂ ಕೂಡ ಪ್ರಸ್ತಾಪವಿರಲಿಲ್ಲ.
ಮುಂದುವರೆದ ಆಟ
2023ರ ಮಾರ್ಚ್ 29ರಂದು ಕಲ್ಲಿದ್ದಲು ಸಚಿವಾಲಯವು, 7ನೇ ಸುತ್ತಿನ ಗಣಿ ಹರಾಜು ಪ್ರಕ್ರಿಯೆಯಲ್ಲಿ 98 ಗಣಿ ಪ್ರದೇಶಗಳನ್ನು ಹರಾಜಿಗೆ ಒಳಪಡಿಸುತ್ತಿರುವ ಬಗ್ಗೆ ಘೋಷಣೆ ಮಾಡಿತು.
ಈ 98 ಗಣಿ ಪ್ರದೇಶಗಳಲ್ಲಿ ನಾಲ್ಕು ಪ್ರದೇಶಗಳು – ಮಾರಾ II ಮಹಾನ್, ತಾರಾ, ಮಹಾನ್ ಮತ್ತು ತಂಡ್ಸಿ III ಹಾಗೂ ವಿಸ್ತರಿತ ತಂಡ್ಸಿ III ಸೇರಿದ್ದವು. ಇವು ಪರಿಸರ ಸಚಿವಾಲಯ ಈ ಹಿಂದೆ ಹರಾಜು ಪ್ರಕ್ರಿಯೆಗೆ ಒಳಪಡಬಾರದು ಎಂದು ಹೇಳಿದ್ದ 15 ಪ್ರದೇಶಗಳ ಪಟ್ಟಿಯಲ್ಲಿದ್ದ ಗಣಿಗಳಾಗಿದ್ದವು.
ಈ ನಾಲ್ಕು ಗಣಿ ಪ್ರದೇಶಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಲಿಲ್ಲ. ಮಹಾನ್, ಮಾರಾ II ಮಹಾನ್, ಮತ್ತು ತಂಡ್ಸಿ III ಹಾಗೂ ವಿಸ್ತರಿತ ತಂಡ್ಸಿ III ಗಣಿಗಳಿಗೆ ಕೇವಲ ಒಂದೊಂದೇ ಬಿಡ್ ಸಲ್ಲಿಕೆಯಾಗಿದ್ದ ಕಾರಣ ಅವನ್ನು ಹರಾಜು ಪ್ರಕ್ರಿಯೆಯಿಂದ ಹೊರಗಿಡಲಾಯಿತು. ತಾರಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮೂರು ಬಿಡ್‍ದಾರದಿಂದ ಬಿಡ್ ಸಲ್ಲಿಕೆಯಾಗಿತ್ತು ಆದರೆ ಛತ್ತೀಸಗಢ ಸರ್ಕಾರವು ಈ ಪ್ರದೇಶವನ್ನು ಗಣಿಗಾರಿಕೆಯಿಂದ ಹೊರಗಿಡುವಂತೆ ಮನವಿ ಮಾಡಿದ್ದರಿಂದ ಹರಾಜು ಪ್ರಕ್ರಿಯೆ ನಡೆಸಿಲ್ಲ.
ಮಾರಾ II ಮಹಾನ್ ಗಣಿಗೆ ಸಲ್ಲಿಕೆಯಾಗಿದ್ದ ಬಿಡ್ ಅದಾನಿ ಸಮೂಹದ ಮಹಾನ್ ಎನರ್ಜಿನ್ ಲಿಮಿಟೆಟ್‌ನದಾಗಿತ್ತು. ಇದು ವಿದ್ಯುತ್ ಉತ್ಪಾದಕರ ಸಂಘವು ಹರಾಜು ಪ್ರಕ್ರಿಯೆಗೆ ತೆರೆದಿಡುವಂತೆ ಒತ್ತಾಯಿಸಿದ್ದ ಗಣಿ ಪ್ರದೇಶವಾಗಿತ್ತು.
ಹಾಗೆಯೇ, ಮಧ್ಯಪ್ರದೇಶದ ಸಿಂಗ್ರೌಲಿ ಕಲ್ಲಿದ್ದಲು ಗಣಿ ಭಾಗದಲ್ಲಿನ ಮಹಾನ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (MTPP) ಮಹಾನ್ ಎನರ್ಜಿನ್ ಲಿಮಿಟೆಡ್‍ನ ಮಾಲಿಕತ್ವ ಹೊಂದಿದ್ದು ಮತ್ತು ಮಾರಾ II ಮಹಾನ್ ಗಣಿ ಪ್ರದೇಶ ಇರುವುದು ಕೂಡ ಇಲ್ಲಿಯೇ.
ಅದಾನಿ ಸಮೂಹದ ಸಿಂಗ್ರೌಲಿ ಪ್ರದೇಶದ ಕಲ್ಲಿದ್ದಲಿನ ಮೇಲಿನ ದಾಹ ಮಾರ್ಚ್ 2022 ರಲ್ಲಿ 1,200 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವನ್ನು ರೂ. 4,250 ಕೋಟಿಗೆ ಎಸ್ಸಾರ್ ಸಮೂಹದಿಂದ ತನ್ನ ವಶಕ್ಕೆ ಪಡೆದಾಗಿನಿಂದ ಬೆಳೆಯಲಾರಂಭವಾಗಿತ್ತು. 2021ರ ಜೂನ್‍ನಲ್ಲಿಯೆ ಅದಾನಿ ಸಮೂಹವು ಈ ವಿದ್ಯುತ್ ಸ್ಥಾವರಕ್ಕೆ ಯಶಸ್ವಿ ಬಿಡ್‍ದಾರನೆಂದು ತಿಳಿದುಬಂದಿತ್ತು – ಅಂದರೆ ವಿದ್ಯುತ್ ಉತ್ಪಾದಕರ ಸಂಘ ಮಾರಾ II ಮಹಾನ್ ಗಣಿ ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತಗೊಳಿಸಬೇಕು ಎಂದು ಲಾಬಿ ಆರಂಭಿಸುವ ಕೇವಲ ನಾಲ್ಕು ತಿಂಗಳ ಹಿಂದಷ್ಟೇ.
ಮೂಲದಲ್ಲಿ ಈ ವಿದ್ಯುತ್ ಸ್ಥಾವರವು ತನ್ನ ಅವಶ್ಯಕತೆಯ ಕಲ್ಲಿದ್ದಲನ್ನು ಮಾರಾ II ಮಹಾನ್ ಗಣಿ ಪ್ರದೇಶದ ಪಕ್ಕದಲ್ಲಿನ ಮಹಾನ್ ಗಣಿಯಿಂದ ಪಡೆದುಕೊಳ್ಳಬೇಕಿತ್ತು. ಆದರೆ ಪರಿಸರ ಸಂಬಂಧಿತ ಕಾನೂನು ಸಂಕೀರ್ಣತೆಯಿಂದ ಅದು ಸಾಧ್ಯವಾಗಿರಲಿಲ್ಲ. 2006ರಲ್ಲಿ ಅಂದಿನ ಕಾಂಗ್ರೆಸ್ ಮುಂದಾಳತ್ವದ ಒಕ್ಕೂಟ ಸರ್ಕಾರವು, ಮಹಾನ್ ಗಣಿ ಪ್ರದೇಶವನ್ನು ಬ್ರಿಟನ್‍ನಲ್ಲಿ ನೊಂದಾಯಿತ ಕಂಪನಿಯಾದ ಎಸ್ಸಾರ್ ಸಮೂಹದ ಎಸ್ಸಾರ್ ಪವರ್ ಮತ್ತು ಆದಿತ್ಯ ಬಿರ್ಲಾ ಸಮೂಹದ ಹಿಂಡಾಲ್ಕೋ ಇಂಡಸ್ಟ್ರೀಸ್ ಜಂಟಿಯಾಗಿ ಪ್ರಸ್ತಾಪಿಸಿದ್ದ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಹಂಚಿಕೆ ಮಾಡಿತ್ತು.
ಆದರೆ 2010 ಸಮಯದಲ್ಲಿ ಸಿಂಗ್ರೌಲಿ ಕಲ್ಲಿದ್ದಲು ಪ್ರದೇಶವನ್ನು ಸಂಪೂರ್ಣವಾಗಿ ಗಣಿಗಾರಿಕೆಯಿಂದ ನಿಷಿದ್ಧ ಪ್ರದೇಶವೆಂದು ವರ್ಗೀಕರಿಸಿತ್ತು. ಅಂದರೆ ಈ ಪ್ರದೇಶ ಅಮೂಲ್ಯ ಜೀವವೈವಿಧ್ಯತೆಯಿಂದ ಕೂಡಿದ ಅರಣ್ಯವಾಗಿರುವುದರಿಂದ ಗಣಿಗಾರಿಕೆಯಿಂದ ದೂರವಿಡಬೇಕೆಂದಾಗಿತ್ತು. ಆದರೆ ನಂತರದ ದಿನಗಳಲ್ಲಿ ಇದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಲವು ಕ್ಯಾಬಿನೆಟ್ ಸಚಿವರುಗಳನ್ನು ಒಳಗೊಂಡ ಅತ್ಯುನ್ನತ ಸಮಿತಿಯು ಈ ವರ್ಗೀಕರಣಕ್ಕೆ “ಯಾವುದೇ ಕಾನೂನು ತಳಹದಿ ಇಲ್ಲವೆಂದು” ಹೇಳುವ ಮೂಲಕ ಸಂರಕ್ಷಣೆಯಿಂದ ಹೊರಳಿಕೊಂಡಿತು.
ಆದರೂ, ಒಂದೆಡೆ ಪರಿಸರವಾದಿಗಳು, ಅರಣ್ಯವಾಸಿಗಳು ಮತ್ತು ಪರಿಸರ ಸಚಿವಾಲಯ ಹಾಗೂ ಮತ್ತೊಂದೆಡೆ ಗಣಿ ಉದ್ಯಮಿಗಳು ಮತ್ತು ಕಲ್ಲಿದ್ದಲು ಸಚಿವಾಲಯಗಳ ನಡುವಿನ ಸಮರದಿಂದ ಮಹಾನ್ ಮತ್ತು ಮಾರಾ II ಮಹಾನ್ ಪ್ರದೇಶಗಳು ಗಣಿಗಾರಿಕೆಗೆ ತೆರೆದುಕೊಂಡಿರಲಿಲ್ಲ.
ಈಗಿನ ಮೋದಿ ಸರ್ಕಾರವು ಕೂಡ ಶೇಕಡ 40ಕ್ಕಿಂತ ಹೆಚ್ಚಿನ ಅರಣ್ಯ ಪ್ರದೇಶವನ್ನು ಹೊಂದಿರುವ ಗಣಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸುವುದಿಲ್ಲವೆಂದು ಮೊದಲು ಹೇಳಿತ್ತು, ಆದರೆ ನಂತರ ಆ ನೀತಿಯನ್ನು ಅದು ಕೈಬಿಟ್ಟಿದೆ.
2023ರ ಆಗಸ್ಟ್‌ನಲ್ಲಿ ಅದಾನಿ ಸಮೂಹವು ಇಲ್ಲಿನ ವಿದ್ಯುತ್ ಸ್ಥಾವರವನ್ನು ಪ್ರಸ್ತುತ 1,200 ಮೆಗಾವ್ಯಾಟ್ ಜೊತೆಗೆ 1,600 ಮೆಗಾವ್ಯಾಟ್ ಸಾಮರ್ಥ್ಯ ಸೇರ್ಪಡೆ ಮಾಡಿ 920 ಎಕರೆ ಪ್ರದೇಶದಲ್ಲಿ ವಿಸ್ತರಣೆ ಮಾಡಲು ಪರಿಸರ ಅನುಮತಿ ಪಡೆದುಕೊಂಡಿತು. ಈ ವಿಸ್ತರಣೆಗಾಗಿ ಸಲ್ಲಿಸಿದ ಅಧಿಕೃತ ಅರ್ಜಿಯಲ್ಲಿ ಅದಾನಿ ಒಡೆತನದ ವಿದ್ಯುತ್ ಕಂಪನಿಯು, ತನ್ನ ಅವಶ್ಯಕತೆಯ ಕಲ್ಲಿದ್ದಲನ್ನು ಸರ್ಕಾರಿ ಒಡೆತನದ ವೆಸ್ಟರ್ನ್ ಕೋಲ್‍ಫೀಲ್ಡ್ ಮತ್ತು ತನ್ನದೇ ಒಡೆತನದ ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಪೂರೈಸಿಕೊಳ್ಳುವುದಾಗಿ ತಿಳಿಸಿತ್ತು. ಆದರೆ ಅದಾನಿ ಸಮೂಹವನ್ನು ಕೆರಳಿಸುವ ವಿಚಾರವೆಂದರೆ, ತನ್ನ ವಿದ್ಯುತ್ ಸ್ಥಾವರಕ್ಕೆ ತೀರಾ ಸಮೀಪದಲ್ಲಿಯೆ ಕಲ್ಲಿದ್ದಲಿನಿಂದ ಸಮೃದ್ಧವಾಗಿದ್ದ ಸಿಂಗ್ರೌಲಿ ಅರಣ್ಯ ಪ್ರದೇಶವು ಮಾತ್ರ ಗಣಿಗಾರಿಕೆಯಿಂದ ಹೊರಗಿಡಲ್ಪಟ್ಟಿತ್ತು.
ಆದರೆ ವಿದ್ಯುತ್ ಉತ್ಪಾದಕರ ಸಂಘದ ವತಿಯಿಂದ ನಡೆಸಿದ ಲಾಭಿಯ ನಂತರ ಇತ್ತೀಚಿಗೆ ಮುಕ್ತಾಯಗೊಂಡ 7ನೇ ಹಂತದ ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ಈ ವಿದ್ಯುತ್ ಸ್ಥಾವರಕ್ಕೆ ಹತ್ತಿರದಲ್ಲಿದ್ದ ಮಾರಾ II ಮಹಾನ್ ಗಣಿ ಪ್ರದೇಶವನ್ನು ವಾಣಿಜ್ಯ ಗಣಿಗಾರಿಕೆಗಾಗಿ ಹರಾಜಿಗಿಡಲಾಗಿತ್ತು. ಮಹಾನ್ ವಿದ್ಯುತ್ ಸ್ಥಾವರದ ಒಡೆತನ ಹೊಂದಿರುವ ಮಹಾನ್ ಎನರ್ಜಿನ್, ಈ ಗಣಿ ಪ್ರದೇಶಕ್ಕೆ ಏಕಮೇವ ಬಿಡ್‍ದಾರನಾಗಿತ್ತು, ಆದ್ದರಿಂದ ಈ ಹರಾಜು ಪ್ರಕ್ರಿಯೆಯನ್ನು ತಡೆಯಲಾಗಿತ್ತು. ಆದರೆ ಈಗ ಈ ಗಣಿ ಪ್ರದೇಶವು ಬಾಚಿಕೊಳ್ಳುವುದಕ್ಕೆ ಸಕಲ ಸಿದ್ಧವಾಗಿದೆ.
ಅನುವಾದ; ಸಿ ಎನ್ ದೀಪಕ್