ಕಾಕಂಬಿ; ಎಂ-2 ಪರವಾನಿಗೆ ಪಡೆದೇ ಎನ್‌ಒಸಿ ನೀಡುವುದು ಸಮಂಜಸವೆಂದಿದ್ದ ಅಭಿಪ್ರಾಯ ಬದಿಗೊತ್ತಿದ್ದ ಇಲಾಖೆ

ಬೆಂಗಳೂರು; ಎಂ-2 ಸನ್ನದನ್ನು ನೀಡಿದ ನಂತರವೇ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಕಾಕಂಬಿಯನ್ನು ಹೊರ ರಾಜ್ಯ ಮತ್ತು ಹೊರ ದೇಶದಕ್ಕೆ ರಫ್ತು ಮಾಡಲು ನಿರಾಕ್ಷೇಪಣ ಪತ್ರಗಳನ್ನು ನೀಡುವುದು ಸಮಂಜಸವಾಗಿರುತ್ತದೆ ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ನಿಯಮಬಾಹಿರವಾಗಿಯೇ 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಕ್‌ ಟನ್‌ ಕಾಕಂಬಿ ರಫ್ತು ಮಾಡಲು ಅನುಮತಿ ನೀಡಿರುವುದನ್ನು ಇದೀಗ ‘ದಿ ಫೈಲ್‌’ ದಾಖಲೆ ಸಹಿತ ಹೊರಗೆಡವುತ್ತಿದೆ.

 

ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿ ಎತ್ತುವಳಿ ಮತ್ತು ರಫ್ತು ಪರವಾನಿಗೆ ನೀಡುವುದರಲ್ಲಿ ಯಾವುದೇ ನಿಯಮಬಾಹಿರವಾಗಿಲ್ಲ ಎಂದು ಅಬಕಾರಿ ಇಲಾಖೆ ಆಯುಕ್ತ ಡಾ ಜೆ ರವಿಶಂಕರ್‍‌ ಅವರು ಸರ್ಕಾರಕ್ಕೆ 4 ಪುಟಗಳ ವರದಿ ಸಲ್ಲಿಕೆ ಮಾಡಿರುವ ಬೆನ್ನಲ್ಲೇ ಇದೀಗ ಅಬಕಾರಿ ಇಲಾಖೆಯ ಹೆಚ್ಚುವರಿ   ಆಯುಕ್ತರ ಅಭಿಪ್ರಾಯವೂ ಮುನ್ನೆಲೆಗೆ ಬಂದಿದೆ.

 

ಕಾಕಂಬಿ ಹಗರಣದ ಕುರಿತು ಸತತವಾಗಿ ದಾಖಲೆಗಳ ಸಹಿತ ವರದಿ ಪ್ರಕಟಿಸಿದ್ದ ‘ದಿ ಫೈಲ್‌’ ಇದೀಗ ಇದೇ ವಿಷಯದ ಕುರಿತಂತೆ ಅಬಕಾರಿ ಆಯುಕ್ತರ ಕಚೇರಿಯಿಂದಲೂ 300ಕ್ಕೂ ಹೆಚ್ಚು ಪುಟಗಳನ್ನೊಳಗೊಂಡ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಈ ಕಡತದಲ್ಲಿನ 52, 53, 56,57 ಪುಟದ ಟಿಪ್ಪಣಿಯಲ್ಲಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಕರ್ನಾಟಕದಲ್ಲಿ ಯಾವುದೇ ರೀತಿಯಿಂದಲೂ ಕಾಕಂಬಿ ಸನ್ನದನ್ನು ಮಂಜೂರು ಮಾಡಿಲ್ಲ ಎಂದು ಉಲ್ಲೇಖಿಸಿದೆ. ಕಾಕಂಬಿ ರಫ್ತಿಗೆ ಪರವಾನಿಗೆ ನೀಡುವುದರಲ್ಲಿ ಹಗರಣ ನಡೆದಿದೆ ಎಂದು ಕೇಳಿ ಬಂದಿದ್ದ ಆರೋಪಕ್ಕೆ ಹೆಚ್ಚುವರಿ ಆಯುಕ್ತರು ಉಲ್ಲೇಖಿಸಿದ್ದ ಅಂಶಗಳು  ಮತ್ತಷ್ಟು ಬಲಪಡಿಸಿದಂತಾಗಿದೆ.

 

ಹೆಚ್ಚುವರಿ  ಆಯುಕ್ತರ ಅಭಿಪ್ರಾಯದಲ್ಲೇನಿದೆ?

 

ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಕಾಕಂಬಿಯನ್ನು ರಫ್ತು ಮಾಡಲು ಇಚ್ಛಿಸುವವರು ರಾಜ್ಯದಲ್ಲಿನ ಬಂದರಿನಲ್ಲಿ ಶೇಖರಣಾ ವ್ಯವಸ್ಥೆ ಹೊಂದಿದ್ದೇ ಆದಲ್ಲಿ, ಕಾಕಂಬಿ ಹೊಂದುವಿಕೆ ಮತ್ತು ರಫ್ತು ಉದ್ದೇಶಕ್ಕಾಗಿ ಕಾಕಂಬಿ ಸನ್ನದು (ಎಂ 2) ಮಂಜೂರು ಮಾಡಬೇಕಾಗುತ್ತದೆ ಎಂದು ಹೆಚ್ಚುವರಿ  ಆಯುಕ್ತ ರಾಜೇಂದ್ರ ಪ್ರಸಾದ್‌ ಅವರು ಸ್ಪಷ್ಟವಾಗಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

 

‘ಎಂ-2 ಸನ್ನದನ್ನು ಮಂಜೂರು ಮಾಡಿದ ನಂತರವೇ ಕಾಕಂಬಿಯನ್ನು ಹೊರ ರಾಜ್ಯ/ಹೊರ ದೇಶಕ್ಕೆ ರಫ್ತು ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಪರಿಶೀಲಿಸಿ ಪರಿಗಣಿಸಬೇಕಾಗಿದೆ. ಎಂ 2 ಸನ್ನದು ಮಂಜೂರಾತಿ ಇಲ್ಲದೆಯೇ ಕಾಕಂಬಿಯನ್ನು ಹೊರ ರಾಜ್ಯ/ಹೊರ ದೇಶಕ್ಕೆ ರಫ್ತು ಮಾಡುವ ಪ್ರಕ್ರಿಯೆಗಳಲ್ಲಿ ಅಕ್ರಮಗಳೇನಾದರೂ ಕಂಡುಬಂದಲ್ಲಿ ಹಾಗೂ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದ್ದಲ್ಲಿ ಮೊಕದ್ದಮೆಯನ್ನು ದಾಖಲಿಸಲು ಸಾಧ್ಯವಾಗದ ಕಾರಣ ಮತ್ತು ಹೊರ ದೇಶಕ್ಕೆ ರಫ್ತು ಮಾಡಲು ಉದ್ದೇಶಿಸಿರುವ ಕಾಕಂಬಿಯನ್ನು ಕರ್ನಾಟಕ ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಪಡೆಯುತ್ತಿರುವ ಕಾರಣ ಎಂ-2 ಸನ್ನದನ್ನು ನೀಡಿದ ನಂತರವೇ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಕಾಕಂಬಿಯನ್ನು ಹೊರ ರಾಜ್ಯ/ಹೊರ ದೇಶಕ್ಕೆ ರಫ್ತು ಮಾಡಲು ನಿರಾಕ್ಷೇಪಣಾ ಪತ್ರಗಳನ್ನು ನೀಡಲು ಸಮಂಜಸವಾಗಿರುತ್ತದೆ, ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಎಸ್‌ ಎಲ್‌ ರಾಜೇಂದ್ರಪ್ರಸಾದ್‌ ಅವರು 2023ರ ಏಪ್ರಿಲ್‌ 1ರಂದು   5 ಗಂಟೆ 47 ನಿಮಿಷಕ್ಕೆ ಟಿಪ್ಪಣಿಯಲ್ಲಿ ದಾಖಲಿಸಿದ್ದರು.

 

ಆದರೆ ಮತ್ತೊಬ್ಬ ಜಂಟಿ ಆಯುಕ್ತರಾದ ನಿರ್ಮಲಾ ಅವರು ರಾಜೇಂದ್ರ ಪ್ರಸಾದ್‌ ಅವರು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿದ್ದರು. ರಾಜೇಂದ್ರ ಪ್ರಸಾದ್‌ ಅವರು ಉಲ್ಲೇಖಿಸಿದ್ದ ಅಂಶಗಳನ್ನು ನಿರ್ಮಲಾ ಅವರು  ಟಿಪ್ಪಣಿ ಹಾಳೆ 59 ರಲ್ಲಿ ಪ್ರಸ್ತಾಪಿಸಿದ್ದರು. ಅಲ್ಲದೇ ಇದೇ ಪುಟದಲ್ಲಿ ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರ ಪ್ರೆಸ್‌ನೋಟ್‌ನ್ನು ಉಲ್ಲೇಖಿಸಿದ್ದರು.

 

‘ಪ್ರಸ್ತುತ ಪ್ರಕರಣದಲ್ಲಿ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳ ಹಾಗೂ ಅಬಕಾರಿ ಸಚಿವರ ಪ್ರೆಸ್‌ ನೋಟ್‌ನಲ್ಲಿ ಹೊರ ರಾಜ್ಯ ಅಥವಾ ಹೊರ ದೇಶಗಳಿಗೆ ರಫ್ತು ಮಾಡಿಕೊಳ್ಳುವ/ರಫ್ತು ಮಾಡಲು ಇಚ್ಛಿಸುವರ ಪೈಕಿ ರಾಜ್ಯದಲ್ಲಿನ ಬಂದರಿನಲ್ಲಿ ಶೇಖರಣಾ ವ್ಯವಸ್ಥೆ ಹೊಂದಿದ್ದೇ ಆದಲ್ಲಿ ಕಾಕಂಬಿ ಹೊಂದುವಿಕೆ ಮತ್ತು ರಫ್ತಿನ ಉದ್ದೇಶಕ್ಕಾಗಿ ಸರ್ಕಾರದಿಂದ ವಾರ್ಷಿಕ ಕೋಟಾವನ್ನು ಮಂಜೂರು ಮಾಡಿಸಿಕೊಂಡು ನಂತರದಲ್ಲಿ ಅಬಕಾರಿ ಆಯುಕ್ತರಿಂದ ಕಾಕಂಬಿ ಸನ್ನದು (ಎಂ-2) ಪಡೆಯಬೇಕಾಗುತ್ತದೆ.

 

ಇತರೆ ರಾಜ್ಯದ ಬಂದರಿನ ಮುಖಾಂತರ ಕರ್ನಾಟಕ ರಾಜ್ಯದ ಯಾವುದೇ ಸಕ್ಕರೆ ಕಾರ್ಖಾನೆಗಳಿಂದ ಕಾಕಂಬಿ ಪಡೆದು ಸ್ಥಳೀಯ ಬಳಕೆ ಅಥವಾ ಇತರೆ ದೇಶಗಳಿಗೆ ರಫ್ತು ಮಾಡಲು ಇಚ್ಛಿಸಿದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆದು ರಾಜ್ಯದಲ್ಲಿ ಶೇಖರಣೆ ಪ್ರಶ್ನೆ ಉದ್ಭವಿಸುವುದಿಲ್ಲಾವದ್ದರಿಂದ ಎಂ -2 ಸನ್ನದಿನ ಹೊರತಾಗಿ ರಫ್ತು ಮಾಡುವ ರಾಜ್ಯದಲ್ಲಿ ನೀಡಿರುವ ಸನ್ನದಿನ ಅನುಸಾರ ನಿರಾಕ್ಷೇಪಣೆ ಪತ್ರವನ್ನು ಪಡೆದು ಸದರಿ ನಿಲುವನ್ನೇ ಪ್ರಸ್ತುತ ಮುಂದುವರೆಸುವುದು ಸಮಂಜಸವಾಗಿರುತ್ತದೆ,’ ಎಂದು ನಿರ್ಮಲಾ ಅವರು ತಮ್ಮ ಅಭಿಪ್ರಾಯದಲ್ಲಿ (ಪುಟ ಸಂಖ್ಯೆ 60) ಪ್ರತಿಪಾದಿಸಿದ್ದರು.

 

 

 

ಅಂದಾಜು 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಗೆ ರಫ್ತು ಪರವಾನಿಗೆ ನೀಡಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿದ್ದ  ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಮತ್ತು ಕಾಕಂಬಿ ಎತ್ತುವಳಿ ಹಾಗೂ ರಫ್ತಿನ ವಿಚಾರದಲ್ಲಿ ಯಾವುದೇ ನಿಯಮಬಾಹಿರ ಚಟುವಟಿಕೆಗಳೂ ನಡೆದಿಲ್ಲ ಎಂದು ಈಗಿನ  ಕಾಂಗ್ರೆಸ್‌ ಸರ್ಕಾರ ಸಮರ್ಥಿಸಿಕೊಂಡಿದೆ.

 

ಕಾಕಂಬಿ ಎತ್ತುವಳಿ ಮತ್ತು ರಫ್ತು ಪರವಾನಿಗೆ ನೀಡಿರುವುದರಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವಾಗಿಲ್ಲ ಹಾಗೂ ಯಾವುದೇ ನಿಯಮಬಾಹಿರ ಚಟುವಟಿಕೆಗಳು ನಡೆದಿಲ್ಲ ಎಂದು ಈಗಿನ ಕಾಂಗ್ರೆಸ್‌ ಸರ್ಕಾರವೇ ಕ್ಲೀನ್‌ ಚಿಟ್‌ ಕೊಟ್ಟಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ನ್ಯಾಯಾಲಯದಲ್ಲಿ  ವಿಚಾರಣೆ ನಡೆಯುತ್ತಿದ್ದರೂ  ಇದೀಗ ಕಾಂಗ್ರೆಸ್‌ ಸರ್ಕಾರವು ಅದೇ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಅಂದಾಜು 11  ಕೋಟಿ ರು. ಮೌಲ್ಯದ  ಕಾಕಂಬಿ ಎತ್ತುವಳಿ ಮತ್ತು  ರಫ್ತಿಗೆ ಪರವಾನಿಗೆ ನೀಡಿರುವುದರ ಬೆನ್ನಲ್ಲೇ ಈ ಹಗರಣಕ್ಕೆ ಕ್ಲೀನ್‌ ಚಿಟ್‌ ನೀಡಿ ಸಲ್ಲಿಸಿರುವ ವರದಿಯು ಮುನ್ನೆಲೆಗೆ ಬಂದಿದೆ.

 

ಕಾಕಂಬಿ ಹಗರಣಕ್ಕೆ ಕಾಂಗ್ರೆಸ್‌ ಸರ್ಕಾರದಿಂದಲೇ ಕ್ಲೀನ್‌ ಚಿಟ್‌; ಅಬಕಾರಿ ಆಯುಕ್ತರ ವರದಿ ಬಹಿರಂಗ

 

ಎಂ 2 ಲೈಸೆನ್ಸ್‌ ಹೊಂದದೆಯೇ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿ ಎತ್ತುವಳಿ ಮಾಡಿ ರಫ್ತು ಮಾಡಲು ಪರವಾನಿಗೆ ನೀಡಲಾಗಿತ್ತು ಎಂದು ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಅಲ್ಲದೇ ಇದೇ ಅಂಶವನ್ನು ಮುಂದಿರಿಸಿದ್ದ ಕಾಂಗ್ರೆಸ್‌ ಪಕ್ಷವೂ ಸಹ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿತ್ತು.

 

ಆದರೀಗ  ಹಗರಣಕ್ಕೆ ಸಂಬಂಧಿಸಿದಂತೆ    9 ತಿಂಗಳ ನಂತರ ಅಬಕಾರಿ ಇಲಾಖೆಯ ಆಯುಕ್ತ ಡಾ ಜೆ ರವಿಶಂಕರ್‍‌ ಅವರು 2023ರ ಆಗಸ್ಟ್‌ 2ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ   ವರದಿ ನೀಡಿದ್ದಾರೆ.  ಇಡೀ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಆರ್ಥಿಕ ನಷ್ಟವಾಗಿಲ್ಲ ಮತ್ತು ನಿಯಮಬಾಹಿರತೆಗಳೂ ನಡೆದಿಲ್ಲ ಎಂದು ವರದಿಯಲ್ಲಿ  ಹೇಳಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

 

 

ನ್ಯಾಯಾಲಯದಲ್ಲಿ  ವಿಚಾರಣೆ ನಡೆಯುತ್ತಿದ್ದರೂ  ಇದೀಗ ಕಾಂಗ್ರೆಸ್‌ ಸರ್ಕಾರವು ಅದೇ ಕೆ ಎನ್‌ ರಿಸೋರ್ಸ್‌ ಕಂಪನಿಗೆ ಅಂದಾಜು 11  ಕೋಟಿ ರು. ಮೌಲ್ಯದ  ಕಾಕಂಬಿ ಎತ್ತುವಳಿ ಮತ್ತು  ರಫ್ತಿಗೆ ಪರವಾನಿಗೆ ನೀಡಿರುವುದನ್ನು ‘ದಿ ಫೈಲ್‌’ ಹೊರಗೆಡವಿತ್ತು.

 

ಕಾಂಗ್ರೆಸ್‌ ಸರ್ಕಾರಕ್ಕೂ ಸುತ್ತಿಕೊಂಡ ಕಾಕಂಬಿ ಹಗರಣ; ತನಿಖೆಯಲ್ಲಿರುವಾಗಲೇ ರಫ್ತು ಪರವಾನಿಗೆ

 

ಕೆ ಎನ್‌ ರಿಸೋರ್ಸ್‌ ಕಂಪನಿಗೆ ಕಾಕಂಬಿ ರಫ್ತು  ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಆಪಾದಿಸಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ವಿಧಾನಸಭೆ ಚುನಾವಣೆ ಮುನ್ನ ಬಿಡುಗಡೆ ಮಾಡಿದ್ದರು.

 

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್‌ ಖರ್ಗೆ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು ಸಚಿವರ ಹೆಸರು ಪ್ರಸ್ತಾಪವಾಗಿರುವ ಆಡಿಯೋವನ್ನು ಬಹಿರಂಗಗೊಳಿಸಿದ್ದರು.

 

‘ಬಿಜೆಪಿಯವರು ಯಾವುದನ್ನು ಬಿಡದೇ ಲೂಟಿಗಿಳಿದಿದ್ದಾರೆ. ಅಬಕಾರಿ ಇಲಾಖೆಯಲ್ಲಿ  ಕಾಕಂಬಿಯಲ್ಲೂ ಹಗರಣ ನಡೆಯುತ್ತಿದೆ. ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಖಾಸಗಿ ಕಂಪನಿ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಎಂ 1 ಎಂ 2 ಪರವಾನಿಗೆ ಕೊಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ಪರವಾನಿಗೆ ನೀಡಿದ್ದಾರೆ,’ ಎಂದು ಪ್ರಿಯಾಂಕ್‌ ಖರ್ಗೆ ಅವರು ಆರೋಪಿಸಿದ್ದರು.

 

ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾತನಾಡಲು ಹೆದುರುತ್ತಿರುವುದೇಕೆ, ನಿಯಮ ಮೀರಿ ಕಾಕಂಬಿ ರಫ್ತು ಮಾಡಲು ಸಹಕರಿಸಿದ್ದೇಕೆ? ಯಥಾ ಪ್ರಕಾರ ದಾಖಲೆ ಕೊಡಿ, ಸಾಕ್ಷಿ ಕೊಡಿ ಎನ್ನುವಿರಾ ಅಥವಾ ಸೂಕ್ತ ತನಿಖೆಯ ಅಗ್ನಿಪರೀಕ್ಷೆಗೆ ಒಳಪಟ್ಟು ಪ್ರಾಮಾಣಿಕತೆ ಸಾಬೀತುಪಡಿಸುವಿರಾ ಎಂದು ಪ್ರಶ್ನಿಸಿದ್ದರು.

 

ಬಿಜೆಪಿ ಸಂಸದರು ನೇರವಾಗಿ ಸಿ ಎಂ ಬಳಿ ಈ ಡೀಲ್‌ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಡೀಲ್‌ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಇದಕ್ಕೆ ಅನುಮತಿ ಕೊಡಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್‌ ಮನವೊಲಿಸಲು ಈ ಅನುಮತಿ ಕೊಟ್ಟರಾ ಎಂದೂ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

 

 

260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್‌’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್‌

 

 

ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದ  ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಕಾಕಂಬಿ ರಫ್ತು ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

 

ಅಬಕಾರಿ ಹಗರಣ; ‘ದಿ ಫೈಲ್‌’ ವರದಿ ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿ ಹೇಳಿಕೆ ಬಿಡುಗಡೆ

 

ಈ ಪ್ರಕರಣದ ಕುರಿತು  ಆರಂಭದಲ್ಲಿ   ಮೌನ ವಹಿಸಿದ್ದ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ವಿವಾದಿತ ಕಂಪನಿಗೇ 9,500 ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿ ಎತ್ತುವಳಿ ಮತ್ತು ರಫ್ತು ಮಾಡಲು ಪರವಾನಿಗೆ ನೀಡಿರುವುದು  ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ರಫ್ತು ಪರವಾನಿಗೆ ನೀಡುವುದಕ್ಕೆ ಅಬಕಾರಿ ಹಾಲಿ ಸಚಿವ ಆರ್‍‌ ಬಿ ತಿಮ್ಮಾಪೂರ ಅವರೂ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

 

ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವುದರ ಹಿಂದೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು 8 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ‘ದಿ ಫೈಲ್‌’ 2022ರ ಅಕ್ಟೋಬರ್‌ 13ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್‌ ಆರೋಪ

 

ಕೆ ಎನ್ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಎಂ-2 ಲೈಸೆನ್ಸ್‌ ಇಲ್ಲದಿದ್ದರೂ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮೋದನೆ ನೀಡಿದ್ದನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡ ದಾಖಲೆಗಳನ್ನಾಧರಿಸಿ 2022ರ ನವಂಬರ್‌ 30ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ

 

ಈ ಕುರಿತು ಲಂಚಮುಕ್ತ ಕರ್ನಾಟಕ ವೇದಿಕೆಯು ಪ್ರಧಾನಿಗೂ ದೂರು ಸಲ್ಲಿಸಿತ್ತು.

 

ಅಬಕಾರಿ ಹಗರಣ; ಸಚಿವ ಗೋಪಾಲಯ್ಯ ಸೇರಿ ಅಧಿಕಾರಿಗಳ ವಿರುದ್ಧ ಪ್ರಧಾನಿಗೆ ದೂರು

 

ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಯೊಬ್ಬರ ಪುತ್ರನ ಹೆಸರು ಪ್ರಸ್ತಾಪವಾಗಿದ್ದ ಆಡಿಯೋವನ್ನಾಧರಿಸಿ ‘ದಿ ಫೈಲ್‌’ 2022ರ ಡಿಸೆಂಬರ್‌ 22ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ

 

ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉದ್ಯಮಿಗಳ ವಲಯದಲ್ಲಿ 25 ಪ್ರಶ್ನೆಗಳು ಕೇಳಿಬಂದಿದ್ದವು. ಈ ಕುರಿತು 2022ರ ಡಿಸೆಂಬರ್‌ 24ರಂದು ವರದಿ ಪ್ರಕಟಿಸಿತ್ತು.

 

ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು

 

ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವುದು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕಾಂಗ್ರೆಸ್‌ ಇದೀಗ ಮೌನಕ್ಕೆ ಜಾರಿರುವುದು ಮತ್ತು ರಾಜ್ಯ ಅಬಕಾರಿ ಇಲಾಖೆಯು ಪರವಾನಿಗೆಯನ್ನು ಮುಂದುವರೆಸಿರುವುದರ ಹಿಂದೆ  ಹಲವು ಅನುಮಾನಗಳು ವ್ಯಕ್ತವಾಗಿವೆ.

the fil favicon

SUPPORT THE FILE

Latest News

Related Posts