ಬೆಂಗಳೂರು; ರಾಜ್ಯದ ಬರ ಪೀಡಿತ ಎಂದು ಪ್ರಾಥಮಿಕವಾಗಿ ಗುರುತಿಸಿದ್ದ ತಾಲೂಕುಗಳ ಪೈಕಿ 14,226 ಬೆಳೆ ತಾಕು ಸ್ಥಳಗಳಲ್ಲಿ ನಡೆಸಿದ್ದ ಬೆಳೆ ಸಮೀಕ್ಷೆ ಪ್ರಕಾರ 10,117 ಬೆಳೆ ತಾಕುಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ವಾಸ್ತವಿಕ ಸಂಗತಿ ಆಧಾರದ ಮೇಲೆ ನಡೆಸಿರುವ ಸಮೀಕ್ಷೆ ಮತ್ತು ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರವು ನಡೆಸಿರುವ ಸಮೀಕ್ಷೆಯ ಪ್ರಕಾರ ಬರ ಪರಿಸ್ಥಿತಿಯ ‘ಗಂಭೀರತೆ’ ಕುರಿತು ಒಮ್ಮತದಿಂದ ಕೂಡಿದ ಅಭಿಪ್ರಾಯಗಳನ್ನು ನೀಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ವಾಸ್ತವಿಕ ಸಂಗತಿಗಳ ಆಧಾರದ ಮೇಲೆ ಕೆಲ ತಾಲೂಕುಗಳು ಗಂಭೀರ ಪರಿಸ್ಥಿತಿಯಲ್ಲಿದ್ದರೇ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರವು ನಡೆಸಿದ ಸಮೀಕ್ಷೆ ಪ್ರಕಾರ ಅವೇ ತಾಲೂಕುಗಳು ‘ಮಧ್ಯಮ’ ಹಂತದಲ್ಲಿವೆ.
ಮುಂಗಾರು ಜೂನ್ 1ರಿಂದ ಸೆಪ್ಟಂಬರ್ 2ನೇ ಅವಧಿಯಲ್ಲಿ ಬರ ಪರಿಸ್ಥಿತಿ ಕಂಡು ಬಂದಿರುವ ಹೆಚ್ಚುವರಿ 83 ತಾಲೂಕುಗಳ ಪಟ್ಟಿಯೂ ಹೊರಬಿದ್ದ ಬೆನ್ನಲ್ಲೇ ಇದೀಗ ಗ್ರಾಮಗಳಲ್ಲಿನ ಬೆಳೆ ಹಾನಿಗೆ ಸಂಬಂಧಿಸಿದಂತೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ವಾಸ್ತವಿಕ ಸತ್ಯವನ್ನು ಅಂಕಿ ಅಂಶಗಳ ಸಮೇತ ವಿವರವಾದ ವರದಿಯನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೀಡಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬರಪೀಡಿತ ಹಳ್ಳಿಗಳ ಪೈಕಿ ಶೇ. 33ಕ್ಕಿಂತ ಕಡಿಮೆ ಹಾನಿಯಾಗಿರುವ ಪಟ್ಟಿಯಲ್ಲಿ 539 ಹಳ್ಳಿಗಳಿವೆ. ಶೇ.33ರಿಂದ ಶೇ.50ರ ಗಡಿವರೆಗೆ 3,833 ಹಳ್ಳಿಗಳಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.70ರಷ್ಟು ಬೆಳೆಹಾನಿಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತನ್ನ ಅಂಕಿ ಅಂಶಗಳಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ವಾಸ್ತವಿಕ ಸಂಗತಿಗಳ ಆಧಾರದ ಮೇರೆಗೆ ಒಟ್ಟು 62 ತಾಲೂಕುಗಳು ಗಂಭೀರ ಪರಿಸ್ಥಿತಿಯಲ್ಲಿವೆ. ವಾಸ್ತವಿಕ ಸಂಗತಿಗಳು ಮತ್ತು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜಂಟಿಯಾಗಿ ಮಾಡಿರುವ ಪಟ್ಟಿ ಪ್ರಕಾರ 27 ತಾಲೂಕುಗಳು, ವಾಸ್ತವಿಕ ಸಂಗತಿಗಳ ಆಧಾರದ ಮೇರೆಗೆ ಗಂಭೀರ ಪರಿಸ್ಥಿತಿ ಎಂದು ಪಟ್ಟಿಯಾಗಿರುವ ತಾಲೂಕುಗಳ ಪೈಕಿ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರದ ಪ್ರಕಾರ 35 ತಾಲೂಕುಗಳು ಮಧ್ಯಮ ಸ್ಥಿತಿಯಲ್ಲಿವೆ. ಅದೇ ರೀತಿ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರದ ಪ್ರಕಾರ ಗಂಭೀರ ಪರಿಸ್ಥಿತಿ ಎಂದು ಪಟ್ಟಿಯಾಗಿರುವ ತಾಲೂಕುಗಳು, ವಾಸ್ತವಿಕ ಸಂಗತಿಗಳ ಪ್ರಕಾರ 11 ತಾಲೂಕುಗಳನ್ನು ಕೆಳದರ್ಜೆಗಿಳಿಸಿರುವುದು, 49 ತಾಲೂಕುಗಳನ್ನು ಮಧ್ಯಮ ಹಂತದ ಪಟ್ಟಿಗೆ ಅರ್ಹವಾಗಿಸಿರುವುದು ಗೊತ್ತಾಗಿದೆ.
ಒಟ್ಟು 1,519 ಹಳ್ಳಿಗಳ 14,226 ತಾಕು ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದು ಈ ಪೈಕಿ 10,117 ತಾಕು ಪ್ರದೇಶಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಬೆಳೆ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಾಗಲಕೋಟೆಯ ಬದಾಮಿ ತಾಲೂಕಿನಲ್ಲಿ 12 ಹಳ್ಳಿಗಳ 131 ಬೆಳೆ ತಾಕು ಸ್ಥಳಗಳಲ್ಲಿ ವಾಸ್ತವಿಕ ಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ 113 ತಾಕು ಪ್ರದೇಶಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಬೆಳೆ ಹಾನಿ ಸಂಭವಿಸಿರುವುದು ಗೊತ್ತಾಗಿದೆ. ವಾಸ್ತವಿಕ ಸಂಗತಿಗಳ ಪ್ರಕಾರ ಈ ತಾಕು ಪ್ರದೇಶಗಳು ಗಂಭೀರ ಸ್ಥಿತಿಯಲ್ಲಿದ್ದರೇ, ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರದ ಪ್ರಕಾರ ಮಧ್ಯಮ ಸ್ಥಿತಿಯಲ್ಲಿದೆ. ಬಾಗಲಕೋಟೆಯ ಬೀಳಗಿ, ಬಾಗಲಕೋಟೆ, ಗುಳೇದಗುಡ್ಡ, ಹುನಗುಂದ, ಇಳಕಲ್, ಜಮಖಂಡಿ, ಮುಧೋಳ, ರಬಕವಿಬನಹಟ್ಟಿಯ 830 ತಾಕು ಸ್ಥಳಗಳ ಪೈಕಿ 712 ಕಡೆಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಳೆ ಹಾನಿ ಸಂಭವಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಬಳ್ಳಾರಿ ಮತ್ತು ಸಿರಗುಪ್ಪದ 17 ಹಳ್ಳಿಗಳ 165 ತಾಕು ಪ್ರದೇಶಗಳ ಪೈಕಿ 163, ಬೆಳಗಾವಿಯ 72 ಹಳ್ಳಿಗಳಲ್ಲಿನ ಬೆಳೆ ತಾಕನ್ನು ಸಮೀಕ್ಷೆಗೆ ಒಳಪಡಿಸಿದ್ದ 932ರಲ್ಲಿ 464, ಬೆಂಗಳೂರು ಗ್ರಾಮಾಂತರದ 54 ಹಳ್ಳಿಗಳ 348 ತಾಕಿನ ಪೈಕಿ 318, ಬೆಂಗಳೂರು ನಗರ ಜಿಲ್ಲೆಯ 42 ಹಳ್ಳಿಗಳ 269 ತಾಕುಗಳಲ್ಲಿ 109, ಬೀದರ್ ಜಿಲ್ಲೆಯ 16 ಹಳ್ಳಿಗಳಲ್ಲಿ 162 ತಾಕುಗಳು, ಚಿಕ್ಕಬಳ್ಳಾಪುರದ 142 ಹಳ್ಳಿಗಳ 1.064 ತಾಕುಗಳಲ್ಲಿ 1,009, ಚಿಕ್ಕಮಗಳೂರಿನ 48 ಹಳ್ಳಿಗಳಲ್ಲಿನ 672 ತಾಕುಗಳಲ್ಲಿ 521, ಚಿತ್ರದುರ್ಗದ 70 ಹಳ್ಳಿಗಳಲ್ಲಿ 628 ತಾಕುಗಳ 475, ದಾವಣಗೆರೆಯ 39 ಹಳ್ಳಿಗಳ 321 ತಾಕುಗಳ 318, ಧಾರವಾಡದ 25 ಹಳ್ಳಿಗಳ 580 ತಾಕುಗಳಲ್ಲಿ 383, ಗದಗ್‌ನ 24 ಹಳ್ಳಿಗಳ 383 ತಾಕುಗಳ 277, ಹಾಸನದ 78 ಹಳ್ಳಿಗಳ 836 ತಾಕುಗಳ 104, ಹಾವೇರಿಯ 21 ಹಳ್ಳಿಗಳ 201 ತಾಕುಗಳ 199, ಕಲ್ಬುರ್ಗಿಯ 50 ಹಳ್ಳಿಗಳ 584 ತಾಕುಗಳ 349, ಕೊಡಗಿನ 24 ಹಳ್ಳಿಗಳ 157 ತಾಕುಗಳ 125, ಕೋಲಾರದ 112 ಹಳ್ಳಿಗಳ 584 ತಾಕುಗಳ 428, ಕೊಪ್ಪಳದ 48 ಹಳ್ಳಿಗಳ 1,293 ತಾಕುಗಳ 853, ಮಂಡ್ಯದ 38 ಹಳ್ಳಿಗಳ 206 ತಾಕುಗಳ 178, ಮೈಸೂರಿನ 31 ಹಳ್ಳಿಗಳ 207 ತಾಕುಗಳ 85, ರಾಯಚೂರಿನ 29 ಹಳ್ಳಿಗಳ 271 ತಾಕುಗಳ 101, ರಾಮನಗರ ಜಿಲ್ಲೆಯ 43 ಹಳ್ಳಿಗಳ 229 ತಾಕುಗಳ 218, ಶಿವಮೊಗ್ಗದ 158 ಹಳ್ಳಿಗಳ 943 ತಾಕುಗಳ 699, ತುಮಕೂರಿನ 158 ಹಳ್ಳಿಗಳ 1,258 ತಾಕುಗಳ 1,128, ಉತ್ತರ ಕನ್ನಡದ 47 ಹಳ್ಳಿಗಳ 494 ತಾಕುಗಳ 102, ವಿಜಯನಗರ ಜಿಲ್ಲೆಯ 12 ಹಳ್ಳಿಗಳ 67 ತಾಕುಗಳ 64, ವಿಜಯಪುರದ 30 ಹಳ್ಳಿಗಳ 482 ತಾಕುಗಳ 182, ಯಾದಗಿರಿಯ 19 ಹಳ್ಳಿಗಳ 197 ತಾಕುಗಳ 123 ತಾಕುಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಬೆಳೆ ಹಾನಿ ಸಂಭವಿಸಿರುವುದು ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರದ ಅಂಕಿ ಅಂಶಗಳಿಂದ ಗೊತ್ತಾಗಿದೆ.
ಬರ ಪರಿಸ್ಥಿತಿ ಕಂಡು ಬಂದಿರುವ ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣ ಸಲುವಾಗಿ ತಾಲೂಕುಗಳ ಪಟ್ಟಿಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಒದಗಿಸಿತ್ತು.
2023ರ ಸೆಪ್ಟಂಬರ್ 2ರ ಅಂತ್ಯಕ್ಕೆ ಹೆಚ್ಚುವರಿಯಾಗಿ ಬರ ಪರಿಸ್ಥಿತಿ ಕಂಡು ಬಂದಿರುವ 83 ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಂಟಿ ಸಮೀಕ್ಷೆ ಕೈಗೊಂಡು ದೃಢೀಕೃತ ವರದಿ ಸಲ್ಲಿಸಲು ಸೂಚಿಸಲಾಗಿತ್ತು.
ಬಳ್ಳಾರಿಯ ಕುರುಗೋಡು, ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ನೆಲಮಂಗಲ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕು, ಯಲಹಂಕ, ಚಾಮರಾಜನಗರದ ಕೊಳ್ಳೇಗಾಲ, ಚಿಕ್ಕಬಳ್ಳಾಪುರದ ಗುಡಿಬಂಡೆ, ಧಾರವಾಡದ ನವಲಗುಂದ, ಗದಗ್ ಜಿಲ್ಲೆಯ ಗದಗ ತಾಲೂಕು, ಕೋಲಾರದ ಶ್ರೀನಿವಾಸಪುರ, ಮಂಡ್ಯದ ಕೆ ಆರ್ ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಮೈಸೂರಿನ ಪಿರಿಯಾಪಟ್ಟಣ ಸೇರಿದಂತೆ ಹಲವು ತಾಲೂಕುಗಳ ತೀವ್ರ ಬರ ಪರಿಸ್ಥಿತಿ ಅನುಭವಿಸಿವೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸರ್ಕಾರಕ್ಕೆ ಪಟ್ಟಿ ಒದಗಿಸಿತ್ತು.
ಬಳ್ಳಾರಿಯ ಸಂಡೂರು, ಕಂಪ್ಲಿ, ಬೆಳಗಾವಿಯ ರಾಮದುರ್ಗ, ಬೀದರ್‍ನ ಬಸವಕಲ್ಯಾಣ, ಚಾಮರಾಜನಗರದ ಗುಂಡ್ಲುಪೇಟೆ, ಯಳಂದೂರು, ಹನೂರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ, ಕಳಸ, ಚಿತ್ರದುರ್ಗದ ಚಳ್ಳಕೆರೆ, ಹಿರಿಯೂರು, ದಕ್ಷಿಣ ಕನ್ನಡದ ಮೂಡಬಿದರೆ, ದಾವಣಗೆರೆ ಜಿಲ್ಲೆಯ ದಾವಣಗೆರೆ, ನ್ಯಾಮತಿ, ಹಾಸನದ ಬೇಲೂರು, ಚನ್ನರಾಯಪಟ್ಟಣ, ಹಾವೇರಿಯ ಹಾವೇರಿ, ರಾಣೆಬೆನ್ನೂರು, ಕಲ್ಬುರ್ಗಿಯ ಚಿಂಚೋಳಿ, ಜೇವರ್ಗಿ, ಸೇಡಂ, ಕಮಲಾಪುರ, ಯಡ್ರಾಮಿ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಕೋಲಾರದ ಮುಳಬಾಗಿಲು, ಕೊಪ್ಪಳದ ಕಾರಟಗಿ, ಕೊಪ್ಪಳದ ಕೊಪ್ಪ, ಮೈಸೂರಿನ ನಂಜನಗೂಡು ತಾಲೂಕುಗಳು ಮಧ್ಯಮ ಬರ ಪರಿಸ್ಥಿತಿ ಎದುರಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಗುರುತಿಸಿ ಪಟ್ಟಿ ಮಾಡಿರುವ 113 ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳ ಕುರಿತು ಇದೇ ಸೆಪ್ಟಂಬರ್ 2ನೇ ವಾರದಲ್ಲಿ ಮೆಮೋರಾಂಡಂ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಈಗಿನಿಂದಲೇ ರೈತರಿಗೆ ಫಾಡರ್ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಜೂನ್ 1ರಿಂದ ಸೆಪ್ಟಂಬರ್ 2ವರೆಗೆ 512 ಮಿ ಮೀ ಮಳೆಯಾಗಿದೆ. ವಾಡಿಕೆ ಮಳೆ (701 ಮಿ ಮೀ) ಗೆ ಹೋಲಿಸಿದರೆ ಶೇ. 27ರಷ್ಟು ಮಳೆ ಕೊರತೆ ಇದೆ. ಜೂನ್ 1ರಿಂದ ಸೆಪ್ಟಂಬರ್‍ವರೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಕೊರತೆ ಹಾಗೂ ಉಳಿದ 15 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಕಂಡು ಬಂದಿರುವ ಶೇ.73ರಷ್ಟು ಮಳೆ ಕೊರತೆಯು ಇಲ್ಲಿಯವರೆಗೂ ಲಭ್ಯವಿರುವ ಮಳೆ ಮಾಹಿತಿಗೆ ಹೋಲಿಸಿದರೆ ಶತಮಾನದ ದಾಖಲೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸಭೆಗೆ ಮಾಹಿತಿ ಒದಗಿಸಿತ್ತು.
ಶತಮಾನದ ದಾಖಲೆ; ವಾಡಿಕೆಗಿಂತ ಕಡಿಮೆ ಮಳೆ ಸಂಭವ, ಬರಪೀಡಿತ ಹೆಚ್ಚುವರಿ ತಾಲೂಕುಗಳ ಪಟ್ಟಿ ಬಹಿರಂಗ
‘ಮೂರು ವಾರಗಳ ಮುನ್ಸೂಚನೆ ಅನ್ವಯ ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆ ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯದಲ್ಲಿ ಆಗಸ್ಟ್ ತಿಂಗಳ ಉಳಿದ ದಿನಗಳಿಗೆ ಹಾಗೂ ಸೆಪ್ಟಂಬರ್‍ಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಂಭವ ಹೆಚ್ಚಿದೆ,’ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.