ಬೆಂಗಳೂರು; ಅಂದಾಜು 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿಯನ್ನು ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್ ಕಂಪನಿಗೆ ರಫ್ತು ಪರವಾನಿಗೆ ನೀಡಿರುವ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಇದೀಗ ಕಾಂಗ್ರೆಸ್ ಸರ್ಕಾರವು ಅದೇ ಕೆ ಎನ್ ರಿಸೋರ್ಸ್ ಕಂಪನಿಗೆ ಅಂದಾಜು 11 ಕೋಟಿ ರು. ಮೌಲ್ಯದ ಕಾಕಂಬಿ ಎತ್ತುವಳಿ ಮತ್ತು ರಫ್ತಿಗೆ ಪರವಾನಿಗೆ ನೀಡಿರುವುದನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಇದೇ ಕಂಪನಿಗೆ ಎಂ 2 ಲೈಸೆನ್ಸ್ ಇಲ್ಲದಿದ್ದರೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಫ್ತು ಪರವಾನಿಗೆ ನೀಡುವಲ್ಲಿ ಅಕ್ರಮ ನಡೆದಿತ್ತು ಎಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವು ನ್ಯಾಯಾಂಗ ತನಿಖೆಗೆ ಆಗ್ರಹಿಸಿತ್ತು. ಹಿಂದಿನ ಸರ್ಕಾರದಲ್ಲಿ ನೀಡಿದ್ದ ಪರವಾನಿಗೆಯನ್ನು ರದ್ದುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಬದಲಿಗೆ ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ವಿವಾದಿತ ಕಂಪನಿಗೆ ಸಕ್ಕರೆ ಕಾರ್ಖಾನೆಗಳಿಂದ ಕಾಕಂಬಿ ಎತ್ತುವಳಿ ಮತ್ತು ರಫ್ತು ಮಾಡಲು ಪರವಾನಿಗೆಯನ್ನು ಮುಂದುವರೆಸಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ.
ಕೆ ಎನ್ ರಿಸೋರ್ಸ್ ಕಂಪನಿಗೆ ವಿಜಯಪುರದ ಬಸವೇಶ್ವರ ಶುಗರ್ಸ್ ಲಿಮಿಟೆಡ್‌ನಿಂದ 9,500 ಮೆಟ್ರಿಕ್ ಟನ್ ನಷ್ಟು ಕಾಕಂಬಿ ಎತ್ತುವಳಿ ಮಾಡಿ ರಫ್ತು ಮಾಡಲು 2023ರ ಆಗಸ್ಟ್ 24ರಂದು ವಿಜಯಪುರ ಅಬಕಾರಿ ಉಪ ಆಯುಕ್ತರು ಪರವಾನಿಗೆ ನೀಡಿದ್ದಾರೆ. ಪರವಾನಿಗೆ ಅವಧಿಯು 2023ರ ಅಕ್ಟೊಬರ್ 21ರವರೆಗೂ ಇರಲಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗೋವಾ ಬಂದರು ಮೂಲಕ ಕಾಕಂಬಿ ರಫ್ತು ಮಾಡಲು ಗೋವಾ ಸರ್ಕಾರವು 2023ರ ಆಗಸ್ಟ್ 2ರಂದು ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಇದರ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಎಂ-2 ಪರವಾನಿಗೆ ಇಲ್ಲದಿದ್ದರೂ ವಿಜಯಪುರ ಬಸವೇಶ್ವರ ಶುಗರ್ಸ್ ಪ್ರೈ ಲಿಮಿಟೆಡ್‌ನಿಂದ 9,500 ಮೆಟ್ರಿಕ್ ಟನ್ ಕಾಕಂಬಿ ಎತ್ತುವಳಿ ಮಾಡಿ ರಫ್ತು ಮಾಡಲು ಪರವಾನಿಗೆ ನೀಡಿರುವುದರ ಹಿಂದೆ ಹಿರಿಯ ಸಚಿವರೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗೊತ್ತಾಗಿದೆ.
ಮಾರುಕಟ್ಟೆಯಲ್ಲಿ ಒಂದು ಮೆಟ್ರಿಕ್ ಟನ್ ಕಾಕಂಬಿಗೆ 12,000 ರು. ಇದೆ. ಇದರ ಪ್ರಕಾರ 9,500 ಮೆಟ್ರಿಕ್ ಟನ್‌ಗೆ ಅಂದಾಜು 11 ಕೋಟಿ ಮೌಲ್ಯವಿದೆ ಎಂದು ತಿಳಿದು ಬಂದಿದೆ.
ಕೆ ಎನ್ ರಿಸೋರ್ಸ್ ಕಂಪನಿಗೆ ಪರವಾನಿಗೆ ನೀಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲಂಚ ಮುಕ್ತ ಕರ್ನಾಟಕ ವೇದಿಕೆಯು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದಾಖಲೆ ಸಹಿತ ದೂರು ನೀಡಿತ್ತು. ಆದರೆ ಈ ದೂರನ್ನಾಧರಿಸಿ ಲೋಕಾಯುಕ್ತ ಪೊಲೀಸ್ ವಿಭಾಗವು ತನಿಖೆಯನ್ನು ಚುರುಕುಗೊಳಿಸಿಲ್ಲ. ಬದಲಿಗೆ ದೂರುದಾರರಿಗೆ ಹಲವು ಬಾರಿ ನೋಟೀಸ್ ನೀಡಿದೆಯೇ ವಿನಃ, ಆರೋಪಿತರಾಗಿರುವ ಮಾಜಿ ಸಚಿವ ಗೋಪಾಲಯ್ಯ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ ಎಂದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗವು ಕ್ರಮ ವಹಿಸದ ಕಾರಣ ಲಂಚ ಮುಕ್ತ ಕರ್ನಾಟಕ ವೇದಿಕೆಯ ಉಪಾಧ್ಯಕ್ಷ ಮಂಜುನಾಥ್ ಎಂಬುವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಯು ಇದೇ ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಈ ಕಂಪನಿಗೆ ಪರವಾನಿಗೆಯನ್ನು ಮುಂದುವರೆಸಿದೆ. ಸಚಿವ ತಿಮ್ಮಾಪುರ ಅವರ ಗಮನಕ್ಕೆ ತಂದು ಈ ಪರವಾನಿಯನ್ನು ಮುಂದುವರೆಸಿದೆ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ಆಗ ಆರೋಪ, ಈಗ ಮೌನ
ಕೆ ಎನ್ ರಿಸೋರ್ಸ್ ಕಂಪನಿಗೆ ಕಾಕಂಬಿ ರಫ್ತು ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಆಪಾದಿಸಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ವಿಧಾನಸಭೆ ಚುನಾವಣೆ ಮುನ್ನ ಬಿಡುಗಡೆ ಮಾಡಿದ್ದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್ ಖರ್ಗೆ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು ಸಚಿವರ ಹೆಸರು ಪ್ರಸ್ತಾಪವಾಗಿರುವ ಆಡಿಯೋವನ್ನು ಬಹಿರಂಗಗೊಳಿಸಿದ್ದರು.
‘ಬಿಜೆಪಿಯವರು ಯಾವುದನ್ನು ಬಿಡದೇ ಲೂಟಿಗಿಳಿದಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಕಾಕಂಬಿಯಲ್ಲೂ ಹಗರಣ ನಡೆಯುತ್ತಿದೆ. ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಖಾಸಗಿ ಕಂಪನಿ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಎಂ 1 ಎಂ 2 ಪರವಾನಿಗೆ ಕೊಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ಪರವಾನಿಗೆ ನೀಡಿದ್ದಾರೆ,’ ಎಂದು ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದ್ದರು.
ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾತನಾಡಲು ಹೆದುರುತ್ತಿರುವುದೇಕೆ, ನಿಯಮ ಮೀರಿ ಕಾಕಂಬಿ ರಫ್ತು ಮಾಡಲು ಸಹಕರಿಸಿದ್ದೇಕೆ? ಯಥಾ ಪ್ರಕಾರ ದಾಖಲೆ ಕೊಡಿ, ಸಾಕ್ಷಿ ಕೊಡಿ ಎನ್ನುವಿರಾ ಅಥವಾ ಸೂಕ್ತ ತನಿಖೆಯ ಅಗ್ನಿಪರೀಕ್ಷೆಗೆ ಒಳಪಟ್ಟು ಪ್ರಾಮಾಣಿಕತೆ ಸಾಬೀತುಪಡಿಸುವಿರಾ ಎಂದು ಪ್ರಶ್ನಿಸಿದ್ದರು.
ಬಿಜೆಪಿ ಸಂಸದರು ನೇರವಾಗಿ ಸಿ ಎಂ ಬಳಿ ಈ ಡೀಲ್ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಡೀಲ್ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಇದಕ್ಕೆ ಅನುಮತಿ ಕೊಡಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್ ಮನವೊಲಿಸಲು ಈ ಅನುಮತಿ ಕೊಟ್ಟರಾ ಎಂದೂ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್
ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿದ್ದರೂ ಮುಂಬೈ ಮೂಲದ ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಕಾಕಂಬಿ ರಫ್ತು ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಅಬಕಾರಿ ಹಗರಣ; ‘ದಿ ಫೈಲ್’ ವರದಿ ಉಲ್ಲೇಖಿಸಿ ತನಿಖೆಗೆ ಆಗ್ರಹಿಸಿ ಹೇಳಿಕೆ ಬಿಡುಗಡೆ
ಈ ಪ್ರಕರಣದ ಕುರಿತು ಆರಂಭದಲ್ಲಿ ಮೌನ ವಹಿಸಿದ್ದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ವಿವಾದಿತ ಕಂಪನಿಗೇ 9,500 ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿ ಎತ್ತುವಳಿ ಮತ್ತು ರಫ್ತು ಮಾಡಲು ಪರವಾನಿಗೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ರಫ್ತು ಪರವಾನಿಗೆ ನೀಡುವುದಕ್ಕೆ ಅಬಕಾರಿ ಹಾಲಿ ಸಚಿವ ಆರ್ ಬಿ ತಿಮ್ಮಾಪೂರ ಅವರೂ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವುದರ ಹಿಂದೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು 8 ಕೋಟಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ‘ದಿ ಫೈಲ್’ 2022ರ ಅಕ್ಟೋಬರ್ 13ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್ ಆರೋಪ
ಕೆ ಎನ್ ರಿಸೋರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಎಂ-2 ಲೈಸೆನ್ಸ್ ಇಲ್ಲದಿದ್ದರೂ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿಯನ್ನು ರಫ್ತು ಮಾಡಲು ಅನುಮೋದನೆ ನೀಡಿದ್ದನ್ನು ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡ ದಾಖಲೆಗಳನ್ನಾಧರಿಸಿ 2022ರ ನವಂಬರ್ 30ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ
ಈ ಕುರಿತು ಲಂಚಮುಕ್ತ ಕರ್ನಾಟಕ ವೇದಿಕೆಯು ಪ್ರಧಾನಿಗೂ ದೂರು ಸಲ್ಲಿಸಿತ್ತು.
ಅಬಕಾರಿ ಹಗರಣ; ಸಚಿವ ಗೋಪಾಲಯ್ಯ ಸೇರಿ ಅಧಿಕಾರಿಗಳ ವಿರುದ್ಧ ಪ್ರಧಾನಿಗೆ ದೂರು
ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಯೊಬ್ಬರ ಪುತ್ರನ ಹೆಸರು ಪ್ರಸ್ತಾಪವಾಗಿದ್ದ ಆಡಿಯೋವನ್ನಾಧರಿಸಿ ‘ದಿ ಫೈಲ್’ 2022ರ ಡಿಸೆಂಬರ್ 22ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣ; ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಹೆಸರು ಆಡಿಯೋದಲ್ಲಿ ಪ್ರಸ್ತಾಪ
ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉದ್ಯಮಿಗಳ ವಲಯದಲ್ಲಿ 25 ಪ್ರಶ್ನೆಗಳು ಕೇಳಿಬಂದಿದ್ದವು. ಈ ಕುರಿತು 2022ರ ಡಿಸೆಂಬರ್ 24ರಂದು ವರದಿ ಪ್ರಕಟಿಸಿತ್ತು.
ಅಬಕಾರಿ ಹಗರಣದಲ್ಲಿ ಪ್ರಭಾವಿ ಪುತ್ರನ ಹೆಸರು ಪ್ರಸ್ತಾಪ; ಮುನ್ನೆಲೆಗೆ ಬಂದ 25 ಪ್ರಶ್ನೆಗಳು
ನಿಯಮಬಾಹಿರವಾಗಿ ಹೊರ ರಾಜ್ಯದ ಕಂಪನಿಗೆ 2 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಾಕಂಬಿಯನ್ನು ರಫ್ತುಮಾಡಲು ಅನುಮತಿ ನೀಡಿರುವುದು ರಾಜ್ಯದ ಉದ್ಯಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕಾಂಗ್ರೆಸ್ ಇದೀಗ ಮೌನಕ್ಕೆ ಜಾರಿರುವುದು ಮತ್ತು ರಾಜ್ಯ ಅಬಕಾರಿ ಇಲಾಖೆಯು ಪರವಾನಿಗೆಯನ್ನು ಮುಂದುವರೆಸಿರುವುದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.