Monday | June 22, 2026 |

ಶತಮಾನದ ದಾಖಲೆ; ವಾಡಿಕೆಗಿಂತ ಕಡಿಮೆ ಮಳೆ ಸಂಭವ, ಬರಪೀಡಿತ ಹೆಚ್ಚುವರಿ ತಾಲೂಕುಗಳ ಪಟ್ಟಿ ಬಹಿರಂಗ

ಬೆಂಗಳೂರು; ಕಳೆದ ಆಗಸ್ಟ್‌ ತಿಂಗಳಲ್ಲಿ ಕಂಡು ಬಂದಿರುವ ಶೇ.73ರಷ್ಟು ಮಳೆ ಕೊರತೆಯು ಇಲ್ಲಿಯವರೆಗೂ ಲಭ್ಯವಿರುವ ಮಳೆ ಮಾಹಿತಿಗೆ ಹೋಲಿಸಿದರೆ ಶತಮಾನದ ದಾಖಲೆಯಾಗಿದೆ. ಸೆಪ್ಟಂಬರ್‍‌ಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಂಭವ ಹೆಚ್ಚಿದೆ. ಮುಂಗಾರು ಜೂನ್‌ 1ರಿಂದ ಸೆಪ್ಟಂಬರ್‍‌ 2ನೇ ಅವಧಿಯಲ್ಲಿ ಬರ ಪರಿಸ್ಥಿತಿ ಕಂಡು ಬಂದಿರುವ ಹೆಚ್ಚುವರಿ 83 ತಾಲೂಕುಗಳ ಪಟ್ಟಿಯೂ ಇದೀಗ ಬಹಿರಂಗವಾಗಿದೆ.

 

ಬರ ಪರಿಸ್ಥಿತಿ ಕಂಡು ಬಂದಿರುವ ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣ ಸಲುವಾಗಿ ತಾಲೂಕುಗಳ ಪಟ್ಟಿಯನ್ನು   ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಒದಗಿಸಿದೆ. ಈ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2023ರ ಸೆಪ್ಟಂಬರ್‍‌ 2ರ ಅಂತ್ಯಕ್ಕೆ ಹೆಚ್ಚುವರಿಯಾಗಿ ಬರ ಪರಿಸ್ಥಿತಿ ಕಂಡು ಬಂದಿರುವ 83 ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಂಟಿ ಸಮೀಕ್ಷೆ ಕೈಗೊಂಡು ದೃಢೀಕೃತ ವರದಿ ಸಲ್ಲಿಸಲು ಈಗಾಗಲೇ ತೀರ್ಮಾನ ಕೈಗೊಂಡಿದೆ ಎಂದು ಗೊತ್ತಾಗಿದೆ.

 

ಬಳ್ಳಾರಿಯ ಕುರುಗೋಡು, ಬೆಂಗಳೂರು ಗ್ರಾಮಾಂತರದ ಹೊಸಕೋಟೆ,  ನೆಲಮಂಗಲ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕು, ಯಲಹಂಕ, ಚಾಮರಾಜನಗರದ ಕೊಳ್ಳೇಗಾಲ, ಚಿಕ್ಕಬಳ್ಳಾಪುರದ ಗುಡಿಬಂಡೆ, ಧಾರವಾಡದ ನವಲಗುಂದ, ಗದಗ್‌ ಜಿಲ್ಲೆಯ ಗದಗ ತಾಲೂಕು, ಕೋಲಾರದ ಶ್ರೀನಿವಾಸಪುರ, ಮಂಡ್ಯದ ಕೆ ಆರ್‍‌ ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಮೈಸೂರಿನ ಪಿರಿಯಾಪಟ್ಟಣ ಸೇರಿದಂತೆ ಹಲವು ತಾಲೂಕುಗಳ ತೀವ್ರ ಬರ ಪರಿಸ್ಥಿತಿ ಅನುಭವಿಸಿವೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸರ್ಕಾರಕ್ಕೆ ಪಟ್ಟಿ ಒದಗಿಸಿರುವುದು ತಿಳಿದು ಬಂದಿದೆ.

 

ಬಳ್ಳಾರಿಯ ಸಂಡೂರು, ಕಂಪ್ಲಿ, ಬೆಳಗಾವಿಯ ರಾಮದುರ್ಗ, ಬೀದರ್‍‌ನ ಬಸವಕಲ್ಯಾಣ, ಚಾಮರಾಜನಗರದ ಗುಂಡ್ಲುಪೇಟೆ, ಯಳಂದೂರು, ಹನೂರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ, ಕಳಸ, ಚಿತ್ರದುರ್ಗದ ಚಳ್ಳಕೆರೆ, ಹಿರಿಯೂರು, ದಕ್ಷಿಣ ಕನ್ನಡದ ಮೂಡಬಿದರೆ, ದಾವಣಗೆರೆ ಜಿಲ್ಲೆಯ ದಾವಣಗೆರೆ, ನ್ಯಾಮತಿ, ಹಾಸನದ ಬೇಲೂರು, ಚನ್ನರಾಯಪಟ್ಟಣ, ಹಾವೇರಿಯ ಹಾವೇರಿ, ರಾಣೆಬೆನ್ನೂರು, ಕಲ್ಬುರ್ಗಿಯ ಚಿಂಚೋಳಿ, ಜೇವರ್ಗಿ, ಸೇಡಂ, ಕಮಲಾಪುರ, ಯಡ್ರಾಮಿ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಕೋಲಾರದ ಮುಳಬಾಗಿಲು, ಕೊಪ್ಪಳದ ಕಾರಟಗಿ, ಕೊಪ್ಪಳದ ಕೊಪ್ಪ, ಮೈಸೂರಿನ ನಂಜನಗೂಡು ತಾಲೂಕುಗಳು ಮಧ್ಯಮ ಬರ ಪರಿಸ್ಥಿತಿ ಎದುರಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

ಅದೇ ರೀತಿ ರಾಜ್ಯದ ವಿದ್ಯುಚ್ಛಕ್ತಿ ಉತ್ಪಾದನಾ ಜಲಾಶಯ ಹಾಗೂ ಕಾವೇರಿ ಜಲಾಯಶಗಳಲ್ಲಿನ ನೀರಿನ ಸಂಗ್ರಹಣೆ ಕಡಿಮೆ ಇದೆ. ಬರ ಘೋಷಣೆಯನ್ನು ರಾಜ್ಯ ಸರ್ಕಾರವು ಮುಂದೂಡಿರುವ ಬೆನ್ನಲ್ಲೇ ತೀವ್ರವಾಗಿ ಮಳೆ ಕೊರತೆ ಎದುರಾಗಿರುವ ಕುರಿತಂತೆ ಆತಂಕಕಾರಿ ಮಾಹಿತಿಗಳು ಹೊರಬಿದ್ದಿವೆ. ರಾಜ್ಯದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. 236 ತಾಲೂಕುಗಳ ಪೈಕಿ 231 ತಾಲೂಕುಗಳಲ್ಲಿ ಸಾಧಾರಣದಿಂದ ತೀವ್ರ ಮಳೆ ಕೊರತೆ ಕಾಣಿಸಿಕೊಂಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.

 

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ 2023ರ ಆಗಸ್ಟ್‌ 22ರಂದು ನಡೆದಿದ್ದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮಳೆ ಕೊರತೆ ಅಂಕಿ ಅಂಶಗಳನ್ನು ಕೆಎಸ್‌ಎನ್‌ಎಂಡಿಸಿ ಮಂಡಿಸಿರುವುದು ಗೊತ್ತಾಗಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಗುರುತಿಸಿ ಪಟ್ಟಿ ಮಾಡಿರುವ 113 ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳ ಕುರಿತು ಇದೇ ಸೆಪ್ಟಂಬರ್‍‌ 2ನೇ ವಾರದಲ್ಲಿ ಮೆಮೋರಾಂಡಂ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಈಗಿನಿಂದಲೇ ರೈತರಿಗೆ ಫಾಡರ್‍‌ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಗೊತ್ತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಕಂದಾಯ ಸಚಿವರಾದಿಯಾಗಿ ಸಚಿವ ಸಂಪುಟ ಉಪ ಸಮಿತಿ ಸದಸ್ಯರೂ ಸದ್ಯದಲ್ಲೇ ಈ ಕುರಿತು ಪ್ರತ್ಯೇಕವಾಗಿ ಸಭೆ  ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

 

ರಾಜ್ಯದಲ್ಲಿ ಜೂನ್‌ 1ರಿಂದ ಸೆಪ್ಟಂಬರ್‍‌ 2ವರೆಗೆ 512 ಮಿ ಮೀ ಮಳೆಯಾಗಿದೆ. ವಾಡಿಕೆ ಮಳೆ (701 ಮಿ ಮೀ) ಗೆ ಹೋಲಿಸಿದರೆ ಶೇ. 27ರಷ್ಟು ಮಳೆ ಕೊರತೆ ಇದೆ. ಜೂನ್‌ 1ರಿಂದ ಸೆಪ್ಟಂಬರ್‍‌ವರೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಕೊರತೆ ಹಾಗೂ ಉಳಿದ 15 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಕಳೆದ ಆಗಸ್ಟ್‌ ತಿಂಗಳಲ್ಲಿ ಕಂಡು ಬಂದಿರುವ ಶೇ.73ರಷ್ಟು ಮಳೆ ಕೊರತೆಯು ಇಲ್ಲಿಯವರೆಗೂ ಲಭ್ಯವಿರುವ ಮಳೆ ಮಾಹಿತಿಗೆ ಹೋಲಿಸಿದರೆ ಶತಮಾನದ ದಾಖಲೆಯಾಗಿದೆ  ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

‘ಮೂರು ವಾರಗಳ ಮುನ್ಸೂಚನೆ ಅನ್ವಯ ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆ ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯದಲ್ಲಿ ಆಗಸ್ಟ್‌ ತಿಂಗಳ ಉಳಿದ ದಿನಗಳಿಗೆ ಹಾಗೂ ಸೆಪ್ಟಂಬರ್‍‌ಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಂಭವ ಹೆಚ್ಚಿದೆ,’ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ರಾಜ್ಯದಲ್ಲಿ 115 ಲಕ್ಷ ದನಕರುಗಳು ಹಾಗೂ 155 ಲಕ್ಷ ಕುರಿ ಮೇಕೆಗಳಿವೆ. ಸದ್ಯಕ್ಕೆ 150 ಲಕ್ಷ ಟನ್‌ ಮೇವು ಲಭ್ಯವಿದೆಯಾದರೂ ಇದು 28 ವಾರಗಳ ಬಳಕೆಗೆ ಸಾಕಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ 19 ವಾರಗಳಿಗೆ ಹಾಗೂ ಬೀದರ್‍‌ ಜಿಲ್ಲೆಯಲ್ಲಿ 14 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಆದರೂ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಮೇವಿನ ಬೀಜ ವಿತರಿಸಿ ಮೇವು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನೆ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

 

ರಾಜ್ಯದ 14 ಪ್ರಮುಖ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ 896 ಟಿಎಂಸಿ. ಪ್ರಸ್ತುತ ಅವಧಿಯಿಲ್ಲಿ 614 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಒಟ್ಟು ಸಂಗ್ರಹಣದ ಶೇ.69ರಷ್ಟಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 800 ಟಿಎಂಸಿ ನೀರು ಸಂಗ್ರಹವಾಗಿತ್ತು. ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಟ್ಟು ಸಂಗ್ರಹಣೆ 114 ಟಿಎಂಸಿ ಪೈಕಿ ಇಲ್ಲಿಯವರೆಗೆ 79 ಟಿಎಂಸಿ ನೀರು ಸಂಗ್ರಹಣೆಯಾಗಿದೆ ಎಂದು ನಡವಳಿಯಿಂದ ಗೊತ್ತಾಗಿದೆ.

 

ರಾಜ್ಯದ ಕೃಷ್ಣ ಜಲಾನಯನದ ಪ್ರದೇಶಗಳಲ್ಲಿ 6 ಜಲಾಶಯಗಳಿವೆ. ಅವುಗಳ ಒಟ್ಟು ಸಾಮರ್ಥ್ಯ 422 ಟಿಎಂಸಿಯಾಗಿದೆ. ಇಲ್ಲಿಯವರೆಗೆ 346 ಟಿಎಂಸಿ ನೀರು ಸಂಗ್ರಹಣೆಯಾಗಿದೆ. ರಾಜ್ಯದ ವಿದ್ಯುತ್‌ ಉತ್ಪಾದನಾ ಜಲಾಶಯಗಳಾದ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳಲ್ಲಿ 328 ಟಿಎಂಸಿ ಸಾಮರ್ಥ್ಯವಿದೆ. ಇಲ್ಲಿಯವರೆಗೆ ಕೇವಲ 165 ಟಿಎಂಸಿ ನೀರು ಶೇಖರಣೆಯಾಗಿದೆ. ಒಟ್ಟಾರೆ ರಾಜ್ಯದ ವಿದ್ಯುಚ್ಛಕ್ತಿ ಉತ್ಪಾದನಾ ಜಲಾಶಯ ಹಾಗೂ ಕಾವೇರಿ ಜಲಾಯಶಗಳಲ್ಲಿನ ನೀರಿನ ಸಂಗ್ರಹಣೆ ಕಡಿಮೆ ಇದೆ ಎಂಬುದು ತಿಳಿದು ಬಂದಿದೆ.

Hot this week

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಡಿಸಿಎಂ ಕಚೇರಿಯಲ್ಲಿಯೇ ಧೂಳಿಡಿದಿದ್ದ ಕಡತಗಳು; ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ 80 ಕಡತಗಳು ಇಲಾಖೆಗೆ ವಾಪಸ್‌

ಬೆಂಗಳೂರು; ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೋರಿದ್ದ ಮಾಹಿತಿಯ ಕಡತ,...
Please Scan to make Your Contribution

Topics

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

Related Articles

Popular Categories

error: Content is protected !!