ರಕ್ತದ ಕಲೆ ಹೊಂದಿದ್ದ ಗ್ಲೌಸ್‌ ಸರಬರಾಜು; ಕಪ್ಪುಪಟ್ಟಿಗೆ ಸೇರಿಸದೆಯೇ ಕಡತ ಮುಕ್ತಾಯಗೊಳಿಸಿದ ನಿಗಮ

ಬೆಂಗಳೂರು; ರಕ್ತದ ಕಲೆಗಳನ್ನು ಹೊಂದಿದ್ದ ಮತ್ತು ತುಂಬಾ ಕಡಿಮೆ ಗುಣಮಟ್ಟ ಹೊಂದಿರುವ ಕೈಗವಸುಗಳನ್ನು (ಗ್ಲೌಸ್‌) ಪೂರೈಕೆ ಮಾಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಗಳ 6 ಮಂದಿ ವೈದ್ಯಾಧಿಕಾರಿಗಳು ಸಲ್ಲಿಸಿದ್ದ ದೂರನ್ನಾಧರಿಸಿ ತನಿಖೆ ನಡೆಸಿ ಸರಬರಾಜುದಾರ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಗುಣಕೋಶದ ಪ್ರಧಾನ ವ್ಯವಸ್ಥಾಪಕ  ಮಾಡಿದ್ದ ಶಿಫಾರಸ್ಸನ್ನು ಬದಿಗೊತ್ತಿ  ಯಾವುದೇ ಕ್ರಮವಿಲ್ಲದೆಯೇ ಕಡತವನ್ನು ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

 

ಕೋವಿಡ್ ಕಾಲದಲ್ಲಿ ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಿಗೆ ಪೂರೈಕೆಯಾಗಿದ್ದ ಕೈಗವಸುಗಳಿಗೆ ರಕ್ತದ ಕಲೆಗಳು ಅಂಟಿದ್ದವು. ಇದು ಕೈಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಕೊಳ್ಳೇಗಾಲದ ವೈದ್ಯಾಧಿಕಾರಿ ಡಾ ಪರಮೇಶ ಮತ್ತು  ಸೋಮವಾರಪೇಟೆಯ ವೈದ್ಯಾಧಿಕಾರಿಗಳು ಸಲ್ಲಿಸಿದ್ದ ದೂರುಗಳನ್ನು ಕಸದ ಬುಟ್ಟಿಗೆ ಎಸೆದು ಸರಬರಾಜುದಾರ ಕಂಪನಿಗೆ ಹಣ ಪಾವತಿಸಲು ಕಡತವನ್ನು ರವಾನಿಸಲಾಗಿದೆ.

 

ಈ ಕಡತವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅವರ ಅನುಮೋದನೆಗೆ ಬಾಕಿ ಇದೆ ಎಂದು ತಿಳಿದು ಬಂದಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಕೋವಿಡ್‌ ಕಾಲದ ಅಕ್ರಮಗಳ ಕುರಿತಾಗಿ ತನಿಖೆ ನಡೆಸಲು ಕಾಂಗ್ರೆಸ್‌ ಸರ್ಕಾರವು ನಿರ್ಧಾರ ಪ್ರಕಟಿಸಿರುವ ಹೊತ್ತಿನಲ್ಲಿಯೇ ರಕ್ತದ ಕಳೆಗಳ ಅಂಟಿದ್ದ ಕೈಗವಸುಗಳನ್ನು  ಸರಬರಾಜು ಮಾಡಿರುವ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮುನ್ನೆಲೆಗೆ  ಬಂದಿದೆ.

 

ಅಲ್ಲದೇ ಸರಬರಾಜುದಾರ ಕಂಪನಿಗೆ ಎಚ್ಚರಿಕೆ ನೋಟೀಸ್‌ ನೀಡಿ ಕಡತವನ್ನು ಮುಕ್ತಾಯಗೊಳಿಸಬಹುದು ಎಂದು ಅಭಿಪ್ರಾಯ ನೀಡಿ, ಆ ನಂತರ ಕಪ್ಪು ಪಟ್ಟಿಗೆ ಸೇರಿಸುವ ವಿಚಾರದಿಂದ ಕೈ ಬಿಟ್ಟು ಪ್ರಕರಣವನ್ನು ಅಂತಿಮವಾಗಿ ಮುಕ್ತಾಯಗೊಳಿಸಬಹುದು ಎಂದು ನಿಗಮದ ಕಾನೂನು ವಿಭಾಗವು ನೀಡಿದ್ದ ಅಭಿಪ್ರಾಯವು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಇದನ್ನು ಬಲವಾಗಿ ಆಕ್ಷೇಪಿಸಿದ್ದ ನಿಗಮದ ಗುಣಕೋಶ ವಿಭಾಗವು ‘ ಕಾನೂನು ವ್ಯವಸ್ಥಾಪಕರು ಸದರಿ ಅಭಿಪ್ರಾಯದಲ್ಲಿ ಮೋಸದ ಸರಬರಾಜು (FRAUDULENT SUPPLY BY K K ALLIANZE ಎಂದು ಅಸ್ಮಾ ರಬ್ಬರ್‌ ಪ್ರಾಡಕ್ಟ್‌ ಸಂಸ್ಥೆಯು ನೀಡಿರುವ ದೂರನ್ನು ಪರಿಗಣಿಸಿರುವುದಿಲ್ಲ ಮತ್ತು ದೂರಿನ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ನೀಡಿರುವುದಿಲ್ಲ,’ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು. ಆದರೂ ಕಠಿಣ ಕ್ರಮ ಕೈಗೊಳ್ಳದಿರುವುದು ಸಂಶಯಗಳಿಗೆ ಕಾರಣವಾಗಿದೆ.

 

ಈ ಕಡತವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ಪರಿಶೀಲಿಸಲಾಗಿತ್ತಲ್ಲದೇ ‘ನಿಗಮಕ್ಕೆ ಮೋಸ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಡತದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಮರು ಮಂಡಿಸಬೇಕು,’ ಎಂದು 2023ರ ಜನವರಿ 17ರಂದು ಸೂಚಿಸಲಾಗಿತ್ತು.

 

ಅದರಂತೆ ಕಡತವನ್ನು ಮರು ಮಂಡಿಸಿದ್ದ ಗುಣಕೋಶ ವಿಭಾಗವು ‘ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರ ದೂರುಗಳನ್ನು ಪರಿಗಣಿಸಿ ನಿಗಮದ ಮೂಲಕ ಇಲಾಖೆಗೆ ಮೋಸ ಮಾಡಿರುವ ಕೆ ಕೆ ಅಲೈಯನ್ಜ್‌ ಕಂಪನಿ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಯಾವುದೇ ಸಂಸ್ಥೆಯು ಸಹ ನಿಗಮಕ್ಕೆ ಮೋಸ ಮಾಡದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ದರಪಟ್ಟಿ ನಿಬಂಧನೆಗಳ ಪ್ರಕಾರ ಒಂದು ವರ್ಷಗಳ ಅವಧಿಗೆ ಕಪ್ಪು ಪಟ್ಟಿಗೆ ಸೇರಿಸಲು ಅನುಮೋದನೆ ನೀಡಬೇಕು’ ಎಂದು ಕಡತವನ್ನು ಮಂಡಿಸಲಾಗಿತ್ತು.

 

 

ಆದರೆ ಕಡತವನ್ನು ಏಕಾಏಕೀ ಮುಕ್ತಾಯಗೊಳಿಸಿರುವ ನಿಗಮವು ಸರಬರಾಜುದಾರ ಕಂಪನಿಗೆ ಹಣ ಪಾವತಿಸಲು ಪಾವತಿ ವಿಭಾಗಕ್ಕೆ ಮತ್ತೊಂದು ಕಡತವನ್ನು ರವಾನಿಸಿದೆ ಎಂದು ಗೊತ್ತಾಗಿದೆ.

 

ಪ್ರಕರಣದ ವಿವರ

 

ಕೋವಿಡ್‌ ಸಂದರ್ಭದಲ್ಲಿ 3.25 ಕೋಟಿ ರು. ಮೊತ್ತದಲ್ಲಿ ಕೈ ಗವಸುಗಳ (Sterile Latex Disposable Gloves size 6.5) ಖರೀದಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಆಗಸ್ಟ್‌ 5ರಂದು ದರಪಟ್ಟಿ ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಕೆ ಕೆ ಅಲೈಯೈನ್ಜ್‌ ಕಂಪನಿಯು ಕೊಚ್ಚೀನ್‌ನ ಆಸ್ಮಾ ರಬ್ಬರ್‌ ಪ್ರಾಡಕ್ಟ್‌ ಲಿಮಿಟೆಡ್‌ನಿಂದ form of authorization ಪಡೆದು ಕನಿಷ್ಟ ಬಿಡ್‌ದಾರರಾಗಿತ್ತು.

 

ಈ ಕಂಪನಿಗೆ (ತಲಾ 148 ರು. ದರದಲ್ಲಿ) 2,20,000 ಲಕ್ಷ ಸಂಖ್ಯೆಯ ಕೈಗವಸುಗಳ ಸರಬರಾಜಿಗೆ 2021ರ ಸೆ 7ರಂದು ಖರೀದಿ (KSMSCL/2021/-22/PO/142/DTD;07-09-2021)ಆದೇಶ ನೀಡಲಾಗಿತ್ತು.

 

ಖರೀದಿ ಆದೇಶದಂತೆ ಕೆ ಕೆ ಅಲೈಯನ್ಜ್‌ ಕಂಪನಿಯು Sterile Latex Disposable Gloves size 6.5 ಕೈಗವಸುಗಳನ್ನು ಸರಬರಾಜು ಮಾಡಿತ್ತು. ಇವುಗಳನ್ನು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ವಿವಿಧ ಜಿಲ್ಲಾ ಔಷಧ ಉಗ್ರಾಣಗಳಿಗೆ ಹಾಗೂ ಅಲ್ಲಿಂದ ವಿವಿಧ ಆರೋಗ್ಯ ಸಂಸ್ಥೆಗಳಿಗೆ ವಿತರಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಈ ಕಂಪನಿಯು ಸರಬರಾಜು ಮಾಡಿದ್ದ ಕೈಗವಸುಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ಆರಂಭದಲ್ಲಿಯೇ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ,  ಆಸ್ಮಾ ರಬ್ಬರ್‌ ಪ್ರಾಡಕ್ಟ್‌ ತಯಾರಿಸಿರುವ Sterile Latex Disposable Gloves size 6.5 ಕೈಗವಸುಗಳಲ್ಲಿ ರಕ್ತದ ಕಲೆಗಳಿವೆ ಮತ್ತು ಕೈಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ದೂರಿದ್ದರು.

 

 

 

 

ಅದೇ ರೀತಿ ಕೊಳ್ಳೇಗಾಲದ ಉಪ ವಿಭಾಗೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಪರಮೇಶ್‌ ಎಂಬುವರು ಸಹ ಆಸ್ಮಾ ರಬ್ಬರ್‌ ಪ್ರಾಡಕ್ಟ್‌ ತಯಾರಿಸಿರುವ Sterile Latex Disposable Gloves size 6.5 ಕೈಗವಸುಗಳು ತುಂಬಾ ಕಡಿಮೆ ಗುಣಮಟ್ಟ ಹೊಂದಿದೆ. ಇವುಗಳು ಪ್ಯಾಕೇಜಿಂಗ್‌ ಕೂಡ ಕಡಿಮೆ ಗುಣಮಟ್ಟದ್ದಾಗಿದೆ. ಅದರ ಎಡಗೈ ಅಥವಾ ಬಲಗೈ ಕೈಗವಸುಗಳು ಈಗಾಗಲೇ ಉಪಯೋಗಿಸಲ್ಪಟ್ಟಿವೆ. ಇದರಿಂದ ಚರ್ಮ ಹಾನಿ ಉಂಟಾಗಿದೆ ಎಂದು ಈ ಮೇಲ್‌ ಮೂಲಕ ತಿಳಿಸಿದ್ದರು ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಹಾಗೆಯೇ ಸೋಮವಾರಪೇಟೆಯ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಸಹ ‘ಆಸ್ಮಾ ರಬ್ಬರ್‌ ಪ್ರಾಡಕ್ಟ್‌ ತಯಾರಿಸಿರುವ Sterile Latex Disposable Gloves size 6.5 ಕೈಗವಸುಗಳು ತುಂಬಾ ಕಡಿಮೆ ಗುಣಮಟ್ಟ ಹೊಂದಿದೆ. ಇವುಗಳ ಬಳಕೆ ಮಾಡುವ ಮೊದಲೇ Blood Stains ಕಂಡು ಬಂದಿದ್ದು, ಗ್ಲೌಸ್‌ಗಳು ಕಿತ್ತು ಹೋಗುತ್ತಿರುತ್ತವೆ. ಆದ್ದರಿಂದ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ,’ ಎಂದು ನಿಗಮದ ಗಮನಕ್ಕೆ ತಂದಿದ್ದರು ಎಂಬುದು ತಿಳಿದು ಬಂದಿದೆ.

ಬಳಸಿದ್ದ ಗ್ಲೌಸ್‌ಗಳ ಸರಬರಾಜು ಆರೋಪ; ಕಪ್ಪು ಪಟ್ಟಿಗೆ ಸೇರಿಸದೇ 3.50 ಕೋಟಿ ಪಾವತಿಸಲು ಮುಂದಾದ ನಿಗಮ?

 

ಈ ಮಧ್ಯೆ ಆಸ್ಮಾ ರಬ್ಬರ್‌ ಪ್ರಾಡಕ್ಟ್‌ ಪ್ರೈ ಲಿಮಿಟೆಡ್‌ ಕೂಡ ತಮ್ಮ ಕಂಪನಿಯ ಹೆಸರಿನಲ್ಲಿ ಅನಧಿಕೃತವಾಗಿ ಕೆ ಕೆ ಅಲೈಯನ್ಜ್‌ ಕಂಪನಿಯು Sterile Latex Disposable Gloves size 6.5 ಕೈಗವಸುಗಳನ್ನು ನಿಗಮಕ್ಕೆ ಸರಬರಾಜು ಮಾಡಿದೆ. ಇವುಗಳನ್ನು (batch number; ARP/10-21) ತಮ್ಮ ಕಂಪನಿಯು ತಯಾರಿಸಿಲ್ಲ ಹಾಗೂ ಯಾವುದೇ ಸಂಸ್ಥೆಗಳಿಗೆ ಸರಬರಾಜು ಮಾಡಿಲ್ಲ.

 

ಅಲ್ಲದೇ ಯಾವುದೇ ಸಂಸ್ಥೆಗಳಿಗೆ ಈ ಔಷಧ ಪರಿಕರಗಳನ್ನು ಸರಬರಾಜು ಮಾಡಲು ಯಾವುದೇ ಟೆಂಡರ್‌/ದರಪಟ್ಟಿ ಆಹ್ವಾನಗಳಿಗೆ ಅಧಿಕೃತವಾಗಿ form of authorization ನೀಡಿರುವುದಿಲ್ಲ. ಹೀಗಾಗಿ ಕೆ ಕೆ ಅಲೈಯನ್ಜ್‌ ಕಂಪನಿ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡು ಇತರೆ ಯಾವುದೇ ಸಂಸ್ಥೆಗಳು ಸಹ ಕೆಎಸ್‌ಎಂಸಿಎಲ್‌ಗೆ ಇಂತಹ ಮೋಸ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ನಿಗಮಕ್ಕೆ ಪತ್ರ ಮುಖೇನ ತಿಳಿಸಿತ್ತು ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

 

ಔಷಧ ಮಂಡಳಿಯ ನಿರ್ದೇಶಕ ಡಾ ರಘುನಂದನ್‌, ಡಾ ರಮೇಶ್‌, ಡಾ ಸುಮಿತಾ ಕೆ, ಗುಣಕೋಶ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ತನಿಖಾ ಸಮಿತಿ ಮುಂದೆ ಹಾಜರಾಗಿದ್ದ ಕೆ ಕೆ ಅಲೈಯನ್ಜ್‌ ಕಂಪನಿಯು ಅಸ್ಮಾ ರಬ್ಬರ್‌ ಕಂಪನಿಯ ದೂರನ್ನು ಅಲ್ಲಗಳೆದಿತ್ತು. ಗ್ಲೌಸ್‌ಗಳ ಬ್ಯಾಚ್‌ಗಳನ್ನು ರಬ್ಬರ್‌ ಟೆಸ್ಟಿಂಗ್‌ ಬೋರ್ಡ್‌ಗೆ ಕಳಿಸಿ ದ್ವಿತೀಯ ಅಭಿಪ್ರಾಯ ಪಡೆಯಲು ಸಲ್ಲಿಸಲಾಗಿದೆ ಎಂದು ಹೇಳಿತ್ತು.

 

ಆದರೆ ಆಸ್ಮಾ ರಬ್ಬರ್‌ ಪ್ರಾಡಕ್ಟ್‌ನಿಂದ ಖರೀದಿ ಮಾಡಿದ್ದರ ಬಗ್ಗೆ ಜಿಎಸ್‌ಟಿ ಇನ್‌ವಾಯ್ಸ್‌ನ ಮೂಲ ಪ್ರತಿ, ಪ್ರಮಾಣ ಪತ್ರವನ್ನು ಸಲ್ಲಿಸುವಲ್ಲಿ ಕೆ ಕೆ ಅಲೈಯನ್ಜ್‌ ಕಂಪನಿಯು ವಿಫಲವಾಗಿತ್ತು. ಹೀಗಾಗಿ ‘ಕೆ ಕೆ ಅಲೈಯನ್ಜ್‌ ಕಂಪನಿಯು ನಿಬಂಧನೆಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ವಿವರಣೆ ಕೋರಿ ನೋಟೀಸ್‌ ನೀಡಬಹುದು,’ ಎಂದು ಶಿಫಾರಸ್ಸು ಮಾಡಲಾಗಿತ್ತು.

 

 

ಈ ನೋಟಿಸ್‌ಗೆ ಉತ್ತರಿಸಿದ್ದ ಕೆ ಕೆ ಅಲೈಯನ್ಸ್‌ ಕಂಪನಿಯು ‘ ಅಸ್ಮಾ ರಬ್ಬರ್‌ ಪ್ರಾಡಕ್ಟ್‌ ಸಂಸ್ಥೆಯು ಕೆ ಕೆ ಅಲೈಯನ್ಜ್‌ ಗೆ ನೇರವಾಗಿ ಸರಬರಾಜು ಮಾಡಿಲ್ಲ. ಹಾಗೂ ಯಾವುದೇ ಬಿಲ್‌ ಲಭ್ಯವಿರುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೇ ಸದರಿ ಸರಬರಾಜನ್ನು ಅಸ್ಮಾ ರಬ್ಬರ್‌ ಪ್ರಾಡಕ್ಟ್‌ನ ಅಧಿಕೃತ ಮಾರಾಟಗಾರರಿಂದ ಪಡೆದಿದೆ ಎಂದು ಹೇಳಿತ್ತು. ಲಭ್ಯವಿರುವ ದಾಖಲೆಗಳ ಪ್ರಕಾರ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ನಿಂದ ಸರಬರಾಜು ಪಡೆದಿತ್ತು. ಈ ಸಂಸ್ಥೆಯು ಕೂಡ ಕೆಎಸ್‌ಎಂಎಸ್‌ಸಿಎಲ್‌ ನಿಗಮದ ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಯಾಗಿರುತ್ತದೆ,’ ಎಂದು ನಿಗಮದ ಗುಣಕೋಶ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

 

ಈ ಕುರಿತು ನಿಗಮವು ಕಾನೂನು ಅಭಿಪ್ರಾಯ ಪಡೆದಿತ್ತು. ನಿಗಮದ ಗುಣಕೋಶ ವಿಭಾಗವು ಸಲ್ಲಿಸಿದ್ದ ಕಡತವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದ ಕಾನೂನು ವಿಭಾಗವು ‘ಕೆಎಸ್‌ಎಂಎಸ್‌ಸಿಎಲ್‌ನ ದರಪಟ್ಟಿ, ಟೆಂಡರ್‌ ನಿಬಂಧನೆ, ನಿಯಮಾವಳಿಗಳ ಪ್ರಕಾರ ಕೆ ಕೆ ಅಲೈಯನ್ಜ್‌ ಸಂಸ್ಥೆ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಬೇಕಿರುತ್ತದೆ,’ ಎಂದಷ್ಟೇ ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ್ದ ನಿಗಮವು ಕೆ ಕೆ ಅಲೈಯನ್ಜ್‌ ಸಂಸ್ಥೆಯು ನಿಗಮದ ಟೆಂಡರ್‌ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಅನುಮೋದನೆ ನೀಡಬೇಕು ಎಂದು ಕಡತವನ್ನು ಮಂಡಿಸಿತ್ತು. ವಿಶೇಷವೆಂದರೆ ಅಸ್ಮಾ ರಬ್ಬರ್‌ ಪ್ರಾಡಕ್ಟ್‌ ಕಂಪನಿಯು ಮೊದಲನೇ ವಿಚಾರಣೆಯಲ್ಲಿ ಕೆ ಕೆ ಅಲೈಯನ್ಜ್‌ ಕಂಪನಿಗೆ ಯಾವುದೇ authorization ನೀಡಿಲ್ಲ ಎಂದು ಹೇಳಿತ್ತು.

 

ಆದರೆ 2ನೇ ವಿಚಾರಣೆಯಲ್ಲಿ ಕೆ ಕೆ ಅಲೈಯನ್ಜ್‌ಗೆ authorization ನೀಡಲಾಗಿತ್ತು ಎಂದು ತಿಳಿಸಿತ್ತು. ಇವೆರಡನ್ನೂ ಪರಿಶೀಲಿಸಿದ್ದ ಕಾನೂನು ವಿಭಾಗವು ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ನಡೆಯದಂತೆ ಎಚ್ಚರಿಕೆ ನೋಟೀಸ್‌ ನೀಡಿ ಮುಕ್ತಾಯಗೊಳಿಸಬಹುದು ಎಂದು ಅಭಿಪ್ರಾಯಿಸಿತ್ತು. ಅದಂತೆ 2022ರ ಡಿಸೆಂಬರ್‌ 15ರಂದು ಕೆ ಕೆ ಅಲೈಯನ್ಜ್ ಗೆ ಎಚ್ಚರಿಕೆ ಸೂಚನಾ ಪತ್ರವನ್ನು ಕಳಿಸಿತ್ತು.   

 

 

ಈ ನಡುವೆ ಕೆ ಕೆ ಅಲೈಯನ್ಜ್‌ ಕಂಪನಿಯು ತನ್ನ ಪರವಾಗಿ ಹೈಕೋರ್ಟ್‌ ವಕೀಲರ ಪತ್ರ ಮುಖೇನ 2023ರ ಏಪ್ರಿಲ್‌ 17ರಂದು The Rubber Research institute of india kottayam ನಿಂದ Disposable Surgical Rubber Gloves 6.5 ಗಳ 5 ಬ್ಯಾಚ್‌ Test Report ಗಳನ್ನು ನೀಡಿತ್ತು. ಇದರ ಪ್ರಕಾರ ‘All passed among the 6 sample tested ಎಂದು ವರದಿ ನೀಡಿತ್ತು. ಸರಬರಾಜು ಮಾಡಿರುವ ಔಷಧ ಪರಿಕರಗಳು ಎರಡನೇ ಪರೀಕ್ಷೆ ವರದಿಯಲ್ಲಿಯೂ ಉತ್ತಮ ಗುಣಮಟ್ಟವೆಂದು ಸಹ ಬಂದಿತ್ತು. ಹೀಗಾಗಿ ಎಚ್ಚರಿಕೆ ನೋಟೀಸ್‌ನ್ನು ಹಿಂಪಡೆಯಬೇಕು ಎಂದು ಕೋರಿತ್ತು.

 

ಆದರೆ ‘ The Rubber Research institute of india ಪ್ರಯೋಗಾಲಯಕ್ಕೆ ಕೆ ಕೆ ಅಲೈಯನ್ಜ್‌ ಸಂಸ್ಥೆಯ ಮಾದರಿಗಳನ್ನು ಗುಣವಿಶ್ಲೇಷಣೆಗೆ ಸಲ್ಲಿಸಿದ್ದು ನಿಗಮಕ್ಕೆ ಸರಬರಾಜಾದ Disposable Surgical Rubber Gloves ಗಳನ್ನು ಗುಣ ವಿಶ್ಲೇಷಣೆಗೆ ಸಲ್ಲಿಸಿರುವುದಿಲ್ಲ ಎಂಬ ಅಂಶಗಳನ್ನು ಗಮನಿಸಬೇಕಿರುತ್ತದೆ,’ ಎಂದು ಗುಣಕೋಶ ವಿಭಾಗವು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

 

ಇದನ್ನು ಪರಿಗಣಿಸಿದ್ದ ನಿಗಮದ ಕಾನೂನು ವಿಭಾಗವು ‘ ಕೆಎಸ್‌ಎಂಎಸ್‌ಸಿಎಲ್‌ ಸಂಸ್ಥೆ ದರಪಟ್ಟಿ ಮತ್ತು ಖರೀದಿ ಆಧೇಶಗಳ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘನೆ ಮಾಡದ ಕಾರಣ ಕೆ ಕೆ ಅಲೈಯನ್ಜ್‌ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ವಿಚಾರದಿಂದ ಕೈ ಬಿಟ್ಟು ಪ್ರಕರಣವನ್ನು ಅಂತಿಮವಾಗಿ ಮುಕ್ತಾಯಗೊಳಿಸಬಹುದಾಗಿದೆ,’ ಎಂದು ಅಭಿಪ್ರಾಯಿಸಿತ್ತು.

SUPPORT THE FILE

Latest News

Related Posts