ಬಳಸಿದ್ದ ಗ್ಲೌಸ್‌ಗಳ ಸರಬರಾಜು ಆರೋಪ; ಕಪ್ಪು ಪಟ್ಟಿಗೆ ಸೇರಿಸದೇ 3.50 ಕೋಟಿ ಪಾವತಿಸಲು ಮುಂದಾದ ನಿಗಮ?

ಬೆಂಗಳೂರು; ಕೇರಳ ಮೂಲದ ಕಂಪನಿ ಹೆಸರು ದುರ್ಬಳಕೆ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿ ಈಗಾಗಲೇ ಬಳಸಿ ಬಿಸಾಡಿದ್ದ ಕೈಗವಸುಗಳನ್ನು ರಫ್ತು ಮಾಡಿದೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಕೆ ಕೆ ಅಲೈಯನ್ಸ್‌ ಕಂಪನಿ ವಿರುದ್ಧ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

 

ಶಸ್ತ್ರಚಿಕಿತ್ಸೆಗೆ ಬಳಸಲು ಯೋಗ್ಯವಲ್ಲದ ಕಳಪೆ ದರ್ಜೆಯ ಕೈಗವಸುಗಳನ್ನು ಸರಬರಾಜು ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಬೇರೊಂದು ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವ ನಿಗಮವು ಕೆ ಕೆ ಅಲೈಯನ್ಸ್‌ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಬಳಸಿ ಬಿಸಾಡಿರುವ ಕೈಗವಸುಗಳನ್ನು ಸರಬರಾಜು ಮಾಡಲಾಗಿದೆ ಎಂಬ ಕುರಿತು ದಾಖಲಾಗಿರುವ ದೂರು ಲೋಕಾಯುಕ್ತದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಇನ್ನೂ ಈ ದೂರು ಇತ್ಯರ್ಥವಾಗಿಲ್ಲ. ಈ ಮಧ್ಯೆ ಈ ಕಂಪನಿಗೆ 3.50 ಕೋಟಿ  ಪಾವತಿಸಲು ತರಾತುರಿಯಲ್ಲಿ ನಿಗಮದ ಉನ್ನತ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆಪಾದನೆ ಕೇಳಿ ಬಂದಿದೆ.

 

ಪ್ರಕರಣದ ಹಿನ್ನೆಲೆ

 

ಕೋವಿಡ್‌ ಸಂದರ್ಭದಲ್ಲಿ 3.25 ಕೋಟಿ ರು. ಮೊತ್ತದಲ್ಲಿ ಕೈ ಗವಸುಗಳ ಖರೀದಿಗೆ ದರ ಪಟ್ಟಿ ಆಹ್ವಾನಿಸಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಕೆ ಕೆ ಅಲೈಯನ್ಸ್‌ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸದೆಯೇ 148 ರು. ದರದಲ್ಲಿ 2,20,000 ಲಕ್ಷ ಸಂಖ್ಯೆಯ ಕೈಗವಸುಗಳನ್ನು ಖರೀದಿಸಿತ್ತು. ಆದರೆ ಈ ಕೈಗವಸುಗಳು ಅತ್ಯಂತ ಕಳಪೆ ದರ್ಜೆಯದ್ದಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಕೆಲವು ಆಸ್ಪತ್ರೆಗಳ ಶಸ್ತ್ರಚಿಕಿತ್ಸಕರು ಸಹ ನಿಗಮವು ಸರಬರಾಜು ಮಾಡಿರುವ ಕೈಗವಸುಗಳನ್ನು ಬಳಸಲು ಯೋಗ್ಯವಲ್ಲ ಎಂದು ನಿಗಮಕ್ಕೆ ಪತ್ರವನ್ನೂ ಬರೆದಿದ್ದರು ಎಂದು ಗೊತ್ತಾಗಿದೆ.

 

ಶಸ್ತ್ರ ಚಿಕಿತ್ಸಕರು ಬರೆದಿದ್ದ ಪತ್ರಗಳನ್ನು ಗಂಭೀರವಾಗಿ ಪರಿಗಣಿಸದ ನಿಗಮವು ಇದೀಗ ಕಂಪನಿಗೆ ತರಾತುರಿಯಲ್ಲಿ ಹಣ ಪಾವತಿಸಲು ಮುಂದಾಗಿದೆ ಎಂದು ಗೊತ್ತಾಗಿದೆ. ಇದರ ಹಿಂದೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ನಿಗಮದ ಉನ್ನತ ಅಧಿಕಾರಿಗಳಿಗೆ ಭಾರೀ ಪ್ರಮಾಣದಲ್ಲಿ ಲಂಚ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

 

ಉತ್ಪಾದಕ ಕಂಪನಿಯ ಹೆಸರು ದುರ್ಬಳಕೆ

 

ಕೈಗವಸು ಖರೀದಿಗೆ ನಿಗಮವು ಆಹ್ವಾನಿಸಿದ್ದ ದರಪಟ್ಟಿಯಲ್ಲಿ ಕೆ ಕೆ ಅಲೈಯನ್ಸ್‌ ಕಂಪನಿಯೂ ಭಾಗವಹಿಸಿತ್ತು. ಇದಕ್ಕೆ ಕೇರಳ ಮೂಲದ ಅಸ್ಮಾ ರಬ್ಬರ್‌ ಪ್ರಾಡಕ್ಟ್‌ ಪ್ರೈವೈಟ್‌ ಲಿಮಿಟೆಡ್‌ ಹೆಸರಿನ ಕಂಪನಿಯು ಕೈಗವಸುಗಳನ್ನು ಸರಬರಾಜು ಮಾಡಲು ತನಗೆ ಅಧಿಕೃತ ಪತ್ರ ನೀಡಿದೆ ಎಂದೂ ದಾಖಲೆ ಸಲ್ಲಿಸಿತ್ತು. ಆದರೆ ವಾಸ್ತವದಲ್ಲಿ ಕೇರಳ ಮೂಲದ ಕಂಪನಿಯು ಕೆ ಕೆ ಅಲೈಯನ್ಸ್‌ ಕಂಪನಿಗೆ ಯಾವುದೇ ಅಧಿಕೃತ ಪರವಾನಿಗೆಯಾಗಲೀ, ಪತ್ರವನ್ನಾಗಲೀ ನೀಡಿರಲಿಲ್ಲ ಎಂದು ಗೊತ್ತಾಗಿದೆ.

 

ಈ ಸಂಬಂಧ ಅಸ್ಮಾ ರಬ್ಬರ್‌ ಪ್ರಾಡಕ್ಟ್‌ ಕಂಪನಿಯೇ ಕೆಎಸ್‌ಎಂಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 2022ರ ಫೆ.21ರಂದೇ ಪತ್ರವನ್ನು ಬರೆದಿತ್ತು. ಆದರೆ ಈ ಪತ್ರವನ್ನೂ ನಿಗಮವು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ನಕಲಿ ದಾಖಲೆ ಸೃಷ್ಟಿಸಿ ಕಳಪೆ ದರ್ಜೆಯ ಕೈಗವಸುಗಳನ್ನು ಸರಬರಾಜು ಮಾಡಿದ್ದ ಕಂಪನಿ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದು ತಿಳಿದು ಬಂದಿದೆ.

 

ಆಸ್ಮಾ ರಬ್ಬರ್‌ ಕಂಪನಿಯು ಬರೆದಿರುವ ಪತ್ರದಲ್ಲೇನಿದೆ?

 

ತಮ್ಮ ಕಂಪನಿಯ ಹೆಸರನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಸ್ಟೆರಿಲೈಸ್ಡ್‌ ಸರ್ಜಿಕಲ್‌ ಗ್ಲೌಸ್‌ಗಳನ್ನು (ಬ್ಯಾಚ್‌ ನಂ; ಏಆರ್‌ಪಿ/10-21) ಕೆ ಕೆ ಅಲೈಯನ್ಸ್‌ ಕಂಪನಿಯು ಸರಬರಾಜು ಮಾಡಿದೆ. ಇದನ್ನು ನಮ್ಮ ಕಂಪನಿಯು ಉತ್ಪಾದಿಸಿಲ್ಲ. ಅಲ್ಲದೇ ಸ್ಟೆರಿಲೈಸ್ಡ್‌ ಸರ್ಜಿಕಲ್‌ ಗ್ಲೌಸ್‌ಗಳನ್ನು ನಾವು ಯಾರಿಗೂ ನೇರ ಮತ್ತು ಪರೋಕ್ಷವಾಗಿ ಸರಬರಾಜು ಮಾಡಿಲ್ಲ. ಅಲ್ಲದೇ ನಮ್ಮ ಕಂಪನಿ ಪರವಾಗಿ ಯಾರಿಗೂ ಸರಬರಾಜು ಮಾಡಲು ಅಧಿಕೃತವಾಗಿ ಪತ್ರವನ್ನೂ ನೀಡಿಲ್ಲ. ಈ ಬಗ್ಗೆ ತಕ್ಷಣವೇ ಗಮನ ಹರಿಸಿ ಕಾನೂನುಬಾಹಿರವಾಗಿ ನಮ್ಮ ಕಂಪನಿಯ ಹೆಸರನ್ನು ಬಳಕೆ ಮಾಡಿಕೊಂಡು ಗ್ಲೌಸ್‌ಗಳನ್ನು ಸರಬರಾಜು ಮಾಡಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಸ್ಮಾ ರಬ್ಬರ್‌ ಕಂಪನಿಯು 2022ರ ಫೆ.21ರಂದೇ ಪತ್ರ ಬರೆದಿತ್ತು.

 

 

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಲ್ಲಿ ಉಸ್ತುವಾರಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದವರೊಬ್ಬರು ಈ ಪ್ರಕರಣದಲ್ಲಿ ದೊಡ್ಡ ಮೊತ್ತದಲ್ಲಿ ಲಂಚ ಪಡೆದಿದ್ದಾರೆ ಎಂಬ ಗುರುತರವಾದ ಆರೋಪವೂ ಇದೆ. ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕಿದ್ದ ಉಸ್ತುವಾರಿ ವ್ಯವಸ್ಥಾಪಕ ನಿರ್ದೇಶಕರು ಕೇವಲ ಎಚ್ಚರಿಕೆ ನೋಟೀಸ್‌ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿದೆ. ಕಳಪೆ ದರ್ಜೆಯ ಮತ್ತು ಈಗಾಗಲೇ ಒಮ್ಮೆ ಬಳಸಿ ಬಿಸಾಡಿದ್ದ ಕೈಗವಸುಗಳನ್ನು ಸರಬರಾಜು ಮಾಡಲಾಗಿದೆ ಎಂಬ ದೂರು ಲೋಕಾಯುಕ್ತದಲ್ಲಿ ದೂರಿನ ವಿಚಾರಣೆ ನಡೆಯುತ್ತಿದ್ದರೂ ಹಾಲಿ ವ್ಯವಸ್ಥಾಪಕ ನಿರ್ದೇಶಕರು ಕ್ಷಿಪ್ರಗತಿಯಲ್ಲಿ ಹಣ ಬಿಡುಗಡೆಗೆ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts