ಬೆಂಗಳೂರು; ರಾಜ್ಯದಲ್ಲಿ 2019ರಿಂದ 2022ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಇಸ್ಕಾನ್, ಆದಿಚುಂಚನಗಿರಿ ಮಹಾಸಂಸ್ಥಾನ ಸೇರಿದಂತೆ ಇನ್ನಿತರೆ ಖಾಸಗಿ ಸಂಘ ಸಂಸ್ಥೆಗಳಿಗೆ ಕಾನೂನು ಮತ್ತು ಆರ್ಥಿಕ ಇಲಾಖೆಯ ಅಸಮ್ಮತಿ ನಡುವೆಯೂ ಬೆಂಗಳೂರು ನಗರ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಒಟ್ಟಾರೆ 212 ಎಕರೆ 83 ಗುಂಟೆ ವಿಸ್ತೀರ್ಣದ ಗೋಮಾಳ ಜಮೀನನ್ನು ಹಂಚಿಕೆ ಮಾಡಿರುವುದು ಇದೀಗ ಬಹಿರಂಗವಾಗಿದೆ.
ವಿಧಾನಪರಿಷತ್‌ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದ ಟಿ ಎ ಶರವಣ ಅವರು ಕೇಳಿದ್ದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು 2019, 2020, 2021 ಮತ್ತು 2022ರ ಅವಧಿಯಲ್ಲಿ ಗೋಮಾಳ ಜಮೀನು ಹಂಚಿಕೆಯ ಅಂಕಿ ಸಂಖ್ಯೆಗಳನ್ನು ಒದಗಿಸಿದ್ದಾರೆ. ಗೋಮಾಳ ಹಂಚಿಕೆಯಾಗಿರುವ ಸಂಘ ಸಂಸ್ಥೆಗಳ ಪೈಕಿ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಇಸ್ಕಾನ್, ಆದಿಚುಂಚನಗಿರಿ ಸಂಸ್ಥಾನ ಸಿಂಹಪಾಲು ಪಡೆದಿರುವುದು ಉತ್ತರದಿಂದ ತಿಳಿದುಬಂದಿದೆ.
ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಗದಗ್, ಹಾಸನ, ಹಾವೇರಿ, ಕಲ್ಬುರ್ಗಿ, ಕೊಡಗು, ಕೊಪ್ಪಳ, ರಾಯಚೂರು, ರಾಮನಗರ, ತುಮಕೂರು, ಉತ್ತರಕನ್ನಡ, ಉಡುಪಿ, ವಿಜಯನಗರ, ಯಾದಗಿರಿ, ವಿಜಯಪುರದಲ್ಲಿ ಯಾವುದೇ ಪ್ರಕರಣಗಳು ಇರುವುದಿಲ್ಲ ಎಂದು ಕಂದಾಯ ಇಲಾಖೆಯು ಉತ್ತರ ಒದಗಿಸಿದೆ.
ವಿಶೇಷವೆಂದರೆ ಧಾರವಾಡದ ಕಲಘಟಗಿ ಬಳಿ ಮಾದಾರ ಪೀಠ ಮತ್ತು ಚಿಕ್ಕಮಗಳೂರು, ಮೈಸೂರು ವಿವಿಧೆಡೆ ರಾಷ್ಟ್ರೋತ್ಥಾನ ಪರಿಷತ್‌ಗೆ ಹಂಚಿಕೆ ಮಾಡಿರುವ ಗೋಮಾಳ ಜಮೀನಿನ ವಿವರಗಳನ್ನು ಒದಗಿಸದೇ ಮರೆಮಾಚಿರುವುದು ಉತ್ತರದಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಸಹ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಇಸ್ಕಾನ್ ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನವೂ ಸೇರಿದಂತೆ ರಾಜ್ಯಾದಾದ್ಯಂತ ಗೋಮಾಳ ಜಮೀನನ್ನು ಮಂಜೂರು ಮಾಡಲಾಗಿದೆ. ಕಂದಾಯ ಇಲಾಖೆಯ ಹಿಂದಿನ ಸಚಿವ ಆರ್ ಅಶೋಕ್ ಅವರು ಅತ್ಯಾಸಕ್ತಿ ವಹಿಸಿದ ಪರಿಣಾಮ ರಾಷ್ಟ್ರೋತ್ಥಾನ ಪರಿಷತ್ ಮತ್ತು ಜನಸೇವಾ ಟ್ರಸ್ಟ್‌ಗೆ ಗೋಮಾಳ ಮಂಜೂರು ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಗೋಮಾಳ ಹಂಚಿಕೆ ವಿವರ ಇಲ್ಲಿದೆ
ಯಲಹಂಕ ಸಿಂಗನಾಯನಕಹಳ್ಳಿಯಲ್ಲಿ 8 ಎಕರೆ 37 ಗುಂಟೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ 2019ರ ಮಾರ್ಚ್ 14ರಂದು ನೀಡಲಾಗಿದೆ. ಯಲಹಂಕ ಹೆಸರಘಟ್ಟದ ಇಟಗಲ್‌ಪುರದಲ್ಲಿ 3 ಎಕರೆ 38 ಗುಂಟೆಯನ್ನು ಕರ್ನಾಟಕ ರಾಜ್ಯಪಾಲ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಂಘಕ್ಕೆ 2020ರ ಫೆ.28ರಂದು ನೀಡಲಾಗಿದೆ. ಯಲಹಂಕ ತಾಲೂಕಿನ ಹೆಸರಘಟ್ಟದ ಹುರಳಿಚಿಕ್ಕನಹಳ್ಳಿ ಯಲ್ಲಿ 9 ಎಕರೆ 32 ಗುಂಟೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಗೆ 2022ರ ಫೆ.22ರಂದು ಹಂಚಿಕೆ ಮಾಡಲಾಗಿದೆ ಎಂದು ಉತ್ತರದಲ್ಲಿ ವಿವರ ಒದಗಿಸಲಾಗಿದೆ.
ಯಲಹಂಕ ತಾಲೂಕಿನ ಚಿಕ್ಕಬೆಟ್ಟಹಳ್ಳಿಯಲ್ಲಿ 2 ಎಕೆರೆಯನ್ನು ಸೊಸೈಟಿ ಫಾರ್ ವುಮೆನ್ ಡೆವಲಪ್‌ಮೆಂಟ್ ಸಂಸ್ಥೆಗೆ 2021ರ ಡಿಸೆಂಬರ್ 19ರಂದು ನೀಡಲಾಗಿದೆ. ಯಲಹಂಕ ತಾಲೂಕಿನ ಜಾಲ ತಿಮ್ಮಸಂದ್ರ 7 ಎಕರೆಯನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್‌ಗೆ 2022ರ ಡಿಸೆಂಬರ್ 16ರಂದು ನೀಡಲಾಗಿದೆ. ಬೆಂಗಳೂರು ದಕ್ಷಿಣ ಬೇಗೂರು ಎಳ್ಳೇನಹಳ್ಳಿಯಲ್ಲಿ 8.32 ಎಕರೆಯನ್ನು ಆಧಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ 2019ರ ಜುಲೈ 29ರಂದು ಮಂಜೂರು ಮಾಡಿರುವುದು ಉತ್ತರದಿಂದ ತಿಳಿದು ಬಂದಿದೆ.
ಬೆಂಗಳೂರು ಉತ್ತರ ಯಶವಂತಪುರ ಕೆರೆಗುಡ್ಡದಹಳ್ಳಿಯಲ್ಲಿ 4 ಎಕರೆಯನ್ನು ಬಾಲಾಜಿ ಎಜುಕೆಷನ್ ಟ್ರಸ್ಟ್‌ಗೆ 2021ರ ಫೆ.3ರಂದು ನೀಡಲಾಗಿದೆ. ಯಶವಂತಪುರ ಚಿಕ್ಕಬಾಣಾವರದಲ್ಲಿ 7 ಎಕರೆಯನ್ನು ರಾಘವೇಂದ್ರ ಎಜುಕೇಷನ್ ಇನ್ಸಿಟಿಟ್ಯೂಟ್‌ಗೆ 2022ರ ಅಕ್ಟೋಬರ್ 1ರಂದು ನೀಡಲಾಗಿದೆ. ಬೆಂಗಳೂರು ಉತ್ತರ ದಾಸನಪುರ ಕಮ್ಮಸಂದ್ರ 3 ಎಕರೆ 24 ಗುಂಟೆ ಜಾಘವನ್ನು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಗೆ 2022ರ ಆಗಸ್ಟ್ 17ರಂದು ಹಂಚಿಕೆ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಬೇಗೂರು ಎಳ್ಳೇನಹಳ್ಳಿಯಲ್ಲಿ 8 ಎಕರೆ 32 ಗುಂಟೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ 2019ರ ಜುಲೈ 20ರಂದು ನೀಡಲಾಗಿದೆ. ಬೆಂಗಳೂರು ದಕ್ಷಿಣ ಕೆಂಗೇರಿ ಹೋಬಳಿಯ ಕುಂಬಳಗೋಡು 3 ಎಕರೆಯನ್ನು ಕರ್ನಾಟಕ ರಾಜ್ಯ ಗೊಲ್ಲ ಸಂಘಕ್ಕೆ 2020ರ ಆಗಸ್ಟ್ 18ರಂದು ನೀಡಲಾಗಿದೆ.
ಬೆಂಗಳೂರು ದಕ್ಷಿಣ ಉತ್ತರಹಳ್ಳಿಯ ವಡ್ಡರಪಾಳ್ಯದಲ್ಲಿ 25 ಎಕರೆ ಕರ್ನಾಟಕ ಸಿಲ್ಕ್ಸ್ ಸ್ಟ್ರೀಟರ್ಸ್ ವೀವರ್ಸ್ ಹೌಸ್ ಬಿಲ್ಡಿಂಗ್ ಕೋ ಆಪರೇಟೀವ್ ಸೊಸೈಟಿ ಲಿಮಿಟೆಡ್‌ಗೆ 2020ರ ಸೆ.5ರಂದು ನೀಡಲಾಗಿದೆ. ಬೆಂಗಳೂರು ದಕ್ಷಿಣ ತಾವರೆಕೆರೆ ಹೋಬಳಿ ಕುರುಬರಹಳ್ಳಿಯಲ್ಲಿ ಜನಸೇವಾ ಟ್ರಸ್ಟ್‌ಗೆ 35 ಎಕರೆ 33 ಗುಂಟೆಯನ್ನು 2022ರ ಸೆ.13ರಂದು ನೀಡಿರುವುದು ಉತ್ತರದಿಂದ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿ ಬೊಮ್ಮವಾರ ಗ್ರಾಮದಲ್ಲಿ ಶ್ರೀ ಗುರುಗಂಡ ಬ್ರಹ್ಮೇಶ್ವರಸ್ವಾಮಿ ವಿದ್ಯಾಸಂಸ್ಥೆಗೆ 2 ಎಕರೆ 17 ಗುಂಟೆ ಯನ್ನು 2019ರ ಆಗಸ್ಟ್ 5ರಂದು ನೀಡಲಾಗಿದೆ. ನೆಲಮಂಗಲ ತಾಲೂಕಿನ ಕಸಬಾ ಹೋಬಳಿ ಹಲಚಗೆರೆ ಗ್ರಾಮದ ಸರ್ವೆನಂಬರ್‍ನಲ್ಲಿ 9 ಎಕರೆ 20 ಗುಂಟೆಯನ್ನು ಸಿದ್ದಗಂಗಾಮಠಕ್ಕೆ ಶೈಕ್ಷಣಿಕ ಸಾಮಾಜಿಕ ಉದ್ದೇಶಕ್ಕೆ ಮಂಜೂರು ಮಾಡಿರುವುದು ಗೊತ್ತಾಗಿದೆ.
ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಗ್ರಾಮದ ಸರ್ವೆನಂಬರ್ 23ರಲ್ಲಿ 2 ಎಕರೆಯನ್ನು ಶ್ರೀ ಗುರುದೇವಾ ಸೇವಾ ಸಂಸ್ಥೆಗೆ ನೀಡಲಾಗಿದೆ. ನೆಲಮಂಗಲ ತಾಲೂಕಿನ ಕಸಬಾ ಹೋಬಳಿಯಿ ಹಂಚೀಪುರ ಗ್ರಾಮದ ಸರ್ವೆ ನಂಬರ್ 121ರಲ್ಲಿ 0-30 ಗುಂಟೆ ಜಮೀನನ್ನು ವಿದ್ಯುತ್ ಉಪ ಕೇಂದ್ರಕ್ಕೆ ಮಂಜೂರು ಮಾಡಿದೆ.
ಬಾಗಲಕೋಟೆಯ ಶಿಗಿಕೇರಿ ಗ್ರಾಮದ ಸರ್ವೆ ನಂಬರ್ 64ರಲ್ಲಿ 5 ಎಕರೆ ಗುಂಟೆ ಜಮೀನನ್ನು 2022ರ ಜನವರಿ 24ರಂದು ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಪರಿಶಿಷ್ಟ ಜನಾಂಗದವರ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಅಭಿವೃದ್ಧಿಗಾಗಿ ಪರಿವರ್ತನ ಸಾಮಾಜಿಕ ಸೇವಾ ಸಂಘಕ್ಕೆ ಹಂಚಿಕೆ ಮಾಡಲಾಗಿದೆ. ಬೆಳಗಾವಿ ತಾಲೂಕಿನ ಪೀರಣವಾಡಿ ಗ್ರಾಮದ ಸರ್ವೆ ನಂಬರ್ 21ರಲ್ಲಿ 10 ಗುಂಟೆಯನ್ನು ಕುರುಬ ಸಮುದಾಯ ಭವನ ನಿರ್ಮಾಣ ಮಾಡಲು ಕರ್ನಾಟಕ ಕುರುಬ ಸಂಘಕ್ಕೆ 2019ರ ಫೆ.4ರಂದು ಮಂಜೂರು ಮಾಡಿದೆ.
ಬೈಲಹೊಂಗಲ ತಾಲೂಕಿನ ಕಡಸಗಟ್ಟೆ ಗ್ರಾಮದಲ್ಲಿ 4 ಎಕರೆಯನ್ನು ವಿದ್ಯುತ್ ಕೇಂದ್ರಕ್ಕೆ ಮಂಜೂರು ಮಾಡಲಾಗಿದೆ. ಬಿದರಹಟ್ಟಿಯಲ್ಲಿ 49 ಎಕರೆ 35 ಗುಂಟೆಯನ್ನು ರಾಜ್ಯ ವಿಪತ್ತು ಸ್ಪಂದನಾಪಡೆಯನ್ನು ಮಂಜೂರು ಮಾಡಲಾಗಿದೆ. ಕಿತ್ತೂರು ತಾಲೂಕಿನ ಕಿತ್ತೂರು ಗ್ರಾಮದ 4 ಎಕರೆಯನ್ನು ನೂತನ ಬಸ್ ನಿಲ್ದಾಣ ಘಟಕ್ಕಕಾಗಿ ಮಂಜೂರು ಮಾಡಲಾಗಿದೆ. ಗೋಕಾಕ ತಾಲೂಕಿನಲ್ಲಿ ವಿದ್ಯುತ್ ನಿಗಮಕ್ಕೆ 2 ಎಕರೆ ಹಂಚಿಕೆ ಮಾಡಿರುವುದು ಉತ್ತರದಿಂದ ತಿಳಿದು ಬಂದಿದೆ.
ಖನಗಾಂವ ಗ್ರಾಮದಲ್ಲಿ 2 ಎಕರೆ 15 ಗುಂಟೆ ಜಮೀನನ್ನು ವಿದ್ಯುತ್ ನಿಗಮಕ್ಕೆ ನೀಡಲಾಗಿದೆ. ಮೂಡಲಗಿ ತಾಲೂಕಿನ ಅರಭಾಂವಿ ಗ್ರಾಮದಲ್ಲಿ 2 ಎಕರೆ ಜಮೀನು ಹಾಗೂ ಘಟಪ್ರಭಾದಲ್ಲಿ 2 ಎಕರೆ ಜಮೀನನ್ನು ವಿದ್ಯುತ್ ಸರಬರಾಜು ಕಾರ್ಯಪಾಲನಾ ವಿಭಾಗಕ್ಕೆ ನೀಡಲಾಗಿದೆ.
ಮೂಡಲಗಿ ತಾಲೂಕಿನಲ್ಲಿ ಅರಂಭಾವಿ ಗ್ರಾಮದಲ್ಲಿ ಪಟ್ಟಣ ಪಂಚಾಯತ್‌ಗೆ 2 ಎಕರೆ ಜಮೀನು ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಬೀರೂರು ಕಾವಲು ನಲ್ಲಿ ಭಾರತೀಯ ವೈfಯಕೀ ಸಂಘಕ್ಕೆ 0-05 ಗುಂಟೆ ಜಮೀನು, ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ 16 ಎಕರೆ ಜಮೀನನ್ನು 2019ನೇ ಸಾಲಿನಲ್ಲಿ 30 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಗುತ್ತಿಗೆ ಮಂಜೂರು ಮಾಡಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ಕಸಬಾ ಹೋಬಳಿ ಮಹದೇವಪುರ ಗ್ರಾಮದ ಸರ್ವೇ ನಂಬರ್ 411ರಲ್ಲಿ 30 ಎಕರೆ ಜಮೀನನ್ನು ಇಸ್ಕಾನ್ ಸಂಸ್ಥೆಗೆ 2022ರಲ್ಲಿ ಮಂಜೂರು ಮಾಡಲಾಗಿದೆ. ಮೈಸೂರು-ಹುಣಸೂರು ತಾಲೂಕಿನ ಕಸಬಾ ಹೋಬಳಿ ಮೂಕನಹಳ್ಳಿ ಗ್ರಾಮದಲ್ಲಿ 2 ಎಕರೆ ಜಮೀನನ್ನುಹಣುಸೂರು ಒಕ್ಕಲಿಗರ ಸಂಘಕ್ಕೆ ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಸಬಾ ಹೋಬಳಿ ಸುರಳಿಬಾಳೇಬೈಲು ಗ್ರಾಮದಲ್ಲಿ 1 ಎಕರೆ ಜಾಗವನ್ನು ಕ್ಷತ್ರಿಯ ಮರಾಠ ಸಂಘಕ್ಕೆ ಮಂಜೂರು ಮಾಡಲಾಘಿದೆ. ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಹೋಬಳಿ ಬೆಜ್ಜವಳ್ಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿ 1 ಎಕರೆಯನ್ನು ಅಯ್ಯಪ್ಪಸ್ವಾಮಿ ಧಾರ್ಮಿಕ ದತ್ತಿ ದೇವಸ್ಥಾನಕ್ಕೆ ಮಂಜೂರು ಮಾಡಲಾಗಿದೆ.