Saturday | September 5, 2026 |

ಅಬಕಾರಿ ಲೇಬಲ್‌ ಮುದ್ರಣ; ಕಪ್ಪುಪಟ್ಟಿ, ಕ್ರಿಮಿನಲ್ ಆರೋಪಿತ ಕಂಪನಿಗೆ ಆದೇಶ, ಕಮಿಷನ್‌ ವ್ಯವಹಾರ?

ಬೆಂಗಳೂರು; ಕಪ್ಪು ಪಟ್ಟಿ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿದೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಮಣಿಪಾಲ್‌ ಟೆಕ್ನಾಲಜೀಸ್‌ ಪ್ರೈ  ಲಿಮಿಟೆಡ್‌ಗೆ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ಮತ್ತು ಸರಬರಾಜು ಮಾಡಲು ಕಾರ್ಯಾದೇಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

 

ಸಾರಿಗೆ ಇಲಾಖೆಯ ಬಹುದೊಡ್ಡ ಟೆಂಡರ್‌ನಲ್ಲಿ ಬಿಡ್ ಮಾಡಿದ್ದ ಮಣಿಪಾಲ್‌ ಟೆಕ್ನಾಲಜೀಸ್‌ ಪ್ರೈ ಲಿ., ತನ್ನ ಮೇಲಿನ ಗುರುತರ ಆರೋಪಗಳನ್ನು ಘೋಷಣಾ ಪತ್ರದಲ್ಲಿ ಬಹಿರಂಗೊಳಿಸದೇ ಮುಚ್ಚಿಟ್ಟಿರುವ ಆರೋಪಕ್ಕೆ ಗುರಿಯಾಗಿದ್ದರೂ ಇದೇ 2023ರ ಜುಲೈ 1ರಿಂದ 2026ರ ಜೂನ್‌ 30ವರೆಗೆ ಅಬಕಾರಿ ಭದ್ರತಾ ಚೀಟಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಅಬಕಾರಿ ಇಲಾಖೆಯು ಹೊರಡಿಸಿರುವ ಆದೇಶವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೇಬಲ್‌ಗಳ ಮುದ್ರಣ ಮತ್ತು ಸರಬರಾಜು ಮಾಡಲು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದ್ದರು. ಆದರೆ ಆ ಆದೇಶಕ್ಕೆ ತಡೆಬಿದ್ದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಆರಂಭದಲ್ಲೇ ಇದೇ ಆದೇಶಕ್ಕೆ ಜಾರಿಯಾಗಿರುವುದರ ಹಿಂದೆ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ.

 

ಅಬಕಾರಿ ಇಲಾಖೆಯಲ್ಲಿ 1,000 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರಿನಲ್ಲಿ ಮಣಿಪಾಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ನ್ನೂ ಹೆಸರಿಸಿದ್ದರ ಬೆನ್ನಲ್ಲೇ ಈ ಕಂಪನಿಯು ಕಪ್ಪು ಪಟ್ಟಿ ಮತ್ತು ಕ್ರಿಮಿನಲ್‌ ಹಿನ್ನೆಲೆ ಆರೋಪಕ್ಕೆ ಗುರಿಯಾಗಿದ್ದ  ಪ್ರಕರಣವೂ  ಮುನ್ನೆಲೆಗೆ ಬಂದಿದೆ.

 

ಟೆಂಡರ್‌ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಇದನ್ನು ಗಮನಿಸದೆಯೇ ಮಣಿಪಾಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ಗೆ ಬಿಡ್‌ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಸಾರಿಗೆ ಇಲಾಖೆಯ ಹಿಂದಿನ ಸಚಿವ ಬಿ ಶ್ರೀರಾಮುಲು ಅವರು ಸದನದಲ್ಲಿಯೇ ಲಿಖಿತ ಉತ್ತರ ನೀಡಿದ್ದರು. ಆದರೆ ಕಾರ್ಯಾದೇಶ ಹೊರಡಿಸುವ ಮುನ್ನ ಮಣಿಪಾಲ್‌ ಟೆಕ್ನಾಲಜೀಸ್‌ ಕಂಪನಿಯ ಹಿನ್ನೆಲೆಯನ್ನು ಮತ್ತು ಸಾರಿಗೆ ಇಲಾಖೆಯಲ್ಲಿ ನಡೆದಿದ್ದ ಟೆಂಡರ್‍‌ ಪ್ರಕ್ರಿಯೆ ವೇಳೆಯಲ್ಲಿನ ಲೋಪಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿಲ್ಲ ಎಂಬುದು ತಿಳಿದು ಬಂದಿದೆ.

 

ಅಬಕಾರಿ ಭದ್ರತಾ ಚೀಟಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಅಬಕಾರಿ ಇಲಾಖೆಯು 2023ರ ಜನವರಿ 25ರಂದು ಟೆಂಡರ್‍‌ (ಸಂಖ್ಯೆ;ಇಸಿಡಿ/71/ಲೇಬಲ್‌/2001-2 (ಭಾಗ-5) ಕರೆದಿತ್ತು. ಅಲ್ಪಾವಧಿ ಟೆಂಡರ್‍‌ನ ಹಣಕಾಸು ಬಿಡ್‌ನಲ್ಲಿ ನಡೆಸಿದ್ದ ದರ ಸಂಧಾನದಲ್ಲಿ ಮಣಿಪಾಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ಗೆ 31.74 ರು.ನಂತೆ ಪ್ರತಿ ಇಎಎಲ್‌ಗೆ ನಮೂಧಿಸಿದ್ದ ದರವನ್ನು ಸರ್ಕಾರದ ಅನುಮೋದನೆ ಮೇರೆಗೆ ಕಾರ್ಯಾದೇಶ ನೀಡಲಾಗಿತ್ತು. ಈ ಪ್ರಕರಣದಲ್ಲಿಯೇ 1,000 ಕೋಟಿ ರು. ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ದೂರಿನಲ್ಲಿ ವಿವರಿಸಿದ್ದರು.

 

ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್‌ ಎನ್ ಪ್ರಸಾದ್‌ ಅವರೂ ಸೇರಿದಂತೆ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇದೇ ದೂರಿನಲ್ಲಿ ದಿನೇಶ್‌ ಕಲ್ಲಹಳ್ಳಿ ಅವರು ಆರೋಪಿಸಿದ್ದರು.

 

ಬಿಜೆಪಿ ಅವಧಿಯಲ್ಲಿ ತಡೆಹಿಡಿದಿದ್ದ ಆದೇಶಕ್ಕೆ ಮರುಜೀವ; ಅಬಕಾರಿಯಲ್ಲಿ 1,000 ಕೋಟಿ ಅಕ್ರಮ ಆರೋಪ

 

ಸಾರಿಗೆ ಇಲಾಖೆ ಟೆಂಡರ್‍‌ನಲ್ಲಿ ನಡೆದಿದ್ದೇನು?

 

ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್‌ ಜಾಲದಲ್ಲಿ ಅಳವಡಿಸುವ ಸಲುವಾಗಿ 2019ರ ಮಾರ್ಚ್‌ 6ರಂದು ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನಲ್ಲಿ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ ಬಿಡ್‌ದಾರರನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಪರಿಶೀಲನೆ ನಡೆಸಿ ಎಲ್‌ 1 ಮತ್ತು ಎಲ್‌ 2 ಬಿಡ್‌ದಾರರನ್ನು ಅಂತಿಮಗೊಳಿಸಲಾಗಿತ್ತು.

 

ಎಲ್‌ 1 ಬಿಡ್‌ದಾರರಾದ ಮೆ ಮಣಿಪಾಲ್‌ ಟೆಕ್ನಾಲಜೀಸ್‌ ಅವರು ಈ ಹಿಂದೆ ಮಹಾರಾಷ್ಟ್ರ ರಾಜ್ಯದಲ್ಲಿ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗಿದ್ದರ ವಿಷಯವನ್ನು ಟೆಂಡರ್‌ ಘೋಷಣಾ ಪತ್ರದಲ್ಲಿ ಬಹಿರಂಗಪಡಿಸಿಲ್ಲವಾದ್ದರಿಂದ 2021ರ ಫೆ.19ರಂದು ಈ ಟೆಂಡರ್‌ನ್ನು ರದ್ದುಗೊಳಿಸಲಾಗಿತ್ತು ಎಂಬುದು ಹಿಂದಿನ ಸಾರಿಗೆ ಸಚಿವ ಶ್ರೀರಾಮುಲು ಅವರು ಉತ್ತರಿಸಿದ್ದರು.

 

ಈ ಹಿಂದೆ ಬೃಹತ್‌ ಬೆಂಗಳೂರು ಮಹಾನಗರಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಟೆಂಡರ್‌ ಪ್ರಸ್ತಾವನೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮುಖ್ಯ ಕಾನೂನು ಅಧಿಕಾರಿ ಅಭಿಪ್ರಾಯ ಪಡೆದು ಎಂಸಿಟಿ ಕಾರ್ಡ್ಸ್‌ ಮತ್ತು ಟೆಕ್ನಾಲಜಿ ಲಿಮಿಟೆಡ್‌ ಅವರನ್ನು ಟೆಂಡರ್‌ ಪ್ರಕ್ರಿಯೆಯಲ್ಲಿ ಮುಂದುವರೆಸಲಾಗಿತ್ತು.

 

ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್‌ ಜಾಲದಲ್ಲಿ ಅಳವಡಿಸುವ ಸಲುವಾಗಿ 2021ರ ಅಕ್ಟೋಬರ್‌ 25ರಂದು ಪುನಃ ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್‌ ಗೆ ಸಂಬಂಧಿಸಿದಂತೆ ತಾಂತ್ರಿಕ ಮೌಲ್ಯಮಾಪನ ಸಮಿತಿಯು ಕೈಗೊಂಡ ನಿರ್ಣಯದಂತೆ ಟೆಂಡರ್‌ಗೆ ಅರ್ಜಿ ಸಲ್ಲಿಸಿದ ಇಬ್ಬರು ಬಿಡ್‌ದಾರರಾದ ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿ., ಮತ್ತು ಎವಿಎಲ್‌ ಇಂಡಿಯಾ ಪ್ರೈ ಲಿಮಿಟೆಡ್‌ ಅವರು ತಾಂತ್ರಿಕವಾಗಿ ಅರ್ಹತೆ ಪಡೆದಿದ್ದರು.

 

2021ರ ನವೆಂಬರ್‌ 19ರಂದು ತಾಂತ್ರಿಕ ಮೌಲ್ಯಮಾಪನದಲ್ಲಿ ಅರ್ಹತೆ ಡೆದ ಇಬ್ಬರು ಬಿಡ್‌ದಾರರು ಪರಿಕಲ್ಪನೆಯ ಪುರಾವೆ ಸಂಬಂಧ ವಾಯು ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಸಮಿತಿಯ ಮುಂದೆ ಪ್ರದರ್ಶಿಸಿದ್ದರು. 2021ರ ಡಿಸೆಂಬರ್ 1ರಂದು ತಾಂತ್ರಿಕ ಮೌಲ್ಯಮಾಪನ ಮತ್ತು ಅರ್ಹ ಬಿಡ್‌ದಾರರದಿಂದ ಪರಿಕಲ್ಪನೆ ಪುರಾವೆಯಲ್ಲಿ ಅರ್ಹತೆ ಪಡೆದ ಬಿಡ್‌ದಾರರು ಸಲ್ಲಿಸಿದ್ದ ಹಣಕಾಸಿನ ಪ್ರಸ್ತಾಪವನ್ನು ಅಂತಿಮಗೊಳಿಸುವ ಸಂಬಂಧ ಸಭೆ ನಡೆಸಿ ಅಂಕಗಳನ್ನು ಲೆಕ್ಕಚಾರ ಮಾಡಿತ್ತು. ಇದಾದ ನಂತರ ಎಂಸಿಟಿ ಕಾರ್ಡ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿ, ಮಣಿಪಾಲ್‌ ಇವರು ಅತಿ ಕಡಿಮೆ ದರ ನಮೂದು ಮಾಡಿರುವುದರಿಂದ ಎಲ್‌ 1 ಬಿಡ್‌ದಾರರು ಎಂದು ಸಮಿತಿಯು ತೀರ್ಮಾನಿಸಿತ್ತು ಎಂಬುದು ಉತ್ತರದಿಂದ ತಿಳಿದು ಬಂದಿದೆ.

 

‘ಈ ಟೆಂಡರ್‌ನಲ್ಲಿನ ಭಾಗವಹಿಸಿದ್ದ ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿಮಿಟೆಡ್‌ ಅವರು ಮಣಿಪಾಲ್‌ ಟೆಕ್ನಾಲಜೀಸ್‌ ಪ್ರೈ ಲಿ., ಅವರ ಅಂಗ ಸಂಸ್ಥೆಯಾಗಿರುವುದು ಕಂಡು ಬರುತ್ತದೆ. 2021ರ ಡಿಸೆಂಬರ್‌ 2ರಂದು ವಿಧಾನಪರಿಷತ್ತಿನ ಅರ್ಜಿ ಸಮಿತಿ ಸಭೆಯಲ್ಲಿ ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜೀಸ್‌ ಪ್ರೈ ಲಿ., ಅವರು ಮಣಿಪಾಲ್‌ ಟೆಕ್ನಾಲಜೀಸ್‌ ಪ್ರೈ ಲಿ.ನ ಅಂಗ ಸಂಸ್ಥೆಯಾಗಿರುವ ಕಾರಣ ಇವರಿಗೆ ಕಾರ್ಯಾದೇಶ ನೀಡುವ ಬಗ್ಗೆ ಕಾನೂನು ಇಲಾಖೆಯ ಹಾಗೂ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದು ಮುಂದುವರೆಯಲು ಸೂಚಿಸಿದ್ದಾರೆ,’ಎಂದು ಶ್ರೀರಾಮುಲು ಅವರು ಉತ್ತರ ಒದಗಿಸಿದ್ದರು.

 

 

 

ದೂರು ನೀಡಿದ್ದ ಎವಿಎಲ್‌ ಇಂಡಿಯಾ ಪ್ರೈ ಲಿ.,

 

ಮಣಿಪಾಲ್‌ ಟೆಕ್ನಾಲಜೀಸ್‌ ಮತ್ತು ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಕಂಪನಿ ವಿರುದ್ಧ ಎವಿಎಲ್‌ ಇಂಡಿಯಾ ಪ್ರೈ ಲಿ., 2021ರ ಡಿಸೆಂಬರ್‌ 8ರಂದು ಸರ್ಕಾರಕ್ಕೆ ದೂರು ಸಲ್ಲಿಸಿತ್ತು. ‘2019ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್‌ ಜಾಲದಲ್ಲಿ ಅಳವಡಿಸುವ ಸಂಬಂಧ ಕರೆಯಲಾದ ಟೆಂಡರ್‌ನಲ್ಲಿ ಎಲ್‌ 1 ಬಿಡ್‌ದಾರರಾಗಿ ಆಯ್ಕೆಯಾದ ಮಣಿಪಾಲ್‌ ಟೆಕ್ನಾಲಜೀಸ್‌ ಅವರು ಕ್ರಿಮಿನಲ್‌ ಹಿನ್ನೆಲೆಯನ್ನು ಹೊಂದಿರುವುದನ್ನು ಮರೆಮಾಚಿರುವುದರಿಂದ ಅನರ್ಹಗೊಂಡಿರುತ್ತಾರೆ. ಮತ್ತು ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿ.,ನಲ್ಲಿ ಶೇ. 80ರಷ್ಟು ಷೇರನ್ನು ಹೊಂದಿರುತ್ತಾರೆ. ಹಾಗೂ ಅದರ ಅಂಗ ಸಂಸ್ಥೆಯಾಗಿದೆ,’ ಎಂದು ಗಮನಕ್ಕೆ ತಂದಿತ್ತು.

 

ಕಪ್ಪುಪಟ್ಟಿ, ಕ್ರಿಮಿನಲ್‌ ಆರೋಪ ಮುಚ್ಚಿಟ್ಟ ಮಣಿಪಾಲ್‌ ಟೆಕ್ನಾಲಜೀಸ್‌ಗೆ ಟೆಂಡರ್‌; ಸಾರಿಗೆ ಇಲಾಖೆಯಲ್ಲಿ ಅಕ್ರಮ

 

ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿ., ಅವರು ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್‌ ಜಾಲದಲ್ಲಿ ಅಳವಡಿಸುವ ಸಂಬಂಧ ಯಾವುದೇ ಯೋಜನೆಯಲ್ಲಿ ಅನುಭವ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಟೆಂಡರ್‌ನಲ್ಲಿ ಭಾಗವಹಹಿಸಿರುವ ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿ., ಅವರನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದರು ಎಂಬುದು ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

ಕರ್ನಾಟಕ ರಾಜ್ಯದಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ನೆಟ್‌ವರ್ಕಿಂಗ್‌ ಜಾಲದಲ್ಲಿ ಅಳವಡಿಸುವ ಸಂಬಂಧ ಪ್ರಸ್ತುತ ಕರೆಯಲಾಗಿರುವ ಟೆಂಡರ್‌ನಲ್ಲಿ ಎಲ್‌ 1 ಬಿಡ್ದಾರರಾದ ಎಂಸಿಟಿ ಕಾರ್ಡ್ಸ್‌ ಅಂಡ್‌ ಟೆಕ್ನಾಲಜಿ ಪ್ರೈ ಲಿ.ರಲ್ಲಿ ಶೆ. 80ರಷ್ಟು ಷೇರನ್ನು ಹೊಂದಿದ್ದು ಅದರ ಅಂಗ ಸಂಸ್ಥೆಯಾಗಿದೆ. ಇವರನ್ನು ಪರಿಗಣಿಸುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಗಿದ್ದು ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಕೋರಲಾಗಿದೆ ಎಂದು ಸದನಕ್ಕೆ ಸಚಿವ ಶ್ರೀರಾಮುಲು ಅವರು ಮಾಹಿತಿ ಒದಗಿಸಿದ್ದರು.

 

ಮಹಾರಾಷ್ಟ್ರದಲ್ಲಿ ನಡೆದಿದ್ದ 2,400 ಪೋಸ್ಟ್‌ಮನ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಕ್ಷಪಾತ ಎಸಗಿರುವುದು ಮತ್ತು ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪಗಳಡಿಯಲ್ಲಿ ಮಣಿಪಾಲ್‌ ಟೆಕ್ನಾಲಜೀಸ್‌ ಪ್ರೈ ಲಿ.,ನ ಪಿ ವಿ ಮಲ್ಯ ಮತ್ತು ಇತರ ನಿರ್ದೇಶಕರ ವಿರುದ್ಧ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು 2015ರಲ್ಲೇ ಎಫ್‌ಐಆರ್‌ ದಾಖಲಿಸಿದ್ದನ್ನು ಸ್ಮರಿಸಬಹುದು.

Hot this week

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ; ನೋಂದಣಿಯಾಗಿ 3 ವ‍ರ್ಷ ಪೂರೈಸದ ಬುಕ್‌ ಬ್ರಹ್ಮ ಫೌಂಡೇಷನ್‌ಗೆ ಒಂದು ಬಾರಿ ವಿನಾಯಿತಿ

ಬೆಂಗಳೂರು;  ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ  3 ವರ್ಷಗಳನ್ನು ಪೂರೈಸಿರಬೇಕು...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...
Please Scan to make Your Contribution

Topics

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

Related Articles

Popular Categories

error: Content is protected !!