ಕಾಂಗ್ರೆಸ್‌ ಅಧಿಕಾರಕ್ಕೇರಿ ತಿಂಗಳಾದರೂ ವಿಐಎಸ್‌ಎಲ್‌ಗೆ ದೊರೆಯದ ಭದ್ರಾ ನೀರು; ಮೈ ಮರೆತ ಸಿಎಂ, ಸಚಿವರು?

photo credit;thehindu

ಬೆಂಗಳೂರು; ಭಾರತೀಯ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಯಾಗಿರುವ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭದ್ರಾ ನೀರನ್ನು ಬಳಸಲು ಪರವಾನಿಗೆ ನೀಡುವ ಸಂಬಂಧ ಕರ್ನಾಟಕ ನೀರಾವರಿ ನಿಗಮವು ಕಳೆದ ಹಲವು ತಿಂಗಳಿನಿಂದಲೂ ಗಮನ ಹರಿಸಿಲ್ಲ ಮತ್ತು 2023ರ ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಇದುವರೆಗೂ ಯಾವುದೇ ಪಾಲನಾ ವರದಿಯನ್ನೂ ನೀಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಭದ್ರಾವತಿಯ ವಿಐಎಸ್‌ಎಲ್‌ನ್ನು ಮುಚ್ಚುವ ಕುರಿತು ಸೈಲ್‌ ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಿದ್ದ ಕಾಂಗ್ರೆಸ್‌ ಪಕ್ಷವೇ ಈಗ ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಸಹ ಭದ್ರಾ ನದಿ ನೀರು ಬಳಕೆ ಮಾಡಲು ಕಾರ್ಖಾನೆಗೆ ಪರವಾನಿಗೆ ದೊರೆತಿಲ್ಲ. ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿಯೇ ಕಾರ್ಯನಿರ್ವಹಿಸುವ ಕರ್ನಾಟಕ ನೀರಾವರಿ ನಿಗಮವು ದಿವ್ಯ ನಿರ್ಲಕ್ಷ್ಯ ವಹಿಸಿದ್ದರೂ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‍‌, ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರೂ ಸಹ ಇದರ ಬಗ್ಗೆ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

 

ವಿಐಎಸ್‌ಎಲ್‌ಗೆ ಭದ್ರಾ ನದಿ ಬಳಸಲು ಪರವಾನಿಗೆ ನೀಡುವ ಕುರಿತು ಜಲಸಂಪನ್ಮೂಲ ಇಲಾಖೆಯು ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಇಲಾಖೆ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆ ಸಂದರ್ಭದಲ್ಲಿ ಕೈಗೊಂಡಿದ್ದ ನಿರ್ಧಾರದ ಪ್ರಕಾರ ಕರ್ನಾಟಕ ನೀರಾವರಿ ನಿಗಮವು ಪಾಲನಾ ವರದಿ ಸಲ್ಲಿಸಬೇಕಿತ್ತು. ಆದರೆ ಇದುವರೆಗೂ ಪಾಲನಾ ವರದಿ ಸಲ್ಲಿಸದ ಕಾರಣ ಜಲಸಂಪನ್ಮೂಲ ಇಲಾಖೆಯು 2023ರ ಜೂನ್‌ 1ರಂದು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ಭದ್ರಾ ನದಿಯಿಂದ ದಿನಂಪ್ರತಿ 3000 ಎಂ 3 (ವಾರ್ಷಿಕ 0.0385 ಟಿಎಂಸಿ) ನೀರು ಹಾಗೂ ಕುಡಿಯುವ ನೀರು ಮತ್ತು ಗೃಹಪಯೋಗಿ ಕೆಲಸಕ್ಕೆ ದಿನ ಒಂದಕ್ಕೆ 9,000 ಘ.ಮೀ.ನಷ್ಟು ಹೆಚ್ಚುವರಿ ನೀರನ್ನು ಉಪಯೋಗಿಸಿಕೊಳ್ಳಲು ಪರವಾನಗಿ ನೀಡುವ ಪ್ರಸ್ತಾವನೆಯು 2023ರ ಮಾರ್ಚ್‌ 17ರಂದು ನಡೆದ ಸಭೆಯಲ್ಲಿ ಕೈಗಾರಿಕೆಗಳಿಗೆ ನೀರಿನ ಹಂಚಿಕೆ ಮಾಡುವ ಕುರಿತು ಪರಿಶೀಲಿಸಲು ರಚಿಸಿರುವ ಸಮಿತಿಯು ನಿರ್ಧರಿಸುವ ಸಮಿತಿಯ ಸಭೆಯಲ್ಲಿ ಮಂಡಿಸಲಾಗಿತ್ತು.

 

ಸಮಿತಿಯು ಪ್ರಸ್ತಾವನೆಗೆ ಸಂಬಂಧಿಸಿದಂಎ ಗಮನಿಸಿರುವ ಅಂಶಗಳ ಕುರಿತು ಪಾಲನಾ ವರದಿ ಸಲ್ಲಿಸುವಂತೆ ನಡವಳಿಯಲ್ಲಿ ತಿಳಿಸಲಾಗಿತ್ತು. ಆದರೆ ಪಾಲನಾ ವರದಿ ಇದುವರೆಗೂ ಸರ್ಕಾರದಲ್ಲಿ ಸ್ವೀಕೃತವಾಗಿಲ್ಲ. ಆದ್ದರಿಂದ ಈ ಕುರಿತು ತಮ್ಮ ವೈಯಕ್ತಿಕ ಗಮನ ಹರಿಸಿ ನಡವಳಿಯಲ್ಲಿ ದಾಖಲಾಗಿರುವಂತೆ ಸದರಿ ಪ್ರಸ್ತಾವನೆ ಕುರಿತು ಸಮಿತಿಯು ಗಮನಿಸಿರುವ ಅಂಶಗಳ ಕುರಿತು ಪಾಲನಾ ವರದಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2023ರ ಜೂನ್‌ 1ರಂದು ನಿರ್ದೇಶಿಸಲಾಗಿದೆ.

 

ಭಾರತೀಯ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಯಾಗಿರುವ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭದ್ರಾ ನದಿ ನೀರಿನ ಬಳಕೆಗೆ ಪರವಾನಿಗೆ ನೀಡಲು ಕ್ಷುಲಕ ಕಾರಣಗಳನ್ನು ಮುಂದೊಡ್ಡಿ ಸತಾಯಿಸುತ್ತಿರುವುದನ್ನು ‘ದಿ ಫೈಲ್‌’ ದಾಖಲೆಗಳ ಸಹಿತ ಹೊರಗೆಡವಿತ್ತು.

 

ಪ್ರಕರಣದ ವಿವರ

 

ವಿಐಎಸ್‌ಎಲ್‌ ಕಾರ್ಖಾನೆಗೆ ಕುಡಿಯುವ ನೀರು ಮತ್ತು ಗೃಹಪಯೋಗಿ ಕೆಲಸಕ್ಕೆ ಭದ್ರಾ ನದಿಯಿಂದ ದಿನವೊಂದಕ್ಕೆ 9,000 ಘನ ಮೀಟರ್‍‌ನ್ಟು ಹೆಚ್ಚುವರಿ ನೀರನ್ನು ಉಪಯೋಗಿಸಿಕೊಳ್ಳಲು ಅನುಮೋದನೆ ನೀಡಬೇಕು ಎಂದು ಆಡಳಿತ ಮಂಡಳಿ ಕೋರಿತ್ತು. ಈ ಸಂಬಂಧ 2022ರ ಸೆ.17ರಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಕಾರ್ಖಾನೆಗೆ ಕಬ್ಬಿಣ ಮತ್ತು ಉಕ್ಕು ಉತ್ಪಾದನೆಗೆ ದಿನವೊಂದಕ್ಕೆ 3,000 ಘನ ಮೀಟರ್‍‌ನಷ್ಟು ನೀರನ್ನು ಉಪಯೋಗಿಸಿಕೊಳ್ಳಲು ನೀಡಿರುವ ಪರವಾನಗಿಯನ್ನು 2022ರದಿಂದ ಫೆ.5ರಿಂದ ನವೀಕರಣಗೊಳಿಸಲು ಕೋರಿದ್ದರು.

 

ಕೈಗಾರಿಕೆಗಳಿಗೆ ನೀರಿನ ಹಂಚಿಕೆ ಮಾಡುವ ಕುರಿತು ಜಲಸಂಪನ್ಮೂಲ ಇಲಾಖೆಯ ಸರ್ಕಾಸರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2023ರ ಮಾರ್ಚ್‌ 17ರಂದು ನಡೆದಿದ್ದ ಸಭೆಯಲ್ಲಿಯೂ ವಿಐಎಸ್‌ಎಲ್‌ಗೆ ಕೈಗಾರಿಕೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಭದ್ರಾ ನದಿ ನೀರನ್ನು ಹಂಚಿಕೆ/ಬಳಸಲು ಪರವಾನಿಗೆ ನೀಡುವ ಸಂಬಂಧ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.

 

 

ವಿಐಎಸ್‌ಎಲ್‌ಗೆ ಭದ್ರಾ ನದಿ ಹೆಚ್ಚುವರಿ ನೀರು; ಪರವಾನಿಗೆ ನವೀಕರಿಸಲು ಸತಾಯಿಸುತ್ತಿರುವ ಸರ್ಕಾರ

ಆದರೆ ಇದೇ ಸಭೆಯಲ್ಲಿ ಬಿಎಂಎಂ ಇಸ್ಪಾತ್, ಕಾರ್ಗಿಲ್‌, ಹಲವು ಸಕ್ಕರೆ ಕಾರ್ಖಾನೆಗಳಿಗೆ ಕೈಗಾರಿಕೆ ಉದ್ದೇಶಕ್ಕೆ ನೀರನ್ನು ವಿವಿಧ ಜಲಾಶಯ ಮತ್ತು ನದಿಗಳ ನೀರನ್ನು ಬಳಸಲು ಪರವಾನಿಗೆಯನ್ನು ನವೀಕರಿಸಲು ಅನುಮತಿ ನೀಡಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ವಿಐಎಸ್‌ಎಲ್‌ಗೆ ದಿನವೊಂದಕ್ಕೆ 9,000 ಘನಮೀಟರ್‍‌ನಷ್ಟು ಭದ್ರಾ ನದಿ ನೀರು ಬಳಕೆ ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಗೆ ಪರವಾನಿಗೆ ನೀಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ಮುಖ್ಯ ಇಂಜನಿಯರ್‍‌ ಅವರು 2023ರ ಜನವರಿ 5ರಂದು ಪತ್ರ ಬರೆದಿದ್ದರು. ಆದರೆ ಈ ಪತ್ರ ಬರೆದ 4 ತಿಂಗಳಾದರೂ ಸರ್ಕಾರವು ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ ಎಂಬುದು ದಾಖಲೆಗಳಿಂದ ಗೊತ್ತಾಗಿದೆ.

 

ವಿಐಎಸ್‌ಎಲ್‌ಎಲ್‌ ಕೈಗಾರಿಕೆ ಪ್ರದೇಶ ಮತ್ತು ನಗರಾಡಳಿತ ಪ್ರದೇಶವು ಒಟ್ಟು 7.99 ಚ ಕಿ ಮೀ ವ್ಯಾಪ್ತಿಯಲ್ಲಿದೆ. ಗೃಹಪಯೋಗಕ್ಕೆ 6.08 ಎಮ್‌ಎಲ್‌ಡಿ ಹಾಗೂ 3.07 ಎಂಎಲ್‌ಡಿ ಕಾರ್ಖಾನೆ ಮತ್ತು ಕುಡಿಯುವ ನೀರಿಗಾಗಿ ಒಟ್ಟಾರೆ 9.15 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ ಎಂದು ಭದ್ರಾವತಿ ನಗರಸಭೆ ಪೌರಾಯುಕ್ತರು ದೃಢೀಕರಿಸಿದ್ದರು.

 

ವಿಐಎಸ್‌ಎಲ್‌ ಕೈಗಾರಿಕೆ ಸಂಸ್ಥೆಗೆ ಕುಡಿಯುವ ನೀರು ಮತ್ತು ಗೃಹಪಯೋಗಿ ಕೆಲಸಕ್ಕೆ ಭದ್ರಾ ನದಿಯಿಂದ ನೀರನ್ನು ಹಂಚಿಕೆ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸಮಿತಿಯು ನಡೆಸಿದ್ದ ಸಭೆಯಲ್ಲಿ ಹಲವು ಅಂಶಗಳ ಕುರಿತು ಚರ್ಚಿಸಲಾಗಿತ್ತು.

 

‘ವಿಐಎಎಸ್‌ಎಲ್‌ ಕಂಪನಿಗೆ 1995ರ ನವೆಂಬರ್‍‌ 8ರಲ್ಲಿ ದಿನಂಪ್ರತಿ 3000 ಎಂ3 (ವಾರ್ಷಿಕ 0.0385 ಟಿಎಂಸಿ) ಪ್ರಮಾಣದ ನೀರನ್ನು ಭದ್ರಾ ನದಿಯಿಂದ ಕೈಗಾರಿಕೆಗೆ ಉಪಯೋಗಿಸಿಕೊಳ್ಳಲು ಅನುಮೋದನೆಯಾಗಿತ್ತು.ಈ ಕುರಿತು ಸರ್ಕಾರದ ಆದೇಶದ ಪ್ರತಿಯನ್ನು ಕಂಪನಿ ನೀಡಿಲ್ಲ. ಅಲ್ಲದೇ ಪ್ರತಿ 2 ವರ್ಷಕ್ಕೊಮ್ಮೆ ಕಂಪನಿಯವರೊಂದಿಗೆ ಕರಾರು ಒಪ್ಪಂದವನ್ನು ನವೀಕರಿಸಲಾಗಿತ್ತು. ಈ ಕರಾರು ನವೀಕರಣಕ್ಕೆ ಹೊರಡಿಸಿರುವ ಆದೇಶದ ಪ್ರತಿಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಕರಾರು ನವೀಕರಣಕ್ಕೆ ನಿಗಮ, ಸರ್ಕಾರ ಸಕ್ಷಮ ಪ್ರಾಧಿಕಾರಗಳಿಂದ ಪಡೆದಿರುವ ಅನುಮತಿ ಅದೇಶಗಳ ವಿವರಗಳ ಕುರಿತು ಮಾಹಿತಿ ನೀಡಿರುವುದಿಲ್ಲ,’ ಎಂಬ ಅಂಶವನ್ನು ನಡವಳಿಯಲ್ಲಿ ದಾಖಲಿಸಲಾಗಿದೆ.

 

ವಿಐಎಸ್‌ಎಲ್‌ ಕಂಪನಿ ಮತ್ತು ಬಿಆರ್‍‌ಎಲ್‌ಬಿಸಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍‌ ನಡುವೆ ನಡೆದಿದ್ದ 1999ರ ಅಕ್ಟೋಬರ್‍‌ 15ರಂದು ಒಪ್ಪಂದದ ಕರಾರಿನ ಪ್ರಕಾರ ದಿನಂಪ್ರತಿ 3,000 ಎಂ3/ ದಿನನಿತ್ಯ ನೀರನ್ನು ಕೇವಲ ಕೈಗಾರಿಕೆ ಬಳಕೆಗಾಗಿ ಮಾತ್ರ ಬಳಸುತ್ತಿದ್ದು ಈಗ 9,000 ಎಂ3 ದಿನನಿತ್ಯ ನೀರನ್ನು ಕುಡಿಯುವ ನೀರಿನ ಬಳಕೆಗಾಗಿ ಬಳಸುವ ಉದ್ದೇಶದಿಂದ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸದರಿ ಹೆಚ್ಚುವರಿ ನೀರಿನ ಬೇಡಿಕೆಗೆ ಬಳಕೆಗೆ ಸಮರ್ಥನೀಯ ವಿವರಗಳನ್ನು ಸಲ್ಲಿಸಿಲ್ಲ ಎಂದು ಕಾರ್ಯಪಾಲಕ ಇಂಜಿನಿಯರ್‍‌ ಅವರು ಸಭೆಗೆ ವರದಿ ಸಲ್ಲಿಸಿದ್ದರು ಎಂಬುದು ನಡವಳಿಯಿಂದ ಗೊತ್ತಾಗಿದೆ.

 

ಮೈಸೂರು ಪೇಪರ್‍‌ ಮಿಲ್‌ ಕಾರ್ಖಾನೆಗೆ ಹಂಚಿಕೆಯಾಗಿರುವ 1,20,000 ಎಂ ಡಿ ಪ್ರಮಾಣದ ನೀರಿನಲ್ಲಿ 13,500 ಎಂ 3 ಪ್ರಮಾಣದ ನೀರನ್ನು ವಿಐಎಸ್‌ಎಲ್‌ ಕಂಪನಿಯವರು ಕಕುಡಿಯುವ ನೀರಿಗಾಗಿ ಪಡೆಯುತ್ತಿದ್ದು ಮೈಸೂರ್‍‌ ಪೇಪರ್‍‌ ಮಿಲ್‌ ಕಾಖಾfನೆಗೆ ಈ ಪ್ರಮಾಣಕ್ಕೆ ತಗುವಲು ವೆಚ್ಚವನ್ನು ಪಾವತಿಸಲಾಗಿದೆ ಎಂದು ತಿಳಿಸಲಾಗಿದೆ. ಇದಕ್ಕೆ ಸಂಬಂಧಸಿಇದಂತೆ ವಿವರಗಳನ್ನು ಸಲ್ಲಿಸಿಲ್ಲ.

 

ಅದೇ ರೀತಿ ‘2015ರ ನವೆಂಬರ್‍‌ನಿಂದ ಎಂಪಿಎಂ ಸ್ಥಗಿತಗೊಂಡಿರುವುದರಿಂದ ಹಾಗೂ ಈ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಉದ್ದೇಶಿಸಿರುವುದರಿಂದ ವಿಐಎಸ್‌ಎಲ್‌ ಕಂಪನಿಯವರು ಕುಡಿಯುವ ನೀರಿಗಾಗಿ ಕೈಗೊಂಡಿರುವ ಪರ್ಯಾಯ ವ್ಯವಸ್ಥೆ ಕುರಿತಾಗಿ ವಿವರಗಳನ್ನು ನೀಡಿಲ್ಲ,’ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸಭೆಗೆ ಟಿಪ್ಪಣಿ ಮಂಡಿಸಿದ್ದರು.

 

ಕಂಪನಿಯವರು 1995ರಿಂದ ಇಲ್ಲಿಯವರೆಗೆ ಬಳಸಿದ ವರ್ಷವಾರು ನೀರಿನ ಪ್ರಮಾಣ ಮತ್ತು ಪಾವತಿಸಲಾದ ನೀರಿನ ದರ/ ಮೊತ್ತದ ದೃಢೀಕೃತ ವಿವರಗಳನ್ನು ಸಂಬಂಧದಪಟ್ಟ ಕಾರ್ಯಪಾಲಕ ಇಂಜಿನಿಯರ್‍ ಅವರು ದೃಢೀಕರಿಸಿ ಸಲ್ಲಿಬೇಕು ಎಂದು ಸಭೆಯು ನಿರ್ಧಾರ ಕೈಗೊಂಡಿತ್ತು.

the fil favicon

SUPPORT THE FILE

Latest News

Related Posts