ರಾಷ್ಟ್ರೋತ್ಥಾನ, ಜನಸೇವಾ ಟ್ರಸ್ಟ್‌, ಗುರುಪೀಠಕ್ಕೆ 167 ಎಕರೆ ಗೋಮಾಳ ಮಂಜೂರು; 152.09 ಕೋಟಿಗೂ ಅಧಿಕ ನಷ್ಟ

photo credit;vijayakarnataka

ಬೆಂಗಳೂರು; ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಾನೂನು ಮತ್ತು ಆರ್ಥಿ ಇಲಾಖೆ ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಸಂಘ ಪರಿವಾರದ ಅಂಗ ಸಂಸ್ಥೆಗಳಲ್ಲೊಂದಾದ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌, ವಿಶ್ವ ಹಿಂದೂ ಪರಿಷತ್‌ ಸಂಸ್ಥೆಗಳಿಗೆ ಗೋಮಾಳ, ಸಿ ಎ ನಿವೇಶನ ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ 152.09 ಕೋಟಿ ರು. ಗೂ ಅಧಿಕ ಮೊತ್ತ ನಷ್ಟವನ್ನುಂಟು ಮಾಡಿರುವ ಪ್ರಕರಣಗಳು ಇದೀಗ ಮುನ್ನೆಲೆಗೆ ಬಂದಿವೆ.

 

ಹಿಂದಿನ ಸರ್ಕಾರವು 6 ತಿಂಗಳಿನಿಂದ ಈಚೆಗೆ ಮಾಡಿರುವ ಭೂ ಮಂಜೂರಾತಿ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವ ಬೆನ್ನಲ್ಲೇ 2019-20ರಿಂದ 2023ರ ಮಾರ್ಚ್‌ವರೆಗೂ ಅಂದಾಜು 86 ಎಕರೆ ಮತ್ತು ಮಾದಾರ ಚೆನ್ನಯ್ಯ ಗುರು ಪೀಠಕ್ಕೆ 81.23 ಎಕರೆ ವಿಸ್ತೀರ್ಣದ ಗೋಮಾಳ ಸೇರಿದಂತೆ ಒಟ್ಟಾರೆಯಾಗಿ 147.23 ಎಕರೆ ಮಂಜೂರು ಮಾಡಿರುವ ಪ್ರಕರಣಗಳು ಮಹತ್ವ ಪಡೆದುಕೊಂಡಿವೆ.

 

ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಅಂದಾಜು 20 ಎಕರೆ ವಿಸ್ತೀರ್ಣದ ಗೋಮಾಳವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿರುವುದು ತಿಳಿದು ಬಂದಿದೆ.

 

ಶಾಲಾ ಶುಲ್ಕದಿಂದ ಸಂಗ್ರಹವಾದ ಆದಾಯವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಕಳೆದ 5 ವರ್ಷಗಳಲ್ಲಿ 401.86 ಕೋಟಿ ರು. ಆದಾಯ ಮತ್ತು ಇದೇ ಅವಧಿಯಲ್ಲಿ 63.64 ಕೋಟಿ ರು. ಲಾಭಾಂಶ ಹೊಂದುವ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಜಮೀನು ಖರೀದಿಸುವ ಆರ್ಥಿಕ ಸಾಮರ್ಥ್ಯವಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಮಾರುಕಟ್ಟೆ ಶುಲ್ಕದಲ್ಲೇ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಗೋಮಾಳ ಮಂಜೂರು ಮಾಡಿತ್ತು.

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ 74-00 ಎಕರೆ ಹೊಂದಿದ್ದರೂ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿ 7.45 ಕೋಟಿ ರು. ಬೆಲೆ ಬಾಳುವ ಗೋಮಾಳ ಜಮೀನನ್ನು ರಾಜ್ಯ ಬಿಜೆಪಿ ಸರ್ಕಾರವು ಕೇವಲ 1.86 ಕೋಟಿ ರು.ಗೆ ಮಂಜೂರು ಮಾಡಿದೆ. ಈ ಪರಿಷತ್‌ಗೆ ಜಮೀನನ್ನು ಮಂಜೂರು ಮಾಡುವ ಉದ್ದೇಶದಿಂದಲೇ ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸಿ ತನ್ನ ಸಂಘ ನಿಷ್ಠೆ ಮೆರೆದಿರುವ ಸರ್ಕಾರವು 5.59 ಕೋಟಿ ರು. ನಷ್ಟಕ್ಕೆ ದಾರಿಮಾಡಿಕೊಟ್ಟಿತ್ತು.

 

ಅದೇ ರೀತಿ ಕರ್ನಾಟಕ ವಿಧಾನಸಭೆಗೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ದರವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರು. ನಷ್ಟವನ್ನು ಹೊರಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 2022ರ ಸೆ.13 ಮತ್ತು 2023ರ ಮಾರ್ಚ್‌ 16ರಂದು ಕ್ರಮವಾಗಿ 25 ಎಕರೆ ಗೋಮಾಳವನ್ನು ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ. 25ರಷ್ಟು ಮತ್ತು 10.33 ಎಕರೆ ಗೋಮಾಳವನ್ನು ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ದರವನ್ನು ಭರಿಸಲು ಕಷ್ಟಸಾಧ್ಯ ಎಂದು ಜನಸೇವಾ ಟ್ರಸ್ಟ್‌ ಕೋರಿಕೆ ಸಲ್ಲಿಸಿದ್ದ ಕೆಲವೇ ಕೆಲವು ದಿನಗಳಲ್ಲಿ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಚಿಕ್ಕಾಸು ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತ್ತು.

ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ; ಎಕರೆಗೆ ಶೇ. 5ರಷ್ಟು ದರ ನಿಗದಿ, 139.21 ಕೋಟಿ ನಷ್ಟದ ಹೊರೆ

ಕೋಟ್ಯಂತರ ರುಪಾಯಿ ಬೆಲೆಬಾಳುವ ಜಮೀನು ಮತ್ತು ನಿವೇಶನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಶೇ.25ರ ದರಕ್ಕೆ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಸಂಘ ಪರಿವಾರದ ಅಂಗ ಸಂಸ್ಥೆಗಳು ಮಂಜೂರು ಮಾಡಿಸಿಕೊಂಡಿದ್ದರ ಬೆನ್ನಲ್ಲೆ ಶಿವಮೊಗ್ಗ ಘಟಕದ ವಿಶ್ವ ಹಿಂದೂ ಪರಿಷದ್‌ ಕೂಡ ನಿವೇಶನಕ್ಕೆ ಬಾಕಿ ಪಾವತಿಸಬೇಕಿರುವ ಮೊತ್ತಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.
ನಿವೇಶನದ ಗುತ್ತಿಗೆ ಮೊಬಲಗು  ಚದರಮೀಟರ್‌ ಒಂದಕ್ಕೆ 7,800 ರು. ಇದೆ. ನಿವೇಶನದ ಅಳತೆ ಎ1567.95 ಚ.ಮೀ ಅನುಗುಣವಾಗಿ 17,00,000 ರು.ಗಳನ್ನು ಪ್ರಾರಂಭಿಕ ಠೇವಣಿ ರೂಪದಲ್ಲಿ ಶುಲ್ಕವನ್ನು ಪಾವತಿಸಿದೆ. ಇದೀಗ ಬಾಕಿ ಪಾವತಿಸಬೇಕಿರುವ ಮೊತ್ತಕ್ಕೆ ಸಂಪೂರ್ಣ ವಿನಾಯಿತಿಯನ್ನು ಕೋರಿತ್ತು.

 

ನಿಯಮ ಉಲ್ಲಂಘಿಸಿ ರಾಷ್ಟ್ರೋತ್ಥಾನ ಪರಿಷತ್‌ಗೆ ಸಿ ಎ ನಿವೇಶನ ; ಬೊಕ್ಕಸಕ್ಕೆ 7.50 ಕೋಟಿ ನಷ್ಟ

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ 6 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಆರಂಭದಲ್ಲಿ ತಕರಾರು ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆಯು ಕೆಲವೇ ದಿನಗಳಲ್ಲಿ ಸಹಮತಿ ವ್ಯಕ್ತಪಡಿಸಿತ್ತು.

ರಾಷ್ಟ್ರೋತ್ಥಾನಕ್ಕೆ ಗೋಮಾಳ; 6 ಜಿಲ್ಲೆಗಳಲ್ಲಿ ಬಾಕಿ ಇರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟಕ್ಕೆ ಮಂಡಿಸಲು ಒತ್ತಡ?

ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಹೆಸರಿನಲ್ಲಿರುವ 20. 17 ಎಕರೆ ಜಮೀನಿನ ಪೈಕಿ 5 ಎಕರೆ ವಿಸ್ತೀರ್ಣದ ಜಮೀನನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ ಹೆಸರಿಗೆ ಮಂಜೂರು ಮಾಡಿದೆ ಎಂದು ಗೊತ್ತಾಗಿದೆ.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜಮೀನಿನ ಮೇಲೆ ರಾಷ್ಟ್ರೋತ್ಥಾನ ಪರಿಷತ್‌ ಕಣ್ಣು

ಈ ಎಲ್ಲಾ ಪ್ರಕರಣಗಳ ಕುರಿತು ದಾಖಲೆ ಸಹಿತ ‘ದಿ ಫೈಲ್‌’ ಮತ್ತು ‘ವಾರ್ತಾಭಾರತಿ’ಯು ಸರಣಿ ರೂಪದಲ್ಲಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts