ತಮಿಳುನಾಡು ಮೂಲದ ಕಂಪನಿಗೆ ಬಂದರು ಭೂಮಿ ಮಂಜೂರು; ಲಂಚಗುಳಿತನ, ಅವ್ಯವಹಾರ ಆರೋಪ

ಬೆಂಗಳೂರು; ಸಾರ್ವಜನಿಕ ಉಪಯೋಗದ ಪಾರ್ಕಿಂಗ್‌ ಉದ್ದೇಶಕ್ಕೆಂದು ಕಾಯ್ದಿರಿಸಿದ್ದ ಕಾರವಾರ ಬಂದರು ಭೂಮಿಯನ್ನು  ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಒಂದು ವಾರದ ಮೊದಲು ತಮಿಳುನಾಡು ಮೂಲದ ಕಂಪನಿಗೆ ಮಂಜೂರು ಮಾಡಿ ಒಡಂಬಡಿಕೆ ಮಾಡಿಕೊಂಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆ ಸಚಿವರಾಗಿದ್ದ ಸಚಿವ ಎಸ್‌ ಅಂಗಾರ, ಕರ್ನಾಟಕ ಜಲಸಾರಿಗೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ಕಪಿಲ್‌ ಮೋಹನ್‌, ಇಲಾಖೆಯ ನಿರ್ದೇಶಕ ಕ್ಯಾಪ್ಟನ್‌ ಸ್ವಾಮಿ ಎಂಬುವರ ವಿರುದ್ಧ ಇದೇ ಪ್ರಕರಣದಲ್ಲಿ ಲಂಚಗುಳಿತನ ಮತ್ತು ಅವ್ಯವಹಾರದ ಆರೋಪವೂ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕನ್ನಡಿಗರಿಗೆ ಸೇರಿದ ಕಂಪನಿಯೊಂದಕ್ಕೆ ಮಂಜೂರು ಮಾಡಿ ಆ ನಂತರ ಬದಲಿ ಜಾಗ ನೀಡುವುದಾಗಿ ಹೇಳಿದ್ದ ಹಿಂದಿನ ಬಿಜೆಪಿ ಸರ್ಕಾರವು ದಿಢೀರ್‌ ಎಂದು ತಮಿಳುನಾಡು ಮೂಲದ ಕಂಪನಿಗೆ ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಪ್ರಕರಣದ ವಿವರ

 

ಕಳೆದ ಮೂರು ವರ್ಷಗಳಲ್ಲಿ ಸುಮಾರು 50ರಿಂದ 78 ಕೋಟಿ ರು. ವ್ಯವಹಾರ ನಿರ್ವಹಿಸಿತ್ತು. ಆಮದು ಮತ್ತು ರಫ್ತು ಚಟುವಟಿಕೆಗಳಲ್ಲಿ ಹೆಚ್ಚಿನ ಅನುಭವ ಹೊಂದಿದ್ದ ಸ್ಥಳೀಯ ಕಂಪನಿಯಾಗಿರುವ ಪ್ರಕೃತೀಸ್‌ ಇನ್‌ಫ್ರಾ ಇಂಪೆಕ್ಸ್‌ ಇಂಡಿಯಾ ಪ್ರೈ ಲಿಮಿಟೆಡ್‌ಗೆ ಬಂದರು ಭೂಮಿಯನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಕಂಪನಿಯು ಕಾರವಾರ ಬಂದರು ಮೂಲಕ ಬಿಟುಮಿನ್‌ ಸರಕನ್ನು 2015-16ರಿಂದ ನಿರ್ವಹಿಸುತ್ತಿದೆ. ಸುಮಾರು 40 ರಾಷ್ಟ್ರಗಳೊಂದಿಗೆ ವಾಣಿಜ್ಯಾತ್ಮಕ ಸಂಬಂಧವನ್ನು ಹೊಂದಿದೆ ಎಂದು ಗೊತ್ತಾಗಿದೆ.

 

ಕಾರವಾರ ಬಂದರು ಮೂಲಕ ಆಮದು ರಫ್ತು ಚಟುವಟಿಕೆಗಳನ್ನು ನಿರ್ವಹಿಸುತ್ತಿರುವುದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯಲಿದೆ. ನೌಕಾ ಚಟುವಟಿಕೆಗಳಿಗೆ ಪೂರಕವಾದ ಉದ್ದೇಶಕ್ಕೆ 3000 ಚ ಮೀ ಬಂದರು ಜಾಗವನ್ನು 20 ವರ್ಷಗಳ ಅವಧಿಗೆ ಕರ್ನಾಟಕ ಬಂದರು ಸರಕು ಹೇರಿಳಿಸುವ ನಿಯಮ (ತಿದ್ದುಪಡಿ )2014ರ ಪ್ರಕಾರ ಪ್ರತಿ ಚ ಮೀ ಗೆ ಪ್ರತಿ ತಿಂಗಳಿಗೆ 75 ರು.ನಂತೆ ಭೂ ಬಾಡಿಗೆ ಹಾಗೂ ವಾರ್ಷಿಕ ಶೇ.10ರಷ್ಟು ಹೆಚ್ಚಿಗೆ ಮಾಡುವ ಷರತ್ತನ್ನು ವಿಧಿಸಿ ಕರ್ನಾಟಕ ಬಂದರು ಸರಕು ಹೇರಿಳಿಸುವ ನಿಯಮ 2006ರ ನಮೂನೆ-ಬಿಯ 25(2)ರಂತೆ ವಿಧಿಸುವ ಎಲ್ಲಾ ಷರತ್ತುಗಳೊಂದಿಗೆ ಹೆಚ್ಚಿನ ಷರತ್ತುಗಳನ್ನು ವಿಧಿಸಿ ಬಂದರು ಜಾಗ ಮಂಜೂರು ಮಾಡಬಹುದು ಎಂದು ಪ್ರಸ್ತಾವನೆಯಲ್ಲಿ ಸಮರ್ಥಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ಈ ಪ್ರಸ್ತಾವನೆ ಆಧರಿಸಿ ಕಾರವಾರ ಬಂದರಿನ ಉತ್ತರ ಭಾಗದಲ್ಲಿನ ಪೋರ್ಟ್ ಜಟ್ಟಯಿಂದ ಕೇವಲ 300 ಮೀಟರ್‍‌ ಅಂತರದಲ್ಲಿ ಮತ್ತು ಎನ್‌ ಹೆಚ್‌ 66ಕ್ಕೆ ಪೂರ್ವದಲ್ಲಿರುವ ಸರ್ವೆ ನಂಬರ್‍‌ 55 ಮತ್ತು 56ರಲ್ಲಿ ಇರುವ ಒಟ್ಟು 3,000 ಚದರ ಮೀಟರ್‍‌ ಬಂದರು ಭೂಮಿಯನ್ನು ಕನ್ನಡಿಗರ ಕಂಪನಿಯಾದ ಪ್ರಕೃತೀಸ್‌ ಇನ್‌ಫ್ರಾ ಇಂಪೆಕ್ಸ್‌ ಇಂಡಿಯಾ ಪ್ರೈ ಲಿಮಿಟೆಡ್‌ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಲಾಗಿತ್ತು.

 

ಸರ್ಕಾರದ ಆದೇಶದಂತೆ ಬಂದರು ಭೂಮಿ ಬಳಕೆ ಪ್ರಕಾರ ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಅಂದರೆ ಪಾರ್ಕಿಂಗ್‌ ಏರಿಯಾ ಎಂದು ಕಾಯ್ದಿರಿಸಲಾಗಿತ್ತು. ಆದರೂ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಕೃತೀಸ್‌ ಇನ್‌ಫ್ರಾ ಇಂಪೆಕ್ಸ್‌ ಇಂಡಿಯಾ ಪ್ರೈ ಲಿಮಿಟೆಡ್‌ಗೆ 2020ರ ಅಕ್ಟೋಬರ್‍‌ 5ರಂದು ನಡೆದಿದ್ದ ಕರ್ನಾಟಕ ಜಲ ಸಾರಿಗೆ ಮಂಡಳಿಯ 4ನೇ ಸಭೆಯಲ್ಲಿ ತಮ್ಮ ಪ್ರಭಾವ ಬೀರಿ ಈ ಕಂಪನಿಗೆ ಪೂರ್ಣ ಮಂಜೂರಾತಿ ನೀಡಿ ಆದೇಶ (ಸರ್ಕಾರದ ಆದೇಶ ಸಂಖ್ಯೆ; PWD 66 PSP 2019(E) ದಿನಾಂಕ 01.01.2020) ಹೊರಡಿಸಿದ್ದರು ಎಂಬುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

 

ಇದಾದ ನಂತರ ಕಾರವಾರದ ಸಬ್‌ ರಿಜಿಸ್ಟ್ರಾರ್‍‌ ಕಚೇರಿಯಲ್ಲಿ ಪ್ರಕೃತೀಸ್‌ ಕಂಪನಿ ಮತ್ತು ಕರ್ನಾಟಕ ಜಲಸಾರಿಗೆ ಮಂಡಳಿ ನಡುವೆ ಒಡಂಬಡಿಕೆಯನ್ನು 2020ರ ಜನವರಿ 28ರಂದು ಮಾಡಿಕೊಳ್ಳಲಾಗಿತ್ತು. ಸಾರ್ವಜನಿಕರು ಮತ್ತು ಕೆಲವು ಅಧಿಕಾರಿ ವರ್ಗದಿಂದ ಈ ಮಂಜೂರಾತಿ ಮತ್ತು ಒಡಂಬಡಿಕೆ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಜಮೀನಿನ ಕುರಿತಾಗಿ 2020ರ ಅಕ್ಟೋಬರ್‍‌ 5ರಂದು ನಡೆದ ಕರ್ನಾಟಕ ಜಲಸಾರಿಗೆ ಮಂಡಳಿಯ ಸಭೆಯಲ್ಲಿ ಪುನಃ ಚರ್ಚಿಸಲಾಗಿತ್ತು ಎಂಬುದು ನಡವಳಿಯಿಂದ ಗೊತ್ತಾಗಿದೆ.

 

ಪ್ರಕೃತೀಸ್‌ ಕಂಪನಿಗೆ ಮಂಜೂರಾಗಿದ್ದ 3,000 ಚದರ ಮೀಟರ್‍‌ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿದ್ದು ಇದನ್ನು ಪಾರ್ಕಿಂಗ್‌ ಏರಿಯಾಕ್ಕೆ ಮುಂದುವರೆಸಬೇಕು ಮತ್ತು ಪ್ರಕೃತೀಸ್‌ ಕಂಪನಿಗೆ ಬದಲಿ ಜಾಗವನ್ನು ನೀಡಬೇಕು ಎಂದು ಇದೇ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

 

ಸಾರ್ವಜನಿಕ ಉದ್ದೇಶದ ಪಾರ್ಕಿಂಗ್‌ ಏರಿಯಾಕ್ಕೆ ಕಾಯ್ದಿರಿಸಬೇಕು ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಸಭೆಯಲ್ಲಿ ಆಗಿದ್ದ ತೀರ್ಮಾನವನ್ನು ಸಚಿವರಾಗಿದ್ದ ಎಸ್‌ ಅಂಗಾರ ಮಂಡಳಿಯ ಸದಸ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಮತ್ತು ಇಲಾಖೆಯ ನಿರ್ದೇಶಕ ಕ್ಯಾಪ್ಟನ್‌ ಸ್ವಾಮಿ ಅವರು ಬದಿಗೊತ್ತಿರುವುದು ಗೊತ್ತಾಗಿದೆ.
ಪಾರ್ಕಿಂಗ್‌ ಏರಿಯಾಕ್ಕೆ ಕಾಯ್ದಿರಿಸಬೇಕಿದ್ದ ಇದೇ ಜಾಗವನ್ನು ತಮಿಳುನಾಡು ಮೂಲದ ಇಂಟಿಗ್ರೇಟೆಡ್‌ ಸರ್ವೀಸ್‌ ಪಾಯಿಂಟ್‌ ಲಿಮಿಟೆಡ್‌ ನೊಂದಿಗೆ ಕರ್ನಾಟಕ ಜಲ ಸಾರಿಗೆ ಮಂಡಳಿಯು 2023ರ ಮಾರ್ಚ್‌ 21ರಂದು ಒಡಂಬಡಿಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

 

ಚುನಾವಣೆ ಹೊಸ್ತಿಲಲ್ಲೇ ಮತ್ತು ನೀತಿ ಸಂಹಿತೆ ಜಾರಿಯಾಗಲು ಕೇವಲ ಒಂದೇ ಒಂದು ವಾರ ಇರುವಾಗ ಸಬ್‌ ರಿಜಿಸ್ಟ್ರಾರ್‍‌ ಕಚೇರಿಯಲ್ಲಿ ಇದನ್ನು ದಾಖಲಿಸದೇ ತರಾತುರಿಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯು ತಮಿಳುನಾಡು ಮೂಲದ ಇಂಟಿಗ್ರೇಟೆಡ್‌ ಸರ್ವಿಸ್‌ ಪಾಯಿಂಟ್‌ ಪ್ರೈವೈಟ್‌ ಲಿಮಿಟೆಡ್‌ನೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

 

ಕಾರವಾರ ಬಂದರು ಪ್ರದೇಶಕ್ಕೆ ಸೇರಿದ ಸರ್ವೆ ನಂಬರ್‍‌ 59 (ಬಿ) ಮತ್ತು 59(ಎ-1) ಸೇರಿ ಒಟ್ಟು 3500 ಚದರ ಮೀಟರ್‍‌ ವಿಸ್ತೀರ್ಣದ ಪ್ರದೇಶವನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts