ಪಾಂಡವಪುರ ಸಕ್ಕರೆ ಕಾರ್ಖಾನೆ; ನೋಂದಣಿಯಿಲ್ಲದೆಯೇ ಗುತ್ತಿಗೆ ಒಪ್ಪಂದ 3 ತಿಂಗಳು ವಿಸ್ತರಣೆ

ಬೆಂಗಳೂರು; ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದುಕೊಂಡು 3 ವರ್ಷಗಳಾದರೂ ನೋಂದಣಿ ಮಾಡಿಸಿಕೊಳ್ಳದ ನಿರಾಣಿ ಶುಗರ್ಸ್‌ ಪ್ರೈ ಲಿಮಿಟೆಡ್‌ಗೆ ಕಾಲಾವಕಾಶ ನೀಡಿರುವ ರಾಜ್ಯ ಬಿಜೆಪಿ ಸರ್ಕಾರವು ನೋಂದಣಿಯಿಲ್ಲದೆಯೇ ಗುತ್ತಿಗೆ ಒಪ್ಪಂದವನ್ನು ಮೂರು ತಿಂಗಳು ವಿಸ್ತರಿಸಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

90 ದಿನದೊಳಗೆ ನೋಂದಣಿ ಆಗದೇ ಇರುವ ಕಾರಣ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಅವಕಾಶವಿಲ್ಲ ಎಂದು ಸ್ಪಷ್ವ ನಿಲುವು ತಳೆದಿದ್ದ ನೋಂದಣಿ ಮಹಾಪರಿವೀಕ್ಷಕರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಗುತ್ತಿಗೆ ಒಪ್ಪಂದವು ರದ್ದಾಗಿರಲಿಲ್ಲ. ಆದರೀಗ  ಸರ್ಕಾರವು ಮುರುಗೇಶ್‌ ನಿರಾಣಿ ಕುಟುಂಬ ಒಡೆತನದ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಮತ್ತೊಂದು ಕಾಲಾವಕಾಶ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು 2023ರ ಮಾರ್ಚ್‌ 27ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು (ಆದೇಶ ಸಂಖ್ಯೆ; ಸಿಐ 174 ಸಿಓಎಫ್‌ 2020, ದಿನಾಂಕ 27ನೇ ಮಾರ್ಚ್‌ 2023) ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ನಿರಾಣಿ ಶುಗರ್ಸ್‌ ಲಿ., ನಡುವೆ 2020-21ನೇ ಹಂಗಾಮಿನಿಂದ ಅನ್ವಯವಾಗುವಂತೆ 2020ರ ಜುಲೈ 10ರಂದು ಜರುಗಿದ ಮೂಲ ಎಲ್‌ಆರ್‌ಓಟಿ ಗುತ್ತಿಗೆ ಒಪ್ಪಂದದ ಕ್ರಮ ಸಂಖ್ಯೆ 74 ಮತ್ತು 77ರಲ್ಲಿ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ನೀಡಿರುವ ಕಾಲಾವಕಾಶವನ್ನು ಷರತ್ತುಗಳಿಗೆ ಒಳಪಟ್ಟು ಮೂರು ತಿಂಗಳು ವಿಸ್ತರಿಸಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಿದೆ.

 

ನಿರಾಣಿ ಶುಗರ್ಸ್‌ ಲಿಮಿಟೆಡ್‌ 405.00 ಕೋಟಿ ರು.ಗಳ ಗುತ್ತಿಗೆ ಮೊತ್ತಕ್ಕೆ ಪಾವತಿಸಬೇಕಾದ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ 24.30 ಕೋಟಿಗಳನ್ನು ಸರ್ಕಾರದಿಂದ ಮುಂಗಡವಾಗಿ ಭರಿಸಲು ಮತ್ತು 7-10 ವರ್ಷಗಳಲ್ಲಿ ಗುತ್ತಿಗೆದಾರರಾದ ನಿರಾಣಿ ಶುಗರ್ಸ್‌ ರಿಂದ 24.30 ಕೋಟಿ ರು.ಗಳನ್ನು ಸಮಾನ ಕಂತುಗಳಲ್ಲಿ ಮರುಪಾವತಿಸಿಕೊಳ್ಳುವುದಕ್ಕೆ ಅನುಮೋದನೆಯನ್ನೂ ನೀಡಲಾಗಿತ್ತು.

 

ಆದರೂ ನಿರಾಣಿ ಶುಗರ್ಸ್‌ ಲಿಮಿಟೆಡ್‌ ಗುತ್ತಿಗೆ ಒಪ್ಪಂದವನ್ನು ನೋಂದಣಿ ಮಾಡಿಸಲಿಲ್ಲ. ಬದಲಿಗೆ ಗುತ್ತಿಗೆ ಒಪ್ಪಂದದಲ್ಲಿನ ಕೆಲ ಷರತ್ತುಗಳನ್ನು ಕೈಬಿಡಲು ಸರ್ಕಾರದ ಮೇಲೆ ಒತ್ತಡ ಮುಂದುವರೆಸಿತ್ತು.

 

‘ಸಕ್ಕರೆ ಕಾರ್ಖಾನೆಯ ಸುತ್ತಲಿನ ಪ್ರದೇಶದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಸರ್ಕಾರವು ಹೆಚ್ಚುವರಿ ಆದಾಯವನ್ನು ಪಡೆಯುತ್ತದೆ. ಸ್ಥಗಿತಗೊಂಡಿರುವ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸಲು ಗುತ್ತಿಗೆದಾರರು ಹೂಡಿಕೆ ಮಾಡಿದ್ದಾರೆ. ಹೀಗಾಗಿ 2020ರ ಜುಲೈ 10ರ ಮೂಲ ಗುತ್ತಿಗೆ ಒಪ್ಪಂದವನ್ನು ನೋಂದಣಿ ಮಾಡಿಸಲು ಕಾಲಾವಕಾಶ ನೀಡಿದಲ್ಲಿ ಕಾರ್ಖಾನೆಯ ಆಧುನೀಕರಣಕ್ಕೆ ಅನುಕೂಲವಾಗಲಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಮತ್ತಷ್ಟು ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ ಮೂಲ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕು,’ ಎಂದು ಮನವಿ ಮಾಡಿತ್ತು.

 

 

ಅದೇ ರೀತಿ 24.00 ಕೋಟಿ ರು. ಮೊತ್ತದ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಲು 2020-25ರ ಹೊಸ ಕೈಗಾರಿಕೆ ನೀತಿಯನ್ನು ಮುಂದಿರಿಸಿತ್ತು. ಈ ಕುರಿತು ‘ದಿ ಫೈಲ್‌’ 2023ರ ಫೆ.15ರಂದೇ ವರದಿ ಪ್ರಕಟಿಸಿತ್ತು.

 

ಪಾಂಡವಪುರ ಸಕ್ಕರೆ ಕಾರ್ಖಾನೆ; 3 ವರ್ಷವಾದರೂ ಗುತ್ತಿಗೆ ಒಪ್ಪಂದ ನೋಂದಣಿ ಮಾಡಿಸದ ನಿರಾಣಿ ಶುಗರ್ಸ್‌

ನಿರಾಣಿ ಶುಗರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಗುತ್ತಿಗೆ ಒಪ್ಪಂದ ನೋಂದಣಿ ಮಾಡದ ಕಾರಣ ಗುತ್ತಿಗೆ ಮೊತ್ತದ ಪೈಕಿ 24 ಕೋಟಿಯೂ ಸರ್ಕಾರದ ಕೈಸೇರಿಲ್ಲ. ಹೀಗಾಗಿ ನೌಕರರಿಗೆ ಬಾಕಿ ಮೊತ್ತವನ್ನು ಪಾವತಿಸಲಾಗಿಲ್ಲ. ಗುತ್ತಿಗೆ ಒಪ್ಪಂದವು 2020ರ ಜುಲೈ 10ರಂದು ಏರ್ಪಟ್ಟಿರುವುದರಿಂದ 90 ದಿನದೊಳಗೆ ನೋಂದಣಿ ಆಗದೇ ಇರುವ ಕಾರಣ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಅವಕಾಶವಿಲ್ಲ ಎಂದು ನೋಂದಣಿ ಮಹಾ ಪರಿವೀಕ್ಷಕರು 2022ರ ಡಿಸೆಂಬರ್‌ 21ರಂದೇ ಪತ್ರ ಬರೆದಿದ್ದರು.

 

ರಾಯಭಾಗ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಕರಣಗಳಂತೆ ಮುದ್ರಾಂಕ ಶುಲ್ಕವನ್ನು ಲೆಕ್ಕಚಾರ ಮಾಡುವ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಿರ್ದೇಶನದಂತೆ ಕಾರ್ಖಾನೆಯ ಸ್ಥಿರ ಮತ್ತು ಚರ ಆಸ್ತಿಗಳ ಮೌಲ್ಯಮಾಪನ ಮಾಡಿಸಲು ಸರ್ಕಾರವು ಕ್ರಮವಹಿಸಿತ್ತು.

 

ಮೌಲ್ಯಮಾಪನದ ಪ್ರಕಾರ ಕಾರ್ಖಾನೆಯ ಸ್ಥಿರ ಮತ್ತು ಚರಾಸ್ತಿಗಳ ಒಟ್ಟು ಮೌಲ್ಯ 38,01,76,500 ರು.ಗಳಾಗಿತ್ತು. ಇದಕ್ಕೆ 2.52,81,750 ರು.ಗಳ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ ಹಾಗೂ ಸೆಸ್‌ ಸೇರಿದಂತೆ ಶುಲ್ಕವನ್ನು ಪಾವತಿಸಬೇಕು. ಅಂತಿಮ ಒಪ್ಪಂದ ಪತ್ರವನ್ನು ನೋಂದಣಿಗೆ ಸಲ್ಲಿಸಿದಾಗ ಈ ಮೊತ್ತದಲ್ಲಿ ವ್ಯತ್ಯಾಸಗಳಾಗಬಹುದು ಎಂದು ಹಿರಿಯ ಉಪ ನೋಂದಣಾಧಿಕಾರಿ 2023ರ ಮಾರ್ಚ್‌ 18ರಂದು ಹಿಂಬರಹ ನೀಡಿದ್ದರು.

 

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2020-21ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ನಿರಾಣಿ ಶುಗರ್ಸ್‌ಗೆ ಗುತ್ತಿಗೆ ನೀಡುವ ಸಂಬಂಧ 2020ರ ಜೂನ್‌ 25ರಂದು ಸಚಿವ ಸಂಪುಟ ಸಭೆಯು ಅನುಮೋದಿಸಿತ್ತು. ಇದಾದ ನಂತರ 2020ರ ಜುಲೈ 4ರಂದು ಅನುಮತಿ ನೀಡಿದ್ದ ಕೈಗಾರಿಕೆ ಇಲಾಖೆಯು ಆದೇಶ ಹೊರಡಿಸಿತ್ತು.

 

2020ರ ಜುಲೈ 10ರಂದು ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ನಿರಾಣಿ ಶುಗರ್ಸ್‌ ಪ್ರೈ ಲಿ ನಡುವೆ ಗುತ್ತಿಗೆ ಒಪ್ಪಂದ ಏರ್ಪಟ್ಟಿತ್ತು. ಗುತ್ತಿಗೆ ಒಪ್ಪಂದವನ್ನು 90 ದಿನಗಳವರೆಗೆ ನೋಂದಾವಣೆ ಮಾಡಿಕೊಳ್ಳಬೇಕಿತ್ತು. ಆದರೆ ಕೆಲ ಷರತ್ತುಗಳನ್ನು ಕೈಬಿಡಲು ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿಯೇ ತೊಡಗಿಸಿಕೊಂಡಿರುವ ನಿರಾಣಿ ಶುಗರ್ಸ್‌ 3 ವರ್ಷಗಳಾದರೂ ನೋಂದಣಿ ಮಾಡಿಸಿಕೊಂಡಿರಲಿಲ್ಲ.

 

ಗುತ್ತಿಗೆ ಒಪ್ಪಂದ ಪಾಲನೆ, ಸಾಲ ಮತ್ತು ಜವಾಬ್ದಾರಿಗಳ ಕುರಿತಂತೆ 2021ರ ಜುಲೈ 8ರಂದು ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಸಭೆ ನಡೆದ ಒಂದು ವರ್ಷದ ಬಳಿಕ ನಿರಾಣಿ ಶುಗರ್ಸ್‌ ಪ್ರೈ ಲಿ., ಗುತ್ತಿಗೆ ಒಪ್ಪಂದದ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಪಡೆಯಲು ಹಾಗೂ 2020ರ ಜುಲೈ 10ರಂದು ಮಾಡಿಕೊಳ್ಳಲಾದ ಒಪ್ಪಂದ ಷರತ್ತುಗಳನ್ನು ಬದಲಾಯಿಸಲು/ಮಾರ್ಪಾಡಿಸಲು 2022ರ ಸೆಪ್ಟಂಬರ್‌ 20ರಂದು ಮನವಿ ಸಲ್ಲಿಸಿತ್ತು. ಈ ಮನವಿಯನ್ನು ತಿರಸ್ಕರಿಸಿದ್ದ ಆರ್ಥಿಕ ಇಲಾಖೆಯು 2022ರ ಅಕ್ಟೋಬರ್‌ 6ರಂದೇ ಗುತ್ತಿಗೆ ಒಪ್ಪಂದಗಳ ಷರತ್ತುಗಳ ಬದಲಾವಣೆಗೆ ಈ ಹಂತದಲ್ಲಿ ಅವಕಾಶವಿರುವುದಿಲ್ಲ ಎಂದು ಅಭಿಪ್ರಾಯ ನೀಡಿತ್ತು ಎಂದು ಗೊತ್ತಾಗಿದೆ.

 

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯು ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದೆ. ರಾಜ್ಯ ಸರ್ಕಾರವು ಷೇರು ಬಂಡವಾಳ ಹೊಂದಿದೆ. ಗುತ್ತಿಗೆದಾರರು ಪ್ರಸ್ತಾಪಿಸಿರುವ ಗುತ್ತಿಗೆ ಒಪ್ಪಂದದ ತಿದ್ದುಪಡಿ/ಬದಲಾವಣೆಗಳು ಕಾರ್ಖಾನೆಯ ಆಸ್ತಿ ಮತ್ತು ಅಸ್ತಿತ್ವದ ಪ್ರಶ್ನೆ ಒಳಗೊಂಡಿರುವುದರಿಂದ ಈ ಪ್ರಸ್ತಾವನೆಗೆ ಪುನಃ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಬೇಕಿದೆ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆ ಬರುತ್ತಿದ್ದಂತೆ ವರಾತ ತೆಗೆದಿದ್ದ ನಿರಾಣಿ ಶುಗರ್ಸ್‌ ಕಂಪನಿಯು ಗುತ್ತಿಗೆ ಕರಾರುಗಳನ್ನು ತಿದ್ದುಪಡಿಗೆ ಒತ್ತಡ ಹೇರಿತ್ತು. ಈ ಕುರಿತು ‘ದಿ ಫೈಲ್‌’ 2020ರ ಆಗಸ್ಟ್‌ 24ರಂದು ವರದಿ ಪ್ರಕಟಿಸಿತ್ತು.

 

ಪಿಎಸ್‌ಎಸ್‌ಕೆ ಕಾರ್ಖಾನೆ ಕೈಗೆ ಬರುತ್ತಿದ್ದಂತೆ ವರಾತ ತೆಗೆದ ನಿರಾಣಿ; ಗುತ್ತಿಗೆ ಕರಾರಿಗೆ ತಿದ್ದುಪಡಿಗೆ ಒತ್ತಡ

 

ಪಿಎಸ್‌ಎಸ್‌ಕೆ ಸಹಕಾರಿ ಸಕ್ಕರೆ ಕಾರ್ಖಾನೆ ನೋಂದಣಿ ಶುಲ್ಕ ಮನ್ನಾ ಮಾಡುವ ಪ್ರಸ್ತಾವನೆಯನ್ನು ಸರ್ಕಾರವು ತಿರಸ್ಕರಿಸಿತ್ತು. ಈ ಕುರಿತು ‘ದಿ ಫೈಲ್‌’ 2020ರ ಅಕ್ಟೋಬರ್‌ 20ರಂದೇ ವರದಿ ಪ್ರಕಟಿಸಿತ್ತು.

 

 

ಪಿಎಸ್‌ಎಸ್‌ಕೆ ಕಾರ್ಖಾನೆ ನೋಂದಣಿ ಶುಲ್ಕ ಮನ್ನಾ; ನಿರಾಣಿಗೆ ಭಾರೀ ಮುಖಭಂಗ

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯು ದುಡಿಯುವ ಬಂಡವಾಳದ ಕೊರತೆಯಿಂದಾಗಿ ಕಳೆದ 5-6 ಸಾಲುಗಳಿಂದ ಕಬ್ಬು ನುರಿಸಿರಲಿಲ್ಲ. ಈ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆದ ರೈತರ, ಕಾರ್ಮಿಕರ, ಕಾರ್ಖಾನೆ ಆರ್ಥಿಕ ಹಿತದೃಷ್ಟಿಯಿಂದ 2020-21ನೇ ಸಾಲಿನಲ್ಲಿ ಕಬ್ಬು ನುರಿಸಬೇಕಾಗಿದ್ದರಿಂದಾಗಿ ನಿರಾಣಿ ಶುಗರ್ಸ್‌ಗೆ 405 ಕೋಟಿ ರು.ಗೆ ಗುತ್ತಿಗೆ ನೀಡಲಾಗಿತ್ತು.

 

ನಿರಾಣಿ ಶುಗರ್ಸ್‌ ಲಿಮಿಟೆಡ್‌ 2020-21ನೇ ಸಾಲಿನಲ್ಲಿ 1,58,973 ಟನ್‌ ಕಬ್ಬು ನುರಿಸಿತ್ತು. ಇದಕ್ಕೆ 43.41 ಕೋಟಿ ರು.ಗಳನ್ನು ಪಾವತಿಸಿತ್ತು. 2021-22ರಲ್ಲಿ 4,58,895 ಟನ್‌ ಕಬ್ಬು ನುರಿಸಿ 126.43 ಕೋಟಿ ರು., 2022-23ರಲ್ಲಿ 5,79,127 ಟನ್‌ ಕಬ್ಬು ನುರಿಸಿ 163.37 ಕೋಟಿ ರು. ಪಾವತಿಸಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts