ಕ್ರಿಮಿನಲ್‌ ಸೇರಿ 11 ಪ್ರಕರಣಗಳಲ್ಲಿ ವಿಚಾರಣೆ ಬಾಕಿ; ತಹಶೀಲ್ದಾರ್‌ ರಘುಮೂರ್ತಿ ರಾಜೀನಾಮೆ ಅಂಗೀಕಾರ

ಬೆಂಗಳೂರು; ಹದಿನೇಳು ಎಕರೆ ಸರ್ಕಾರಿ ಜಮೀನು ಪರಿಹಾರದ ಹಣ ಪಡೆಯುವ ಪ್ರಕರಣ, ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮ ಪೋಡಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಸರ್ಕಾರಿ ಜಮೀನು ಪೋಡಿ ದುರಸ್ತಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ, ಭೂಮಾಫಿಯಾದೊಂದಿಗೆ ಶಾಮೀಲಾಗಿ ಬಗರ್‌ ಹುಕುಂ ಜಮೀನು ಮಂಜೂರಾತಿ ಸೇರಿದಂತೆ ಗಂಭೀರ ಸ್ವರೂಪದ ಸಿವಿಲ್‌, ಕ್ರಿಮಿನಲ್‌ ಮತ್ತು  ಉಪ ಲೋಕಾಯುಕ್ತ ಸೇರಿದಂತೆ ಒಟ್ಟು 11   ಪ್ರಕರಣಗಳಲ್ಲಿ  ವಿಚಾರಣೆಗೆ ಗುರಿಯಾಗಿರುವ ತಹಶೀಲ್ದಾರ್‌ (ಗ್ರೇಡ್-2)  ಎನ್‌ ರಘುಮೂರ್ತಿ ಎಂಬುವರ ರಾಜೀನಾಮೆಯನ್ನು ರಾಜ್ಯ ಸರ್ಕಾರವು ಅಂಗೀಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ರಘುಮೂರ್ತಿ ಅವರ ಪರವಾಗಿ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿದ್ದ ಮಧ್ಯಂತರ ಆದೇಶ (ಅಂತಿಮ ಆದೇಶದ ಷರತ್ತುಗಳಿಗೆ ಒಳಪಟ್ಟು) ಮುಂದಿರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಘುಮೂರ್ತಿ ಅವರ ರಾಜೀನಾಮೆಗೆ ಅಂಕಿತ ಹಾಕಿದ್ದಾರೆ. ಈ ಸಂಬಂಧ 2023ರ ಏಪ್ರಿಲ್‌ 20ರಂದು ಹೊರಡಿಸಿರುವ ಆದೇಶವೂ ಸೇರಿದಂತೆ ಮಹತ್ವದ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಇಲಾಖೆ ವಿಚಾರಣೆ, ಲೋಕಾಯುಕ್ತ ಪ್ರಕರಣ, ಕ್ರಿಮಿನಲ್‌ ಪ್ರಕರಣಗಳ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಎನ್‌ ರಘುಮೂರ್ತಿ ಅವರು ತಹಶೀಲ್ದಾರ್‌ (ಗ್ರೇಡ್‌ -2 ) ಹುದ್ದೆಗೆ ವೈಯಕ್ತಿಕ ಕಾರಣಗಳನ್ನು ಮುಂದಿರಿಸಿ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೇ ವಿಧಾನಸಭೆಗೆ ಇದೇ ಮೇ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

 

ಗಂಭೀರ ಸ್ವರೂಪದ ಆರೋಪಗಳ ಸಂಬಂಧ ವಿಚಾರಣೆ ಎದುರಿಸುತ್ತಿರುವ ರಘುಮೂರ್ತಿ ಅವರ ರಾಜೀನಾಮೆ ಅಂಗೀಕರಿಸಲು ನಿಯಾಮವಳಿಗಳಲ್ಲಿ ಅವಕಾಶಗಳೇ ಇಲ್ಲ. ‘ ಸದರಿ ಅಧಿಕಾರಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು ವಿಚಾರಣೆ ಹಂತದಲ್ಲಿರುತ್ತವೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ಅವರನ್ನು ಸೇವೆಯಿಂದ ತೆಗೆದು ಹಾಕುವ ಅಥವಾ ವಜಾ ಮಾಡುವ , ದಂಡನೆ ವಿಧಿಸುವ ಸಂಭವವಿದೆ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್‌ ಜಯರಾಮ್‌ ಅವರು ಟಿಪ್ಪಣಿಯಲ್ಲಿ ಸ್ಪಷ್ಟ ಅಭಿಪ್ರಾಯ ದಾಖಲಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅಲ್ಲದೇ ಇಲಾಖೆ ವಿಚಾರಣೆ, ಲೋಕಾಯುಕ್ತ ಪ್ರಕರಣಗಳು ಬಾಕಿ ಇದ್ದಲ್ಲಿ 1990ರ ಏಪ್ರಿಲ್‌ 3ರಂದು ಇಲಾಖೆಯು ಹೊರಡಿಸಿದ್ದ ಆದೇಶದಂತೆ ರಘುಮೂರ್ತಿ ಅವರ ರಾಜೀನಾಮೆಯನ್ನು ಅಂಗೀಕರಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಭಿಪ್ರಾಯ ನೀಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

‘ರಘುಮೂರ್ತಿ ಅವರ ವಿರುದ್ಧ ಈಗಾಗಲೇ ಹೂಡಿರುವ, ಪರಿಶೀಲನೆಯಲ್ಲಿರುವ ಹಾಗೂ ಹೂಡಲು ಪ್ರಸ್ತಾಪಿಸಿರುವ, ತನಿಖಾ ಹಂತದಲ್ಲಿರುವ ಇಲಾಖೆ ವಿಚಾರಣೆ ಪ್ರಕರಣಗಳು, ಜಂಟಿ ಇಲಾಖೆ ವಿಚಾರಣೆ ಪ್ರಕರಣಗಳು, ಲೋಕಾಯುಕ್ತ ಪ್ರಕರಣಗಳು, ಸಿವಿಲ್‌, ಕ್ರಿಮಿನಲ್‌, ನ್ಯಾಯಾಲಯ ಮೊಕದ್ದಮೆ ಪ್ರಕರಣಗಳನ್ನು ನಿಯಮಾನುಸಾರ ಮುಂದುವರೆಸುವ ಹಾಗೂ ಭವಿಷ್ಯದಲ್ಲಿಯೂ ಸಹ ಇವರ ವಿರುದ್ಧ ಕಂದಾಯ ಇಲಾಖೆ ಒಳಗೊಂಡಂತೆ ಇನ್ನಿತರೆ ಯಾವುದೇ ಇಲಾಖೆಯಲ್ಲಿ ಉದ್ಭವವಾಗಬಹುದಾದ ಶಿಸ್ತು ಕ್ರಮ ಪ್ರಕರಣಗಳು,, ಸಿವಿಲ್‌, ಕ್ರಿಮಿನಲ್‌, ನ್ಯಾಯಾಲಯದ ಮೊಕದ್ದಮೆ, ಪ್ರಕರಣಗಳನ್ನು ಹೂಡುವ ಸಂಭವವಿದ್ದಲ್ಲಿ ನಿಯಮಾನುಸಾರ ಹೂಡುವ ಷರತ್ತಿಗೆ ಒಳಪಟ್ಟಂತೆ ಇವರ ರಾಜೀನಾಮೆಯನ್ನು ಅಂಗೀಕರಿಸಿದೆ,’ ಎಂದು ಆದೇಶದಲ್ಲಿ ವಿವರಿಸಿದೆ.

 

ಈ ಆದೇಶ ಹೊರಡಿಸುವ ಸಂಬಂಧ ಕಡತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಕಿತ ಹಾಕಿದ್ದಾರೆ.

 

ರಘುಮೂರ್ತಿ ವಿರುದ್ಧದ ಪ್ರಕರಣಗಳ ಪಟ್ಟಿ

 

ರಘುಮೂರ್ತಿ ಅವರು ಯಲಹಂಕ ತಾಲೂಕಿನಲ್ಲಿ ವಿಶೇಷ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ವೆ ನಂಬರ್‌ 79ರಲ್ಲಿನ 17-35 ಎಕರೆ ಸರ್ಕಾರಿ ಜಮೀನಿನ ಪರಿಹಾರದ ಹಣವನ್ನು ಪಡೆಯಲು ಅಕ್ರಮವೆಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಅಮಾನತು (ಕಂಇ 358 ಎಎಸ್‌ಡಿ 2020 (354046) ತೆರವುಗೊಂಡಿತ್ತು. ಅಲ್ಲದೇ ಈ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ 2020ರ ಮೇ 5ರಂದು ನೇಮಿಸಿ ಆದೇಶ ಹೊರಡಿಸಿತ್ತು.

 

ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಇತರ ನೌಕರರೊಂದಿಗೆ ಜೊತೆಗೂಡಿ ತಾವರೆಕೆರೆ ಹೋಬಳಿ ಜೋಗೇರಹಳ್ಳಿ ಗ್ರಾಮದ ಸರ್ವೇ ನಂಬರ್‌ 21ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಪೋಡಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ಈ ಸರ್ವೆ ನಂಬರ್‌ನ ಪಹಣಿಯಲ್ಲಿ ಹೊಸ ಸರ್ವೆ ನಂಬರ್‌ಗಳನ್ನು ಇಂಡೀಕರಿಸಿರುವ ಆರೋಪಕ್ಕೆ ಗುರಿಯಾಗಿದ್ದರು. ಈ ಕುರಿತು ಇವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತು.

 

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿಎಂ ಕಾವಲ್‌ ಗ್ರಾಮದ ಸರ್ವೆ ನಂಬರ್‌ 3ರಲ್ಲಿದ್ದ ಮೂಲತಃ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ದಾಖಲೆ ಸೃಷ್ಟಿಸಲಾಗಿತ್ತು. ಸರ್ಕಾರಿ ಜಮೀನನ್ನು ಪೋಡಿ ದುರಸ್ತಿ ಮಾಡಿಕೊಡುವ ಮುಖೇನ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರು.ಗಳ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದರು.

 

ಈ ಪ್ರಕರಣ ಸಂಬಂಧ ರಘುಮೂರ್ತಿಸೇರಿದಂತೆ ಇತರರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 13(1)ಸಿ)ಮತ್ತು ಐಪಿಸಿ ಕಲಂ 465, 468, 471ರ ಅಡಿಯಲ್ಲಿ ಕಾನೂನುಕ್ರಮ ಜರುಗಿಸಲು ಅನುಮತಿ ನೀಡಬೇಕು ಎಂದು ಎಸಿಬಿಯ ಎಡಿಜಿಪಿ ಅವರು ಸಕ್ಷಮ ಪ್ರಾಧಿಕಾರಕ್ಕೆ ಪತ್ರ (ಕಂಇ 127 ಎಡಿಇ 2017 (312200) ಬರೆದಿದ್ದರು. ಈ ಪ್ರಕರಣದಲ್ಲಿಯೂ ಅಮಾನತುಗೊಂಡಿದ್ದರು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

 

ರಘುಮೂರ್ತಿ ಅವರು ಮೈಸೂರಿನಲ್ಲಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ದೂರುದಾರರೊಬ್ಬರಿಮದ 50,000 ರು.ಲಂಚ ಪಡೆದ ಆರೋಪದಲ್ಲಿ ಮೈಸೂರಿನ ಸೆಷನ್ಸ್‌ ನ್ಯಾಯಾಲಯವು ಆರೋಪಿತರನ್ನು ದೋಷಿ ಎಂದು ಪರಿಗಣಿಸಿತ್ತು. ಅಲ್ಲದೆ 4 ವರ್ಷ ಜೈಲು ಶಿಕ್ಷೆ ಹಾಗೂ 25,000 ರು. ಜುಲ್ಮಾನೆ ವಿಧಿಸಿತ್ತು. ಈ ಪ್ರಕರಣದಲ್ಲಿಯೂ 2017ರ ಮೇ 11ರಂದು ಇವರನ್ನು ಸೇವೆಯಿಂದ ಅಮಾನತಗೊಳಿಸಲಾಗಿತ್ತು.

 

ಬೇಗೂರು ಹೋಬಳಿ ದೊಡ್ಡತೋಗೂರು ಗ್ರಾಮದ ಸರ್ವೆ ನಂಬರ್‌ 105ರಲ್ಲಿ 10-04 ಎಕರೆ ವಿಸ್ತೀರ್ಣದ ಬಿಡಿಎ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆ ಮಾಡಿದ್ದರು. ಈ ಸಂಬಂಧ ಉಪ ಲೋಕಾಯುಕ್ತರು ಕಲಂ 12(3) ಅನ್ವಯ ಸರ್ಕಾರಕ್ಕೆ ವಿಚಾರಣೆ ವರದಿ ಸಲ್ಲಿಸಿದ್ದರು. ಅಲ್ಲದೆ ಈ ವರದಿ ಅನುಸಾರ ರಘುಮೂರ್ತಿ ಅವರ ವಿರುದ್ಧ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts