ಪಿಎಸ್‌ಎಸ್‌ಕೆ ಕಾರ್ಖಾನೆ ಕೈಗೆ ಬರುತ್ತಿದ್ದಂತೆ ವರಾತ ತೆಗೆದ ನಿರಾಣಿ; ಗುತ್ತಿಗೆ ಕರಾರಿಗೆ ತಿದ್ದುಪಡಿಗೆ ಒತ್ತಡ

ಬೆಂಗಳೂರು; ಸರ್ಕಾರದ ಸಹಕಾರ ಒಡೆತನದಲ್ಲಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿರುವ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಒಡೆತನಕ್ಕೆ ಸೇರಿರುವ ನಿರಾಣಿ ಉದ್ಯಮ ಸಮೂಹ ಹೊಸ ವರಾತ ತೆಗೆದಿರುವುದು ಇದೀಗ ಬಹಿರಂಗವಾಗಿದೆ.

ಸಕ್ಕರೆ ಕಾರ್ಖಾನೆ ತನ್ನ ಕೈಗೆ ಬರುತ್ತಿದ್ದಂತೆ ವರಾತ ತೆಗೆಯುತ್ತಿರುವ ನಿರಾಣಿ ಉದ್ಯಮ ಸಮೂಹವು ಗುತ್ತಿಗೆ ಅವಧಿ ಪೂರ್ಣಗೊಂಡ ನಂತರವೂ ಕಂಪನಿಯಲ್ಲಿನ ಎಲ್ಲಾ ಬಗೆಯ ಯಂತ್ರೋಪಕರಣಗಳು ಸರ್ಕಾರದ ವಶಕ್ಕೆ ಬದಲಿಗೆ ಕಂಪನಿ ವಶಕ್ಕೆ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಕರಾರು ಒಪ್ಪಂದಕ್ಕೆ ಸಹಿ ಮಾಡಿದ ನಂತರ ಕಂಪನಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ನಿರಾಣಿ ಉದ್ಯಮ ಸಮೂಹ ವರಾತ ತೆಗೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಆಕ್ಷೇಪಗಳು ಸರ್ಕಾರದ ಮಟ್ಟದಲ್ಲೇ ವ್ಯಕ್ತವಾಗಿವೆ.

ನಿರಾಣಿ ಉದ್ಯಮ ಸಮೂಹ ಮುಂದಿಟ್ಟಿರುವ ಈ ಹೊಸ ಬೇಡಿಕೆಯನ್ನು ಈಡೇರಿಸಬೇಕೇ ಬೇಡವೇ ಎಂಬ ಬಗ್ಗೆ ಸರ್ಕಾರದ ನಿರ್ಧಾರ ಇನ್ನೂ ಹೊರಬಿದ್ದಿಲ್ಲ. ಆದರೆ ಬೇಡಿಕೆ ಈಡೇರಿಸುವ ಸಂಬಂಧ ಒತ್ತಡ ಈಗಲೂ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆಯಲು ಸರ್ಕಾರ ವಿಧಿಸಿದ್ದ ಕರಾರು, ಷರತ್ತುಗಳಿಗೆ ಒಪ್ಪಿ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ನಿರಾಣಿ ಉದ್ಯಮ ಸಮೂಹ ಇದೀಗ ಕರಾರುಗಳನ್ನು ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆ ಮಾತ್ರ ಇರಿಸಿಲ್ಲ. ಬದಲಿಗೆ ಕಂಪನಿಗೆ ಆಡಳಿತಾಧಿಕಾರಿಯನ್ನೂ ಸರ್ಕಾರವೇ ನೇಮಿಸಬೇಕು ಎಂದು ಒತ್ತಡ ಹೇರಲಾರಂಭಿಸಿದ್ದಾರೆ.

ನಿರಾಣಿ ಉದ್ಯಮ ಸಮೂಹ ಬೆನ್ನಿಗೆ ನಿಂತಿರುವ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವರು ಕರಾರಿನ ತಿದ್ದುಪಡಿ ಸಂಬಂಧ ಕ್ರಮ ಕೈಗೊಳ್ಳಲು ಟಿಪ್ಪಣಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಕರಣದಲ್ಲಿ ಆಡಳಿತಾಧಿಕಾರಿ ನೇಮಿಸಿರುವ ಮಾದರಿಯಲ್ಲೇ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಗೂ ಸರ್ಕಾರವೇ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಡ ಹೇರಿದೆ ಎಂದು ಗೊತ್ತಾಗಿದೆ. ಅಲ್ಲದೆ ಗುತ್ತಿಗೆ ಒಪ್ಪಂದದಲ್ಲಿನ 32ನೇ ಕರಾರನ್ನು ತಿದ್ದುಪಡಿ ಮಾಡಲು ನಿರಾಣಿ ಶುಗರ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ.

‘ಬೆಳಗಾವಿಯ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಕರಣದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಗುತ್ತಿಗೆ ಅವಧಿ ಮುಕ್ತಾಯಗೊಳ್ಳುವವರೆಗೂ ಆಡಳಿತಾಧಿಕಾರಿಯ್ನನು ನೇಮಿಸಿರುವಂತೆ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಆಡಳಿತಾಧಿಕಾರಿಯನ್ನು ನೇಮಿಸಲು ಹಾಗೂ ಗುತ್ತಿಗೆ ಒಪ್ಪಂದದಲ್ಲಿನ 32ನೇ ಕರಾರನ್ನು ತಿದ್ದುಪಡಿ ಮಾಡಲು ನಿರಾಣಿ ಶುಗರ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ. ಈ ಸಂಬಂಧ ನಿಯಮಾನುಸಾರ ಪರಿಶೀಲಿಸಿ ಅಭಿಪ್ರಾಯವನ್ನು ಕಳಿಸಿಕೊಡಬೇಕು,’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದಶಿfಗಳು 2020ರ ಜುಲೈ 30ರಂದು ಕಬ್ಬು ಅಭಿವೃದ್ಧಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿರುವ ಯಂತ್ರೋಪಕರಣಗಳನ್ನು ಸರ್ಕಾರದ ವಶಕ್ಕೆ ನೀಡಬೇಕು. ಅದೇ ರೀತಿ ಹೊಸ ತಂತ್ರಜ್ಞಾನ ಹೊಂಧಿರುವ ಯಂತ್ರೋಪಕರಣಗಳನ್ನು ಅಳವಡಿಸಿದರೂ ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕವೂ ಸರ್ಕಾರದ ವಶಕ್ಕೆ ನೀಡಬೇಕು ಎಂಬ ಕರಾರು ಆಗಿದೆ. ಆದರೀಗ ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಯಂತ್ರೋಪಕರಣಗಳನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬದಲಿಗೆ ಗುತ್ತಿಗೆ ಪಡೆದಿರುವ ನಿರಾಣಿ ಸಮೂಹದ ವಶದಲ್ಲಿರಬೇಕು ಎಂದು ಬೇಡಿಕೆಯನ್ನು ಇರಿಸಿದೆ.

ಕಾರ್ಖಾನೆಯನ್ನು ಗುತ್ತಿಗೆ ಪಡೆಯಲು ನಿರಾಣಿ ಕಂಪನಿ ಹಾಗೂ ಎನ್‌ಎಸ್‌ಎಲ್‌ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಹಣಕಾಸು ಟೆಂಡರ್‌ ಪ್ರಕ್ರಿಯೆಯಲ್ಲಿ ಎನ್‌ಎಸ್‌ಎಲ್‌ ಕಂಪನಿ ತಿರಸ್ಕೃತಗೊಂಡಿದ್ದರಿಂದ ಅಂತಿಮವಾಗಿ ನಿರಾಣಿ ಕಂಪನಿಗೆ ಟೆಂಡರ್‌ ದೊರಕಿತ್ತು. ಅತಿ ಹೆಚ್ಚಿನ ಅಂದರೆ 405 ಕೋಟಿ ರೂಪಾಯಿಗಳ ಬಿಡ್‌ಗೆ 40 ವರ್ಷಗಳಿಗೆ ಸರ್ಕಾರ ಗುತ್ತಿಗೆ ಪಡೆದುಕೊಂಡಿದೆ. ದುಡಿಯುವ ಬಂಡವಾಳದ ಕೊರತೆಯಿಂದ ಕಾರ್ಖಾನೆಯನ್ನು ಈವರೆಗೆ ಆರಂಭಿಸಲು ಸಾಧ್ಯವಾಗಿರಲಿಲ್ಲ. 2010ರಿಂದ 2018ರವರೆಗೆ ರಾಜ್ಯಸರ್ಕಾರಗಳು 103.46 ಕೋಟಿ ರೂ. ಹಣವನ್ನು ಕಾರ್ಖಾನೆಗೆ ದುಡಿಯುವ ಬಂಡವಾಳ ನೀಡಿತ್ತಾದರೂ ಕಾರ್ಖಾನೆ ಪುನಶ್ಚೇತನಗೊಳ್ಳಲೇ ಇಲ್ಲ.

ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಲಾಗಿದ್ದರೂ ಆಧುನಿಕ ಯಂತ್ರೋಪಕರಣಗಳ ಬಳಕೆ , ವಿಧಿ-ವಿಧಾನಗಳ ರೂಪುರೇಷೆ ಕ್ರಮಬದ್ಧತೆಯಿಂದ ಕೂಡಿರದ ಕಾರಣ ಕಬ್ಬು ಅರೆಯುವಿಕೆ ಪರಿಪೂರ್ಣಗೊಳ್ಳಲಿಲ್ಲ. ಕಬ್ಬು ಅರೆಯುವಿಕೆ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡದಿರುವುದು ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣ ಎಂದು ಹೇಳಲಾಗಿದೆ.

the fil favicon

SUPPORT THE FILE

Latest News

Related Posts