ಹಾಲು, ಆಹಾರ, ಸಾರಿಗೆ, ಆತಿಥ್ಯಕ್ಕೆ 167.92 ಕೋಟಿ ವೆಚ್ಚ; ಎರಡೇ ವರ್ಷದಲ್ಲಿ 51.93 ಕೋಟಿ ಹೆಚ್ಚಳ

photo credit;yoyotv

ಬೆಂಗಳೂರು; ಇಂಧನ, ಆಹಾರ, ಹಾಲು, ಸಾರಿಗೆ, ಆತಿಥ್ಯ ಸೇರಿದಂತೆ ಇನ್ನಿತರೆ ಸಾಮಾನ್ಯ ವೆಚ್ಚಗಳಡಿಯಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಇದುವರೆಗೂ 83.88 ಕೋಟಿ ರು. ಮತ್ತು ಸಾರಿಗೆ ವೆಚ್ಚಗಳಡಿಯಲ್ಲಿ 84.04 ಕೋಟಿ ರು ಸೇರಿದಂತೆ ಒಟ್ಟಾರೆ 167.92 ಕೋಟಿ ರು. ಖರ್ಚು ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಇದೇ ಸಾಮಾನ್ಯ ವೆಚ್ಚಗಳಡಿ ಮಾಡಿದ್ದ ಖರ್ಚಿಗೆ ಹೋಲಿಸಿದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 31.05 ಕೋಟಿ ರು. ಮತ್ತು ಸಾರಿಗೆ ವೆಚ್ಚದ 20.88 ಕೋಟಿ ರು. ಸೇರಿದಂತೆ ಒಟ್ಟಾರೆ 51.93 ಕೋಟಿ ರು. ಹೆಚ್ಚಳವಾಗಿದೆ. ಈ ಸಂಬಂಧ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಫಿ, ತಿಂಡಿ, ಬಿಸ್ಕೆಟ್‌ಗಳ ಹೆಸರಿನಲ್ಲಿ 200 ಕೋಟಿ ರು.ಗಿಂತಲೂ ಹೆಚ್ಚು ಹಣ ಲೂಟಿಯಾಗಿದೆ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್‌ ಆರ್‌ ರಮೇಶ್‌ ಅವರು ಆರೋಪಿಸಿದ್ದರ ಬೆನ್ನಲ್ಲೇ ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದಿನ ಸರ್ಕಾರವು ಮಾಡಿದ್ದ ವೆಚ್ಚಕ್ಕಿಂತಲೂ 51.93 ಕೋಟಿ ರು. ಹೆಚ್ಚು ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.

 

2019-20ರಲ್ಲಿ 17.90 ಕೋಟಿ ರು., 2020-21ರಲ್ಲಿ 16.53 ಕೋಟಿ ರು., 2021-22ರಲ್ಲಿ 14.45 ಕೋಟಿ, 2022-23ರಲ್ಲಿ 15.00 ಕೋಟಿ ರೂ ಖರ್ಚು ಮಾಡಲಾಗಿದೆ. 2023-24ರಲ್ಲಿ ಸಾಮಾನ್ಯ ವೆಚ್ಚಗಳಿಗೆಂದು 20.00 ಕೋಟಿ ರು.ಗಳನ್ನು ಆಯವ್ಯಯದಲ್ಲಿ ನಿಗದಿಪಡಿಸಿರುವುದು ಆರ್ಥಿಕ ಇಲಾಖೆಯ ವೆಚ್ಚದ (2070-00-115-1-01-051) ದಾಖಲೆಗಳಿಂದ ತಿಳಿದು ಬಂದಿದೆ.

 

2013-14ರಲ್ಲಿ 9.25 ಕೋಟಿ ರು., 2014-15ರಲ್ಲಿ 9.85 ಕೋಟಿ ರು., 2015-16ರಲ್ಲಿ 9.97 ಕೋಟಿ ರು ., 2016-17ರಲ್ಲಿ 10.84 ಕೋಟಿ ರು., 2017-18ರಲ್ಲಿ 12.90 ಕೋಟಿ ರು. ಸೇರಿ ಒಟ್ಟಾರೆ 52.83 ಕೋಟಿ ರು. ಖರ್ಚಾಗಿದೆ.
ಅದೇ ರೀತಿ ಸಾರಿಗೆ ವೆಚ್ಚ (2070-00-115-01-195) 2019-20ರಿಂದ 2023-24ರವರೆಗೆ ಒಟ್ಟು 84.04 ಕೋಟಿ ರು. ಖರ್ಚಾಗಿದೆ. 2019-20ರಲ್ಲಿ 18.09 ಕೋಟಿ ರು., 2020-21ರಲ್ಲಿ 12.00 ಕೋಟಿ ರು., 2020-21ರಲ್ಲಿ 9.46 ಕೋಟಿ ರು., 2021-22ರಲ್ಲಿ 8.49 ಕೋಟಿ ರು., 2022-23ರಲ್ಲಿ 12.00 ಕೋಟಿ ರು., 2023-24ರಲ್ಲಿ 12.00 ಕೋಟಿ ರು. ವೆಚ್ಚವಾಗಿದೆ.

 

ಇದೇ ಸಾರಿಗೆ ವೆಚ್ಚದ ಲೆಕ್ಕ ಶೀರ್ಷಿಕೆಯಡಿಯಲ್ಲಿ 2013-14ರಲ್ಲಿ 14.35 ಕೋಟಿ, 2014-15ರಲ್ಲಿ 14.34 ಕೋಟಿ, 2015-16ರಲ್ಲಿ 7.89 ಕೋಟಿ, 2016-17ರಲ್ಲಿ 14.68 ಕೋಟಿ, 2017-18ರಲ್ಲಿ 11.89 ಕೋಟಿ ರು ಸೇರಿ ಒಟ್ಟಾರೆ 63.16 ಕೋಟಿ ರು. ವೆಚ್ಚವಾಗಿದೆ. ಸಾರಿಗೆ ವೆಚ್ಚಕ್ಕೆ ಸಂಬಂಧಿಸಿದಂಗೆ ಮಾಡಿರುವ ವೆಚ್ಚವನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಗೆ ಹೋಲಿಸಿದರೆ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸಿದರೆ ಸಾರಿಗೆ ವೆಚ್ಚದಲ್ಲಿ 20.88 ಕೋಟಿ ರು. ಹೆಚ್ಚಳವಾಗಿರುವುದು ಗೊತ್ತಾಗಿದೆ.

 

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕೆಟ್‌ಗಳ ಹೆಸರಲ್ಲಿ 200 ಕೋಟಿ ರು.ಗಿಂತ ಹೆಚ್ಚು ಹಣ ಲೂಟಿ ಮಾಡಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದ್ದರು. ಅಲ್ಲದೇ ಆತಿಥ್ಯ ಉಪಚಾರಕ್ಕಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 72.82 ಕೋಟಿ ರು. ವೆಚ್ಚವಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧನೆ ವರದಿ ದಾಖಲೆ ಸಹಿತ ‘ದಿ ಫೈಲ್‌’ 2023ರ ಮಾರ್ಚ್‌ 9ರಂದು ವರದಿ ಪ್ರಕಟಿಸಿತ್ತು.

ಆತಿಥ್ಯ ಉಪಚಾರ; ಬಿಜೆಪಿ ಸರ್ಕಾರದ 3 ವರ್ಷದ ಅವಧಿಯಲ್ಲಿ 72.82 ಕೋಟಿ ವೆಚ್ಚ

 

2013-14ರಿಂದ 2017-18ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ, ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ 3.26 ಕೋಟಿ ರು. ಖರ್ಚಾಗಿದೆ. ಆದರೆ, 200 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಇದು ಐಪಿಸಿ ಸೆಕ್ಷನ್‌ 420ಗೆ ಅರ್ಹವಾದ ಪ್ರಕರಣ. ಈ ಮೂಲಕ ಇಡೀ ಬಿಜೆಪಿಯೇ ಸುಳ್ಳಿನ ಕಾರ್ಖಾನೆ ಎಂಬುದು ಪದೇ ಪದೇ ಸಾಬೀತು ಆಗುತ್ತಿದೆ ಎಂದು ಸಿದ್ದರಾಮಯ್ಯ ಅವರು ದಾಖಲೆ ಸಹಿತ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts