ಪಂಚಮಸಾಲಿ ಟ್ರಸ್ಟ್‌ಗೆ ಗೋಮಾಳ ಮಂಜೂರು; ಒಂದೇ ತಿಂಗಳಲ್ಲಿ ನಿಲುವು ಬದಲಾಯಿಸಿದ್ದ ಆರ್ಥಿಕ ಇಲಾಖೆ

photo credit;rashokofficialtwitter account

ಬೆಂಗಳೂರು; ಮಾಜಿ ಮುಖ್ಯಮಂತ್ರಿಯೂ ಆಗಿರುವ ಶಾಸಕ ಬಿ ಎಸ್‌ ಯಡಿಯೂರಪ್ಪ ಅವರು ಪ್ರತಿನಿಧಿಸುವ ಶಿಕಾರಿಪುರ ತಾಲೂಕಿನಲ್ಲಿ ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್‌ಗೆ ಉದ್ದೇಶಿತ ಸಮುದಾಯ ಭವನ ನಿರ್ಮಾಣಕ್ಕೆ ಗೋಮಾಳವನ್ನು ಮಂಜೂರು ಮಾಡಲು ಮೊದಲು ನಿರಾಕರಿಸಿದ್ದ ಆರ್ಥಿಕ ಇಲಾಖೆಯು ಒಂದೇ ತಿಂಗಳಲ್ಲಿ ತನ್ನ ನಿಲುವನ್ನೇ ಬದಲಾಯಿಸಿರುವುದು ಇದೀಗ ಬಹಿರಂಗವಾಗಿದೆ.

 

ಕಂದಾಯ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ತಿರಸ್ಕರಿಸಿತ್ತು. ಇದನ್ನಾಧರಿಸಿ ಆರ್ಥಿಕ ಇಲಾಖೆಯೂ ಅನುಮೋದಿಸಿತ್ತು. ಆದರೆ ಒಂದೇ ತಿಂಗಳ ಅಂತರದಲ್ಲಿ ಇದೇ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಲು ಸಹಮತಿ ವ್ಯಕ್ತಪಡಿಸಿದೆ. ಈ ಸಂಬಂಧ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ಜನವರಿಯಲ್ಲಿ ನೀಡಿದ್ದ ಅಭಿಪ್ರಾಯವಿದು

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು (ಆಇ21 ವೆಚ್ಚ-7-2023, ಆರ್‌ಡಿ 53 ಎಲ್‌ಜಿಎಸ್‌ 2022) ಪರಿಶೀಲಿಸಿದೆ. ಪ್ರಸ್ತಾಪಿಸಿರುವ ಜಮೀನು ನಗರ ಪೌರ ಸರಹದ್ದಿನೊಳಗೆ ಇರುವುದರಿಂದ ಸದರಿ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2) ಅನ್ವಯ ಮಂಜೂರು ಮಾಡಲು ಅವಕಾಶವಿಲ್ಲದ ಕಾರಣ ಕಾನೂನು ಇಲಾಖೆಯ ಅಭಿಪ್ರಾಯದಂತೆ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿಯಿಲ್ಲ ಎಂದ ಆಡಳಿತ ಇಲಾಖೆಗೆ ತಿಳಿಸಿದೆ ಎಂದು 2023ರ ಜನವರಿ 7ರಂದು ಉತ್ತರ ಒದಗಿಸಿತ್ತು.

 

ಫೆಬ್ರುವರಿಯಲ್ಲಿ ಸಹಮತಿ

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಹೊಸೂರು ಹೋಬಳಿ ಧೂಪದಹಳ್ಳಿ ಗ್ರಾಮದ ಸರ್ವೆ ನಂಬರ್‌ 2ರಲ್ಲಿ 0.20 ಗುಂಟೆ ಜಮೀನನ್ನು ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್‌ (ರಿ) ಇವರಿಗೆ ಸಾರ್ವಜನಿಕ ಕಲ್ಯಾಣ ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಸಹಮತಿಸಿದೆ ಎಂದು 2023ರ ಫೆ.8ರಂದು ಅಭಿಪ್ರಾಯ ಒದಗಿಸಿದೆ.

 

ಈ ಎರಡೂ ಅಭಿಪ್ರಾಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಪ್ರಕರಣದ ಹಿನ್ನೆಲೆ

 

ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಯ ದೂಪದಹಳ್ಳಿ ಗ್ರಾಮದ ಸರ್ವೆ ನಂಬರ್‌ 02ರಲ್ಲಿ 0-20 ಗುಂಟೆ ಜಮೀನು ತುರುಮುಂದಿ ಮತ್ತು ಕ್ಯಾಂಪ್‌ ಗ್ರೌಂಡ್‌ ಎಂದು ವರ್ಗೀಕೃತಗೊಂಡ ಜಮೀನಾಗಿದೆ. ಈ ಗ್ರಾಮದಲ್ಲಿ ಗೋಮಾಳ ಜಮೀನಿನ ಕೊರತೆ ಇದೆ. ಅಲ್ಲದೇ ಈ ಗ್ರಾಮದಲ್ಲಿರುವ ಅರಣ್ಯ ಜಮೀನನ್ನು ಪರ್ಯಾಯವಾಗಿ ಗೋಮಾಳ ಉದ್ದೇಶಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದರು.

 

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರ ಪ್ರಕಾರ 100 ದನಗಳಿಗೆ 12 ಹೆಕ್ಟೇರ್‌ನಂತೆ ಜಮೀನನ್ನು ಜಾನುವಾರುಗಳಿಗೆ ಕಾಯ್ದಿರಿಸಬೇಕು. ದೂಪದಹಳ್ಳಿ ಗ್ರಾಮದಲ್ಲಿ 200 ಜಾನುವಾರುಗಳಿದ್ದು 13-09 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿದೆ. 166 ಜಾನುವಾರುಳಿಗೆ 30 ಎಕರೆಯಂತೆ ಗೋಮಾಳವನ್ನು ಕಾಯ್ದಿರಿಸಬೇಕು. ಹೀಗಾಗಿ ಗ್ರಾಮದಲ್ಲಿ ಗೋಮಾಳ ಕೊರತೆ ಇದೆ. ಜಾನುವಾರುಗಳ ಸಂಖ್ಯೆ ಅನುಪಾತಕ್ಕೆ ಸರಿಯಾಗಿ ಸರ್ಕಾರಿ ಜಮೀನು ಲಭ್ಯವಿಲ್ಲ ಎಂದು ಕಾನೂನು ಇಲಾಖೆಯು ತನ್ನ ಟಿಪ್ಪಣಿಯಲ್ಲಿ ವಿವರಿಸಿತ್ತು.

the fil favicon

SUPPORT THE FILE

Latest News

Related Posts