ಗೋಮಾಳ; ಪಂಚಮಸಾಲಿ ಟ್ರಸ್ಟ್‌ಗೆ ಶೇ.100ರಷ್ಟು ದರ, ರಾಷ್ಟ್ರೋತ್ಥಾನಕ್ಕೆ ಶೇ. 25ರ ರಿಯಾಯಿತಿ

photo credit;deccanhearald

ಬೆಂಗಳೂರು; ಮಾಜಿ ಮುಖ್ಯಮಂತ್ರಿಯೂ ಆಗಿರುವ ಶಾಸಕ ಬಿ ಎಸ್‌ ಯಡಿಯೂರಪ್ಪ ಅವರು ಪ್ರತಿನಿಧಿಸುವ ಶಿಕಾರಿಪುರ ತಾಲೂಕಿನಲ್ಲಿ ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್‌ಗೆ ಉದ್ದೇಶಿತ ಸಮುದಾಯ ಭವನ ನಿರ್ಮಾಣಕ್ಕೆ 20 ಗುಂಟೆ ಗೋಮಾಳವನ್ನು ಮಂಜೂರು ಮಾಡಲು ಕಾನೂನು ಇಲಾಖೆಯು ತಿರಸ್ಕರಿಸಿದ್ದರೂ ಅದನ್ನು ಬದಿಗಿರಿಸಿ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ.

 

ವಿಶೇಷವೆಂದರೆ ಸಂಘ ಪರಿವಾರದ ಅಂಗಸಂಸ್ಥೆಗಳಲ್ಲೊಂದಾದ ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಜನಸೇವಾ ಟ್ರಸ್ಟ್‌ಗೆ ಹತ್ತಾರು ಎಕರೆ ಗೋಮಾಳವನ್ನು ಮಾರುಕಟ್ಟೆ ಬೆಲೆಯಲ್ಲಿ ಶೇ.25ರ ದರದಲ್ಲಿ ಮಂಜೂರು ಮಾಡಿದ್ದರೂ ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್‌ಗೆ ಮಾರುಕಟ್ಟೆಯ ಶೇ.100ರಷ್ಟು ದರವನ್ನು ವಿಧಿಸಿ ಮಂಜೂರು ಮಾಡಿದೆ.

 

 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಹೊಸೂರು ಹೋಬಳಿಯ ದೂಪದಹಳ್ಳಿ ಗ್ರಾಮದ ಸರ್ವೆ ನಂಬರ್‌ 02ರಲ್ಲಿ 0-20 ಗುಂಟೆ ಜಮೀನನ್ನು ಸಾರ್ವಜನಿಕ ಕಲ್ಯಾಣ ಉದ್ದೇಶ ಹೊಂದಿರುವ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀ ಹರ ಪಂಚಮಸಾಲಿ ಸೇವಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ಕಾನೂನು ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿಯು ಸಾರ್ವಜನಿಕ ಕಲ್ಯಾಣದ ಉದ್ದೇಶಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಅಭಿಪ್ರಾಯ ನೀಡಿದ್ದರು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಯ ದೂಪದಹಳ್ಳಿ ಗ್ರಾಮದ ಸರ್ವೆ ನಂಬರ್‌ 02ರಲ್ಲಿ 0-20 ಗುಂಟೆ ಜಮೀನು ತುರುಮುಂದಿ ಮತ್ತು ಕ್ಯಾಂಪ್‌ ಗ್ರೌಂಡ್‌ ಎಂದು ವರ್ಗೀಕೃತಗೊಂಡ ಜಮೀನಾಗಿದೆ. ಈ ಗ್ರಾಮದಲ್ಲಿ ಗೋಮಾಳ ಜಮೀನಿನ ಕೊರತೆ ಇದೆ. ಅಲ್ಲದೇ ಈ ಗ್ರಾಮದಲ್ಲಿರುವ ಅರಣ್ಯ ಜಮೀನನ್ನು ಪರ್ಯಾಯವಾಗಿ ಗೋಮಾಳ ಉದ್ದೇಶಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದರು ಎಂಬುದು ಲಭ್ಯ ಇರುವ ದಾಖಲೆಯಿಂದ ತಿಳಿದು ಬಂದಿದೆ.

 

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರ ಪ್ರಕಾರ 100 ದನಗಳಿಗೆ 12 ಹೆಕ್ಟೇರ್‌ನಂತೆ ಜಮೀನನ್ನು ಜಾನುವಾರುಗಳಿಗೆ ಕಾಯ್ದಿರಿಸಬೇಕು. ದೂಪದಹಳ್ಳಿ ಗ್ರಾಮದಲ್ಲಿ 200 ಜಾನುವಾರುಗಳಿದ್ದು 13-09 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿದೆ. 166 ಜಾನುವಾರುಳಿಗೆ 30 ಎಕರೆಯಂತೆ ಗೋಮಾಳವನ್ನು ಕಾಯ್ದಿರಿಸಬೇಕು. ಹೀಗಾಗಿ ಗ್ರಾಮದಲ್ಲಿ ಗೋಮಾಳ ಕೊರತೆ ಇದೆ. ಜಾನುವಾರುಗಳ ಸಂಖ್ಯೆ ಅನುಪಾತಕ್ಕೆ ಸರಿಯಾಗಿ ಸರ್ಕಾರಿ ಜಮೀನು ಲಭ್ಯವಿಲ್ಲ ಎಂದು ಕಾನೂನು ಇಲಾಖೆಯು ತನ್ನ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ದೂಪದಹಳ್ಳಿ ಗ್ರಾಮವು ಶಿಕಾರಿಪುರ ಪುರಸಭೆ ವ್ಯಾಪ್ತಿಯಿಂದ 3.1 ಕಿ ಮೀ ದೂರದಲ್ಲಿದ್ದು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2) ಅನ್ವಯ ಸರ್ಕಾರಿ ಭೂಮಿಯನ್ನು ನಗರ ಪೌರ ಸರಹದ್ದಿನೊಳಗೆ ಯಾವುದೇ ವೈಯಕ್ತಿಕ ಅಥವಾ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ ಎಂದು ಕಾನೂನು ಇಲಾಖೆಯು ತಿಳಿಸಿತ್ತು.

 

‘ದೂಪದಹಳ್ಳಿ ಗ್ರಾಮದಲ್ಲಿ ಮಂಜೂರು ಮಾಡಲು ಪ್ರಸ್ತಾಪಿಸಿರುವ ಜಮೀನನ್ನು ಜಾನುವಾರುಗಳ ಮೇವಿಗಾಗಿ ಊರಿನ ಗ್ರಾಮಸ್ಥರು ಉಪಯೋಗಿಸುತ್ತಿರುವುದರಿಂದ ಸರ್ವೋಚ್ಛ ನ್ಯಾಯಾಲಯವು ಜಗಪಾಲ್‌ ಸಿಂಗ್‌ ಮತ್ತು ಇತರರು ವರ್ಸಸ್‌ ಪಂಜಾಬ್‌ ಸಕಾರ್ಶರದ ಪ್ರಕರಣದನ್ವಯ ಮತ್ತು ಪ್ರಸ್ತಾಪಿತ ಜಮೀನು ಪೌರಸರಹದ್ದಿನೊಳಗೆ ಇರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-3 ಅನ್ವಯ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿ ದೂಪದಹಳ್ಳಿ ಗ್ರಾಮದ ಸರ್ವೆ ನಂಬರ್‌ 02 ರಲ್ಲಿ 0-20 ಗುಂಟೆ ಜಮೀನನ್ನು ಶ್ರೀ ಹರ ಪಂಚಮಸಾಲಿ ಸೇವಾ ಟ್ರಸ್ಟ್‌ಗೆ ಸಾರ್ವಜನಿಕ ಕಲ್ಯಾಣ ಉದ್ದೇಶಕ್ಕಾಗಿ ಸಮುದಾಯ ಭವನ ನಿರ್ಮಿಸಲು ಮಂಜೂರು ಮಾಡಲು ಅವಕಾಶವಿರುವುದಿಲ್ಲ,’ ಎಂದು ಕಾನೂನು ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ಸಂತೋಷ್‌ ಗಜಾನನ ಭಟ್‌ ಅವರು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಆದರೂ ಕಂದಾಯ ಇಲಾಖೆಯು ಇದನ್ನು ಬದಿಗಿರಿಸಿ  2023ರ ಮಾರ್ಚ್‌  15ರಂದು ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಕಸಬಾ ಹೋಬಳಿ ಕಳೂರು ಗ್ರಾಮದಲ್ಲಿಯೂ ವೀರಶೈವ ಲಿಂಗಾಯತ ಪರಿಷತ್‌ ಟ್ರಸ್ಟ್‌ಗೆ 2 ಎಕರೆ ಮಂಜೂರು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಯನ್ನೂ ಸರ್ಕಾರವು ತಿರಸ್ಕರಿಸಿತ್ತಲ್ಲದೇ ಜಮೀನು ಮಂಜೂರು ಮಾಡಲು ನಿರಾಕರಿಸಿತ್ತು. ಈ ಕುರಿತೂ ‘ದಿ ಫೈಲ್‌’ 2022ರ ಡಿಸೆಂಬರ್‌ 6ರಂದೇ ವರದಿ ಪ್ರಕಟಿಸಿತ್ತು.

 

ಲಿಂಗಾಯತ ಟ್ರಸ್ಟ್‌ ಪ್ರಸ್ತಾವನೆ ತಿರಸ್ಕರಿಸಿ, ರಾಷ್ಟ್ರೋತ್ಥಾನಕ್ಕೆ ಮನ್ನಣೆ; ಜಮೀನು ಮಂಜೂರಿಯಲ್ಲೂ ತಾರತಮ್ಯ

 

ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೇ ಕಾನೂನು ಇಲಾಖೆಗೆ ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಜನಸೇವಾ ಟ್ರಸ್ಟ್‌ಗೆ ಗೋಮಾಳ ಮಂಜೂರಾತಿ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಕಾನೂನು ಇಲಾಖೆಯು ಈ ಎಲ್ಲಾ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದರೂ ಕಂದಾಯ ಇಲಾಖೆಯು ಈ ಎಲ್ಲಾ ಪ್ರಸ್ತಾವನೆಗಳನ್ನು ಸಚಿವಸಂಪುಟದ ಅನುಮೋದನೆ ಪಡೆದು ಗೋಮಾಳ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆದರೆ ವೀರಶೈವ ಲಿಂಗಾಯತ ಪರಿಷತ್‌ ಟ್ರಸ್ಟ್‌ ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಕಂದಾಯ ಇಲಾಖೆಯೇ ತಿರಸ್ಕರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts