ಬೆಂಗಳೂರು; ಸಾರ್ವತ್ರಿಕ ಚುನಾವಣಾ ಪೂರ್ವ ವರ್ಷವಾಗಿರುವ 2022-23ನೇ ಸಾಲಿನ ಬಜೆಟ್ ಗಾತ್ರವನ್ನು 2,55,106 ಕೋಟಿ ರು.ಗೆ ಹಿಗ್ಗಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಪೂರ್ಣಗೊಳ್ಳಲು ಮೂರೇ ಮೂರು ತಿಂಗಳು ಬಾಕಿ ಇದ್ದರೂ ಬಜೆಟ್‌ನಲ್ಲಿ ಘೋಷಿಸಿದ್ದ ಪೂರ್ಣ ಅನುದಾನವನ್ನು ವೆಚ್ಚ ಮಾಡಿಲ್ಲ. 15,460 ಕೋಟಿ ರುಪಾಯಿ ವೆಚ್ಚಕ್ಕೆ ಬಾಕಿ ಉಳಿಸಿಕೊಂಡು ಒಟ್ಟು ಅನುದಾನಕ್ಕೆ ಶೇ. 47ರಷ್ಟೇ ಪ್ರಗತಿಯಷ್ಟೇ ಸಾಧಿಸಿರುವ ಸರ್ಕಾರವು ಶೇ.50ರ ಗಡಿಯನ್ನೂ ದಾಟಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಪ್ರಣಾಳಿಕೆಯಲ್ಲಿ ಮಾಡಿದ್ದ ಘೋಷಣೆ ಮತ್ತು ಬಜೆಟ್ ಘೋಷಣೆಯಲ್ಲಿನ ಕಾರ್ಯಕ್ರಮಗಳು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸುತ್ತಿರುವ ಬೆನ್ನಲ್ಲೇ ಕೆಡಿಪಿ ಸಭೆಯಲ್ಲಿ ಮಂಡನೆಯಾಗಿದ್ದ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಕ್ರಿಯೆಗೆ ಪ್ರತಿಕ್ರಿಯೆ, ಪಠ್ಯಪುಸ್ತಕ ಪರಿಷ್ಕರಣೆ, ವೀರ್ ಸಾವರ್ಕರ್, ಶಾಲಾ ಕಾಂಪೌಂಡ್‌ಗಳಿಗೆ ಕೇಸರಿ ಬಣ್ಣ, ಶೇ.40ರ ಕಮಿಷನ್, ಭ್ರಷ್ಟಾಚಾರ ಆರೋಪಗಳ ಸುಳಿಯಲ್ಲಿ ಮುಖ್ಯಮಂತ್ರಿ ಆದಿಯಾಗಿ ಸಂಪುಟದ ಹಲವು ಸಚಿವರು ಮುಳುಗಿರುವ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿಲ್ಲ ಎಂಬುದು ಈ ಅಂಕಿ ಅಂಶಗಳಿಂದಲೇ ಮೇಲ್ನೋಟಕ್ಕೆ ಕಂಡು ಬಂದಿದೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವುದಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್ 16ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಒದಗಿಸಿರುವ ಇಲಾಖಾವಾರು ಮಾಹಿತಿಯು ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೈಗನ್ನಡಿ ಹಿಡಿದಿದೆ. ಸಭೆಯ ನಡವಳಿಗಳ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
2022-23ನೇ ಸಾಲಿನಲ್ಲಿ ಒಟ್ಟು 2,55,106 ಕೋಟಿ ರು. ಅನುದಾನ (ಆಯವ್ಯಯ ಅಂದಾಜು 2,20,310 ಕೋಟಿ +ಪೂರಕ ಅಂದಾಜು 13,369 ಕೋಟಿ, ಮತ್ತು ಪ್ರಾಥಮಿಕ ಶಿಲ್ಕು 21,420 ಕೋಟಿ ಸೇರಿದಂತೆ) ನವೆಂಬರ್ 2022ರ ಅಂತ್ಯಕ್ಕೆ 1,35,684 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ 1,20,224 ಕೋಟಿ ರು. ವೆಚ್ಚವಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ. 47ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ ಎಂಬ ಮಾಹಿತಿಯು ನಡವಳಿಯಿಂದ ಗೊತ್ತಾಗಿದೆ.
ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರದ ತಿಂಗಳಿನಿಂದಲೇ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳೂ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತದೆ. ಬಜೆಟ್‌ನಲ್ಲಿ ಒದಗಿಸಿರುವ ಅನುದಾನವನ್ನು ನಿಗದಿತ ಅವಧಿಯಲ್ಲಿಯೇ ಖರ್ಚು ಮಾಡಬೇಕು ಎಂದು ಈ ಸಭೆಯಲ್ಲಿ ಭಾಗವಹಿಸುವ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿರುತ್ತದೆ.
‘ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಹಣವನ್ನು ಖರ್ಚು ಮಾಡದೇ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯುವುದರಲ್ಲೇ ಕಾಲಹರಣ ಮಾಡುತ್ತಾರೆ. ಸಂಬಂಧಿಸಿದ ಸಚಿವರು ಇಲಾಖಾ ಸಭೆಗಳಿಗೂ ಹಾಜರಾಗುವುದಿಲ್ಲ, ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ವ್ಯವಧಾನವಿರುವುದಿಲ್ಲ. ಅವರದೇನಿದ್ದರೂ ಕಮಿಷನ್ ಗಿಟ್ಟಿಸಿಕೊಳ್ಳುವುದು, ಹಣ ಬಿಡುಗಡೆಗೆ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಡುವುದಷ್ಟೇ. ಹೀಗಾಗಿ ಕಾರ್ಯಕ್ರಮಗಳ ಪ್ರಗತಿಯು ಕುಂಠಿತಗೊಳ್ಳುತ್ತದೆ, ‘ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆರ್ಥಿಕ ಇಲಾಖೆಯ ಅಧಿಕಾರಿಯೊಬ್ಬರು.
ಪ್ರಸಕ್ತ ಸಾಲಿನ ಆರ್ಥಿಕ ವರ್ಷ (2022-23) ಪೂರ್ಣಗೊಳ್ಳಲು ಇನ್ನು ಕೇವಲ ಮೂರೇ ಮೂರು ತಿಂಗಳಿದ್ದರೂ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ ನವೆಂಬರ್ ಅಂತ್ಯದವರೆಗೆ 8,199 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ.
ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ
ಅದೇ ರೀತಿ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಕಾರ್ಯಕ್ರಮಗಳ ಪೈಕಿ ಇನ್ನೂ 122 ಕಾರ್ಯಕ್ರಮಗಳಿಗೆ ಚಾಲನೆ ದೊರೆತಿಲ್ಲ ಎಂಬುದನ್ನು ಸ್ಮರಿಸಬಹುದು.