ಬೆಂಗಳೂರು; ಕೃಷಿ ಬೆಳೆ, ಮೀನುಗಾರಿಕೆ, ತಯಾರಿಕೆ, ವಿದ್ಯುಚ್ಛಕ್ತಿ, ವ್ಯಾಪಾರ, ರಸ್ತೆ ಸಾರಿಗೆ, ಹಣಕಾಸು ಸೇವೆ, ಸಾರ್ವಜನಿಕ ಆಡಳಿತ ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಒಡಿಶಾ ಸೇರಿದಂತೆ ಇತರೆ ರಾಜ್ಯಗಳು ಸಾಧಿಸಿರುವ ಬೆಳವಣಿಗೆ ದರಕ್ಕೆ ಹೋಲಿಸಿದರೆ ಕರ್ನಾಟಕವು ಕಡಿಮೆ ಬೆಳವಣಿಗೆ ದರವನ್ನು ದಾಖಲಿಸಿದೆ. ಅದರಲ್ಲೂ ಸಾರ್ವಜನಿಕ ಆಡಳಿತ ವಲಯದಲ್ಲಿ 2021-22ರಲ್ಲಿ 9.4ಷ್ಟು ಮಾತ್ರ ಬೆಳವಣಿಗೆ ದರ ದಾಖಲಿಸಿದ್ದರೇ ಇದೇ ಅವಧಿಯಲ್ಲಿ ಒಡಿಶಾದಲ್ಲಿ 18.6ರಷ್ಟು ದಾಖಲಾಗಿದೆ.
2023-24 ಸಾಲಿನ ವಾರ್ಷಿಕ ಆಯವ್ಯಯ ಮಂಡನೆ ದಿನಾಂಕದಂದೇ ವಿಧಾನಮಂಡಲದಲ್ಲಿ ಮಂಡಿಸಲಿರುವ ಆರ್ಥಿಕ ಸಮೀಕ್ಷೆ ವರದಿಗೆ ಪೂರಕವಾಗಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಒಟ್ಟಾರೆ ಸಾಧನೆ ಮತ್ತು ಸವಾಲುಗಳ ವಿಶ್ಲೇಷಣೆಯನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಇಲಾಖೆಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಬೆಳವಣಿಗೆ ದರವನ್ನು ಇತರೆ ರಾಜ್ಯಗಳೊಂದಿಗೆ ಹೋಲಿಸಲಾಗಿದೆ.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಬರೆದಿರುವ ಪತ್ರ ಮತ್ತು ರಾಷ್ಟ್ರದ ಇತರೆ ರಾಜ್ಯಗಳ ಬೆಳವಣಿಗೆ ದರದೊಂದಿಗೆ ಹೋಲಿಸಿರುವ ಪಟ್ಟಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ. ರಾಜ್ಯವು ಅನ್ಯ ರಾಜ್ಯಗಳಿಗಿಂತಲೂ ಎಲ್ಲಾ ವಲಯಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಚಿವ ಸಂಪುಟದ ಅನೇಕ ಸದಸ್ಯರು ಹೆಮ್ಮೆಯಿಂದ ಬೀಗಿದ್ದರು. ಇದರ ಬೆನ್ನಲ್ಲೇ ರಾಜ್ಯದ ಬೆಳವಣಿಗೆ ದರವು ಇತರೆ ರಾಜ್ಯಗಳಿಗಿಂತಲೂ ಕಡಿಮೆ ಇದೆ ಎಂಬ ಅಂಕಿ ಅಂಶಗಳು ಮಹತ್ವ ಪಡೆದುಕೊಂಡಿವೆ.
2011-22ರವರೆಗಿನ ಸರಾಸರಿ ಬೆಳವಣಿಗೆ ಮತ್ತು 2021-22ರ ಬೆಳವಣಿಗೆ ದರವನ್ನು ಇತರೆ ರಾಜ್ಯಗಳೊಂದಿಗೆ ಹೋಲಿಸಿರುವ ಇಲಾಖೆಯು ಕರ್ನಾಟಕದ ವಿವಿಧ ವಲಯಗಳ ಬೆಳವಣಿಗೆ ದರವು ಇಳಿಕೆಯಾಗಿರುವುದನ್ನು ಒರೆಗೆ ಹಚ್ಚಿದೆ.
ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ 2011-22ರ ಅವಧಿಯವರೆಗೆ ರಾಜ್ಯದ ದರವು ಸರಾಸರಿ 13.05ರಷ್ಟಿದೆ. 2021-22ರಲ್ಲಿ 16.0ರಷ್ಟಿದ್ದರೇ ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 16.3ರಷ್ಟಿದೆ. ಜಾನುವಾರು ವಲಯದಲ್ಲಿ ಕರ್ನಾಟಕದ್ದು ಸರಾಸರಿ 17.07 (2011-22) ಮತ್ತು 2021-22ರಲ್ಲಿ 12.1ರಷ್ಟಿದ್ದರೆ ಮಹಾರಾಷ್ಟ್ರದ್ದು 17.6ರಷ್ಟಿದೆ. ಅರಣ್ಯ ಮತ್ತು ಮರಗೆಲಸದಲ್ಲಿ ಸರಾಸರಿ 8.04 ಮತ್ತು 2021-22ರಲ್ಲಿ 3.7ರಷ್ಟಿದ್ದರೆ ಇದೇ ಅವಧಿಯಲ್ಲಿ ತೆಲಂಗಾಣದಲ್ಲಿ 21.5ರಷ್ಟಿರುವುದು ಪಟ್ಟಿಯಿಂದ ಗೊತ್ತಾಗಿದೆ.
ಮೀನುಗಾರಿಕೆ ವಲಯದಲ್ಲಿ ಸರಾಸರಿ 11.38, 2021-22ರಲ್ಲಿ 29.9ರಷ್ಟಿದ್ದರೇ ಆಂಧ್ರ ಪ್ರದೇಶದಲ್ಲಿ ಇದೇ ಸಾಲಿನಲ್ಲಿ 25.9ರಷ್ಟಿದೆ. ಗಣಿ ಮತ್ತು ಕಲ್ಲು ಅಗೆತದಲಲಿ ಸರಾಸರಿ 12.15 ಮತ್ತು 2021-22ರಲ್ಲಿ 8.9ರಷ್ಟಿದ್ದರೆ ಉತ್ತರ ಪ್ರದೇಶದಲ್ಲಿ ಇದೇ ಸಾಲಿನಲ್ಲಿ 86.8ರಷ್ಟಿದೆ. ತಯಾರಿಕೆ ವಲಯದಲ್ಲಿ ಸರಾಸರಿ 9.36 ಮತ್ತು 2021-22ರಲ್ಲಿ 19.1ರಷ್ಟಿದ್ದರೇ ಒಡಿಶಾದಲ್ಲಿ ಇದೇ ಅವಧಿಯಲ್ಲಿ 42.1ರಷ್ಟಿದೆ.
ವಿದ್ಯುಚ್ಛಕ್ತಿ, ಅನಿಲ ಮತ್ತು ನೀರು ಸರಬರಾಜು ವಲಯದಲ್ಲಿ 9.00 ಮತ್ತು 2021-22ರಲ್ಲಿ 9.4ರಷ್ಟಿದ್ದರೇ ಆಂಧ್ರಪ್ರದೇಶದಲ್ಲಿ 16.3ರಷ್ಟಿದೆ. ನಿರ್ಮಾಣ ಕಾರ್ಯದಲ್ಲಿ 6.97 ಮತ್ತು 2021-22ರಲ್ಲಿ 21.7ರಷ್ಟಿದ್ದರೆ ಆಂಧ್ರದಲ್ಲಿ ಇದೇ ಅವಧಿಯಲ್ಲಿ 26.8ರಷ್ಟಿದೆ. ವ್ಯಾಪಾರ ಮತ್ತು ದುರಸ್ತಿ ಸೇವೆಗಳಲ್ಲಿ ಸರಾಸರಿ ಬೆಳವಣಿಗೆ ದರವನ್ನು 15.76ರಷ್ಟು ದಾಖಲಿಸಿದ್ದರೇ 2021-22ರಲ್ಲಿ 30.00ರಷ್ಟಿತ್ತು. ಇದೇ ಅವಧಿಯಲ್ಲಿ ತೆಲಂಗಾಣದಲ್ಲಿ 41.5ರಷ್ಟಿತ್ತು ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.
ವಸತಿ ಮತ್ತು ಉಪಹಾರ ಗೃಹಗಳ ವಲಯದಲ್ಲಿ 12.47ರಷ್ಟು ಸರಾಸರಿ ಇದ್ದರೆ 2021-22ರಲ್ಲಿ 29.9ರಷ್ಟಿದೆ. ತಮಿಳುನಾಡಿನಲ್ಲಿ ಇದೇ ವಲಯದಲ್ಲಿ ಇದೇ ಅವಧಿಯಲ್ಲಿ 74.6ರಷ್ಟು ಬೆಳವಣಿಗೆ ದರವನ್ನು ದಾಖಲಿಸಿತ್ತು. ರೈಲ್ವೇಯಲ್ಲಿ 6.46 ಸರಾಸರಿ ಬೆಳವಣಿಗೆ ದರವಿದ್ದರೆ 2021-22ರಲ್ಲಿ 12.3ರಷ್ಟಿತ್ತು. ರಾಜಸ್ಥಾನದಲ್ಲಿ ಇದೇ ಅವಧಿಯಲ್ಲಿ 21.1ರಷ್ಟಿತ್ತು.
ರಸ್ತೆ ಸಾರಿಗೆ ವಲಯದಲ್ಲಿ ಸರಾಸರಿ ಬೆಳವಣಿಗೆ ದರವು 14.30ರಷ್ಟಿದ್ದರೇ 2021-22ರಲ್ಲಿ 9.0ರಷ್ಟು ಬೆಳವಣಿಗೆ ದರವಿದೆ. ಇದೇ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ 20.1ರಷ್ಟಿದೆ. ಜಲಸಾರಿಗೆಯಲ್ಲಿ 7.88ರಷ್ಟು ಸರಾಸರಿ ಬೆಳವಣಿಗೆ ದಾಖಲಿಸಿ, 2021-22ರಲ್ಲಿ 7.4ರಷ್ಟು ಬೆಳವಣಿಗೆ ದರ ದಾಖಲಿಸಿದೆ. ಇದೇ ಅವಧಿಯಲ್ಲಿ ಆಂಧ್ರ ಪ್ರದೇಶವು 91.9ರಷ್ಟು ಬೆಳವಣಿಗೆ ದರವನ್ನು ಹೊಂದಿರುವುದು ಪಟ್ಟಿಯಿಂದ ಗೊತ್ತಾಗಿದೆ.
ವಾಯು ಸಾರಿಗೆಯಲ್ಲಿ 31.26 ರಷ್ಟು ಸರಾಸರಿ, 84.7ರಷ್ಟು 2021-22ರಲ್ಲಿ ಬೆಳವಣಿಗೆ ದರ ಹೊಂದಿದೆ. ಸಾರಿಗೆ ಪೂರಕ ಸೇವೆಗಳ ವಲಯದಲ್ಲಿ 12.00ರಷ್ಟು ಸರಾಸರಿ, 8.8ರಷ್ಟು ಬೆಳವಣಿಗೆ ದರವನ್ನು 2021-22ರಲ್ಲಿ ಹೊಂದಿದೆ. ಆಂಧ್ರದಲ್ಲಿ 32.3ರಷ್ಟು ಬೆಳವಣಿಗೆ ದರ ಹೊಂದಿದೆ. ಹಾಗೆಯೇ ದಾಸ್ತಾನು ವಲಯದಲ್ಲಿ 33.82ರಷ್ಟು ಸರಾಸರಿ ದರವಿದ್ದರೆ 2021-22ರಲ್ಲಿ 20.8ರಷ್ಟು ಬೆಳವಣಿಗೆ ದರ ಹೊಂದಿದ್ದರೇ ಇದೇ ಅವಧಿಯಲ್ಲಿ ಆಂಧ್ರದಲ್ಲಿ 84.4ರಷ್ಟು ಬೆಳವಣಿಗೆ ದರ ದಾಖಲಾಗಿದೆ.
ಸಂಪರ್ಕ ವಲಯದಲ್ಲಿ 9.06ರಷ್ಟು ಸರಾಸರಿ, 18.1ರಷ್ಟು ಬೆಳವಣಿಗೆ ದರವಿದ್ದರೇ ಆಂಧ್ರದಲ್ಲಿ 24.4ರಷ್ಟಿದೆ. ಹಣಕಾಸು ಸೇವೆಗಳಲ್ಲಿ 10.63ರಷ್ಟು ಸರಾಸರಿ, 12.8ರಷ್ಟು ಬೆಳವಣಿಗೆ ದರವಿದ್ದರೇ ಆಂಧ್ರದಲ್ಲಿ 21.6ರಷ್ಟು ಬೆಳವಣಿಗೆ ದರವಿತ್ತು. ಸ್ಥಿರಾಸ್ತಿ, ವೃತ್ತಿಪರ ಸೇವೆ, ವಾಸಗೃಹಗಳ ಒಡೆತನದಲ್ಲಿ 15.66ರಷ್ಟು ಸರಾಸರಿ, 12.5ರಷ್ಟು ಬೆಳವಣಿಗೆ ದರವಿದ್ದರೇ ಒಡಿಶಾದಲ್ಲಿ 21.5ರಷ್ಟು ದಾಖಲಾಗಿತ್ತು. ಸಾರ್ವಜನಿಕ ಆಡಳಿತದಲ್ಲಿ 12.76ರಷ್ಟು ಸರಾಸರಿ ಇದ್ದರೆ 9.4ರಷ್ಟು 2021-22ರಲ್ಲಿ ಬೆಳವಣಿಗೆ ದರವಿತ್ತು. ಇದೇ ಅವಧಿಯಲ್ಲಿ ಒಡಿಶಾದಲ್ಲಿ 18.6ರಷ್ಟು ಬೆಳವಣಿಗೆ ದರ ದಾಖಲಾಗಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಮೂಲಬೆಲೆಯಲ್ಲಿ ) ಸರಾಸರಿ ಬೆಳವಣಿಗೆ ದರವು 12.76ರಷ್ಟಿದ್ದರೆ 2021-22ರಲ್ಲಿ 16.3ರಷ್ಟು ಬೆಳವಣಿಗೆ ದರವಿದೆ. ಇದೇ ಅವಧಿಯಲ್ಲಿ ಒಡಿಶಾದಲ್ಲಿ 18.8ರಷ್ಟಿದೆ ಎಂದು ಯೋಜನಾ, ಕಾರ್ಯಕ್ರಮ ಸಾಂಖ್ಯಿಕ ಇಲಾಖೆಯು ಅಧಿಕಾರಿಗಳಿಗೆ ಮಾಹಿತಿ ಒದಗಿಸಿದೆ.