ಉಚಿತ ಬೈಸಿಕಲ್‌; ವಾಸ್ತವಾಂಶಗಳನ್ನು ಮುಚ್ಚಿಟ್ಟು ದಿಕ್ಕು ತಪ್ಪಿಸಿದರೇ ಸಚಿವ ಬಿ ಸಿ ನಾಗೇಶ್‌?

ಬೆಂಗಳೂರು; ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ ವಿತರಣೆ ಕಾರ್ಯಕ್ರಮಕ್ಕೆ ಆರ್ಥಿಕ ಇಲಾಖೆಯ ಅಸಮ್ಮತಿ ಮತ್ತು  ಟೆಂಡರ್‌ ಮೂಲಕ ಅನುಷ್ಠಾನಗೊಳಿಸದೇ ನೇರವಾಗಿ ಅರ್ಹ ಫಲಾನುಭವಿ ವಿದ್ಯಾರ್ಥಿಗಳ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಮೂಲಕ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರವು  ಚಿಂತಿಸಿದ್ದರೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್‌ ಅವರು ಅಂತಹ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿರುವುದಿಲ್ಲ ಎಂದು ಉತ್ತರಿಸುವ ಮೂಲಕ ವಾಸ್ತವಾಂಶಗಳನ್ನು ಮರೆಮಾಚಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

 

ವಿಧಾನಪರಿಷತ್‌ ಸದಸ್ಯ ಮಧು ಜಿ ಮಾದೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರ ಒದಗಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಬಿ ಸಿ ನಾಗೇಶ್‌ ಆರ್ಥಿಕ ಇಲಾಖೆ ಈಗಾಗಲೇ ವ್ಯಕ್ತಪಡಿಸಿರುವ ಅಸಮ್ಮತಿ ಮತ್ತು ನೇರ ನಗದು ವರ್ಗಾವಣೆಗೆ ಮುಂದಾಗಿ ಶಿಕ್ಷಣ ಇಲಾಖೆಯು ಬರೆದಿರುವ ಪತ್ರವನ್ನೇ ಮುಚ್ಚಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

2022-23ನೇ ಸಾಲಿನಿಂದ ಮುಂದಿನ ಮೂರು ವರ್ಷಕ್ಕೆ ಬೈಸಿಕಲ್‌ ವಿತರಣೆ ಮಾಡುವ ಸಂಬಂಧ ತಲಾ ವರ್ಷದಲ್ಲಿ 6 ಲಕ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ಕೋಟಿ ರು.ನಂತೆ 750 ಕೋಟಿ ರು. ವೆಚ್ಚವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಅಂದಾಜಿಸಿತ್ತು. ಇದೇ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಘೋಷಿಸಲು ಸಲ್ಲಿಸಿತ್ತು. ಆದರೆ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗಿರಲಿಲ್ಲ.

 

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನೀಡಿದ್ದ ವರದಿ ಆಧರಿಸಿ ಶಾಲಾ ವಿದ್ಯಾರ್ಥಿಗಳ ಕಲಿಕೆ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಬೈಸಿಕಲ್‌ ನೀಡುವ ಯೋಜನೆ ಪ್ರಸ್ತಾವನೆಯನ್ನೇ ತಿರಸ್ಕರಿಸಿದ್ದ ಆರ್ಥಿಕ ಇಲಾಖೆಯು 2022ರ ಏಪ್ರಿಲ್‌ 19ರಂದೇ ತನ್ನ ಅಭಿಪ್ರಾಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿತ್ತು. ಈ ಕುರಿತು ‘ದಿ ಫೈಲ್‌’ 2022ರ ಮೇ 24ರಂದು ವರದಿ ಪ್ರಕಟಿಸಿತ್ತು.

 

ವಿದ್ಯಾರ್ಥಿಗಳಿಗೆ ಬೈಸಿಕಲ್‌; ಶಿಕ್ಷಣ ಇಲಾಖೆಯ ಪ್ರಸ್ತಾವನೆ ತಿರಸ್ಕರಿಸಿ, ಹುಸಿ ಭರವಸೆ ನೀಡಿದ ಮುಖ್ಯಮಂತ್ರಿ

ಶಿಕ್ಷಣ ಇಲಾಖೆಯ ಪ್ರಸ್ತಾವನೆ ತಿರಸ್ಕರಿಸಿದ್ದ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅನುಮೋದಿಸಿದ್ದರು. ಆದರೂ ಸಚಿವ ಬಿ ಸಿ ನಾಗೇಶ್‌ ಅವರು ‘2022-23ನೇ ಸಾಲಿನಲ್ಲಿ ಉಚಿತ ಬೈಸಿಕಲ್‌ ಯೋಜನೆಗೆ ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿದ್ದು ಸದರಿ ಪ್ರಸ್ತಾವನೆಯು ಪರಿಶೀಲನಾ ಹಂತದಲ್ಲಿರುತ್ತದೆ,’ ಎಂದು ಉತ್ತರಿಸಿದ್ದಾರೆ.

 

ಅಲ್ಲದೇ 2020-21, 2021-22ನೇ ಸಾಲಿನಲ್ಲಿ ಕೋವಿಡ್‌ 19ರ ಹಿನ್ನೆಲೆಯಲ್ಲಿ ಆರ್ಥಿಕ ಮಿತವ್ಯಯ ಜಾರಿಯಲ್ಲಿರುವುದರಿಂದ ಹಾಗೂ ಭೌತಿಕ ತರಗತಿಗಳು ಪ್ರಾರಂಭವಾಗದ ಕಾರಣ ಈ ಯೋಜನೆಯಿಂದ ವಂಚಿತರಾದ ಮಕ್ಕಳಿಗೆ ಬೈಸಿಕಲ್‌ ಬದಲು ಹಣ ವರ್ಗಾಯಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿರುವುದಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

 

ಉಚಿತ ಬೈಸಿಕಲ್‌ ವಿತರಿಸುವ ಸಂಬಂಧ ಅನುಮತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು 2022ರ ಸೆಪ್ಟಂಬರ್‌ 7ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ 2022ರ ಅಕ್ಟೋಬರ್‌ 10ರಂದು ಪತ್ರ ಬರೆದಿದ್ದರು. ಈ ಕುರಿತು ‘ದಿ ಫೈಲ್‌’ 2022ರ ಅಕ್ಟೋಬರ್‌ 14ರಂದು ವರದಿ ಪ್ರಕಟಿಸಿತ್ತು.

 

ಉಚಿತ ಬೈಸಿಕಲ್‌ ವಿತರಣೆ; ಟೆಂಡರ್‌ ಪ್ರಕ್ರಿಯೆ ಬದಲಿಗೆ ವಿದ್ಯಾರ್ಥಿಗಳ ಖಾತೆಗೆ ನೇರ ಹಣ ವರ್ಗಾವಣೆ?

ಈ ಪತ್ರವನ್ನು ಪರಿಶೀಲಿಸಿದ್ದ ಸರ್ಕಾರವು ‘ ಸರ್ಕಾರವು ಪ್ರಾಯೋಜಿಸುವ ಎಲ್ಲಾ ಯೋಜನೆಗಳಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೇ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಉದ್ದೇಶಿಸಲಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಡಿಬಿಟಿ ಮೂಲಕ ಅನುಷ್ಠಾನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ 2023-24ನೇ ಸಾಲಿನಲ್ಲಿ ಉಚಿತ ಬೈಸಿಕಲ್‌ ವಿತರಣೆ ಯೋಜನೆಯನ್ನು ಟೆಂಡರ್‌ ಮೂಲಕ ಅನುಷ್ಠಾನಗೊಳಿಸದೇ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಅನುಷ್ಠಾನಗೊಳಿಸಲು ಉಂಟಾಗುವ ಸಾಧಕಬಾಧಕಗಳ ಕುರಿತು ಪರಿಶೀಲಿಸಿ ನಿರ್ದಿಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಬೇಕು,’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ ಸಚಿವ ಬಿ ಸಿ ನಾಗೇಶ್‌ ಅವರು ನೀಡಿದ್ದ ಉತ್ತರದಲ್ಲಿ ಈ ಅಂಶವನ್ನು ಉಲ್ಲೇಖಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

 

ಮೌಲ್ಯಮಾಪನ ಪ್ರಾಧಿಕಾರ ವರದಿಯಲ್ಲೇನಿತ್ತು?

 

‘ಬೈಸಿಕಲ್‌ಗಳನ್ನು ನೀಡುವುದರಿಂದ ಕಲಿಕೆಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಿದೆಯೇ ಎಂಬ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ರಾಜ್ಯಮಟ್ಟದಲ್ಲಿ 8ನೇ ತರಗತಿಯ (ಶೇ.25) ದಾಖಲಾತಿಯಲ್ಲಿ ಲಿಂಗ ಅಂತರವು ಉಳಿದಿರುವುದು ಕಂಡುಬಂದಿದೆ. ಸೈಕಲ್‌ ವಿತರಣೆ ಮಾಡಿದರೂ ಹುಡುಗ ಮತ್ತು ಹುಡುಗಿಯರ ಮಾಧ್ಯಮಿಕ ಶಾಲೆ ದಾಖಲಾತಿಯನ್ನು ಸಮನಾಗಿ ತರಲು ಸಾಧ್ಯವಾಗಲಿಲ್ಲ ಎಂದು ಸೂಚಿಸುತ್ತದೆ.

 

ಪರೀಕ್ಷೆಯ ಫಲಿತಾಂಶಗಳಲ್ಲಿ ಕೇವಲ ಶೇ. 3ರಷ್ಟು ಏರಿಕೆಯಾಗಿರುವದುರಿಂದ ಕಲಿಕೆಯ ಫಲಿತಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಿರುವುದಿಲ್ಲ. ಅಲ್ಲದೆ ಮಕ್ಕಳಿಗೆ ನೀಡಿದ್ದ ಬೈಸಿಕಲ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು 2021ರ ನವೆಂಬರ್‌ನಲ್ಲಿ ವರದಿ ನೀಡಿತ್ತು. ಮೌಲ್ಯಮಾಪನ ವರದಿ ಆಧರಿಸಿ ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ನೀಡಿತ್ತು.

ವಿದ್ಯಾರ್ಥಿಗಳಿಗೆ ಕಳಪೆ, ತುಕ್ಕು, ಹಳೆಯ, ಗುಣಮಟ್ಟವಿಲ್ಲದ ಬೈಸಿಕಲ್‌; ಮೌಲ್ಯಮಾಪನ ವರದಿ ಬಹಿರಂಗ

2006-07ರ ಆರಂಭದಿಂದ 2017-18ರವರೆಗೆ ಈ ಯೋಜನೆಯು ಸುಮಾರು 1,800 ಕೋಟಿ ರು.ಗಳ ವೆಚ್ಚದಲ್ಲಿ 62 ಲಕ್ಷ ಸೈಕಲ್‌ಗಳನ್ನು ವಿತರಿಸಿದೆ. ಈ ಯೋಜನೆಯು 2006-07ರಲ್ಲಿ 4.2 ಲಕ್ಷ ಬೈಸಿಕಲ್‌ಗಳಿಗೆ 85 ಕೋಟಿ ರು., 2014-15ರಲ್ಲಿ ಸುಮಾರು 5.5 ಲಕ್ಷ ಬೈಸಿಕಲ್‌ಗಳಿಗೆ 180 ಕೋಟಿ ರು. ವ್ಯಯಿಸಿದೆ. 2017-18ರಲ್ಲಿ 172 ಕೋಟಿ ರು. ವೆಚ್ಚದಲ್ಲಿ 5.5 ಲಕ್ಷ ಬೈಸಿಕಲ್‌ ತಲುಪಿಸಿದೆ ಎಂಬುದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts