ಹಾವೇರಿಯಲ್ಲಿ 101 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಸಿಎಂ ತವರು ಜಿಲ್ಲೆಯ ಮಕ್ಕಳಿಗಿಲ್ಲವೇ ಸುರಕ್ಷೆ?

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯೊಂದರಲ್ಲೇ 101 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಇದೀಗ ಬಹಿರಂಗವಾಗಿದೆ.

 

ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಕುರಿತು ಸಚಿವ ಹಾಲಪ್ಪ ಆಚಾರ್‌ ಅವರು ವಿಧಾನಸಭೆಯಲ್ಲಿ ನೀಡಿರುವ ಉತ್ತರದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಸಂಖ್ಯೆಯನ್ನು ಒದಗಿಸಿದ್ದಾರೆ. ಈ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಕಳೆದ 2019-20ರಿಂದ 2021-22ರ ಅಂತ್ಯಕ್ಕೆ 101 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯನ್ನು ಒದಗಿಸಿದ್ದಾರೆ.

 

ರಾಜ್ಯದಲ್ಲಿ ಇತ್ತೀಚೆಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಒಪ್ಪಿಕೊಂಡಿರುವ ಸಚಿವ ಹಾಲಪ್ಪ ಆಚಾರ್‌ ಅವರು ಹಾವೇರಿ, ಗದಗ್‌, ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಾದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

 

 

ಹಾವೇರಿ ಜಿಲ್ಲೆಯೊಂದರಲ್ಲೇ ಕಳೆದ 2019-20ರಿಂದ 2021-22ರಲ್ಲಿ ಒಟ್ಟು 101 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಗದಗ್‌ ಜಿಲ್ಲೆಯಲ್ಲಿ 50, ಧಾರವಾಡ ಜಿಲ್ಲೆಯಲ್ಲಿ 47 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಉತ್ತರ ಒದಗಿಸಿದ್ದಾರೆ.

 

2020-21ರಲ್ಲಿ ರಾಜ್ಯದಲ್ಲಿ 233 ಪ್ರಕರಣಗಳು ಸ್ವೀಕೃತಿಯಾಗಿದ್ದರೆ, ಈ ಪೈಕಿ 60 ಪ್ರಕರಣಗಳು ಮುಕ್ತಾಯವಾಗಿವೆ. ಇನ್ನು 223 ಪ್ರಕರಣಗಳು ಚಾಲ್ತಿಯಲ್ಲಿವೆ. 2021-22ರಲ್ಲಿ 480 ಪ್ರಕರಣಗಳು ಸ್ವೀಕೃತಿಯಾಗಿದ್ದರೆ ಈ ಪೈಕಿ 124 ಪ್ರಕರಣಗಳು ಮುಕ್ತಾಯವಾಗಿವೆ. ಇನ್ನು 356 ಪ್ರಕರಣಗಳು ಚಾಲ್ತಿಯಲ್ಲಿವೆ. ಒಟ್ಟಾರೆಯಾಗಿ ಈ ಎರಡೂ ವರ್ಷದಲ್ಲಿ 763 ಪ್ರಕರಣಗಳು ಸ್ವೀಕೃತಿಯಾಗಿದ್ದರೆ ಈ ಪೈಕಿ 184 ಪ್ರಕರಣಗಳು ಮುಕ್ತಾಯವಾಗಿದ್ದರೆ ಇನ್ನು 579 ಪ್ರಕರಣಗಳು ಚಾಲ್ತಿಯಲ್ಲಿವೆ ಎಂದು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿ ಬಾಲ್ಯ ವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವಲ್ಲದ ಬಾಲಕಾರ್ಮಿಕ, ಭಿಕ್ಷಾಟನೆ, ಪರಿತ್ಯಕ್ತ ಮುಂತಾದ ಪ್ರಕರಣಗಳಲ್ಲಿ ರಕ್ಷಿಸಲ್ಪಟ್ಟ ಮಕ್ಕಳು, ಬಾಲನ್ಯಾಯ ಕಾಯ್ದೆ 2015ರ ತಿದ್ದುಪಡಿ ಕಾಯ್ದೆ 2021ರಡಿ ಪಾಲನೆ ಮತ್ತು ರಕ್ಷಣೆಗೆ ಗುರುತಿಸಲ್ಪಟ್ಟಲ್ಲಿ ಅಂತಹ ಮಕ್ಕಳಿಗೆ ಪಾಲನೆ,ರಕ್ಷಣೆ, ಶಿಕ್ಷಣ ಮತ್ತು ಪುನರ್ವಸತಿಯನ್ನುಮಕ್ಕಳ ಕಲ್ಯಾಣ ಸಮಿತಿ ಆದೇಶದಲ್ಲಿ ಕಲ್ಪಿಸಲಾಗಿದೆ.

 

ಜಿಲ್ಲಾ ಮಟ್ಟದಲ್ಲಿ ಆರ್‌ಟಿಇ, ಪೋಕ್ಸೋ, ಜೆಜೆ ಕಾಯ್ದೆ ಇವುರಗಳ ಪ್ರಗತಿ ಪರಿಶೀಲನೆಯನ್ನು ಕಾಲಕಾಲಕ್ಕೆ ನಡೆಸಲಾಗುತ್ತಿದೆ. ಬಾಲ್ಯವಿವಾಹ ನಿಷೇಧ ಕಾನೂನು, ಬಾಲಕಾರ್ಮಿಕ ನಿಷೇಧ ಕಾನೂನು ಅರಿವು ಕಾರ್ಯಕ್ರಮಗಳನ್ನುನಡೆಸಲಾಗುತ್ತಿದೆ. ಆಯೋಗವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ನಿಗದಿತವಾಗಿ ಎಲ್ಲಾ ಸಂಬಂಧಿಸಿದ ಇಲಾಖೆಗಳನ್ನು ಒಗ್ಗೂಡಿಸಿ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗುತ್ತದೆ.

 

ಮಕ್ಕಳು ಎದುರಿಸುತ್ತಿರುವ ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಶಿಕ್ಷಣಕ್ಕೆ ಧಕ್ಕೆ ತರುವಂತಹ ವಿಚಾರಗಳು ಮುಂತಾದ ಪ್ರಗತಿ ಪರಿಶೀಲಿಸಿ ಇಲಾಖೆಗಳಿಗೆ ಸೂಕ್ತ ಸಲಹೆ ಹಾಗೂ ನಿರ್ದೇಶನಗಳನ್ನು ನೀಡಿ ಸಂಬಂಧಪಟ್ಟ ಇಲಾಖೆಗಳು ಅವುಗಳಣ್ನು ಕಾರ್ಯರೂಪಕ್ಕೆ ತರುವಂತೆ ಮುಂಜಾಗ್ರತೆ ವಹಿಸುತ್ತದೆ ಎಂದು ವಿವರಣೆ ನೀಡಿದ್ದಾರೆ.

SUPPORT THE FILE

Latest News

Related Posts