ಆಡಳಿತಾಧಿಕಾರಿ; ಮುರುಘಾ ಮಠಕ್ಕೆ ತೋರಿದ ಆಸಕ್ತಿ, ರಾಮಚಂದ್ರಾಪುರ ಮಠದಲ್ಲೇಕಿಲ್ಲ?

photo credit;barandbench

ಬೆಂಗಳೂರು; ಮಠದ ಲೆಕ್ಕಪತ್ರ ನಿರ್ವಹಣೆ, ಮಠದ ಚರ ಸ್ಥಿರಾಸ್ತಿ ಹಿತದೃಷ್ಟಿಯಿಂದ ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿರುವ ರಾಜ್ಯ ಸರ್ಕಾರವು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಪ್ರಕರಣದಲ್ಲಿ  ಆಡಳಿತಾಧಿಕಾರಿಯನ್ನು ನೇಮಿಸುವ ಸಂಬಂಧ ಹೈಕೋರ್ಟ್‌ನ ತಡೆಯಾಜ್ಞೆ ತೆರವುಗೊಳಿಸಲು  ಕಳೆದ ಹಲವು ವರ್ಷಗಳಿಂದಲೂ ಅಸಕ್ತಿ ವಹಿಸುತ್ತಿಲ್ಲ.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 2017ರ ಮೇ 23ರಂದು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಸೂಚನೆ ಸಂಬಂಧ ಕೈಗೊಂಡಿರುವ ವರದಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು ಸರ್ಕಾರವು ಹಲವು ನೆನಪೋಲೆಗಳನ್ನು ಬರೆದಿದ್ದರೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ವರದಿಯನ್ನೇ ಸಲ್ಲಿಸಿಲ್ಲ.

 

ಆದರೆ ಚಿತ್ರದುರ್ಗದ ಮುರುಘಾ ಮಠದ ಪ್ರಕರಣದಲ್ಲಿ ಆಡಳಿತಾಧಿಕಾರಿ ನೇಮಕ ಸಂಬಂಧ ಒತ್ತಡ ಕೇಳಿ ಬಂದ ಕೆಲವೇ ಕೆಲವು ತಿಂಗಳುಗಳಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ತೋರಿಸಿರುವ ಆಸಕ್ತಿಯನ್ನು ರಾಮಚಂದ್ರಾಪುರ ಮಠದ ಪ್ರಕರಣದಲ್ಲಿ ಪ್ರದರ್ಶಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಶ್ರೀ ರಾಮಚಂದ್ರಾಪುರ ಮಠವು ಒಂದು ಧಾರ್ಮಿಕ ಸಂಸ್ಥೆಯಾಗಿದ್ದು, ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಈ ಮಠದ ಶಾಖೆಗಳು ಹಲವಾರು ಕಡೆ ಇದ್ದು, ಇವುಗಳು ಬೆಲೆಬಾಳುವ ಸ್ಥಿರ-ಚರ ಆಸ್ತಿಗಳನ್ನು ಹೊಂದಿವೆ. ಇವೆಲ್ಲವೂ ಪ್ರಸ್ತುತ ಈ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ನಿಯಂತ್ರಣದಲ್ಲಿರುತ್ತವೆ. ಆದರೆ ಪ್ರಸ್ತುತ ಮಠಾಧಿಪತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮಠದ ಆಡಳಿತವನ್ನು ಅಮಸರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ಎದುರ್ಕುಳ ಈಶ್ವರ್ ಭಟ್‌ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

 

ಇವರ ನಡತೆ-ನಡವಳಿಕೆ ಸರಿ ಇಲ್ಲವೆಂದು ಮಠಕ್ಕೆ ಸಂಬಂಧಿಸಿದ ದಾಖಲೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ. ಮಠದ ಆಸ್ತಿ ಪಾಸ್ತಿಗಳನ್ನು ತನ್ನ ಸಂಬಂಧಿಕರಿಗೆ ವರ್ಗಾಯಿಸಿದ್ದಾರೆ. ಹಾಗೂ ಮಠದ ರೂಢಿ ಸಂಪ್ರದಾಯಗಳಿಗೆ ಧಕ್ಕೆಯಾಗುವ ರೀತಿ ವರ್ತಿಸಿದ್ದಾರೆ. ಮಠದಲ್ಲಿ ಅನೇಕ ಅವ್ಯವಹಾರಗಳನ್ನು ನಡೆಸಿರುವುದರಿಂದ ಇವರು ಮಠದ ಪೀಠಾಧಿಕಾರಿಯಾಗಿ ಮುಂದುವರೆಯಲು ಅರ್ಹರಿರುವುದಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

 

ಈ ಎಲ್ಲದರ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಪೀಠಾಧಿಪತಿ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಇವರು ಮಠಕ್ಕೆ ಅಥವಾ ಶಾಖಾ ಮಠಗಳಿಗೆ ಭೇಟಿ ನೀಡದಂತೆ ನಿರ್ಬಂಧಿಸಬೇಕು ಎಂದು ದೂರರ್ಜಿಯಲ್ಲಿ ಕೋರಿದ್ದರು. ಅದೇ ರೀತಿ ಮಠಕ್ಕೆ ಸಂಬಂಧಿಸಿದ ಚರ, ಸ್ಥಿರ ಆಸ್ತಿಗಳನ್ನು, ಹಣಕಾಸು ವ್ಯವಹಾರ, ಆಡಳಿತ ನಿರ್ವಹಣೆ ಮಾಡಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಕೋರಿದ್ದರು.

 

ಆದರೆ ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಸ್ಥಾನದಿಂದ ರಾಘವೇಶ್ವರ ಸ್ವಾಮೀಜಿ ಅವರನ್ನು ಕೆಳಗಿಸಿ, ಆಡಳಿತಾಧಿಕಾರಿಯನ್ನು ನೇಮಿಸುವ ಸಂಬಂಧ ಹೈಕೋರ್ಟ್‌ನ ತಡೆಯಾಜ್ಞೆ ತೆರವುಗೊಳಿಸಲು ಧಾರ್ಮಿಕ ದತ್ತಿ ಇಲಾಖೆಯು ಕಳೆದ 4 ವರ್ಷಗಳಿಂದಲೂ ಅಸಕ್ತಿಯನ್ನೇ ವಹಿಸದಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 400ಕ್ಕೂ ಹೆಚ್ಚು ಪುಟಗಳಿರುವ ಸಮಗ್ರ ಕಡತವನ್ನು ಪಡೆದುಕೊಂಡು ವರದಿ ಪ್ರಕಟಿಸಿತ್ತು.

ಆಡಳಿತಾಧಿಕಾರಿ ನೇಮಕ; ಹೈಕೋರ್ಟ್‌ ತಡೆಯಾಜ್ಞೆ ತೆರವಿಗೆ 4 ವರ್ಷಗಳಾದರೂ ವರದಿ ಸಲ್ಲಿಸದ ಸರ್ಕಾರ

ಪ್ರಧಾನಕಾರ್ಯದರ್ಶಿ ಫೆ.11ರಂದು ಬರೆದ ಪತ್ರದಲ್ಲೇನಿದೆ?

 

‘ಎದುರ್ಕುಳ ಈಶ್ವರ್‌ ಭಟ್‌ ಮತ್ತು ಇತರರು ರಾಜ್ಯ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ 2017ರ ಮೇ 23ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (ಕಂಇ 66 ಮುದಾಪ್ರ 2108, ದಿನಾಂಕ 23-05-2017) ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿರುತ್ತದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸರ್ಕಾರದ ಅಡ್ವೋಕೇಟ್‌ ಜನರಲ್‌ರ ಮಾರ್ಗದರ್ಶನ ಮೂಲಕ ಸದರಿ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸೂಚಿಸಿರುತ್ತಾರೆ.

 

ಅದರನ್ವಯ ಕ್ರಮ ಕೈಗೊಂಡು ಜರೂರಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ 2018ರ ಜುಲೈ 11ರಂದು ವರದಿ ಸಲ್ಲಿಸುವಂತೆ 2018ರ ಜುಲೈ 11ರಂದು ಪತ್ರದಲ್ಲಿ ಕೋರಲಾಗಿತ್ತು. ಅದರಂತೆ ಕೋರಲಾದ ಮಾಹಿತಿ ಇದುವರೆವಿಗೂ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮದ ವರದಿಯನ್ನು ಜರೂರಾಗಿ ಸಲ್ಲಿಸಬೇಕು,’ ಎಂದು ನಿರ್ದೇಶಿಸಿರುವ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ 2022ರ ಫೆ.11ರಂದು ಪತ್ರ ಬರೆದಿದ್ದಾರೆ.

 

ರಾಮಚಂದ್ರಾಪುರ ಮಠದ ವಿರುದ್ಧ ಕೇಳಿ ಬಂದಿದ್ದ ಗುರುತರ ಆರೋಪಗಳ ಸಂಬಂಧ ವಿಚಾರಣೆ ನಡೆಸಿ ವರದಿ ಸಲ್ಲಿಸುವುದು ಮತ್ತು ಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿ ಆ ಅವರು ಧಾರ್ಮಿಕ ಇಲಾಖೆಯ ಆಯುಕ್ತರಿಗೆ 2017ರ ಮೇ 23ರಂದು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಹೀಗಾಗಿ ವಿಚಾರಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ಕಾರಣದಿಂದ ಆಯುಕ್ತರಿಂದ ಸರ್ಕಾರವು ಯಾವುದೇ ವರದಿಯನ್ನು ಪಡೆದಿರಲಿಲ್ಲ.

 

ಪ್ರಕರಣದ ಹಿನ್ನೆಲೆ

 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಯವರು ಎಸಗಿದ್ದಾರೆ ಎನ್ನಲಾದ ಆಪಾದನೆಗಳ ಬಗ್ಗೆ ಕ್ರಮ ಕೈಗೊಳ್ಳಲು ನಿರ್ದೇಶನ ಕೋರಿ ಎದುರ್ಕುಳ ಈಶ್ವರ್‌ ಭಟ್‌ ಹಾಗೂ ಇತರರು ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ (ರಿಟ್‌ ಅರ್ಜಿ ಸಂಖ್ಯೆ; 25124/2016 )ಅರ್ಜಿ ದಾಖಲಿಸಿದ್ದರು.

 

ಈ ಸಂಬಂಧ ಉಚ್ಛ ನ್ಯಾಯಾಲಯವು ‘ ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಬದಲಾಗಿ ಸರ್ಕಾರದ ವತಿಯಿಂದ ಶ್ರೀ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಪ್ರಕರಣವನ್ನು ದಾಖಲು ಮಾಡಿರುತ್ತಾರೆ. ಈ ವಿಷಯವನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿಯವರು ಸಕ್ಷಮ ಪ್ರಾಧಿಕಾರವಾಗಿದ್ದು, ಪ್ರಕರಣ ಕುರಿತು ಮುಖ್ಯ ಕಾರ್ಯದರ್ಶಿಯವರು ಸಂಬಂಧಿಸಿದ ಎಲ್ಲರ ವಾದವನ್ನು ಆಲಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು,’ ಎಂದು 2016ರ ಏಪ್ರಿಲ್‌ 28ರಂದು ನಿರ್ದೇಶನ ನೀಡಿತ್ತು.

 

ರಾಮಚಂದ್ರಾಪುರ ಮಠದ ಪೀಠಾಧಿಪತಿಯವರು ಎಸಗಿದ್ದಾರೆ ಎನ್ನಲಾಗಿರುವ ಆಪಾದನೆಗಳ ಬಗ್ಗೆ ಹೈಕೋರ್ಟ್‌ ನಿರ್ದೇಶನದಂತೆ ವಿಚಾರಣೆ ನಡೆಸಿ ಆದೇಶ ನೀಡುವಂತೆ 2016ರ ಏಪ್ರಿಲ್‌ 30ರಂದು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಎದುರ್ಕುಳ ಈಶ್ವರ್‌ ಭಟ್‌ ಮತ್ತಿತರರು ದೂರು ಅರ್ಜಿ ಸಲ್ಲಿಸಿದ್ದರು.

 

ಈ ದೂರರ್ಜಿಗೆ ಸಂಬಂಧಿಸಿದಂತೆ ಪತ್ರ ವ್ಯವಹಾರ ನಡೆಸಿದ್ದ ಇಲಾಖೆಯು ಆರಂಭದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಅನ್ವಯ ಮಠ, ಮಾನ್ಯಗಳು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿತ್ತು. ಆದರೆ ಶ್ರೀ ವ್ಯಾಸರಾಜ ಮಠ (ಸೋಸಲೆ) ಮಠದ ದೈನಂದಿನ ಆಡಳಿತವನ್ನು ಸುಗಮವಾಗಿ ನಿರ್ವಹಿಸಲು, ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಪಾರದರ್ಶಕ ಆಡಳಿತ ನಿರ್ವಹಣೆ ಮಾಡಲು ನಿವೃತ್ತ ಐಎಎಸ್‌ ಅಧಿಕಾರಿ ಕೆ ಜೈರಾಜ್‌ ಅವರನ್ನು ಆಡಳಿತಾಧಿಕಾರಿಯನ್ನು ನೇಮಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಟಿಪ್ಪಣಿ ಹಾಕಿದ್ದರು.

 

 

ಅಲ್ಲದೆ ಶಿವಮೊಗ್ಗ ಜಿಲ್ಲೆ ಶ್ರೀ ಮಜ್ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠಕ್ಕೆ ಮುಖ್ಯಮಂತ್ರಿ ಅವರ ಅನುಮೋದನೆ ಪಡೆದು ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯದ ಟಿಪ್ಪಣಿ ಹಾಳೆಯನ್ನು ಮುಖ್ಯ ಕಾರ್ಯದರ್ಶಿಗೆ ಮಂಡಿಸಿದ್ದರು ಎಂಬುದು ಕಡತದ ಹಾಳೆಗಳಿಂದ ತಿಳಿದು ಬಂದಿದೆ.

 

ಈ ದೂರು ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹಿಂದಿನ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿ ಆ ಅವರು ಅರ್ಜಿದಾರರು ಮಾಡಿರುವ ಆಪಾದನೆಗಳ ಬಗ್ಗೆ ವಿಚಾರಣೆ ನಡೆಸಲು ಧಾರ್ಮಿಕ ದತ್ತಿ ಆಯುಕ್ತರವರಿಗೆ ನಿರ್ದೇಶನ ನೀಡಿ 2017ರ ಮೇ 23ರಂದು ಈ ಸಂಬಂಧ ಆದೇಶ ಹೊರಡಿಸಿದ್ದರು. ಅಲ್ಲದೆ ವಿಚಾರಣೆ ನಡೆಸಲು ಮೂರು ಜನ ಸದಸ್ಯರಿಗಿಂತ ಕಡಿಮೆ ಇಲ್ಲದ ಒಂದು ಸಮಿತಿಯನ್ನು ರಚಿಸಿಕೊಳ್ಳಬಹುದೆಂದೂ ಈ ಬಗ್ಗೆ ವಿಚಾರಣೆ ನಡೆಸಿ ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಿದ್ದರು.

 

ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಆಯುಕ್ತರವರ ಕೇಂದ್ರ ಸ್ಥಾನಿಕ ಸಹಾಯಕ ಜಯಪ್ರಕಾಶ್‌, ವಕೀಲ ಚಂದ್ರಶೇಖರನ್‌ ಎಂಬುವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿ 2017ರ ಜುಲೈ 18ರಂದುಆದೇಶ ಹೊರಡಿಸಿದ್ದರು. ಮುಖ್ಯ ಕಾರ್ಯದರ್ಶಿ ಅವರು ಮೇ 23ರ 2017ರಂದು ಹೊರಡಿಸಿದ್ದ ಆದೇಶಕ್ಕೆ 2017ರ ಜುಲೈ 25ರಂದು ತಡೆಯಾಜ್ಞೆ ನೀಡಿತ್ತು. ಹೀಗಾಗಿ ವಿಚಾರಣೆ ಪ್ರಕ್ರಿಯೆಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅದೇ ರೀತಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರಸೆಕ್ಷನ್‌ 1(4)ರ ಅನ್ವಯ ಈ ಕಾಯ್ದೆಯು ಒಂದು ಮಠಕ್ಕೆ ಅಥವಾ ಅದು ನಿರ್ವಹಿಸುತ್ತಿರುವ ದೇವಾಲಯಕ್ಕೆ ಅನ್ವಯವಾಗುವುದಿಲ್ಲ ಎಂದು ಟಿಪ್ಪಣಿ ಹಾಕಲಾಗಿತ್ತು. ಹಾಗೆಯೇ ಈ ಕುರಿತು ಭಾರತ ಸಂವಿಧಾನದ ಪರಿಚ್ಛೇದ 162ರ ಅಡಿಯಲ್ಲಿ ಸಚಿವ ಸಂಪುಟವು ಮಾತ್ರ ತೀರ್ಮಾನ ಕೈಗೊಳ್ಳಲು ಅವಕಾಶವಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

‘ಇಲಾಖೆ ಕಾನೂನು ಸಲಹೆಗಾರರ ಅಭಿಪ್ರಾಯದಂತೆ ಸರ್ಕಾರದ ಹಂತದಲ್ಲಿ ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದು ಸೂಕ್ತವಾಗಿರುತ್ತದೆ. ಹಾಗೂ ಈ ಬಗ್ಗೆ ಸ್ಪಷ್ಟ ನಿಲುವನ್ನು ಸರ್ಕಾರದ ಹಂತದಲ್ಲಿಉಚ್ಛ ನ್ಯಾಯಾಲಯದ ಸರ್ಕಾರಿ ವಕೀಲರಿಗೆ ನೀಡಬಹುದು,’ ಎಂದು ಧಾರ್ಮಿಕ ದತ್ತಿ ಇಲಾಖೆಯು ಸಲಹೆ ನೀಡಿತ್ತು ಎಂಬುದು ತಿಳಿದು ಬಂದಿದೆ.

SUPPORT THE FILE

Latest News

Related Posts