ಆಲೂರ ವೆಂಕಟರಾಯರ ಮೊಮ್ಮಗನಿಗೂ ಕಿರುಕುಳ; ವೇತನಕ್ಕೆ ತಡೆ,ಆದೇಶ ಉಲ್ಲಂಘನೆ

photo credit;theprint

ಬೆಂಗಳೂರು; ಕನ್ನಡ ಕುಲಪುರೋಹಿತರೆಂದೇ ಖ್ಯಾತಿ ಹೊಂದಿರುವ ಆಲೂರ ವೆಂಕಟರಾಯರ ಮೊಮ್ಮಗ ಮತ್ತು ಆಲೂರ ವೆಂಕಟರಾಯ ಪದವಿಪೂರ್ವ ಮಹಾವಿದ್ಯಾಲಯದ ಸಿಬ್ಬಂದಿಗೆ ನಿವೃತ್ತಿ ವೇತನ ಬಿಡುಗಡೆಗೊಳಿಸದೇ ಅನ್ಯಾಯ ಎಸಗಿದೆ ಎಂಬ ಗುರುತರವಾದ ಆರೋಪಕ್ಕೆ ರಾಜ್ಯ ಸರ್ಕಾರವು ಗುರಿಯಾಗಿದೆ.

 

 

ಆಲೂರ ವೆಂಕಟರಾಯರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕಳೆದ 35 ವರ್ಷಗಳಿಂದ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿರುವ ಆಲೂರ ವೆಂಕಟರಾಯರ ಮೊಮ್ಮಗ ಡಾ ದೀಪಕ್‌ ಆಲೂರ ಅವರು ನಿವೃತ್ತರಾಗಿ ಒಂದು ವರ್ಷ ಕಳೆದರೂ ನಿವೃತ್ತಿ ವೇತನವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿಲ್ಲ.

 

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ 2022ರ ನವಂಬರ್‌ 25ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವೇತನ ತಡೆಹಿಡಿದಿರುವುದಕ್ಕೆ ಲಿಖಿತ ಸ್ಪಷ್ಟೀಕರಣವನ್ನೂ ನೀಡಿಲ್ಲ. ಯಾವುದೇ ಕಾರಣಕ್ಕೂ ವೇತನ ತಡೆಹಿಡಿಯಬಾರದು ಎಂದು ನ್ಯಾಯಾಲಯವು ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠವು ನಿರ್ದೇಶನ ನೀಡಿದ್ದರೂ ಇಲಾಖೆಯು ವೇತನವನ್ನು ತಡೆಹಿಡಿದಿರುವುದು ಪತ್ರದಿಂದ ಗೊತ್ತಾಗಿದೆ.

 

ಇದುವರೆಗೂ ನಿವೃತ್ತಿ ವೇತನ ಬಿಡುಗಡೆಯಾಗದ ಕಾರಣ ಡಾ ದೀಪಕ್‌ ಆಲೂರ ಅವರು ಪತ್ರಮುಖೇನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಸರ್ಕಾರ ಮತ್ತು ಇಲಾಖೆ ಪ್ರತಿಕ್ರಿಯಿಸದಿದ್ದರೇ ಸರ್ಕಾರದ ಧೋರಣೆ ಮತ್ತು ಅನ್ಯಾಯದ ಕುರಿತು ಬೆಳಗಾವಿಯಲ್ಲಿ ಇದೇ 19ರಂದು ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಪ್ರತಿಭಟಿಸಲಾಗುವುದು,’ ಎಂದು ಎಚ್ಚರಿಕೆ ಸಂದೇಶವನ್ನೂ ಪತ್ರ ಮುಖೇನ ರವಾನಿಸಿದ್ದಾರೆ.

 

ಪ್ರಕರಣದ ಹಿನ್ನೆಲೆ

 

ಧಾರವಾಡದ ಮುಗುದ ಗ್ರಾಮದಲ್ಲಿ ಆಲೂರು ವೆಂಕಟರಾವ್‌ ಸ್ಮಾರಕ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕಳೆದ 35 ವರ್ಷಗಳವರೆಗೆ ಅವರ ಮೊಮ್ಮಗ ಡಾ ದೀಪಕ್‌ ಆಲೂರ ಅವರು ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದರು. ಕಾಲೇಜಿನಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳಿಂದಾಗಿ ಡಿಸೆಂಬರ್‌ 2021ರಿಂದ ಈ ಮಹಾವಿದ್ಯಾಲಯದ ಸಿಬ್ಬಂದಿ ವೇತನವನ್ನು ಇಲಾಖೆಯು ತಡೆಹಿಡಿದಿರುವುದು ಅವರ ಪತ್ರದಿಂದ ತಿಳಿದು ಬಂದಿದೆ.

 

2022ರ ಆಗಸ್ಟ್‌ನಲ್ಲಿ ನಿವೃತ್ತಿ ಹೊಂದಿರುವ ಡಾ ದೀಪಕ್‌ ಆಲೂರ ಅವರ ವೇತನವನ್ನು ತಡೆಹಿಡಿದಿದೆ. ಈ ಕುರಿತು ವಿಧಾನಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರೂ ಸಹ ಈ ಸಂಗತಿಯನ್ನು ಸರ್ಕಾರ ಮತ್ತು ಸಚಿವ ಬಿ ಸಿ ನಾಗೇಶ್‌ ಅವರ ಗಮನಕ್ಕೂ ತಂದಿದ್ದರು. ಆದರೆ ‘ಸರ್ಕಾರ ಮತ್ತು ಇಲಾಖೆಯು ಇದುವರೆಗೂ ತಮ್ಮನ್ನೂ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ವೇತನವಿಲ್ಲದೇ ನಿತ್ಯದ ಜೀವನ ನರಕವಾಗಿದೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸದೆಯೇ ವಿಳಂಬ ಮಾಡುತ್ತಿರುವುದು ವಿಷಾದನೀಯ.’ ಎಂದು ಪತ್ರದಲ್ಲಿ ಹೇಳಿದ್ದಾರೆ.

 

’35 ವರ್ಷಗಳ ನಿರಂತರ ನಿಷ್ಠೆಯ ಕಾರ್ಯ ಮಾಡಿದವರಿಗೆ ಸರ್ಕಾರದಿಂದ ಈ ರೀತಿಯ ಕಿರುಕುಳ, ಹಿಂಸೆ, ತೀರಾ ಹೇಯ ಮತ್ತು ಖಂಡನೀಯ. ಈ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣವೇ ಗಮನಹರಿಸಿ ತಕ್ಷಣವೇ ವೇತನ ಬಿಡುಗಡೆ ಮಾಡಲು ಸಂಬಂಧಿತರಿಗೆ ನಿರ್ದೇಶನ ನೀಡಬೇಕು. ಕೊನೆಯ ಬಾರಿಗೆ ಈ ಮೂಲಕ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ,’ ಎಂದು ಡಾ ದೀಪಕ್‌ ಆಲೂರ ಅವರು ಪತ್ರದಲ್ಲಿ ಕೋರಿದ್ದಾರೆ.

 

ಅಲ್ಲದೇ ಡಾ ದೀಪಕ್‌ ಅಲೂರ, ಟಿ ಎಚ್‌ ತಳವಾರ, ಡಿ ಗ್ರೂಪ್‌ ನೌಕರ ಎನ್‌ ಬಿ ಅಂಬಿಗೇರ ಸೇರಿದಂತೆ ಹಲವು ಸಿಬ್ಬಂದಿಯ ವೇತನವು ಕಳೆದ 11 ತಿಂಗಳಿನಿಂದಲೂ ಬಿಡುಗಡೆಯಾಗಿಲ್ಲ. ಈ ಕುರಿತು ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿ (wp 101929/2022)ಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ದೀಪಕ್‌ ಆಲೂರ (ನಿವೃತ್ತಿಯಾಗುವವರೆಗೆ ಮಾತ್ರ) ಟಿ ಎಚ್‌ ತಳವಾರ, ಡಿ ಗ್ರೂಪ್‌ ಎನ್‌ ಬಿ ಅಂಬಿಗೇರ ಅವರ ವೇತನ ಬಿಡುಗಡೆ ಮಾಡಲು ಆದೇಶವಾಗಿತ್ತು ಎಂಬುದು ಇದೇ ಮಹಾವಿದ್ಯಾಲಯದ ಪ್ರಾಂಶುಪಾಲರು 2022ರ ಅಕ್ಟೋಬರ್‌ 23ರಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts